ಹಿರೇಕೆರೂರು ತಾಲೂಕಿನ ಹಂಸಭಾವಿ ಉರ್ದು ಶಾಲೆಯ ಮುಖ್ಯ ಶಿಕ್ಷಕಿ ಉಮೈ ಸಲ್ಮಾ, ತಮ್ಮ ಮಗನ ಜನ್ಮದಿನದ ನೆನಪಿಗಾಗಿ ಸ್ವಂತ ಹಣದಲ್ಲಿ ಶಾಲೆಗೆ ಸುಣ್ಣಬಣ್ಣ ಬಳಿಸಿ, ಆಟದ ಮೈದಾನ ನಿರ್ಮಿಸಿದ್ದಾರೆ. ಅವರ ಈ ಆದರ್ಶ ಕಾರ್ಯವು ಶಿಕ್ಷಕ ವಲಯದಲ್ಲಿ ಮತ್ತು ಸಾರ್ವಜನಿಕವಾಗಿ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.
ಹಾವೇರಿ: ಜಿಲ್ಲೆಯ ಹಿರೇಕೆರೂರು ತಾಲೂಕಿನ ಹಂಸಭಾವಿಯ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಉಮೈ ಸಲ್ಮಾ ಅವರು ತಮ್ಮ ಮಗ ಮಲಿಕ್ ರೆಹನ್ ಅವರ ಹುಟ್ಟುಹಬ್ಬದ ಅಂಗವಾಗಿ ₹ 2 ಲಕ್ಷ ಸ್ವಂತ ಹಣದಲ್ಲಿ ಶಾಲೆಗೆ ಕಾಯಕಲ್ಪ ನೀಡುವ ಮೂಲಕ ಸಮಾಜಕ್ಕೆ ವಿಶಿಷ್ಟ ಹಾಗೂ ಮಾದರಿ ಸಂದೇಶವೊಂದನ್ನು ನೀಡಿದ್ದಾರೆ.
ಶಾಲೆಗೆ ಉತ್ತಮ ಗುಣಮಟ್ಟದ ಸುಣ್ಣ-ಬಣ್ಣ
ಸಾಮಾನ್ಯವಾಗಿ ಜನರು ತಮ್ಮ ಮಕ್ಕಳ ಜನ್ಮದಿನವನ್ನು ಐಷಾರಾಮಿ ಹೋಟೆಲ್‌ಗಳಲ್ಲಿ ಅಥವಾ ಅನಗತ್ಯ ವೆಚ್ಚಗಳ ಮೂಲಕ ಆಚರಿಸಿಕೊಳ್ಳುವುದು ರೂಢಿ. ಆದರೆ ಶಿಕ್ಷಕಿ ಉಮೈ ಸಲ್ಮಾ ಅವರು ತಾವೇ ಸೇವೆ ಸಲ್ಲಿಸುತ್ತಿರುವ ಸರ್ಕಾರಿ ಶಾಲೆಯ ಅಭಿವೃದ್ಧಿಗೆ ಅಳಿಲು ಸೇವೆ ಸಲ್ಲಿಸಲು ನಿರ್ಧರಿಸಿದರು. ತಮ್ಮ ಮಗನ ಜನ್ಮದಿನದ ಸವಿನೆನಪಿಗಾಗಿ ಸ್ವಂತ ₹ 2 ಲಕ್ಷ ವೆಚ್ಚದಲ್ಲಿ ಇಡೀ ಶಾಲೆಗೆ ಉತ್ತಮ ಗುಣಮಟ್ಟದ ಸುಣ್ಣ-ಬಣ್ಣ ಮಾಡಿಸಿದ್ದಾರೆ. ಅಷ್ಟೇ ಅಲ್ಲದೆ, ಶಾಲಾ ಮಕ್ಕಳಿಗೆ ಆಟವಾಡಲು ಸುಂದರ ಹಾಗೂ ಸುರಕ್ಷಿತವಾದ ಆಟದ ಮೈದಾನವನ್ನು ನಿರ್ಮಿಸಿಕೊಡುವ ಮೂಲಕ ಶಾಲೆಯ ಅಂದವನ್ನು ಹೆಚ್ಚಿಸಿದ್ದಾರೆ.
ಮುಖ್ಯ ಶಿಕ್ಷಕಿಯ ಈ ಸೇವಾ ಮನೋಭಾವ, ಉದಾರತೆ ಮತ್ತು ಶಿಕ್ಷಣದ ಮೇಲಿನ ಅಪಾರ ಕಾಳಜಿಯನ್ನು ಶ್ಲಾಘಿಸಿ, ಶಿಕ್ಷಕರ ಸಂಘವು ಅಭಿನಂದನೆ ಸಲ್ಲಿಸಿದೆ.
ಶಿಕ್ಷಕರ ಸಂಘದ ಪದಾಧಿಕಾರಿಗಳು ಪ್ರಶಂಸೆ
ಉಮೈ ಸಲ್ಮಾ ಅವರ ಈ ಅಪೂರ್ವ ಕಾರ್ಯವು ಕೇವಲ ಹಿರೇಕೆರೂರು ತಾಲೂಕಿಗೆ ಮಾತ್ರವಲ್ಲದೆ, ಇಡೀ ಹಾವೇರಿ ಜಿಲ್ಲೆ ಹಾಗೂ ಕರ್ನಾಟಕ ರಾಜ್ಯದ ಎಲ್ಲಾ ಶಿಕ್ಷಕರಿಗೂ ಸ್ಫೂರ್ತಿದಾಯಕವಾಗಿದೆ. ಅವರ ಸಮಾಜಮುಖಿ ಚಿಂತನೆ, ಶಾಲಾ ಅಭಿವೃದ್ಧಿಯ ಮೇಲಿನ ಬದ್ಧತೆ ಮತ್ತು ಮಕ್ಕಳ ಭವಿಷ್ಯದ ಮೇಲಿನ ಪ್ರೀತಿ ಸದಾ ಸ್ಮರಣೀಯ ಎಂದು ಶಿಕ್ಷಕರ ಸಂಘದ ಪದಾಧಿಕಾರಿಗಳು ಪ್ರಶಂಸಿಸಿದ್ದಾರೆ. ಸರ್ಕಾರಿ ಶಾಲೆಯ ಚಿತ್ರಣವನ್ನೇ ಬದಲಾಯಿಸಿದ ಈ ಆದರ್ಶ ಶಿಕ್ಷಕಿಯ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲೂ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ.


