ಹಾಸನ ಜಿಲ್ಲೆಯ ಬೇಲೂರು ತಾಲೂಕಿನಲ್ಲಿ ಕಾಡಾನೆಗಳ ದಾಳಿಗೆ ಸತತ ಎರಡು ದಿನಗಳಲ್ಲಿ ಇಬ್ಬರು ಬಲಿಯಾಗಿದ್ದಾರೆ. ಈ ಘಟನೆಯ ನಂತರ ಸಾರ್ವಜನಿಕರ ಆಕ್ರೋಶ ಹೆಚ್ಚಾದ ಕಾರಣ, 10 ಗಂಡು ಕಾಡಾನೆಗಳನ್ನು ಸೆರೆಹಿಡಿದು ಸ್ಥಳಾಂತರಿಸಲು ಅರಣ್ಯ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.
ಹಾಸನ (ನ.16): ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ಸಾರ್ವಜನಿಕರ ಆಕ್ರೋಶ ಹಾಗೂ ಸರಣಿ ಜೀವಹಾನಿಗಳ ಬೆನ್ನಲ್ಲೇ ಅರಣ್ಯ ಇಲಾಖೆ ಅತ್ಯಂತ ಮಹತ್ವದ ನಿರ್ಧಾರ ಕೈಗೊಂಡಿದೆ. ಸಚಿವ ರಾಮಲಿಂಗಾರೆಡ್ಡಿ ಸೂಚನೆ ಮೇರೆಗೆ ಹಾಸನ ವಿಭಾಗದಲ್ಲಿ ಜನ-ಜಾನುವಾರುಗಳಿಗೆ ನಿರಂತರ ಉಪಟಳ ನೀಡುತ್ತಿರುವ ಹಾಗೂ ಮಾನವ-ಆನೆ ಸಂಘರ್ಷಕ್ಕೆ ಕಾರಣವಾಗಿರುವ 10 ಗಂಡು ಕಾಡಾನೆಗಳನ್ನು ಸೆರೆಹಿಡಿದು ಸ್ಥಳಾಂತರಿಸಲು ಅರಣ್ಯ (Capture and Translocation) ಅರಣ್ಯ ಇಲಾಖೆಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು (ವನ್ಯಜೀವಿ) ಅಧಿಕೃತ ಆದೇಶ ಹೊರಡಿಸಿದ್ದಾರೆ.
ಎರಡು ದಿನಗಳಲ್ಲಿ ಇಬ್ಬರು ಬಲಿ: ಆಕ್ರೋಶಕ್ಕೆ ಮಣಿದ ಇಲಾಖೆ
ಹಾಸನ ವೃತ್ತದ ಬೇಲೂರು ಹಾಗೂ ಸುತ್ತಮುತ್ತಲ ವ್ಯಾಪ್ತಿಯಲ್ಲಿ ಕಳೆದ 48 ಗಂಟೆಗಳಲ್ಲಿ ಕಾಡಾನೆಗಳ ದಾಳಿಗೆ ಇಬ್ಬರು ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ:
ನವೆಂಬರ್ 15: ಬೇಲೂರು ತಾಲೂಕಿನ ಚೌಡನಹಳ್ಳಿಯಲ್ಲಿ ಜಯಮ್ಮ (ಅಂದಾಜು 50 ವರ್ಷ) ಎಂಬ ಮಹಿಳೆ ಕಾಡಾನೆ ದಾಳಿಗೆ ಸಿಲುಕಿ ಸಾವನ್ನಪ್ಪಿದ್ದರು.
ನವೆಂಬರ್ 16: ಮರುದಿನವೇ ಹಫೀಜ್ ಉರ್ ರೆಹಮಾನ್ (ಅಂದಾಜು 64 ವರ್ಷ) ಎಂಬುವವರು ಆನೆ ದಾಳಿಗೆ ಬಲಿಯಾಗಿದ್ದಾರೆ.
ಸತತ ಎರಡು ದಿನಗಳಲ್ಲಿ ಇಬ್ಬರು ದುರ್ಮರಣಕ್ಕೀಡಾಗುತ್ತಿದ್ದಂತೆ ಸ್ಥಳೀಯ ಗ್ರಾಮಸ್ಥರು, ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಅರಣ್ಯ ಸಂರಕ್ಷಣಾಧಿಕಾರಿಗಳು (ಹಾಸನ ವೃತ್ತ) ಸಲ್ಲಿಸಿದ ತುರ್ತು ವರದಿಯನ್ನು ಪರಿಗಣಿಸಿದ ಇಲಾಖೆ, ತಕ್ಷಣವೇ ಕಠಿಣ ಕ್ರಮಕ್ಕೆ ಮುಂದಾಗಿದೆ.
ವನ್ಯಜೀವಿ ಕಾಯ್ದೆ ಸೆಕ್ಷನ್ 11(1)(ಎ) ಅಡಿ ಅನುಮತಿ
ಸಾರ್ವಜನಿಕರ ಸುರಕ್ಷತೆ, ಜೀವಹಾನಿ ತಪ್ಪಿಸುವುದು ಹಾಗೂ ಕಾಡಾನೆಗಳ ಸಂರಕ್ಷಣೆಯ ಹಿತದೃಷ್ಟಿಯಿಂದ ವನ್ಯಜೀವಿ (ಸಂರಕ್ಷಣಾ) ಕಾಯ್ದೆ 1972ರ ಸೆಕ್ಷನ್ 11(1)(ಎ) ಅನ್ವಯ 10 ಗಂಡಾನೆಗಳನ್ನು ಸೆರೆಹಿಡಿಯಲು ಅನುಮತಿ ನೀಡಲಾಗಿದೆ. ಸೆರೆಹಿಡಿಯಲಾಗುವ ಆನೆಗಳ ಆರೋಗ್ಯ ಪರಿಸ್ಥಿತಿಯನ್ನು ಪರಿಶೀಲಿಸಿ, ಅವುಗಳಿಗೆ ಸೂಕ್ತವಾದ ಬೇರೆ ಅರಣ್ಯ ಆವಾಸಸ್ಥಾನಕ್ಕೆ ಸ್ಥಳಾಂತರಿಸಲಾಗುತ್ತದೆ.
ಕುಮ್ಕಿ ‘ಟೀಮ್ ಎ ಮತ್ತು ಸಿ’ ರಂಗಕ್ಕೆ!
- ಕಾಡಾನೆಗಳ ಸೆರೆ ಕಾರ್ಯಾಚರಣೆಯನ್ನು ಅತ್ಯಂತ ವ್ಯವಸ್ಥಿತವಾಗಿ ನಡೆಸಲು ಅರಣ್ಯ ಇಲಾಖೆಯು ಪಳಗಿದ ಕುಮ್ಕಿ ಆನೆಗಳ ಪಡೆಯನ್ನು ಕಣಕ್ಕಿಳಿಸುತ್ತಿದೆ.
- ಕಾರ್ಯಾಚರಣೆಗಾಗಿ ಸಾಕಾನೆ ತಂಡ ಎ (Team A) ಮತ್ತು ತಂಡ ಸಿ (Team C) ಕುಮ್ಕಿ ಆನೆಗಳನ್ನು ಬಳಸಿಕೊಳ್ಳಲು ಸೂಚಿಸಲಾಗಿದೆ.
- ಆನೆ ಸೆರೆಹಿಡಿಯುವ ವೇಳೆ ನಿಗದಿಪಡಿಸಲಾದ ಪ್ರಮಾಣಿತ ಕಾರ್ಯಾಚರಣೆ ವಿಧಾನವನ್ನು (SOP) ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಲಾಗಿದೆ.
- ಕಾರ್ಯಾಚರಣೆ ಸಂದರ್ಭದಲ್ಲಿ ಅರಣ್ಯ ಸಿಬ್ಬಂದಿ ಹಾಗೂ ಸ್ಥಳೀಯ ಸಾರ್ವಜನಿಕರಿಗೆ ಯಾವುದೇ ರೀತಿಯ ಪ್ರಾಣಾಪಾಯ ಅಥವಾ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಲು ಆದೇಶಿಸಲಾಗಿದೆ.
ಈಗಾಗಲೇ ಹಾಸನ, ಮಡಿಕೇರಿ, ಮೈಸೂರು, ನಾಗರಹೊಳೆ ಮತ್ತು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಅಧಿಕಾರಿಗಳಿಗೆ ಕಾರ್ಯಾಚರಣೆಗೆ ಅಗತ್ಯವಿರುವ ಸಿಬ್ಬಂದಿ ಹಾಗೂ ಕುಮ್ಕಿ ಆನೆಗಳನ್ನು ತಕ್ಷಣ ನಿಯೋಜಿಸಲು ಸೂಚನೆ ನೀಡಲಾಗಿದ್ದು, ಶೀಘ್ರದಲ್ಲೇ ಬೃಹತ್ ಕೂಂಬಿಂಗ್ ಕಾರ್ಯಾಚರಣೆ ಆರಂಭವಾಗಲಿದೆ.










