ತುಂಗಭದ್ರಾ ನದಿಯಲ್ಲಿ ಕಾಲು ಜಾರಿ ಬಿದ್ದ 60 ವರ್ಷದ ವೃದ್ಧ ಜಯಣ್ಣ, 15 ಕಿ.ಮೀ. ದೂರ ಈಜಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಐರಣಿ ಗ್ರಾಮದ ಬಳಿ ಸ್ಥಳೀಯರು ರಕ್ಷಣೆ ಮಾಡಿದ್ದಾರೆ.
ಹಾವೇರಿ (ಜು.24): 'ಬದುಕುವ ಇಚ್ಛೆಗಿಂತ ಬಲವಾದ ಶಕ್ತಿ ಇನ್ನೇನೂ ಇಲ್ಲ' ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ ಘಟನೆ ರಾಣೇಬೆನ್ನೂರು ತಾಲೂಕಿನ ಐರಣಿ ಗ್ರಾಮದಲ್ಲಿ ನಡೆದಿದೆ. ತುಂಗಭದ್ರಾ ನದಿಯಲ್ಲಿ ಬಟ್ಟೆ ತೊಳೆಯಲು ಹೋಗಿ ಕಾಲು ಜಾರಿ ಬಿದ್ದ ವಯೋವೃದ್ಧ ಜಯಣ್ಣ (60), ನದಿ ತುಂಬಿ ಹರಿಯುತ್ತಿದ್ದರೂ ಸಹ 15 ಕಿ.ಮೀ. ದೂರವರೆಗೆ ಈಜಿ ಅಂತಿಮವಾಗಿ ಜೀವ ಉಳಿಸಿಕೊಂಡಿದ್ದಾರೆ.
ಘಟನೆ ವಿವರ :
ನದಿಯಲ್ಲಿ 15 ಕಿ.ಮೀ. ಈಜಿ ಜೀವ ಉಳಿಸಿಕೊಂಡಿರುವ ವೃದ್ಧ ಜಯಣ್ಣ ಕುಮಾರಪಟ್ಟಣಂ ಬಳಿ ಇರುವ ಅಯ್ಯಪ್ಪ ಸ್ವಾಮಿ ದೇವಾಲಯದ ಬಳಿ ಬಟ್ಟೆ ತೊಳೆಯಲು ತೆರಳಿದ್ದರು. ಈ ಸಂದರ್ಭ, ಕಾಲು ಜಾರಿ ನದಿಗೆ ಬಿದ್ದು, ನೀರಿನ ಸೆಳೆತದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ನಂತರ ದಡಕ್ಕೆ ಈಜಿ ಬರಲು ಸಾಧ್ಯವ ಆಗದೇ ಅವರು 15 ಕಿ.ಮೀ.ವರೆಗೂ ನೀರಿನಲ್ಲಿ ತೇಲಿಕೊಂಡು ಐರಣಿ ಗ್ರಾಮದ ಹೊಳೆಮಠದ ಬಳಿ ತಲುಪಿದ್ದಾರೆ.
ಆ ಸಮಯದಲ್ಲಿ ತಮ್ಮ ಶಕ್ತಿ ಕುಗ್ಗುತ್ತಿದ್ದಂತೆಯೇ 'ಕಾಪಾಡಿ, ಕಾಪಾಡಿ' ಎಂದು ಸಹಾಯ ಕೇಳಿದ ಜಯಣ್ಣರನ್ನು ಸ್ಥಳೀಯರು ಗಮನಿಸಿ, ಸ್ಥಳೀಯ ಮೀನುಗಾರರ ದೋಣಿಯನ್ನು ಬಳಸಿಕೊಂಡು ನದಿಗೆ ಇಳಿದು ರಕ್ಷಣೆ ಮಾಡಿದರು. ತಕ್ಷಣವೇ ದಡಕ್ಕೆ ತರಲಾದ ಜಯಣ್ಣರನ್ನು ಹರಿಹರ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತೆ. ವೈದ್ಯರು ಅವರ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿಸಿದ್ದಾರೆ.
ಜೀವ ಉಳಿಸಿಕೊಳ್ಳಲು ಹೆದರುವ ಬದಲು ಧೈರ್ಯದಿಂದ ನೀರಿನಲ್ಲಿ ಈಜಿದ ಜಯಣ್ಣ ಅವರ ಸಾಹಸ, ಇಡೀ ಹಾವೇರಿ ಜಿಲ್ಲೆಯಲ್ಲೇ ಚರ್ಚೆಗೆ ವಿಷಯವಾಗಿದೆ. ಅವರ ಬದುಕುಳಿಯಲು ಸಹಾಯ ಮಾಡಿದ ಗ್ರಾಮಸ್ಥರಿಂದ ಪ್ರಶಂಸೆಗೆ ಪಾತ್ರವಾಗಿದೆ.
