ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ಬಿರುಕು ಮೂಡುತ್ತಿರುವ ಬಗ್ಗೆ ಕಾಂಗ್ರೆಸ್ ಶಾಸಕ ಎಚ್.ಸಿ.ಬಾಲಕೃಷ್ಣ ಮಹತ್ವದ ಹೇಳಿಕೆ ನೀಡಿದ್ದಾರೆ. ಬಿಜೆಪಿ ಹಂತ ಹಂತವಾಗಿ ಜೆಡಿಎಸ್ ಪಕ್ಷವನ್ನು ಮುಗಿಸುವ ಕೆಲಸ ಮಾಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ರಾಮನಗರ (ಜೂ.10): ಬಿಜೆಪಿ - ಜೆಡಿಎಸ್ ಮೈತ್ರಿಯಲ್ಲಿ ಬಿರುಕು ಆಗುತ್ತಿದೆ ಅಂತ ಕೆಲ ನಾಯಕರು ನನ್ನ ಹತ್ತಿರ ಚರ್ಚೆ ಮಾಡಿದ್ದಾರೆ. ಬಹುಶಃ ಜೆಡಿಎಸ್ ಪಕ್ಷವನ್ನು ಹಂತ ಹಂತವಾಗಿ ಮುಗಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದು ಮಾಗಡಿ ಕ್ಷೇತ್ರ ಶಾಸಕ ಎಚ್.ಸಿ.ಬಾಲಕೃಷ್ಣ ಪ್ರತಿಕ್ರಿಯೆ ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ದೇವೇಗೌಡರು ಕೇಳಿದ ತಕ್ಷಣವೇ ಕಾಂಗ್ರೆಸ್ ರಾಜ್ಯಸಭೆಗೆ ಅವಕಾಶ ಮಾಡಿಕೊಟ್ಟು ಗೌರವಯುತವಾಗಿ ನಡೆಸಿಕೊಂಡಿತ್ತು. ಆದರೆ, ಬಿಜೆಪಿಯಲ್ಲಿ ಅಂತಹ ವಾತಾವರಣ ಇಲ್ಲ. ಜೆಡಿಎಸ್ ನವರೇ ಬಿಜೆಪಿಯವರ ಮೇಲೆ ಬಿದ್ದು ಹೋಗಿದ್ದಾರೆ. ಅವರು ಕರೆಯದೇ ಇದ್ದರೂ ಹೋಗಿರೋದಕ್ಕೆ ಸಮಸ್ಯೆ ಆಗಿದೆ ಎಂದರು.
ರಾಜ್ಯದಲ್ಲಿ ಖಾತೆ ವಿಚಾರವಾಗಿ ಗೊಂದಲ ಉಂಟಾಗಿದೆಯಲ್ಲ ಎಂಬ ಪ್ರಶ್ನೆಗೆ, ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ಕೃಷ್ಣಬೈರೇಗೌಡರು ಯಾವುದೋ ಕಾರಣಕ್ಕೆ ದೆಹಲಿಗೆ ಹೋದರೆ ಅದನ್ನೇ ಅಸಮಾಧಾನ, ಗೊಂದಲ ಅಂತ ನೀವು ಸುದ್ದಿ ಮಾಡುತ್ತೀರಿ. ಪಕ್ಷ ಅಂದ ಮೇಲೆ ಸಣ್ಣಪುಟ್ಟ ವಿಚಾರಗಳು ಇರುತ್ತವೆ ಎಂದು ಹೇಳಿದರು.
ಗೊಂದಲ ಅನ್ನೋದು ಸರಿಯಲ್ಲ
ಹಿರಿಯ ನಾಯಕರು ಏನೋ ಒಂದು ಸಣ್ಣಪುಟ್ಟದ್ದನ್ನು ಕೇಳಿದ್ದಾರೆ. ಅದನ್ನೇ ದೊಡ್ಡ ಗೊಂದಲ ಅನ್ನೋದು ಸರಿಯಲ್ಲ. ನಾನು ಕೂಡಾ ಸಚಿವ ಸ್ಥಾನದ ಆಕಾಂಕ್ಷಿ. ಈ ಬಗ್ಗೆ ಮುಖ್ಯಮಂತ್ರಿ ಹಾಗೂ ಹೈಕಮಾಂಡ್ ನಾಯಕರಿಗೆ ಮನವಿ ಮಾಡಿದ್ದೇನೆ. ಅವರು ತೀರ್ಮಾನ ಮಾಡಿ ಕೊಟ್ಟರೆ ಸಂತೋಷ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಬಹುಶಃ ರಾಜ್ಯಸಭಾ ಚುನಾವಣೆ ಹಾಗೂ ಪರಿಷತ್ ಚುನಾವಣೆ ಆದಮೇಲೆ ಸಂಪುಟ ವಿಸ್ತರಣೆ ಆಗಬಹುದು. ಈ ಬಗ್ಗೆ ನಮ್ಮ ಸಿಎಂ ಹಾಗೂ ಹೈಕಮಾಂಡ್ ನಾಯಕರು ತೀರ್ಮಾನ ಮಾಡುತ್ತಾರೆ. ನನಗೆ ಮಂತ್ರಿಸ್ಥಾನ ಕೊಡಬೇಕೆಂದು ಜಿಲ್ಲೆಯ ಜನರೂ ಕೇಳುತ್ತಿದ್ದಾರೆ. ಆದರೆ, ಅಂತಿಮ ತೀರ್ಮಾನ ಹೈಕಮಾಂಡ್ ನದ್ದು ಎಂದು ಹೇಳಿದರು.


