ಹಾಸನ(ಜು.28): ಶಿವಮೊಗ್ಗದಿಂದ ಯಶವಂತಪುರಕ್ಕೆ ಪ್ರತಿದಿನ ಸಂಚರಿಸುತ್ತಿರುವ ಜನಶತಾಬ್ದಿ ರೈಲು ನಿಲುಗಡೆಗೆ ಅವಕಾಶ ನೀಡಬೇಕು ಎಂದು ಹಾಸನ ಜಿಲ್ಲಾ ರೈತ ಸಂಘದಿಂದ ರೈಲು ನಿಲ್ದಾಣ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಲಾಗಿದೆ.

ರೈಲು ನಿಲ್ದಾಣ ಅಭಿವೃದ್ಧಿ ಕಾಮಗಾರಿಗಳನ್ನು ತೀವ್ರಗತಿಯಲ್ಲಿ ಸಾಗಿಸಬೇಕು ಎಂದು ಒತ್ತಾಯಿಸಿ ಹಾಸನ ಜಿಲ್ಲಾ ರೈತ ಸಂಘದ ಸಂಚಾಲಕ ಕನಕೆಂಚೇನಹಳ್ಳಿ ಪ್ರಸನ್ನಕುಮಾರ್‌ ರೈಲು ನಿಲ್ದಾಣದ ಮುಂಭಾಗ ಪ್ರತಿಭಟನೆ ನಡೆಸಿ ವ್ಯವಸ್ಥಾಪಕರಿಗೆ ಮನವಿ ಪತ್ರವನ್ನು ಸಲ್ಲಿಸಿದರು.

ಮಳೆಗೆ ನಿಂತ ರೈಲು: 700 ಪ್ರಯಾಣಿಕರ ರಕ್ಷೆಣೆಯಲ್ಲಿ ನಿರತ NDRF!

ಕನಕೆಂಚೇನಹಳ್ಳಿ ಪ್ರಸನ್ನಕುಮಾರ್‌ ಮಾತನಾಡಿ, ರಾಜ್ಯದಲ್ಲಿಯೇ ಅತೀ ಹೆಚ್ಚು ಆದಾಯ ತರುತ್ತಿರುವ ನಿಲ್ದಾಣಗಳಲ್ಲಿ ಒಂದಾಗಿದ್ದು ಇಂತಹ ನಿಲ್ದಾಣದಲ್ಲಿ ಜನಶತಾಬ್ದಿ ರೈಲು ನಿಲುಗಡೆ ಮಾಡಲು ಮಿನಾಮೇಶ ಎಣಿಸುತ್ತಿದ್ದು ರೈಲ್ವೇ ಇಲಾಖೆಯು ಕೆಲವೊಂದು ವಿಚಾರಗಳಲ್ಲಿ ಮಲತಾಯಿ ಧೋರಣೆಯನ್ನು ಅನುಸರಿಸುತ್ತಿದೆ.ಎಂದು ಆಕ್ಷೇಪಿಸಿದರು.

ಅರಸೀಕೆರೆಯಲ್ಲಿ ನಿಲುಗಡೆ ಅಗತ್ಯ:

ಶಿವಮೊಗ್ಗದಿಂದ ಯಶವಂತಪುರಕ್ಕೆ ಪ್ರತಿ ದಿನ ಸಂಚರಿಸುವ ಜನಶತಾಬ್ದಿ ರೈಲು ಅರಸೀಕೆರೆ ಜಂಕ್ಷನ್‌ನಲ್ಲಿ ನಿಲುಗಡೆಗೆ ಮೀನಮೇಷ ಎಣಿಸುತ್ತಿದೆ. ಇದೇ ವರ್ಷ ಫೆಬ್ರವರಿಯಲ್ಲಿ ಈ ರೈಲನ್ನು ಅರಸೀಕೆರೆ ನಿಲ್ದಾಣದಲ್ಲಿ ನಿಲುಗಡೆ ಮಾಡಬೇಕು ಎಂದು ಧರಣಿ ಮಾಡುವುದರ ಮೂಲಕ ಮನವಿ ಸಲ್ಲಿಸಲಾಗಿತ್ತು.ಅಲ್ಲದೆ ಇತ್ತಿಚಿಗೆ ಕೂಡೂ ಮನವಿ ಸಲ್ಲಿಸಲಾಗಿತ್ತು. ಆದರೆ ಮನವಿ ಸ್ವೀಕಾರ ಮಾಡಿದ ದಿನದಿಂದಲೂ ಇದುವರೆಗೂ ಯಾವುದೇ ಕ್ರಮವನ್ನು ರೈಲ್ವೇ ಇಲಾಖೆ ಅಧಿಕಾರಿಗಳು ತೆಗೆದುಕೊಂಡಿಲ್ಲ ಎಂದು ದೂರಿದರು.

ಪ್ರಮುಖ ವಾಣಿಜ್ಯ ಕೇಂದ್ರ:

ಅರಸೀಕೆರೆ ನಗರವು ಪ್ರಮುಖ ವಾಣಿಜ್ಯ ಕೇಂದ್ರವಾಗಿದ್ದು, ಈ ನಗರದ ರೈಲ್ವೇ ನಿಲ್ದಾಣದ ಮೂಲಕ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಗೆ ಮತ್ತು ಭಾರತದ ಉದ್ದಗಲಕ್ಕೂ ಸಾವಿರಾರು ಪ್ರಯಾಣಿಕರು ಸಂಚರಿಸುತ್ತಾರೆ. ಕಡಿಮೆ ಸಂಖ್ಯೆಯಲ್ಲಿ ಸಂಚರಿಸುವ ರೈಲುಗಳ ಜೊತೆ ಜೋತೆಯಲ್ಲಿ ಶಿವಮೊಗ್ಗ ಮತ್ತು ಯಶವಂತಪುರ ನಡುವೆ ಸಂಚರಿಸುತ್ತಿರುವ ಜನ ಶತಾಬ್ದಿ ರೈಲಿಗೆ ನಿಲುಗಡೆ ನೀಡುವ ಮೂಲಕ ಪ್ರಯಾಣಿಕರಿಗೆ ಅನುಕೂಲವನ್ನು ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ರೈಲು ನಿಲುಗಡೆಗೆ ಶೀಘ್ರ ಆದೇಶ ಬರುವ ಸಾಧ್ಯತೆ:

ಮನವಿ ಸ್ವೀಕರಿಸಿದ ಸ್ಥಳಿಯ ರೈಲ್ವೇ ನಿಲ್ದಾಣದ ವ್ಯವಸ್ಥಾಪಕ ಆರ್‌. ರಘುನಾಥನ್‌ ಮಾತನಾಡಿ, ಸ್ಥಳಿಯ ರೈತ ಸಂಘ ಸೇರಿದಂತೆ ವಿವಿಧ ಸಾರ್ವಜನಿಕ ಸಂಘ ಸಂಸ್ಥೆಗಳು ಶಿವಮೊಗ್ಗ ಮತ್ತು ಯಶವಂತಪುರ ನಡುವೆ ಸಂಚರಿಸುತ್ತಿರುವ ಜನಶತಾಬ್ದಿ ರೈಲನ್ನು ಅರಸೀಕೆರೆ ನಗರದಲ್ಲಿ ನಿಲ್ಲಿಸಲು ಮತ್ತು ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಅನೇಕ ಮನವಿ ಪತ್ರಗಳನ್ನು ಸಲ್ಲಿಸಿ ಮತ್ತು ಪ್ರತಿಭಟನೆಯನ್ನು ಮಾಡಿದ್ದರು.ಈ ಬೆಳವಣಿಗೆಗಳನ್ನು ಇಲಾಖೆಯ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದ್ದು ಮತ್ತು ನಿಲುಗಡೆ ಅವಶ್ಯಕತೆ ಇದೆ ಎಂದು ನಾವು ಕೂಡ ವರದಿಯನ್ನು ನೀಡಿದ್ದೇವೆ.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಈ ಎಲ್ಲ ಆಧಾರಗಳ ಮೇಲೆ ಅರಸೀಕೆರೆ ರೈಲ್ವೇ ಜಂಕ್ಷನ್‌ ಮೂಲಕ ಈಗಾಗಲೇ ಸಂಚರಿಸುತ್ತಿರುವ ಶಿವಮೊಗ್ಗ ಮತ್ತು ಯಶವಂತಪುರ ಜನಶತಾಬ್ದಿ ರೈಲುಗಾಡಿ ನಿಲುಗಡೆಗೆ ಅತೀ ಶೀಘ್ರದಲ್ಲಿಯೇ ಅದೇಶ ಹೊರ ಬೀಳಲಿದೆ.ಈ ಅದೇಶವನ್ನು ಪ್ರಕಟಣೆಯ ಮೂಲಕ ಸಾರ್ವಜನಿಕರಿಗೆ ತಿಳಿಯಪಡಿಸಲಾಗುವುದು ಎಂದರು.

ಸಮಾಜ ಸೇವಕ ವಿಶ್ವನಾಥ್‌ ಹುಲ್ಲೇನಹಳ್ಳಿ ಬಾಣಾವರಸತೀಶ್‌, ಗುತ್ತಿನಕೆರೆ ದೊಡ್ಡಗಂಗಾಚಾರ್‌, ಕುರುವಂಕ ರಘು,ರಮೇಶ್‌,ಹರೀಶ್‌,ಕೃಷ್ಣಮೂರ್ತಿ ಉಪಸ್ಥಿತರಿದ್ದರು.