ಶೋಪಿಯಾನ್(ಜ.25)‌: ಕಳೆದ ವರ್ಷದ ಜುಲೈನಲ್ಲಿ ಜಮ್ಮು-ಕಾಶ್ಮೀರದ ಶೋಪಿಯಾನ್‌ನಲ್ಲಿ ಮೂವರು ಅಮಾಯಕರ ಹತ್ಯೆ ಮಾಡಲಾದ ನಕಲಿ ಎನ್‌ಕೌಂಟರ್‌ ಮುಚ್ಚಿಹಾಕಲು ಸೇನಾಧಿಕಾರಿಯೇ ಯತ್ನಿಸಿದ್ದಾರೆ ಎಂದು ಪೊಲೀಸರ ವಿಶೇಷ ತನಿಖಾ ತಂಡ (ಎಸ್‌ಐಟಿ) ತನ್ನ ಆರೋಪಪಟ್ಟಿಯಲ್ಲಿ ಉಲ್ಲೇಖಿಸಿದೆ.

ನಕಲಿ ಎನ್‌ಕೌಂಟರ್‌ನಲ್ಲಿ ಹತ್ಯೆಯಾದ ಮೂವರಿಗೆ ಶಸ್ತ್ರಾಸ್ತ್ರಗಳ ಪೂರೈಕೆಯ ಮೂಲ ಹಾಗೂ ಅವರು ಉಗ್ರರು ಎಂಬುದನ್ನು ಪುಷ್ಟೀಕರಿಸುವ ಯಾವುದೇ ಸಾಕ್ಷ್ಯಗಳನ್ನು ಒದಗಿಸುವಲ್ಲಿ ಈ ಎನ್‌ಕೌಂಟರ್‌ ನಡೆಸಿದ್ದ ಕ್ಯಾಪ್ಟನ್‌ ಭೂಪೇಂದ್ರ ಸಿಂಗ್‌ ಅವರು ವಿಫಲರಾಗಿದ್ದಾರೆ. ಜೊತೆಗೆ ಇನ್ನಿತರ ಇಬ್ಬರು ನಾಗರಿಕರೊಂದಿಗೆ ಸೇರಿ ಮೂವರು ಅಮಾಯಕರ ಹತ್ಯೆ ಮಾಡಿದ ತಮ್ಮ ಕೃತ್ಯದ ಸಾಕ್ಷ್ಯನಾಶಕ್ಕೂ ಯತ್ನಿಸಿದ್ದು, 20 ಲಕ್ಷ ರು. ಬಹುಮಾನದ ಹಣಕ್ಕಾಗಿ ಯೋಧ ಈ ಕೃತ್ಯ ಎಸಗಿದ್ದಾರೆ ಎಂದು ದೋಷಾರೋಪಪಟ್ಟಿಯಲ್ಲಿ ತಿಳಿಸಲಾಗಿದೆ.

ಸೇನೆ ನಕಾರ:

ಆದರೆ 20 ಲಕ್ಷ ರು.ಗಾಗಿ ಯೋಧರು ಇಂಥ ಕೃತ್ಯ ಎಸಗಲ್ಲ ಎಂದು ಸೇನೆ ಹೇಳಿಕೊಂಡಿದೆ. ಜೊತೆಗೆ ಕರ್ತವ್ಯನಿರತ ಯೋಧರು ಉಗ್ರರನ್ನು ಹತ್ಯೆ ಮಾಡಿದಾಗ ನಗದು ಸೇರಿದಂತೆ ಯಾವುದೇ ರೀತಿಯ ಬಹುಮಾನ ನೀಡಲ್ಲ ಎಂದು ಸ್ಪಷ್ಟಪಡಿಸಿದೆ.