ಹಾವೇರಿ ನಗರದ ಬಸ್ ನಿಲ್ದಾಣದಲ್ಲಿ ಚಾಲಕನ ಅತಿಯಾದ ವೇಗ ಮತ್ತು ಅಜಾಗರೂಕತೆಯಿಂದ ಸಾರಿಗೆ ಬಸ್ ಪ್ಲಾಟ್‌ಫಾರ್ಮ್‌ಗೆ ನುಗ್ಗಿದ ಪರಿಣಾಮ ಭೀಕರ ಅಪಘಾತ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಎರಡು ವರ್ಷದ ಮಗು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದು, ಇತರ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಹಾವೇರಿ (ಏ.01): ಹಾವೇರಿ ನಗರದ ಬಸ್ ನಿಲ್ದಾಣದಲ್ಲಿ ಇಂದು ಮುಂಜಾನೆ ಚಾಲಕನ ಅತಿಯಾದ ವೇಗ ಹಾಗೂ ಅಜಾಗರೂಕತೆಯ ಚಾಲನೆಯಿಂದಾಗಿ ರಾಜ್ಯ ಸಾರಿಗೆ ಬಸ್ ಪ್ಲಾಟ್‌ಫಾರ್ಮ್ ಮೇಲೆ ಕಾಯುತ್ತಿದ್ದ ಜನರ ಮೇಲೆ ಏಕಾಏಕಿ ನುಗ್ಗಿದೆ. ಈ ಘೋರ ಅಪಘಾತದಲ್ಲಿ ತೀವ್ರವಾಗಿ ನಾಲ್ವರು ಗಾಯಗೊಂಡಿದ್ದರು. ಈ ಪೈಕಿ ಎರಡು ವರ್ಷದ ಪುಟ್ಟ ಮಗು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಘಟನೆಯ ವಿವರ:

ಇಂದು ಬೆಳಿಗ್ಗೆ ಸುಮಾರು 7 ಗಂಟೆಯ ಸುಮಾರಿಗೆ ಹಾವೇರಿ ಕೇಂದ್ರ ಬಸ್ ನಿಲ್ದಾಣದಲ್ಲಿ ಎಂದಿನಂತೆ ಪ್ರಯಾಣಿಕರ ಓಡಾಟವಿತ್ತು. ಸವಣೂರು ಪ್ಲಾಟ್‌ಫಾರ್ಮ್ ಬಳಿ ಪ್ರಯಾಣಿಕರು ತಾವು ಹೋಗಬೇಕಾದ ಬಸ್‌ಗಳಿಗಾಗಿ ಕಾಯುತ್ತಿದ್ದರು. ಈ ವೇಳೆ ಸವಣೂರು ಕಡೆಗೆ ತೆರಳಬೇಕಿದ್ದ ಬಸ್ ನಿಲ್ದಾಣಕ್ಕೆ ಬಂದಿದೆ. ಬಸ್ ಬರುತ್ತಿದ್ದಂತೆ ಪ್ರಯಾಣಿಕರು ಬಸ್‌ನ ಮುಂಭಾಗದಲ್ಲಿದ್ದ ಬೋರ್ಡ್ ನೋಡಲು ಮುಂದಕ್ಕೆ ಬಂದಿದ್ದಾರೆ. ಈ ವೇಳೆ ಚಾಲಕ ಬಸ್ಸನ್ನು ನಿಯಂತ್ರಿಸಲಾಗದೆ, ಅತಿಯಾದ ವೇಗದಿಂದ ಪ್ಲಾಟ್‌ಫಾರ್ಮ್ ಮೇಲಿದ್ದ ಜನರ ಮೇಲೆಯೇ ನುಗ್ಗಿಸಿದ್ದಾನೆ.

ಬಾರದ ಲೋಕಕ್ಕೆ ತೆರಳಿದ 2 ವರ್ಷದ ಕಂದ:

ಬಸ್ ನುಗ್ಗಿದ ರಭಸಕ್ಕೆ ಸವಣೂರು ಪಟ್ಟಣದ ನಿವಾಸಿಗಳಾದ ಪೋಷಕರ ಜೊತೆಗಿದ್ದ ಎರಡು ವರ್ಷದ ಪುಟ್ಟ ಕಂದ ಹಜರತ್ ಅಲಿ ತೀವ್ರವಾಗಿ ಗಾಯಗೊಂಡಿದ್ದನು. ಮಗುವಿನ ಸ್ಥಿತಿ ಗಂಭೀರವಾಗಿದ್ದರಿಂದ ತಕ್ಷಣವೇ ಹಾವೇರಿ ಜಿಲ್ಲಾಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ (KIMS) ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ದುರದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ಹಜರತ್ ಅಲಿ ಸಾವನ್ನಪ್ಪಿದ್ದಾನೆ. ಕಣ್ಣೆದುರೇ ಆಟವಾಡಿಕೊಂಡಿದ್ದ ಕಂದಮ್ಮ ರಕ್ತದ ಮಡುವಿನಲ್ಲಿ ಬಿದ್ದು ಪ್ರಾಣ ಬಿಟ್ಟಿರುವುದನ್ನು ಕಂಡು ತಂದೆ-ತಾಯಿ ಮತ್ತು ಸಂಬಂಧಿಕರ ಗೋಳು ನೋಡಲಾರದಂತಿತ್ತು.

ಮೂವರಿಗೆ ಗಂಭೀರ ಗಾಯ:

ಈ ಅಪಘಾತದಲ್ಲಿ ಕೇವಲ ಮಗು ಮಾತ್ರವಲ್ಲದೆ, ಬಂಕಾಪುರ ಪಟ್ಟಣದ ನಿವಾಸಿಗಳಾದ ವಾಸುದೇವ (44), ಹರ್ಷಾ (6) ಹಾಗೂ ಕಾವ್ಯಾಂಜಲಿ (39) ಎಂಬುವವರಿಗೂ ಗಂಭೀರ ಗಾಯಗಳಾಗಿವೆ. ಇವರೆಲ್ಲರೂ ಸದ್ಯ ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಸ್ ಚಾಲಕನ ಬೇಜವಾಬ್ದಾರಿತನವೇ ಈ ಅನಾಹುತಕ್ಕೆ ನೇರ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿಸಿಟಿವಿ ದೃಶ್ಯಾವಳಿ ಲಭ್ಯ:

ಬಸ್ ಜನರ ಮೇಲೆ ನುಗ್ಗಿದ ಭೀಕರ ದೃಶ್ಯವು ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಲಭ್ಯವಾಗಿದ್ದು, ಅಪಘಾತದ ತೀವ್ರತೆಯನ್ನು ಸಾರಿ ಹೇಳುತ್ತಿದೆ. ಪ್ಲಾಟ್‌ಫಾರ್ಮ್ ಮೇಲಿರುವ ಜನರ ಮೇಲೆ ಬಸ್ ಹೇಗೆ ನುಗ್ಗಿತು ಎಂಬುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಘಟನಾ ಸ್ಥಳಕ್ಕೆ ಹಾವೇರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬಸ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಬಸ್ ನಿಲ್ದಾಣದಂತಹ ಜನನಿಬಿಡ ಪ್ರದೇಶದಲ್ಲಿ ಚಾಲಕರು ಇಷ್ಟು ಅಜಾಗರೂಕತೆಯಿಂದ ವಾಹನ ಚಲಾಯಿಸುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.