Hassan IIT ಜಾಗಕ್ಕೆ ರೇವಣ್ಣ ಮತ್ತು ಪ್ರೀತಂಗೌಡ ನಡುವೆ ಜಟಾಪಟಿ, ಸಿಎಂಗೆ ಪತ್ರ ಬರೆದ ದೇವೇಗೌಡ
ಮಾಜಿ ಸಚಿವ ಎಚ್.ಡಿ.ರೇವಣ್ಣ ಹಾಗೂ ಶಾಸಕ ಪ್ರೀತಂಗೌಡ ನಡುವೆ ಹಾಸನದ ಐಐಟಿ ಜಾಗದ ಜಟಾಪಟಿಯಾಗಿದೆ. ಇಬ್ಬರ ನಡುವಿನ ಜಗಳದ ಬಳಿಕ ಈಗ ದೇವೇಗೌಡರ ಮೂಲಕ ಹಾಸನದಲ್ಲಿ ಐಐಟಿ ಸ್ಥಾಪಿಸಬೇಕೆಂಬ ವಿಚಾರ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿವರೆಗೂ ತಲುಪಿದೆ.
ಹಾಸನ (ಜ.19): ಮಾಜಿ ಸಚಿವ ಎಚ್.ಡಿ.ರೇವಣ್ಣ ಹಾಗೂ ಶಾಸಕ ಪ್ರೀತಂಗೌಡ ನಡುವೆ ಹಾಸನದ ಐಐಟಿ ಜಾಗದ ಜಟಾಪಟಿಯಾಗಿದೆ. ಐಐಟಿಗೆ ಮೀಸಲಿಟ್ಟಿರುವ ಜಾಗವನ್ನು ಕೈಗಾರಿಕೆ-ವಸತಿ ಉದ್ದೇಶಕ್ಕೆ ಬಳಸಿದ್ರೆ ಹೋರಾಟ ನಡೆಸುವುದಾಗಿ ಎಚ್.ಡಿ.ರೇವಣ್ಣ ಹೇಳಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಪ್ರೀತಂಗೌಡ ಒಂದು ಸಾವಿರ ಎಕರೆಯಲ್ಲಿ ಐಐಟಿ ಬೇಕು ಅಂದ್ರೆ ಹೊಳೆನರಸೀಪುರದಲ್ಲಿ ಮಾಡಿಕೊಳ್ಳಲಿ ಎಂದಿದ್ದಾರೆ. ಇಬ್ಬರ ನಡುವಿನ ಜಗಳದ ಬಳಿಕ ಈಗ ದೇವೇಗೌಡರ ಮೂಲಕ ಹಾಸನದಲ್ಲಿ ಐಐಟಿ ಸ್ಥಾಪಿಸಬೇಕೆಂಬ ವಿಚಾರ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿವರೆಗೂ ತಲುಪಿದೆ. ಮಾತ್ರವಲ್ಲ ದೇವೇಗೌಡ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ಕೂಡ ನೀಡಿದ್ದಾರೆ.
ದೇವೇಗೌಡರ ಪತ್ರ:
ಹಾಸನದಲ್ಲಿ ಐಐಟಿಗೆ ಮೀಸಲಿಟ್ಟ ಜಾಗ ಸಂಬಂಧ ದೇವೇಗೌಡ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ. ಐಐಟಿಗಾಗಿ ಮೀಸಲಿಟ್ಟಿರುವ ಜಾಗವನ್ನು ಬೇರೆ ಉದ್ದೇಶಗಳಿಗೆ ಬಳಕೆ ಮಾಡಬೇಡಿ. ಹಾಸನದಲ್ಲಿ ಐಐಟಿ ಮಾಡಬೇಕು ಎಂಬುದು ದೊಡ್ಡ ಕನಸು. ಬೇರೊಂದು ಉದ್ದೇಶಕ್ಕೆ ಈ ಜಾಗ ಬಳಕೆಯಾದಲ್ಲಿ ವಿಧಾನಸೌಧದ ಬಳಿ ಪ್ರತಿಭಟನೆ ಮಾಡುತ್ತೇನೆ. ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ಮಾಡುತ್ತೇನೆ ಎಂದು ಎಚ್ವರಿಕೆ ಕೊಟ್ಟಿದ್ದಾರೆ.
1057-24 ಎಕರೆ ಜಮೀನನ್ನು ಹಾಸನ ನಗರದಲ್ಲಿ ಐ.ಐ.ಟಿ. ಸಂಸ್ಥೆಗಾಗಿ ಮೀಸಲಿಡಲಾಗಿದೆ. ವಿಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ಯುಗದಲ್ಲಿ ರಾಜ್ಯಕ್ಕೆ ಮತ್ತೊಂದು ಐಐಟಿ ಸಂಸ್ಥೆ ಅತ್ಯವಶ್ಯ. ಇಂತಹ ಪ್ರತಿಷ್ಠಿತ ಸಂಸ್ಥೆ ಸ್ಥಾಪನೆಗೆ ಹಾಸನ ನಗರ ಪ್ರಾಶಸ್ತ್ರ ಸ್ಥಳ ಎಂಬುವುದು ನಿರ್ವಿವಿವಾದ. ರಾಜ್ಯ ಸರ್ಕಾರ ಹಾಸನ ಜಿಲ್ಲೆಯ ಶಾಸಕರು, ಲೋಕಸಭಾ ಸದಸ್ಯರು ಮತ್ತು ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳ ಅಭಿಪ್ರಾಯವನ್ನು ಪಡೆಯಬೇಕು. ಬೆಂಗಳೂರಿನಲ್ಲಿ ಒಂದು ಸಭೆಯನ್ನು ಆಯೋಜಿಸಬೇಕೆಂದು ಒತ್ತಾಯಿಸುತ್ತೇನೆ. ಈ ಸಭೆಯಲ್ಲಿ ಭಾಗವಹಿಸಲು ನನಗೆ ಆಮಂತ್ರಣ ನೀಡಿದ್ದಲ್ಲಿ, ಸಭೆಯಲ್ಲಿ ಭಾಗವಹಿಸಿ ನನ್ನ ಅಭಿಪ್ರಾಯ ಮತ್ತು ಸಲಹೆಗಳನ್ನು ನೀಡುತ್ತೇನೆ. ಒಂದು ವೇಳೆ, ರಾಜ್ಯ ಸರ್ಕಾರ ಹಾಸನ ಜಿಲ್ಲಾ ಜನತೆಯ ಆಶಯಕ್ಕೆ ವಿರುದ್ಧವಾಗಿ ಕ್ರಮ ಕೈಗೊಂಡಲ್ಲಿ, ಹಾಸನ ಜಿಲ್ಲೆಯ ನನ್ನ ಪಕ್ಷದ ಜನಪ್ರತಿನಿಧಿಗಳೊಂದಿಗೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದಿದ್ದಾರೆ.
ಪ್ರೀತಂ ಗೌಡ v/s ರೇವಣ್ಣ:
ಈಗಾಗಲೇ ಹಾಸನ ನಗರದ ಸುತ್ತಮುತ್ತ ಐಐಟಿಗೆಂದು 1057 ಎಕರೆ ಜಾಗ ಸ್ವಾಧೀನ ಮಾಡಿಕೊಳ್ಳಲಾಗಿದೆ. ಸ್ವಾಧೀನ ಮಾಡಿದ್ದ ಜಾಗವನ್ನು ಬೇರೆ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳಲಾಗಿದೆ. ಈ ವಿಚಾರಕ್ಕೆ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹಾಗೂ ಸ್ಥಳೀಯ ಶಾಸಕ ಪ್ರೀತಂ ಜೆ.ಗೌಡ ನಡುವೆ ಕಲಹ ಉಂಟಾಗಿದೆ. ದಶಕಗಳ ಹಿಂದೆಯೇ ಐಐಟಿಗೆಂದು 1057 ಎಕರೆ ಜಾಗ ಮೀಸಲಿಡಲಾಗಿದ್ದು, ಈ ಜಾಗವನ್ನು ಕೈಗಾರಿಕಾ ವಲಯ ಮತ್ತು ವಸತಿ ಯೋಜನೆ ರಚಿಸಿ ಟೆಂಡರ್ ಕರೆದು ಅನುಷ್ಠಾನಗೊಳಿಸಲು ಸರ್ಕಾರ ಮುಂದಾಗಿದೆ. ಹೀಗಾಗಿ ಸಾರ್ವಜನಿಕ ಹಿತದೃಷ್ಟಿಯಿಂದ ಕೂಡಲೇ ರದ್ದುಗೊಳಿಸುವಂತೆ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಒತ್ತಾಯ ಮಾಡಿದ್ದಾರೆ.
ರಾಜ್ಯ ಸರ್ಕಾರ ಜನರ ಆಶಯಕ್ಕೆ ವಿರುದ್ಧವಾಗಿ ನಡೆದುಕೊಂಡರೆ ಬೆಂಗಳೂರಿನ ಗಾಂಧಿ ಪ್ರತಿಮೆ ಎದುರು ಧರಣಿ ಸತ್ಯಾಗ್ರಹ ಮಾಡಲು ದೇವೇಗೌಡರು ನಿರ್ಧಾರ ಮಾಡಿದ್ದಾರೆ ಎಂದು ಎಚ್.ಡಿ.ರೇವಣ್ಣ ಹೇಳಿದ್ದಾರೆ. ಈ ಹೋರಾಟಕ್ಕೆ ಜಿಲ್ಲೆಯ ಜನ ಹಾಗೂ ಪಕ್ಷಾತೀತವಾಗಿ ಬೆಂಬಲ ನೀಡುವಂತೆ ಹೆಚ್.ಡಿ.ರೇವಣ್ಣ ಒತ್ತಾಯಿಸಿದ್ದಾರೆ.
ಎಚ್.ಡಿ.ರೇವಣ್ಣ ಎಚ್ಚರಿಕೆಗೆ ಶಾಸಕ ಪ್ರೀತಂಗೌಡ ಕಿಡಿ:
ಬೇರೆಯವರ ಜಾಗಕ್ಕೆ ಬಂದು ಬಂಗಲೆ ಕಟ್ಟುತ್ತೇನೆಂದರೆ ಆಗುವುದಿಲ್ಲ. ಸಾವಿರ ಎಕರೆಯಲ್ಲಿ ಐಐಟಿ ಸ್ಥಾಪನೆಯಾಗಬೇಕೆಂದರೆ ಹೊಳೆನರಸೀಪುರದಲ್ಲಿ ಮಾಡಿಕೊಳ್ಳಲಿ ಎಂದ ಪ್ರೀತಂಗೌಡ, ಐಐಟಿಗೆ ಬೇಕಿರುವ 260 ಎಕರೆ ಜಾಗವನ್ನು ಹಾಸನ ಕ್ಷೇತ್ರದಲ್ಲಿ ಮೀಸಲಿಡಲಾಗುವುದು. ರೈತರು ಶ್ರೀಮಂತರಾಗುವುದನ್ನು ದೇವೇಗೌಡರ ಕುಟುಂಬ ಸಹಿಸುವುದಿಲ್ಲ. ರಾಜ್ಯಕ್ಕೆ ಈಗಾಗಲೇ ಒಂದು ಐಐಟಿ ನೀಡಲಾಗಿದೆ. ಹಾಸನಕ್ಕೆ ಮತ್ತೊಂದು ಐಐಟಿ ನೀಡುವುದು ಕಷ್ಟವಿದೆ. ಜಿಲ್ಲೆಯಲ್ಲಿ ಐಐಟಿ ಸ್ಥಾಪನೆಯಾದರೆ ಜಿಲ್ಲೆಯ ಮಕ್ಕಳಿಗೆ, ಇಲ್ಲಿನ ಪ್ರೊಫೆಸರ್ ಗಳಿಗೇನು ವಿಶೇಷ ಅವಕಾಶ ಸಿಗುವುದಿಲ್ಲ. ಒಂದಿಷ್ಟು ಜನರಿಗೆ ಸೆಕ್ಯೂರಿಟಿ ಗಾರ್ಡ್ ಕೆಲಸ ಸಿಗಬಹುದಷ್ಟೇ. ರೈತರಿಂದ ಕೆಎಐಡಿಬಿ ಸ್ವಾಧೀನ ಪರಿಸಿಕೊಂಡಿರುವ ಭೂಮಿಗೆ ಇನ್ನೂ ಪರಿಹಾರ ನೀಡಿಲ್ಲ. ಒಂದು ತಿಂಗಳಲ್ಲಿ ಪರಿಹಾರ ನೀಡಲು ಕ್ರಮ ವಹಿಸಲಾಗವುದು. ಭೂಮಿ ಕಳೆದುಕೊಂಡಿರುವ ರೈತರಿಗೆ ಕೃಷ್ಣನಗರದ ಮಾದರಿಯಲ್ಲೇ ನಿವೇಶನ ನೀಡುವ ಮೂಲಕ ರೈತರ ಹಿತ ಕಾಪಾಡಲಾಗುವುದು ಎಂದು ಶಾಸಕ ಪ್ರೀತಂಗೌಡ ಹೇಳಿದ್ದಾರೆ.
ಜೆಡಿಎಸ್ ವಿರುದ್ದ ಬಿಜೆಪಿ ಶಾಸಕ ಪ್ರೀತಂಗೌಡ ವಾಗ್ದಾಳಿ:
ಕೇಂದ್ರದಲ್ಲಿ ಬಿಜೆಪಿ ಬರುತ್ತೆ, ರಾಜ್ಯದಲ್ಲೂ ಬಿಜೆಪಿ ಬರುತ್ತೆ ಎರಡು ಸರ್ಕಾರ ಇದೇ ಇರುತ್ತೆ. ಇದೇ ಹಾಸನ ಎಂಎಲ್‌ಎ ಇರ್ತಾರೆ, ಅದೇ ಮುಖ್ಯಮಂತ್ರಿ, ಅದೇ ಪ್ರಧಾನಮಂತ್ರಿ ಇರ್ತಾರೆ. ಮೂರು ತಿಂಗಳಲ್ಲಿ ಏನು ಬದಲಾವಣೆ ಆಗೋದಿಲ್ಲ, ಆ ಕಲ್ಪನೆಯಿಂದ ಹೊರಗೆ ಬರ್ತಾರೆ. ಜಿಲ್ಲೆಯಲ್ಲಿನೇ ಎಲ್ಲನೂ ಕಿತ್ತೋಗ್ತಿದೆ, ಇನ್ನ ರಾಜ್ಯ, ದೇಶದ ಬಗ್ಗೆ ಯಾಕೆ ಯೋಚನೆ. ಫಸ್ಟ್ ಅರಸೀಕೆರೆ, ಹಾಸನ ಸರಿಮಾಡಿಕೊಳ್ಳಲು ಹೇಳಿ, ಆಲೂರು-ಸಕಲೇಶಪುರ, ಬೇಲೂರು ಸರಿಮಾಡಿಕೊಳ್ಳಲು ಹೇಳಿ. ಆಮೇಲೆ ರಾಜ್ಯ ದೇಶ ಎಲ್ಲವು ಕೂಡ. ಏಳಕ್ಕೆ ಆರು ಇತ್ತಲ್ಲ, ಅದರಲ್ಲಿ ಮೂರಾದ್ರು ಉಳುಸಿಕೊಳ್ಳಲಿ. ಆಮೇಲೆ ಉಳಿದಿದ್ದನ್ನು ಮಾತನಾಡಲಿ ಎಂದಿದ್ದಾರೆ.
ಜ.21 ರಂದು ಹಾಸನ ಕಾಂಗ್ರೆಸ್‌ನ ಪ್ರಜಾಧ್ವನಿ ಕಾರ್ಯಕ್ರಮ ವಿಚಾರ:
ರಾಜಕೀಯ ಪಕ್ಷಗಳು ತಮ್ಮದೇ ಆದ ತಂತ್ರ ಮಾಡಿಕೊಂಡು ಇಡೀ ರಾಜ್ಯವನ್ನು ಪ್ರವಾಸ ಮಾಡ್ತಿದೆ. ಒಂದು ಭಾಗವಾಗಿ ಕಾಂಗ್ರೆಸ್‌ನವರು ಹಾಸನದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ. ಅವರು ಏನೇನ್ ಮಾಡ್ತಾರೆ ಅದನ್ನು ಮಾಡಲಿ. ಹಾಸನ ಜಿಲ್ಲೆಯಲ್ಲಿ ನೇರವಾದ ಸ್ಪರ್ಧೆ ಜೆಡಿಎಸ್ ಮತ್ತು ಬಿಜೆಪಿ ನಡುವೆ. ಶಿವಲಿಂಗೇ ಗೌಡರು ಕಾಂಗ್ರೆಸ್‌ಗೆ ಹೋದರೆ ಅರಸೀಕೆರೆಯಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ನೇರ ಹಣಾಹಣಿ ಆಗಬಹುದು. ಅದನ್ನು ಬಿಟ್ಟು ಉಳಿದ ಎಲ್ಲಾ ಕ್ಷೇತ್ರಗಳಲ್ಲೂ ಜೆಡಿಎಸ್ ಬಿಜೆಪಿ ನಡುವೆ ಹಣಾಹಣಿ ಇದೆ. ಅರಕಲಗೂಡಿನಲ್ಲಿ ತ್ರಿಕೋನ ಸ್ಪರ್ಧೆ ಆಗುವಂತಹ ಅವಕಾಶಯಿದೆ. ಬಿಜೆಪಿ ಅಲ್ಲೂ ಕೂಡ ಉತ್ತಮವಾದಂತಹ ಸಾಧನೆ ಮಾಡುತ್ತೆ. ಅಷ್ಟು ಬಿಟ್ಟು ಇನ್ನು ಉಳಿದ ಎಲ್ಲಾ ಕಡೆ ಬಿಜೆಪಿ ಗೆಲ್ಲೋ ಕಡೆ ಬಿಜೆಪಿ ಮತ್ತು ಜನತಾದಳಕ್ಕೆ ನೇರ ಸ್ಪರ್ಧೆ ಇದೆ ಎಂದಿದ್ದಾರೆ.
ಬಿಜೆಪಿಯಂಥ ಭ್ರಷ್ಟ ಸರ್ಕಾರವನ್ನು 4 ದಶಕದಲ್ಲೇ ನೋಡಿಲ್ಲ: ಸಿದ್ದರಾಮಯ್ಯ ಕಿಡಿ
ಬಿ.ಕೆ.ಹರಿಪ್ರಸಾದ್ ಅವಾಚ್ಯ ಶಬ್ದ ಬಳಕೆ ವಿಚಾರ: ನಾನು ಬಿ.ಕೆ.ಹರಿಪ್ರಸಾದ್‌ಗೆ ವಕ್ತಾರನಾಗಿ ಮಾತನಾಡಲ್ಲ. ಅವರು ಬಹಳ ಹಿರಿಯರು, ದೆಹಲಿಯಲ್ಲಿ, ಬೆಂಗಳೂರಿನಲ್ಲಿ ರಾಜಕಾರಣ ಮಾಡ್ದೋರು. ಈಗ ಚಿಕ್ಕ ಚಿಕ್ಕ ವಿಚಾರಕ್ಕೂ ಮಾತನಾಡುವಂತದ್ದು ಆಗಿದೆ. ಅವರು ಹತಾಶ ಭಾವನೆ ತೋರಿಸುತ್ತೆ, ನಾವು ದೊಡ್ಡವರ ಬಗ್ಗೆ ಕಮೆಂಟ್ಸ್ ಮಾಡಬಾರದು. ನಮ್ಮ ಹಾಸನ ವಿಧಾನಸಭಾ ಕ್ಷೇತ್ರಕ್ಕೆ ಸೀಮಿತವಾಗಿ ಕೆಲಸವನ್ನು ಮಾಡ್ಬೇಕು. ಚುನಾವಣೆ ಮುಗಿದ ನಂತರ ರಾಜ್ಯದಿಂದ ಏನು ಜವಾಬ್ದಾರಿ ಬರುತ್ತೆ ಆಮೇಲೆ ರಾಜ್ಯದ ಬಗ್ಗೆ ತಲೆ ಕೆಡಿಸಿಕೊಳ್ಳಬೇಕು ಎಂದಿದ್ದಾರೆ.
ಜೆಡಿಎಸ್ ತೊರೆಯುವವರಿಗೆಲ್ಲ ಶುಭವಾಗಲಿ: ಎಚ್.ಡಿ.ರೇವಣ್ಣ
ಅವರು ಪ್ರತಿಕ್ರಿಯೆ ಕೊಡಬೇಕು ಅಂತ ಸಂವಿಧಾನದಲ್ಲಿ ರೂಲ್ಸ್ ಏನಾದ್ರು ಇದಿಯಾ. ಈ ತರ ಅವರು ಮಾತನಾಡಿದ್ದಕ್ಕೆ ರೆಸ್ಪಾನ್ಸ್ ಮಾಡಬೇಕು ಅಂತ ಕಾನೂನು ಇದ್ದರೆ ಪಾಲನೆ ಮಾಡ್ತಿವಿ. ಯಾವಾಗ ಏನ್ ಮಾತಾಡಬೇಕು, ಏನ್ ಮಾತನಾಡಬಾರದು ಎಂಬುದು ನಮ್ಮ ಭಾರತೀಯ ಜನತಾ ಪಾರ್ಟಿಗೆ ಬಿಟ್ಟ ವಿಚಾರ. ಹರಿಪ್ರಸಾದ್ ಅವರು ಯಾಕೆ ತಲೆಕೆಡಿಸಿಕೊಳ್ಳಬೇಕು. ಹರಿಪ್ರಸಾದ್ ಅವರು ಮಾತಾಡಂಗಿದ್ರೆ ಮಾತಾಡ್ಲಿ ಎನ್ನುವ ಮೂಲಕ ಪರೋಕ್ಷವಾಗಿ ಸಚಿವನಾಗುತ್ತೇನೆ ಎಂದು ಶಾಸಕ ಪ್ರೀತಂಗೌಡ ಹೇಳಿದ್ದಾರೆ.