Russia-Ukraine Crisis: ಬ್ಲಾಸ್ಟ್ ಆಗ್ತಿದೆ, ನಮ್ಮನ್ನು ಕರ್ಕೊಂಡು ಹೋಗಿ: ಉಕ್ರೇನ್‌ನಲ್ಲಿ ಕನ್ನಡಿಗರ ಆಕ್ರಂದನ
* ನಮ್ಮನ್ನು ಕರೆದೊಯ್ಯಬಹುದೆಂದು ಕಾಯುತ್ತಿದ್ದೇವೆ
* ಉಕ್ರೇನ್‌ನಲ್ಲಿ ಸಿಲುಕಿರುವ ಕನ್ನಡಿಗ ವಿದ್ಯಾರ್ಥಿಗಳ ಆತಂಕದ ನುಡಿ
* ಖಾರ್ಕಿವ್‌ನಲ್ಲಿ ಹಾವೇರಿ ಜಿಲ್ಲೆಯ 5 ವಿದ್ಯಾರ್ಥಿಗಳು
ಹಾವೇರಿ(ಫೆ.25): ರಷ್ಯಾ(Russia) ಗಡಿಯಿಂದ ಕೇವಲ 30 ಕಿ.ಮೀ. ದೂರದಲ್ಲಿದ್ದೇವೆ. ಬೆಳಗ್ಗೆಯಿಂದಲೇ ಯುದ್ಧ(War) ಆರಂಭವಾಗಿದೆ. ಸ್ಫೋಟದ ಸದ್ದು ಕೇಳಿ ಬರುತ್ತಿದೆ. ಯುದ್ಧ ವಿಮಾನಗಳ ಹಾರಾಟ ಕಾಣಿಸುತ್ತಿದೆ. ನಾವು ತೀರಾ ಆತಂಕದಲ್ಲಿದ್ದೇವೆ. ಹಾವೇರಿ(Haveri) ಜಿಲ್ಲೆಯವರೇ ನಾವು ಐವರು ಒಟ್ಟಿಗಿದ್ದುದು ಸ್ವಲ್ಪ ಧೈರ್ಯ ತಂದಿದೆ. ಮುಂದೇನು ಮಾಡಬೇಕು, ಭಾರತಕ್ಕೆ ಮರಳುವುದು ಹೇಗೆ, ಯುದ್ಧ ಎಷ್ಟುದಿವಸ ಮುಂದುವರಿಯಬಹುದು ಎಂಬ ಯಾವುದೂ ತಿಳಿಯದೇ ಚಿಂತಾಕ್ರಾಂತರಾಗಿದ್ದೇವೆ. ನಮ್ಮ ಮನೆಗಳಿಂದ ನಿರಂತರ ಫೋನ್ ಬರುತ್ತಿದೆ. ಅವರೂ ಕಂಗಾಲಾಗಿದ್ದಾರೆ...
ಇದು ಉಕ್ರೇನ್‌ನ(Ukraine) ಖಾರ್ಕಿವ್ ಎಂಬಲ್ಲಿ ಎಂಬಿಬಿಎಸ್(MBBS) ಓದುತ್ತಿರುವ ರಾಣಿಬೆನ್ನೂರು ನಗರದ ಸುಮನ್ ಶ್ರೀಧರ ವೈಶ್ಯರ ಆತಂಕಭರಿತ ಮಾತು. ರಾಣಿಬೆನ್ನೂರು ನಗರದ ಸುಮನ್ ಶ್ರೀಧರ ವೈಶ್ಯರ, ಚಳಗೇರಿಯ ಅಮಿತ್, ಪ್ರವೀಣ ಅಜರೆಡ್ಡಿ, ಶ್ರೇಯಸ್ ಜೈನ್ ಹಾಗೂ ಬ್ಯಾಡಗಿಯ ಕುಶಾಲ್ ಎಂಬ ಐವರು ವಿದ್ಯಾರ್ಥಿಗಳು(Students) ಉಕ್ರೇನ್‌ನ ಖಾರ್ಕಿವ್ ಎಂಬಲ್ಲಿ ಎಂಬಿಬಿಎಸ್ ಮಾಡುತ್ತಿದ್ದಾರೆ.
ಉಕ್ರೇನ್‌ನಲ್ಲಿ ಸಿಲುಕಿದ ಕನ್ನಡಿಗರು: ಎಲ್ಲರನ್ನೂ ಸುರಕ್ಷಿತವಾಗಿ ಕರೆತರುತ್ತೇವೆ: ಬೊಮ್ಮಾಯಿ
ಈಗ ರಷ್ಯಾ ದಾಳಿಯಿಂದ ಕಂಗಾಲಾಗಿ ಕುಳಿತಿದ್ದಾರೆ. ಕರ್ನಾಟಕದವರೇ(Karnataka) ಇಲ್ಲಿ ಸುಮಾರು 180ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ನಾವೆಲ್ಲ ಇಲ್ಲಿ ಹಾಸ್ಟೆಲ್, ರೂಮ್ ಮಾಡಿಕೊಂಡು ಓದುತ್ತಿದ್ದೇವೆ. ಆದರೆ, ಗುರುವಾರ ಬೆಳಗ್ಗೆಯಿಂದ ರಷ್ಯಾ ಯುದ್ಧ ಆರಂಭಿಸಿದೆ. ಬೆಳಗ್ಗೆ 5.30ರ ಸುಮಾರಿಗೆ ದೊಡ್ಡ ಸ್ಫೋಟದ ಶಬ್ದ ಕೇಳಿಸಿತು. ಮತ್ತೆ 6-30ರ ವೇಳೆಗೆ, ನಂತರ 8 ಗಂಟೆ ವೇಳೆಗೆ ಸೇರಿ ಮೂನಾಲ್ಕು ಸಲ ಭಾರೀ ಸ್ಫೋಟದ ಶಬ್ದ ಕೇಳಿಸಿದೆ. ವಿಮಾನಗಳ ಹಾರಾಟದ ಅಬ್ಬರವೂ ಕೇಳಿ ಬರುತ್ತಿದೆ. ಭಾರತಕ್ಕೆ(India) ನಮ್ಮನ್ನು ಸುರಕ್ಷಿತವಾಗಿ ಕರೆದೊಯ್ಯಬಹುದು ಎಂಬ ನಿರೀಕ್ಷೆಯಲ್ಲಿ ಕಾಯುತ್ತಿದ್ದೇವೆ’ ಎಂದು ಅವರು ನಿರೀಕ್ಷೆ ವ್ಯಕ್ತಪಡಿಸಿದರು.
ಆಹಾರಕ್ಕೆ ಮುಗಿಬಿದ್ದ ಜನ:
ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿದ ಹಿನ್ನೆಲೆಯಲ್ಲಿ ಹೋಟೆಲ್, ಮಾಲ್‌ಗಳಲ್ಲಿ ಆಹಾರಕ್ಕೆ ಜನ ಮುಗಿಬೀಳುತ್ತಿದ್ದಾರೆ. ಇದೇ ರೀತಿ ಮುಂದುವರಿದರೆ ಆಹಾರಕ್ಕೆ ನಾವು ಪರದಾಡುವ ಸಂದರ್ಭ ಎದುರಾಗುವ ಆತಂಕವಿದೆ. ಕಳೆದ ಆಗಸ್ಟ್ ತಿಂಗಳಲ್ಲಿ ರಾಣಿಬೆನ್ನೂರಿಗೆ ಬಂದಿದ್ದೆ. ನನ್ನದು ಎಂಬಿಬಿಎಸ್ ಅಂತಿಮ ವರ್ಷವಾಗಿದ್ದು, ಬರುವ ಮೇ ತಿಂಗಳಲ್ಲಿ ವಿದ್ಯಾಭ್ಯಾಸ(Study) ಪೂರ್ಣಗೊಳ್ಳುತ್ತಿತ್ತು. ಆದರೆ, ಈಗ ಯುದ್ಧ ಆರಂಭವಾಗಿರುವುದರಿಂದ ಮುಂದೇನು ಎಂಬ ಚಿಂತೆ ಶುರುವಾಗಿದೆ. ಭಾರತೀಯ ರಾಯಭಾರ ಕಚೇರಿಗೆ(Indian Embassy) ನಮ್ಮ ಮಾಹಿತಿಯನ್ನು ಇ-ಮೇಲ್ ಕಳುಹಿಸಿದ್ದೇವೆ. ಆ ಕಡೆಯಿಂದ ಇದುವರೆಗೆ ಯಾರೂ ನಮ್ಮನ್ನು ಸಂಪರ್ಕಿಸಿಲ್ಲ ಎಂದು ಸುಮನ್ ಆತಂಕ ವ್ಯಕ್ತಪಡಿಸಿದರು.
ಕಂಗಾಲಾಗಿ ಕುಳಿತಿದ್ದೇವೆ
ರಷ್ಯಾ ಗಡಿಯಿಂದ ಕೇವಲ 30 ಕಿ.ಮೀ. ದೂರದಲ್ಲಿದ್ದೇವೆ. ಬೆಳಿಗ್ಗೆಯಿಂದಲೇ ಯುದ್ಧ ಶುರುವಾಗಿದೆ. ಸ್ಫೋಟದ ಸದ್ದು ಕೇಳಿಸುತ್ತಿದೆ. ಯುದ್ಧ ವಿಮಾನಗಳ(Combat Aircraft) ಹಾರಾಟ ಕಾಣಿಸುತ್ತಿದೆ. ನಾವು ಹಾವೇರಿ ಜಿಲ್ಲೆಯ 5 ಮೆಡಿಕಲ್ ವಿದ್ಯಾರ್ಥಿಗಳು ಆತಂಕದಲ್ಲಿ ಕುಳಿತಿದ್ದೇವೆ. ನಮ್ಮ ಮನೆಯವರೂ ಕಂಗಾಲಾಗಿದ್ದಾರೆ. ಮುಂದೇನು ಅಂತ ಗೊತ್ತಿಲ್ಲ ಅಂತ ರಾಣೆಬೆನ್ನೂರಿನ(Ranibennur) ಸುಮನ್ ಶ್ರೀಧರ ವೈಶ್ಯ ತಿಳಿಸಿದ್ದಾರೆ.
12 ದಿನಗಳ ಹಿಂದಷ್ಟೇ ಉಕ್ರೇನ್‌ಗೆ ಹೋಗಿ ಸಿಲುಕಿದ ಬ್ಯಾಡಗಿ ಹುಡುಗ
ಬ್ಯಾಡಗಿ: ‘ಯದ್ಧ ನಡೆಯುತ್ತಿರುವ ಸ್ಥಳದಿಂದ 45 ಕಿ.ಮೀ. ದೂರದಲ್ಲಿದ್ದೇವೆ. ಬೆಳಗ್ಗೆಯಿಂದ 2 ಸಲ ಭಾರೀ ಸದ್ದು ಕೇಳಿಸಿದೆ. ಆದರೆ ನಾಗಕರಿಕರು ಮನೆಯಿಂದ ಹೊರಗೆ ಬಾರದಂತೆ ಸೂಚನೆ ನೀಡಿದ್ದಾರೆ...’ ಉಕ್ರೇನ್‌ನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ಬ್ಯಾಡಗಿ ಮೂಲದ ವಿದ್ಯಾರ್ಥಿ ಕುಶಾಲ್ ಸಂಕಣ್ಣನವರ ಅವರ ಮಾತಿದು. ಕುಶಾಲ್ ಎಂಬಿಬಿಎಸ್ ವಿದ್ಯಾಭ್ಯಾಸಕ್ಕಾಗಿ ಆರು ವರ್ಷದ ಎಜುಕೇಶನ್ ವೀಸಾದ ಮೇಲೆ 12 ದಿನಗಳ ಹಿಂದಷ್ಟೇ ಉಕ್ರೇನ್‌ಗೆ ತೆರಳಿದ್ದಾರೆ. ಅಷ್ಟರಲ್ಲಿ ಅಲ್ಲಿ ಯುದ್ಧ ಶುರುವಾಗಿದೆ.
Russia Ukraine Crisis: ಉಕ್ರೇನ್ ಮೇಲೆ ರಷ್ಯಾ ದಾಳಿಗೆ ಕಾರಣವೇನು?
ಈ ಕನ್ನಡಪ್ರಭಕ್ಕೆ ಪ್ರತಿಕ್ರಿಯಿಸಿದ ಕುಶಾಲ್ ಸಂಕಣ್ಣವರ ಪಾಲಕರಾದ ಉಮಾ ಹಾಗೂ ಈಶ್ವರ ಸಂಕಣ್ಣವರ, ಪಿಯುಸಿ ಬಳಿಕ ಬಿಬಿಎ, ಎಂಬಿಎ ವಿದ್ಯಾಭ್ಯಾಸ ಮಾಡು. ಪಟ್ಟಣದಲ್ಲೇ ಮೆಣಸಿನಕಾಯಿ ಮಾರುಕಟ್ಟೆಇದೆ. ಇಲ್ಲೇ ಇದ್ದುಕೊಂಡು ವ್ಯಾಪಾರ ವಹಿವಾಟು ಮಾಡುವಂತೆ ತಿಳಿಸಿದ್ದೆ. ಆದರೆ ತಾನೇ ಖುದ್ದಾಗಿ ತನ್ನ ಗೆಳೆಯರೊಂದಿಗೆ ಮಾತಾಡಿಕೊಂಡು ಎಂಬಿಬಿಎಸ್ ಕಲಿಯಲು ಹಟ ಬಿದ್ದು ಹೋಗಿದ್ದಾನೆ ಎಂದು ಬೇಸರ ವ್ಯಕ್ತಪಡಿಸಿದರು.
ಉಕ್ರೇನ್ ಎಲ್ಲಿದೆ ಗೊತ್ತಿಲ್ಲ:
ನಾವಂತೂ ಯಾವುದೇ ವಿದೇಶದ ಗೋಜಿಗೆ ಹೋದವರಲ್ಲ. ಉಕ್ರೇನ್ ಯಾವ ಕಡೆಯಿದೆ ಎಂಬ ಮಾಹಿತಿ ಸಹ ನಮಗಿಲ್ಲ. ಆದರೆ ಮಗನ ಆಸೆಗೆ ವಿರುದ್ಧವಾಗಿ ನಡೆದುಕೊಳ್ಳಬಾರದೆಂಬ ಕಾರಣಕ್ಕೆ ಕಳುಹಿಸಿ ಕೊಟ್ಟಿದ್ದೇವೆ. ಆದರೆ ಆ ದೇಶದಲ್ಲಿ ಇದೀಗ ಯುದ್ಧ ನಡೆಯುತ್ತಿದೆ. ಮಗನಿಗೆ ಯಾವುದೇ ತೊಂದರೆ ಆಗದಂತೆ ಬಂದು ಸೇರಿದರೆ ಸಾಕು ಎನ್ನುತ್ತಾ ಕಣ್ಣೀರಾದರು ಕುಶಾಲ್ ತಾಯಿ ಉಮಾ ಸಂಕಣ್ಣನವರ.