ಅರಕಲಗೂಡು (ಫೆ.07):  ಭಾರತೀಯ ಸೇನೆಯಲ್ಲಿ ಕರ್ತವ್ಯದಲ್ಲಿದ್ದ ಅರಕಲಗೂಡಿನ ಯೋಧ ರಾಕೇಶ್‌(23) ನಿಧನರಾಗಿದ್ದಾರೆ.

ಅವರು ಹಿಮಾಚಲದಲ್ಲಿ ಕರ್ತವ್ಯದಲ್ಲಿದ್ದಾಗ ಆರೋಗ್ಯದ ಸಮಸ್ಯೆ ಉಲ್ಭಣಿಸಿತ್ತು. ಅಸ್ವಸ್ಥನಾಗಿದ್ದ ಯೋಧನನ್ನು ಛತ್ತಿಸ್‌ಗಡ ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಫಲಿಸದೆ ಕೊನೆಯುಸಿರೆಳಿದಿದ್ದಾರೆ.

2018ರಲ್ಲಿ ಬೆಳಗಾವಿ ಸೈನಿಕ ಶಾಲೆಯಲ್ಲಿ ಮಿಲಿಟರಿ ಸೇನಾ ತರಬೇತಿ ಪಡೆದು ಹಿಮಾಚಲದಲ್ಲಿ ದೇಶಸೇವೆ ಸಲ್ಲಿಸುತ್ತಿದ್ದ ಯೋಧ ರಾಕೇಶ್‌ ಅವರು ಅರಕಲಗೂಡು ಪಟ್ಟಣ ಪಂಚಾಯಿತಿ ನೌಕರರಾಗಿ ಕೆಲಸ ಮಾಡುತ್ತಿರುವ ಶಿವಮ್ಮ ಮತ್ತು ಬಾಣದಹಳ್ಳಿ ರಾಜು ಅವರ ದ್ವಿತೀಯ ಪುತ್ರ. ಸಹೋದರ ರಕ್ಷಿತ್‌ ಇದ್ದಾರೆ.

ಕಾಶ್ಮೀರ ನಕಲಿ ಎನ್ಕೌಂಟರ್‌ ಮುಚ್ಚಿಹಾಕಲು ಸೇನಾಧಿಕಾರಿ ಯತ್ನ: ಆರೋಪಪಟ್ಟಿ ..

ಹುತಾತ್ಮ ಯೋಧ ಅರಕಲಗೂಡು ಅತ್ನಿ ಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣ, ಅರಕಲಗೂಡಿನ ಕೋಟೆ ಸರ್ಕಾರಿ ಶಾಲೆಯಲ್ಲಿ ಹಿರಿಯ ಪ್ರಾಥಮಿಕ ಶಿಕ್ಷಣ ಪಡೆದು ಕಂಚಿರಾಯ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣ ಪಡೆದಿದ್ದರು. ಪದವಿ ಪೂರ್ವ ಶಿಕ್ಷಣವನ್ನು ಇದೇ ಅರಕಲಗೂಡು ಬಾಲಕರ ಸರ್ಕಾರಿ ಕಾಲೇಜಿನಲ್ಲಿ ಪಡೆದು ನಂತರ ಹಾಸನದ ಎನ್‌ಡಿಆರ್‌ಕೆ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆಯುತ್ತಿದ್ದಾಗಲೇ ಭಾರತೀಯ ಸೇನೆ ಸೇರಿದ್ದರು.

ಛತ್ತಿಸ್‌ ಘಡದಿಂದ ಹುತಾತ್ಮ ಯೋಧನ ಪಾರ್ಥೀವ ಶರೀರ ಭಾನುವಾರ ಸಂಜೆ ಅಥವಾ ಸೋಮವಾರ ಬೆಳಗ್ಗೆ ಬರುವ ನಿರೀಕ್ಷೆ ಇದೆ ಎಂದು ಯೋಧನ ಕುಟುಂಬದ ಮೂಲಗಳು ತಿಳಿಸಿವೆ.