Kannada sahitya sammelana: ನುಡಿಜಾತ್ರೆಗೆ ನೆಂಟರು, ಸ್ನೇಹಿತರಿಗೆ ಫೋನ್ ಮಾಡಿ ಕರೆಸಿದ ಹಾವೇರಿ ಜನ!
ನಮ್ಮೂರಾಗ ಸಮ್ಮೇಳನ ನಡೆಯಾಕ್ಕತ್ತಿ ಬರ್ರಿ..ತಪ್ಪಿಸಬ್ಯಾಡ್ರಿ..! 86ನೆಯ ಸಾಹಿತ್ಯ ಸಮ್ಮೇಳನಕ್ಕೆ ಹಾವೇರಿಯ ಜನತೆ ಕಳೆದ ಒಂದು ವಾರದಿಂದ ನೆಂಟರಿಷ್ಟರು, ಸ್ನೇಹಿತರಿಗೆ ಮೊಬೈಲ್ ಮೂಲಕ ನೀಡಿದ ಪ್ರೀತಿಯ ಆಹ್ವಾನವಿದು.
ಶಿವಾನಂದ ಗೊಂಬಿ
ಹಾವೇರಿ (ಜ.8) : ನಮ್ಮೂರಾಗ ಸಮ್ಮೇಳನ ನಡೆಯಾಕ್ಕತ್ತಿ ಬರ್ರಿ..ತಪ್ಪಿಸಬ್ಯಾಡ್ರಿ..! 86ನೆಯ ಸಾಹಿತ್ಯ ಸಮ್ಮೇಳನಕ್ಕೆ ಹಾವೇರಿಯ ಜನತೆ ಕಳೆದ ಒಂದು ವಾರದಿಂದ ನೆಂಟರಿಷ್ಟರು, ಸ್ನೇಹಿತರಿಗೆ ಮೊಬೈಲ್ ಮೂಲಕ ನೀಡಿದ ಪ್ರೀತಿಯ ಆಹ್ವಾನವಿದು.
ಹಾವೇರಿಯಲ್ಲಿ ಸಾಹಿತ್ಯ ಸಮ್ಮೇಳನ ಘೋಷಣೆಯಾದಾಗಲೇ ಇದು ಸಣ್ಣ ಊರು, ಲಾಡ್ಜ್ ಇಲ್ಲ, ಹೋಟೆಲ್‌ಗಳಿಲ್ಲ. ಸಮ್ಮೇಳನ ಮಾಡಲು ಸೂಕ್ತ ಜಾಗವೂ ಇಲ್ಲ. ಜನರೇ ಸೇರಲ್ಲ ನೋಡಿ ಎಂಬಂತಹ ಟೀಕೆಗಳೆಲ್ಲ ಕೇಳಿ ಬಂದಿದ್ದವು. ಆದರೆ ಇವುಗಳನ್ನೆಲ್ಲ ಮೆಟ್ಟಿನಿಂತು ಜಿಲ್ಲಾಡಳಿತ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಸಮ್ಮೇಳನವನ್ನು ಅತ್ಯಂತ ಅಚ್ಚುಕಟ್ಟಾಗಿ ಆಯೋಜನೆ ಮಾಡಿದ್ದು ವಿಶೇಷ.
ಸಾಹಿತ್ಯ ಸಮ್ಮೇಳನ ನಡೆಸಬೇಕೆಂಬ 50 ವರ್ಷಗಳ ಕನಸು ನನಸು; ಹಾವೇರಿ ಜನ ಖುಷಿಯೋ ಖುಷಿ
ಇನ್ನು ಜನತೆ ಕೂಡ ತಮ್ಮ ಮನೆಯ ಹಬ್ಬದಂತೆ ಭಾವಿಸಿ ಸಮ್ಮೇಳನಕ್ಕೆ ಸಾಥ್ ನೀಡುತ್ತಿದ್ದಾರೆ. ಸಮ್ಮೇಳನಕ್ಕೆ ಸಾಹಿತ್ಯಾಸಕ್ತರ ಕೊರತೆಯಾಗಬಾರದು ಹಾವೇರಿ ಕೆಟ್ಟಹೆಸರು ಬರಬಾರ ದೆಂದು ಜನತೆಯೇ ತಮ್ಮ ಮನೆಯ ಕಾರ್ಯಕ್ರಮಕ್ಕೋ, ಮದುವೆಗೋ ಆಹ್ವಾನ ನೀಡಿದಂತೆ ಕರೆದಿದ್ದಾರೆ. ಕಳೆದ ಒಂದು ವಾರದಿಂದಲೇ ಬೇರೆ ಬೇರೆ ಊರೊಳಗಿರುವ ತಮ್ಮ ತಮ್ಮ ಸ್ನೇಹಿತರಿಗೆ, ನೆಂಟರಿಷ್ಟರಿಗೆ ಮೊಬೈಲ್ ಮೂಲಕ ಕರೆ ಮಾಡಿ ನಮ್ಮೂರಲ್ಲಿ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ತಪ್ಪಿಸಬ್ಯಾಡ್ರಿ. ನೀವು ಬರಲೇ ಬೇಕು. ಇಲ್ಲಿ ನಿಮಗೇನು ಸಮಸ್ಯೆಯಾಗದಂತೆ ವ್ಯವಸ್ಥೆಯನ್ನೂ ಮಾಡುತ್ತೇವೆ..ಬನ್ನಿ’ ಎಂದೆಲ್ಲ ಹೇಳಿ ಪ್ರೀತಿಯ ಆಹ್ವಾನ ನೀಡಿದ್ದಾರೆ.
ಉಳಿದುಕೊಳ್ಳಲು ವ್ಯವಸ್ಥೆಯಾಗುವುದು ಕಷ್ಟವಲ್ಲವೇ ಎಂದು ಕೇಳಿದರೆ, ‘ನಮ್ಮನೆಯಲ್ಲೇ ಉಳಿದುಕೊಳ್ಳಬಹುದು ಬನ್ನಿ ಅಷ್ಟೇ’ ಎಂದೆಲ್ಲ ಹೇಳುತ್ತಿರುವುದು ಸಾಮಾನ್ಯವಾಗಿದೆ. ಜನರ ಪ್ರೀತಿಯ ಆಹ್ವಾನಕ್ಕೆ ಮನ್ನಣೆ ನೀಡಿ ಪರಸ್ಥಳಗಳಲ್ಲಿರುವ ಜನರು ಕೂಡ ಆಗಮಿಸಿರುವುದು ವಿಶೇಷ. ಮೊದಲ ದಿನದ ಸಮ್ಮೇಳನದ ದಿನವೂ ನೀವು ಬರಲೇ ಇಲ್ಲ, ನಾಳೆಯಾದರೂ ಬನ್ನಿ ಎಂದು ಆಹ್ವಾನ ನೀಡುತ್ತಿದ್ದ ದೃಶ್ಯ ಶುಕ್ರವಾರ ಕಂಡು ಬಂತು. ಸಾಹಿತ್ಯ ಪರಿಷತ್‌ನ ಸದಸ್ಯರಿಗೆ, ಅತಿಥಿಗಳಿಗೆ ಜಿಲ್ಲಾಡಳಿತವೇ ಹೋಟೆಲ್, ಹಾಸ್ಟೆಲ್‌ಗಳಲ್ಲಿ ವ್ಯವಸ್ಥೆ ಮಾಡಿದರೆ, ಹೀಗೆ ಮೊಬೈಲ್ ಆಹ್ವಾನದ ಮೂಲಕ ಆಗಮಿಸಿದವರಿಗೆ ಕೆಲವರು ತಮ್ಮ ತಮ್ಮ ಮನೆಗಳಲ್ಲೂ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿರುವುದು ವಿಶೇಷ.
ಇನ್ನೂ ಈ ಊರಿನವರು ಕೆಲಸಕ್ಕೆಂದು ಬೇರೆ ಬೇರೆ ಊರಿಗೆ ತೆರಳಿದವರು ಕೂಡ ಇದೀಗ ಸಮ್ಮೇಳನಕ್ಕೆಂದು ಊರಿಗೆ ಬಂದಿದ್ದಾರೆ. ಜತೆಗೆ ತಮ್ಮ ತಮ್ಮ ಸ್ನೇಹಿತರನ್ನೂ ಕೂಡ ಕರೆದುಕೊಂಡು ಬಂದಿರುವುದು ಮತ್ತೊಂದು ವಿಶೇಷ.
ಹಬ್ಬದ ವಾತಾವರಣ:
ಕೊರೋನಾ ಕಾರಣದಿಂದಾಗಿ ಎರಡು ವರ್ಷ ತಡವಾಗಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನ ಯಾವುದೇ ಸಮಸ್ಯೆಯಿಲ್ಲದಂತೆ ಅಚ್ಚುಕಟ್ಟಾಗಿ ನಡೆಯುತ್ತಿದ್ದು, ಇಡೀ ಊರಲ್ಲೇ ಹಬ್ಬದ ವಾತಾವರಣ ಸೃಷ್ಟಿಸಿದೆ. ಜನತೆ ತಮ್ಮ ಮನೆಯ ಹಬ್ಬವೇನೋ ಎಂಬಂತೆ ಎಲ್ಲರೂ ಸಡಗರ ಸಂಭ್ರಮದಿಂದ ಭಾಗವಹಿಸಿರುವುದು ವಿಶೇಷ. ಜತೆಗೆ ಸಾಹಿತ್ಯ ಸಮ್ಮೇಳನವೆಂದರೆ ಬೇರೆ ಬೇರೆ ಸ್ಥಳಗಳಲ್ಲಿ ಸಮಾನಾಂತರ ವೇದಿಕೆ, ಪುಸ್ತಕ ಮಳಿಗೆ, ವಾಣಿಜ್ಯ ಮಳಿಗೆ ಹೀಗೆ ಎಲ್ಲವೂ ಬೇರೆ ಬೇರೆ ಕಡೆ ಇರುವುದು ಮಾಮೂಲಿ. ಆದರೆ ಹಾವೇರಿಯಲ್ಲಿ ಪಾರ್ಕಿಂಗ್ ಸೇರಿದಂತೆ 3 ವೇದಿಕೆ, ಮಳಿಗೆ, ವಾಣಿಜ್ಯ ಮಳಿಗೆ ಸೇರಿದಂತೆ ವಿವಿಧ ಕಾರ್ಯಕ್ರಮಗಳೆಲ್ಲ ಒಂದೇ ಪ್ರಾಂಗಣದಲ್ಲಿ ನಡೆಯುತ್ತಿರುವುದು ವಿಶೇಷ.
Kannada Sahitya Sammelana: ಸರ್ಕಾರಗಳಿಂದ ಕನ್ನಡದ ಬಗ್ಗೆ ನಿರ್ಲಕ್ಷ್ಯ: ದೊಡ್ಡರಂಗೇಗೌಡ
ನಮ್ಮ ಊರಾಗ ಸಮ್ಮೇಳನ ನಡೆಯುತ್ತಿರುವುದರಿಂದ ಬೇರೆ ಊರುಗಳಲ್ಲಿರುವ ನೆಂಟರಿಷ್ಟರನ್ನು, ಸ್ನೇಹಿತರನ್ನು ಸಮ್ಮೇಳನಕ್ಕೆ ಮೊಬೈಲ್ ಮೂಲಕವೇ ಆಹ್ವಾನಿಸಿದ್ದೇವೆ. ಎರಡು ವರ್ಷದ ಹಿಂದೆಯೇ ಸಮ್ಮೇಳನ ನಡೆಯಬೇಕಿತ್ತು. ಆದರೆ ಕೊರೋನಾ ದಿಂದಾಗಿ ಈಗ ನಡೆಯುತ್ತಿದೆ. ಆದರೂ ಯಾವುದೇ ಸಮಸ್ಯೆಯಾಗದಂತೆ ಸಮ್ಮೇಳನ ನಡೆಯಬೇಕು ಎಂಬುದು ನಮ್ಮ ಆಶಯ.
- ರಮೇಶ ಪಾಟೀಲ, ಹಾವೇರಿ ನಾಗರಿಕ