ಹಾಸನ(ಜು.20): ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಎಲ್ಲ ಬಸ್‌ಗಳಲ್ಲಿ ವಿದ್ಯಾರ್ಥಿಗಳು ಪ್ರಯಾಣಿಸಲು ಅನುಮತಿ ನೀಡುವಂತೆ ಆಗ್ರಹಿಸಿ ಅಖಿಲ ಭಾರತ ಡೆಮಾಕ್ರೆಟಿಕ್‌ ಸ್ಟೂಡೆಂಟ್‌ ಆರ್ಗನೈಜೇಶನ್‌ ನೇತೃತ್ವದಲ್ಲಿ ವಿದ್ಯಾರ್ಥಿಗಳು ಶುಕ್ರವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನಾಕಾರರು ನಗರದ ಹೈಟೆಕ್‌ ಬಸ್‌ ನಿಲ್ದಾಣಕ್ಕೆ ತೆರಳಿ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ವ್ಯವಸ್ಥಾಪಕರಿಗೆ ಮನವಿ ನೀಡಿದರು.

ಪಾಸ್ ಅಂದ್ರೆ ನಿರ್ಲಕ್ಷ್ಯ ಮಾಡ್ತಾರೆ:

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಧೆಯ ಪಾಸ್‌ ಅನ್ನು ಹೊಂದಿರುವ ಎಲ್ಲ ವಿದ್ಯಾರ್ಥಿಗಳಿಗೆ ಸಾರಿಗೆ ಬಸ್‌ನಲ್ಲಿ ಸಂಚರಿಸಲು ಅನುಮತಿ ನೀಡಬೇಕು. ಕೆಲವೊಂದು ಬಸ್‌ಗಳಲ್ಲಿ ವಿದ್ಯಾರ್ಥಿಗಳು ಪ್ರಯಾಣಿಸಲು ಬಿಡುತ್ತಿಲ್ಲ. ಬಸ್‌ನ ಚಾಲಕರು ಮತ್ತು ನಿರ್ವಾಹಕರು ಬಸ್‌ ಪಾಸ್‌ ಹೊಂದಿರುವ ವಿದ್ಯಾರ್ಥಿಗಳನ್ನು ಬಸ್‌ಗೆ ಹತ್ತಿಸದೇ ಹಾಗೆ ಹೋಗುತ್ತಿದ್ದಾರೆ ಎಂದು ಆರೋಪಿಸಿದರು.

ವಿದ್ಯಾರ್ಥಿಗಳು ಟಿಕೆಟ್‌ ಪಡೆಯದೇ ಪಾಸ್‌ನಲ್ಲಿ ಪ್ರಯಾಣ ಬೆಳೆಸುತ್ತಾರೆ ಎಂಬ ಉದ್ದೇಶದಿಂದ ಕೆಲವೊಂದು ಬಸ್‌ ಚಾಲಕ ಹಾಗೂ ನಿರ್ವಾಹಕರು ವಿದ್ಯಾರ್ಥಿಗಳ ನಿರ್ಲಕ್ಷ್ಯ ಮನೋಭಾವದಿಂದ ನೋಡುತ್ತಿದ್ದಾರೆ. ಇತರೆ ಪ್ರಯಾಣಿಕರೊಂದಿಗೆ ವಿದ್ಯಾರ್ಥಿಗಳನ್ನು ಹೊಲಿಸಿ ಅವಮಾನ ಮಾಡುವ ಕೆಲಸ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳು ಪ್ರಯಾಣಿಸಿದರೆ ಅವರಿಗೆ ಟಿಕೆಟ್‌ ಖರೀದಿಸುವುದಿಲ್ಲ ಎಂಬ ಮನೋಭಾವ ಇರುವುದರಿಂದ ತೊಂದರೆ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಲೆಕ್ಷನ್ ಕಡಿಮೆಯಾಗುತ್ತೆ ಅಂತ ವಿದ್ಯಾರ್ಥಿಗಳಿಗೆ ನೋ ಎಂಟ್ರಿ:

ವಿದ್ಯಾರ್ಥಿಗಳು ಹಣ ಕೊಟ್ಟು ಬಸ್‌ ಪಾಸ್‌ ಮಾಡಿಸಿಕೊಂಡಿದ್ದರೂ ಚಾಲಕರು ಮತ್ತು ನಿರ್ವಾಹಕರ ಈ ಧೋರಣೆ ಮನೋಭಾವದಿಂದಾಗಿ ವಿದ್ಯಾರ್ಥಿಗಳಿಗೆ ಸಮಸ್ಯೆ ಉಂಟಾಗಿದೆ. ವಿದ್ಯಾರ್ಥಿಗಳು ಪ್ರಯಾಣಿಸುವುದರಿಂದ ಅವರಿಗೆ ಕಲೆಕ್ಷನ್‌ ಕಡಿಮೆಯಾಗುತ್ತದೆ ಎಂಬ ದೃಷ್ಟಿಯಿಂದ ವಿದ್ಯಾರ್ಥಿಗಳನ್ನು ಬಸ್‌ಗಳಿಗೆ ಹತ್ತಿಸದೇ ಹಾಗೆ ಹೋಗುತ್ತಾರೆ. ಇನ್ನು ಕೆಲವರು ಬಸ್‌ ಅನ್ನು ನಿಲ್ಲಿಸದೇ ಹೋಗುತ್ತಿದ್ದಾರೆ ಎಂದು ಕಿಡಿಕಾರಿದರು.

ವಿದ್ಯಾರ್ಥಿ ಪಾಸ್ ದರ ಮತ್ತೆ ಏರಿಕೆ

ಸಮಯಕ್ಕೆ ಸರಿಯಾಗಿ ಶಾಲಾ-ಕಾಲೇಜುಗಳಿಗೆ ತೆರಳಲು ಅನುಕೂಲವಾಗುವ ನಿಟ್ಟಿನಲ್ಲಿ ಎಲ್ಲ ಬಸ್‌ಗಳಲ್ಲಿ ವಿದ್ಯಾರ್ಥಿಗಳು ಪ್ರಯಾಣಿಸಲು ಅನುಮತಿ ನೀಡಬೇಕು ಹಾಗೂ ಎಲ್ಲ ಬಸ್‌ನ ಚಾಲಕರು ಮತ್ತು ನಿರ್ವಾಹಕರಿಗೆ ವಿದ್ಯಾರ್ಥಿಗಳನ್ನು ಕೆರೆದುಕೊಂಡು ಹೋಗಲು ಕಟ್ಟು ನಿಟ್ಟಿನ ಸೂಚನೆ ನೀಡಬೇಕು ಎಂದು ಆಗ್ರಹಿಸಿದರು.

ಹೋರಾಟದ ಎಚ್ಚರಿಕೆ:

ಚನ್ನರಾಯಪಟ್ಟಣ-ಬೆಂಗಳೂರು ಮಾರ್ಗ, ಚಿಕ್ಕಮಗಳೂರು ಮಾರ್ಗ, ಹೊಳೆನರಸೀಪುರ-ಮೈಸೂರು ಮಾರ್ಗ, ಅರಕಲಗೂಡು ಮಾರ್ಗ, ಅರಸೀಕೆರೆ ಮಾರ್ಗದಲ್ಲಿ ವಿದ್ಯಾರ್ಥಿಗಳಿಗೆ ಸಾಕಷ್ಟುತೊಂದರೆಯಾಗುತ್ತಿದೆ. ಪ್ರತಿನಿತ್ಯ ಬಸ್‌ಗಳನ್ನು ಹತ್ತಿ ಶಾಲಾ-ಕಾಲೇಜುಗಳಿಗೆ ಬರುವುದೇ ದೊಡ್ಡ ಸಾಹಸ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬಸ್‌ಗಳನ್ನು ವಿದ್ಯಾರ್ಥಿಗಳು ಹತ್ತಲೂ ಮುಂದಾದರೂ ಚಾಲಕ ಮತ್ತು ನಿರ್ವಾಹಕರು ವಿದ್ಯಾರ್ಥಿಗಳು ಬಸ್‌ ಹತ್ತದಂತೆ ತಡೆಯುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ದೂರಿದರು. ಮುಂದಿನ ದಿನಗಳಲ್ಲಿ ಬಸ್‌ನ ಚಾಲಕರು ಮತ್ತು ನಿರ್ವಾಹಕರು ವಿದ್ಯಾರ್ಥಿಗಳಿಗೆ ಬಸ್‌ ಹತ್ತಲು ಅನುಮತಿ ನೀಡದಿದ್ದರೆ, ಈ ವಿರುದ್ಧ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಈ ವೇಳೆ ಅಖಿಲ ಭಾರತ ಡೆಮಾಕ್ರೆಟಿಕ್‌ ಸ್ಟೂಡೆಂಟ್‌ ಆರ್ಗನೈಜೇಶನ್‌ ಜಿಲ್ಲಾ ಸಂಚಾಲಕ ಸುಭಾಷ್‌, ಶರತ್‌, ಅನಿಕೇತನ್‌, ಚಂದನ, ಹರ್ಷಿತ್‌, ಕಾವ್ಯ, ಸಂಪತ್‌ ಕುಮಾರ್‌ ಇತರರು ಇದ್ದರು.