ಶಿರಾ (ಸೆ.29):  ಜೆಡಿಎಸ್‌ ಪಕ್ಷ ಬಲಗೊಳಿಸಲು ಹಾಗೂ ಉಪಚುನಾವಣೆಗೆ ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಜೆಡಿಎಸ್‌ ವರಿಷ್ಠ, ಮಾಜಿ ಪ್ರಧಾನಮಂತ್ರಿ ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸೆ. 30 ರಂದು ಶಿರಾಕ್ಕೆ ಆಗಮಿಸಲಿದ್ದಾರೆ ಎಂದು ತಾಲೂಕು ಜೆಡಿಎಸ್‌ ಅಧ್ಯಕ್ಷ ಆರ್‌.ಉಗ್ರೇಶ್‌ ತಿಳಿಸಿದರು.

ಅವರು ನಗರ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ದಿವಂಗತ ಶಾಸಕ ಬಿ.ಸತ್ಯನಾರಾಯಣ ಅವರ ನಿಧನದಿಂದ ಕ್ಷೇತ್ರದಲ್ಲಿ ಮುಂಬರುವ ಉಪಚುನಾವಣೆಗೆ ಪೂರ್ವಭಾವಿ ಸಿದ್ಧತೆ ಮಾಡಿಕೊಳ್ಳುವ ಉದ್ದೇಶದಿಂದ ಜೆಡಿಎಸ್‌ ವರಿಷ್ಠರು ಆಗಮಿಸುತ್ತಿದ್ದು ತಾಲ್ಲೂಕಿನ ಎಲ್ಲಾ ಜೆಡಿಎಸ್‌ ಮುಖಂಡರು, ಕಾರ್ಯಕರ್ತರು ಆಗಮಿಸಬೇಕೆಂದು ಮನವಿ ಮಾಡಿದರು.

ಜೆಡಿಎಸ್‌ಗೆ ತಲೆನೋವಾದ ಶಿರಾ ಕ್ಷೇತ್ರ ...

ಸಮಾಜ ಸೇವಕ ಕಲ್ಕೆರೆ ರವಿಕುಮಾರ್‌ ಮಾತನಾಡಿ, ಶಿರಾ ಕ್ಷೇತ್ರ ಜೆಡಿಎಸ್‌ನ ಭದ್ರಕೋಟೆ ಇಲ್ಲಿ ಜೆಡಿಎಸ್‌ನಿಂದ ಯಾರೇ ಅಭ್ಯರ್ಥಿಯಾದರೂ ಗೆಲ್ಲುತ್ತಾರೆ. ಮುಂದಿನ ಉಪಚುನಾವಣೆಗೆ ಪಕ್ಷ ಸಂಘಟನೆಗೆ ಪೂರ್ವ ತಯಾರಿ ಮಾಡಿಕೊಳ್ಳಲು ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡಲು ವರಿಷ್ಠರು ಆಗಮಿಸುತ್ತಿದ್ದಾರೆ ಎಂದರು.

ಪತ್ರಿಕಾಗೊಷ್ಠಿಯಲ್ಲಿ ಜಿ.ಪಂ. ಸದಸ್ಯ ರಾಮಕೃಷ್ಣ, ಮಾಜಿ ಜಿ.ಪಂ. ಸದಸ್ಯ ಸಿ.ಆರ್‌.ಉಮೇಶ್‌, ಎಪಿಎಂಸಿ ಅಧ್ಯಕ್ಷ ಚಂದ್ರೇಗೌಡ, ಮಾಜಿ ತಾ.ಪಂ. ಅಧ್ಯಕ್ಷ ಸತ್ಯಪ್ರಕಾಶ್‌, ಎಸ್‌.ಎಲ್‌.ಗೋವಿಂದರಾಜು, ಸುಧಾಕರ್‌ ಗೌಡ, ಅರೆಹಳ್ಳಿ ಬಾಬು, ಮಾಜಿ ತಾ.ಪಂ. ಉಪಾಧ್ಯಕ್ಷ ಉದಯಶಂಕರ್‌, ಮಾಜಿ ಗ್ರಾ.ಪಂ. ಅಧ್ಯಕ್ಷ ಮಂಜುನಾಥ್‌ ಸೇರಿದಂತೆ ಹಲವರು ಹಾಜರಿದ್ದರು.