ಬೆಂಗಳೂರು [ಆ.19]:  ಕ್ಷೇತ್ರದ ಜನತೆ ಹಾಗೂ ಪಕ್ಷಕ್ಕೆ ದ್ರೋಹ ಬಗೆದ ಅನರ್ಹ ಶಾಸಕ ಗೋಪಾಲಯ್ಯ ಅವರನ್ನು ಮುಂದಿನ ಉಪ ಚುನಾವಣೆ ಅಥವಾ ಸಾರ್ವತ್ರಿಕ ಚುನಾವಣೆಯಲ್ಲಿ ಶತಾಯಗತಾಯ ಸೋಲಿಸಲೇಬೇಕು ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರು ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ಮಹಾಲಕ್ಷ್ಮೀ ಲೇಔಟ್‌ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಭಾನುವಾರ ನಡೆದ ಜೆಡಿಎಸ್‌ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಗೋಪಾಲಯ್ಯ ಅವರಿಗೆ ಪಕ್ಷ ಎಲ್ಲವನ್ನೂ ನೀಡಿದೆ. ಅವರ ಕಷ್ಟದ ಸಮಯದಲ್ಲಿ ಕೈ ಹಿಡಿದಿದೆ. ಆರ್ಥಿಕವಾಗಿ ಚೆನ್ನಾಗಿ ಬೆಳೆದಿರುವ ಗೋಪಾಲಯ್ಯ ಅವರ ಎದುರು ಪಕ್ಷ ಕಟ್ಟುವ ಶಕ್ತಿ ತಮಗಿದೆ. ಪ್ರತಿ ವಾರ ಖುದ್ದಾಗಿ ಕ್ಷೇತ್ರಕ್ಕೆ ಭೇಟಿ ನೀಡುತ್ತೇನೆ. ಆದರೆ, ಕ್ಷೇತ್ರದ ಕಾರ್ಯಕರ್ತರು ಯಾವುದೇ ಆಮಿಷಕ್ಕೆ ಒಳಗಾಗದೆ ಪ್ರಾಮಾಣಿಕವಾಗಿ ಹೋರಾಟ ಮಾಡಬೇಕಿದೆ. ಉಪಚುನಾವಣೆ ಆಗಲಿ, ನೇರ ಚುನಾವಣೆಯೇ ಬರಲಿ ಕಾರ್ಯಕರ್ತರೆಲ್ಲರೂ ಸಿದ್ಧವಾಗಿರಿ ಎಂದು ಹೇಳಿದರು.

ಅವರ ಪತ್ನಿಯನ್ನು ಉಪಮೇಯರ್‌ ಮಾಡಬೇಕೆಂದು ಪಟ್ಟು ಹಿಡಿದಾಗ ಮರು ಮಾತನಾಡದೆ ಒಪ್ಪಿಕೊಂಡೆ. ಪ್ರತಿ ವರ್ಷ ಒಂದಲ್ಲಾ ಒಂದು ಸಮಿತಿಯಲ್ಲಿ ಸದಸ್ಯರನ್ನಾಗಿ ಮಾಡಿದೆ. ಈ ಬಾರಿ ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷಗಿರಿ ಜವಾಬ್ದಾರಿ ನೀಡಲಾಗಿದೆ. ಇದೀಗ ಬಿಜೆಪಿ ಸೇರಿ ಮೇಯರ್‌ ಆಗುವ ಕನಸು ಕಾಣುತ್ತಿದ್ದಾರೆ. ಇದೆಲ್ಲದರ ಹಿಂದೆ ಬೇರೆಯದ್ದೇ ಕಾರಣವಿದೆ. ಸದ್ಯಕ್ಕೆ ನಾನು ಏನನ್ನೂ ಹೇಳುವುದಿಲ್ಲ ಎಂದು ಮೌನ ವಹಿಸಿದರು.

ಈ ಹಿಂದೆ ಅವರ ಮನೆ ಮುಂದೆ ಪೋಲಿಸರು ಬಂದು ನಿಂತಾಗ ಏನಾಯಿತು ಎಂಬುದನ್ನು ಒಮ್ಮೆ ನೆನಪಿಸಿಕೊಳ್ಳಲಿ. ಯಾರನ್ನೂ ನಿಂದನೆ ಮಾಡುವುದಕ್ಕಾಗಿ ನಾನು ಸಭೆ ನಡೆಸುತ್ತಿಲ್ಲ. ದುಡ್ಡು ತೆಗೆದುಕೊಂಡು ಬೇರೊಂದು ಪಕ್ಷಕ್ಕೆ ಹೋಗಿದ್ದರೂ ಅವರ ಬಗ್ಗೆ ಚರ್ಚೆ ಮಾಡುವುದಿಲ್ಲ. ಆದರೆ, ನಮ್ಮನ್ನು ಬಿಟ್ಟು ಹೋಗಿರುವವರನ್ನು ಮಾತ್ರ ಸವಾಲಾಗಿ ಸ್ವೀಕರಿಸುತ್ತೇನೆ ಎಂದು ಎಚ್ಚರಿಕೆ ನೀಡಿದರು.

ಪಕ್ಷದ ಮುಖಂಡರಾದ ವೈ.ಎಸ್‌.ವಿ.ದತ್ತ, ಕುಪೇಂದ್ರ ರೆಡ್ಡಿ, ಟಿ.ಎ.ಶರವಣ, ಆರ್‌.ಪ್ರಕಾಶ್‌ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

ಮಹಾಲಕ್ಷ್ಮೀ  ಲೇಔಟ್‌ ವಿಧಾನಸಭಾ ಕ್ಷೇತ್ರದಲ್ಲಿ ಭಾನುವಾರ ನಡೆದ ಜೆಡಿಎಸ್‌ ಕಾರ್ಯಕರ್ತರ ಸಭೆಯನ್ನು ಪಕ್ಷದ ವರಿಷ್ಠ ಎಚ್‌.ಡಿ.ದೇವೇಗೌಡ ಉದ್ಘಾಟಿಸಿದರು. ಸಭೆಯಲ್ಲಿ ವಿಧಾನ ಪರಿಷತ್‌ ಸದಸ್ಯ ಟಿ.ಎ.ಶರವಣ, ಮಾಜಿ ಶಾಸಕ ವೈಎಸ್‌ವಿ ದತ್ತಾ ಉಪಸ್ಥಿತರಿದ್ದರು.