Karnataka Politics: ವಿಪಕ್ಷ ನಾಯಕ ಆರ್.ಅಶೋಕ್ ರವರು ಮುಖ್ಯಮಂತ್ರಿಗಳಿಗೆ ದಲ್ಲಾಳಿ ಅನ್ನುವ ಪದ ಉಪಯೋಗಿಸಿದ್ದು ನಮಗೆ ಬೇಸರ ತಂದಿದೆ ಎಂದು ಮಾಗಡಿ ಕ್ಷೇತ್ರ ಶಾಸಕ ಎಚ್.ಸಿ.ಬಾಲಕೃಷ್ಣ ತಿರುಗೇಟು ನೀಡಿದರು.
ರಾಮನಗರ (ಜೂ.17): ವಿಪಕ್ಷ ನಾಯಕ ಆರ್.ಅಶೋಕ್ ರವರು ಮುಖ್ಯಮಂತ್ರಿಗಳಿಗೆ ದಲ್ಲಾಳಿ ಅನ್ನುವ ಪದ ಉಪಯೋಗಿಸಿದ್ದು ನಮಗೆ ಬೇಸರ ತಂದಿದೆ. ವಿಪಕ್ಷ ನಾಯಕ ಅಂದರೆ ಶಾಡೋ ಸಿಎಂ ಇದ್ದಂಗೆ. ಅವರು ನಮ್ಮಂಥ ಶಾಸಕರುಗಳಿಗೆ ಮಾದರಿಯಾಗಿರಬೇಕು. ನಮಗೆ ಬುದ್ದಿ ಹೇಳುವ ಅವರೂ ಕೂಡಾ ಬುದ್ದಿ ಕಲಿಯಬೇಕು ಎಂದು ಮಾಗಡಿ ಕ್ಷೇತ್ರ ಶಾಸಕ ಎಚ್.ಸಿ.ಬಾಲಕೃಷ್ಣ ತಿರುಗೇಟು ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಪಕ್ಷ ನಾಯಕ ಆರ್.ಅಶೋಕ್ ಟ್ವೀಟ್ ಗೆ ನಾನೂ ಕೂಡ ಟ್ವೀಟ್ ನಲ್ಲೇ ಉತ್ತರ ಕೊಟ್ಟಿದ್ದೀನಿ. ಅಶೋಕಣ್ಣನ ಮನಸ್ಸಿಗೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ. ಆದರೆ, ಅವರು ಕೂಡ ತಮ್ಮ ಹೇಳಿಕೆಗೆ ಕ್ಷಮೆ ಯಾಚಿಸಬೇಕು ಎಂದರು.
ಸಚಿವ ಸ್ಥಾನ ಸಿಗಲೆಂದು ಬಾಲಕೃಷ್ಣ ಮುಖ್ಯಮಂತ್ರಿಗಳನ್ನು ಒಲೈಕೆ ಮಾಡುತ್ತಿದ್ದಾರೆಯೇ ಎಂಬ ಪ್ರಶ್ನೆಗೆ, ಹಾಗಾದರೆ ಮುಂದೆ ಬಿಜೆಪಿ ಸರ್ಕಾರ ಬಂದರೆ ನನ್ನನ್ನು ಸಿಎಂ ಮಾಡಲೆಂದು ಅಶೋಕ್ ಹೀಗೆ ಮಾತನಾಡುತ್ತಿದ್ದಾರಾ. ಸಿಎಂಗೆ ಬೈದರೆ ಮುಂದೆ ಬಿಜೆಪಿ ನನ್ನನ್ನು ಮುಖ್ಯಮಂತ್ರಿ ಮಾಡುತ್ತೆ ಅಂತ ಅಶೋಕ್ ಹೀಗೆಲ್ಲ ಮಾತನಾಡ್ತಿದ್ದಾರಾ. ಅವರು ಅದನ್ನು ಒಪ್ಪಿಕೊಂಡರೆ ಅವರ ಹೇಳಿಕೆಯನ್ನು ನಾನು ಒಪ್ಪಿಕೊಳ್ಳುತ್ತೇನೆ ಎಂದು ಟಾಂಗ್ ನೀಡಿದರು.
ಯಾರು ಸತ್ಯಹರಿಶ್ಚಂದ್ರರಲ್ಲ
ಈ ಹಿಂದೆ ಬಿ.ಎಸ್.ಯಡಿಯೂರಪ್ಪರವರ ಮುಖ್ಯಮಂತ್ರಿ ಆಗಿದ್ದಾಗ ಕೆಐಎಡಿಬಿಗೆ 1 ಸಾವಿರ ಎಕರೆ ಭೂಸ್ವಾಧೀನ ಮಾಡಿಕೊಂಡಾಗ ಅದರ ವಿರುದ್ಧ ನಾನೇ ಹೋರಾಟ ಮಾಡಿದ್ದೆ. ಆಗ ಯಡಿಯೂರಪ್ಪರವರ ನನ್ನನ್ನು ಕರೆದು ಹೋರಾಟ ಮಾಡಬೇಡಿ. ಇದನ್ನು ಕೈಬಿಡಲು ಸಾಧ್ಯವಿಲ್ಲ. ರೆಡ್ ಜೋನ್ ಆಗಿರುವುದರಿಂದ ಒಳ್ಳೆಯ ಬೆಲೆ ಕೊಡಿಸುತ್ತೇನೆ ಎಂದು ಹೇಳಿದ್ದರು. ಈಗ ಯೋಜನೆ ಬಗ್ಗೆ ಮಾತನಾಡಲು ಬಿಜೆಪಿ ನಾಯಕರಿಗೆ ನೈತಿಕತೆ ಇಲ್ಲ. ಆವತ್ತು ವಿಜಯೇಂದ್ರರವರು ಇದ್ದರು. ಬೇಕಾದರೆ ದಾಖಲೆ ಕೊಡುತ್ತೇನೆ ಎಂದು ಹೇಳಿದರು.
ಕುಮಾರಸ್ವಾಮಿ ಬಹಳ ಬುದ್ಧಿವಂತರು. ಟೌನ್ ಶಿಪ್ ಯೋಜನಾ ವ್ಯಾಪ್ತಿಯಲ್ಲಿ ಅವರ ಶ್ರೀಮತಿ ಮತ್ತು ಮಗನ ಹೆಸರಲ್ಲಿ 60 ಎಕರೆ ಇದೆ. ಅದರ ಬಗ್ಗೆ ಮಾತನಾಡಿ ಅಂದರೆ ಕೇತಗಾನಹಳ್ಳಿ ಜಮೀನಿನ ಬಗ್ಗೆ ಮಾತನಾಡುತ್ತಾರೆ. ಎಲ್ಲರೂ ಗಾಜಿನ ಮನೆಯಲ್ಲಿ ಕೂತಿದ್ದೇವೆ. ಸುಮ್ಮನೆ ಕಲ್ಲು ಹೊಡೆಯುವುದು ಬೇಡ. ಯಾರು ಸತ್ಯಹರಿಶ್ಚಂದ್ರರು ಅಂತ ಎದೆ ತಟ್ಟಿಕೊಳ್ಳೋದು ಬೇಡ ಎಂದರು.
ನಮ್ಮ ನಾಯಕರಾದ ಡಿ.ಕೆ.ಶಿವಕುಮಾರ್ ಅವರೇ ರಿಯಲ್ ಎಸ್ಟೇಟ್, ಬಿಸಿನೆಸ್ ಮಾಡಿದೀನಿ ಅಂತ ಹೇಳಿಕೊಂಡಿದ್ದಾರೆ. ಅವರಂತೆ ಕುಮಾರಸ್ವಾಮಿ ಕೂಡಾ ಪ್ರಾಮಾಣಿಕವಾಗಿ ಒಪ್ಪಿಕೊಳ್ಳಲಿ ನೋಡೋಣ. ಅಶೋಕ್ ಮತ್ತು ಕುಮಾರಸ್ವಾಮಿ ಕುಟುಂಬದವರ ಆದಾಯ ಎಷ್ಟಿದೆ, ಅದು ಎಲ್ಲಿಂದ ಬಂತು ಅಂತ ಅವರುಗಳೇ ವಿಮರ್ಶೆ ಮಾಡಲಿ ಎಂದು ತಿರುಗೇಟು ನೀಡಿದರು.
ಡಿಕೆಶಿ ಸುಳ್ಳು ಹೇಳುವುದಿಲ್ಲ, ಸತ್ಯ ಹೇಳುತ್ತಾರೆ. ಅವರ ಆದಾಯ ನೋಡಿ ದೇಶದಲ್ಲಿ ಇರುವ ಎಲ್ಲಾ ಇಲಾಖೆಯಿಂದಲೂ ತನಿಖೆ ಮಾಡಿಸಿದರು. ಏನು ಸಿಗಲಿಲ್ಲ. ಸುಪ್ರೀಂ ಕೋರ್ಟಿನಲ್ಲಿ ಆ ಪ್ರಕರಣಗಳು ವಜಾಗೊಂಡಿವೆ. ಕುಮಾರಸ್ವಾಮಿ ಮತ್ತು ಅಶೋಕ್ ರವರು ಆ ತನಿಖೆಗಳಿಗೆ ಒಪ್ಪಿಕೊಳ್ಳುತ್ತಾರಾ. ನಾವು ಅವರ ಕುಟುಂಬದ ಆಸ್ತಿ ಎಲ್ಲ ತನಿಖೆಯಾಗಲಿ ಅಂತ ನಾವೂ ಆಗ್ರಹ ಮಾಡುತ್ತೇವೆ ಎಂದು ಬಾಲಕೃಷ್ಣ ಹೇಳಿದರು.


