ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧಿಯಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಬೆಂಗಳೂರಿನಿಂದ ಬೆಳಗಾವಿಯ ಹಿಂಡಲಗಾ ಜೈಲಿಗೆ ಸ್ಥಳಾಂತರಿಸಲು ಸಿದ್ಧತೆ ನಡೆದಿದೆ. ವಿಐಪಿ ಸೌಲಭ್ಯಗಳ ವಿವಾದ ಅಥವಾ ಭದ್ರತಾ ದೃಷ್ಟಿಯಿಂದ ಈ ದಿಢೀರ್ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ.

ಬೆಳಗಾವಿ (ಅ.09): ಲೈಂಗಿಕ ದೌರ್ಜನ್ಯ ಮತ್ತು ಪೆನ್‌ಡ್ರೈವ್ ಹಗರಣದಲ್ಲಿ ಬಂಧಿಯಾಗಿ ಪ್ರಸ್ತುತ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಬೆಳಗಾವಿಯ ಐತಿಹಾಸಿಕ ಮತ್ತು ಹೈ-ಸೆಕ್ಯೂರಿಟಿ ‘ಹಿಂಡಲಗಾ ಕೇಂದ್ರ ಕಾರಾಗೃಹ’ಕ್ಕೆ ಸ್ಥಳಾಂತರಿಸಲು (Shift) ತೆರೆಮರೆಯಲ್ಲಿ ಸಿದ್ಧತೆಗಳು ನಡೆದಿವೆ.

ಪ್ರಜ್ವಲ್ ರೇವಣ್ಣ ಅವರನ್ನು ಹಿಂಡಲಗಾ ಜೈಲಿಗೆ ಸ್ಥಳಾಂತರಿಸುವ ಸಂಬಂಧ ಬೆಳಗಾವಿ ಕಾರಾಗೃಹದ ಮುಖ್ಯ ಅಧೀಕ್ಷಕರಿಗೆ (Chief Superintendent) ಕಾರಾಗೃಹ ಇಲಾಖೆಯ ಉನ್ನತ ಮೂಲಗಳಿಂದ ಅಧಿಕೃತ ಇ-ಮೇಲ್ ಸಂದೇಶ ರವಾನೆಯಾಗಿದ್ದು, ರಾಜ್ಯಾದ್ಯಂತ ಭಾರೀ ಕುತೂಹಲಕ್ಕೆ ಕಾರಣವಾಗಿದೆ.

ಯಾವ ಕ್ಷಣದಲ್ಲಾದರೂ ಶಿಫ್ಟ್: ಬಿಗಿ ಭದ್ರತೆಗೆ ಸೂಚನೆ:

ಜೈಲು ಅಧಿಕಾರಿಗಳಿಗೆ ಬಂದಿರುವ ಇ-ಮೇಲ್‌ನಲ್ಲಿ, ‘ಪ್ರಜ್ವಲ್ ರೇವಣ್ಣ ಅವರನ್ನು ಆದಷ್ಟು ಬೇಗ ಬೆಳಗಾವಿ ಹಿಂಡಲಗಾ ಜೈಲಿಗೆ ಶಿಫ್ಟ್ ಮಾಡಲಾಗುತ್ತದೆ. ಹೀಗಾಗಿ ಅಗತ್ಯವಿರುವ ಎಲ್ಲಾ ರೀತಿಯ ಭದ್ರತಾ ಸಿದ್ಧತೆಗಳನ್ನು ಕೈಗೊಳ್ಳಬೇಕು’ ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಯಾವುದೇ ಕ್ಷಣದಲ್ಲಾದರೂ ಬೆಂಗಳೂರಿನಿಂದ ಪೊಲೀಸ್ ಬೆಂಗಾವಲು (ಎಸ್ಕಾರ್ಟ್) ವಾಹನಗಳ ಭದ್ರತೆಯಲ್ಲಿ ಅವರನ್ನು ಬೆಳಗಾವಿಗೆ ಕರೆದೊಯ್ಯುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

ಏಕಾಏಕಿ ಹಿಂಡಲಗಾ ಜೈಲಿಗೆ ಶಿಫ್ಟ್ ಮಾಡುತ್ತಿರುವುದೇಕೆ?:

ಪ್ರಜ್ವಲ್ ರೇವಣ್ಣ ಅವರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರದಿಂದ ಬೆಳಗಾವಿಗೆ ಸ್ಥಳಾಂತರಿಸಲು ಕಾರಣವೇನು ಎಂಬುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

ವಿಐಪಿ ಸೌಲಭ್ಯಗಳ ವಿವಾದದ ಹಿನ್ನೆಲೆ?: ಇತ್ತೀಚೆಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್‌ಗೆ ರಾಜೋಪಚಾರ ಸೇರಿದಂತೆ ಹಲವು ವಿಐಪಿ ಸೌಲಭ್ಯಗಳು ಸಿಗುತ್ತಿದ್ದ ಪ್ರಕರಣಗಳು ಬಯಲಿಗೆ ಬಂದಿದ್ದವು. ಈ ಹಿನ್ನೆಲೆಯಲ್ಲಿ ಹೈಪ್ರೊಫೈಲ್ ಕೈದಿಗಳನ್ನು ರಾಜ್ಯದ ಇತರೆ ಕೇಂದ್ರ ಕಾರಾಗೃಹಗಳಿಗೆ ಹಂಚಿಕೆ ಮಾಡುವ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗುತ್ತಿದೆಯೇ?

ಭದ್ರತೆಯ ಹಿತದೃಷ್ಟಿ ಅಥವಾ ಆಡಳಿತಾತ್ಮಕ ಮತ್ತು ಭದ್ರತಾ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆಯೇ ಎಂಬ ಬಗ್ಗೆ ಜೈಲು ಇಲಾಖೆ ಯಾವುದೇ ಸ್ಪಷ್ಟ ಕಾರಣವನ್ನು ಬಹಿರಂಗಪಡಿಸಿಲ್ಲ.

ಹಿಂಡಲಗಾ ಜೈಲು ರಾಜ್ಯದ ಅತ್ಯಂತ ಹಳೆಯ ಮತ್ತು ಕಠಿಣ ನಿಯಮಾವಳಿಗಳ ಜೈಲುಗಳಲ್ಲಿ ಒಂದಾಗಿದ್ದು, ಗಲ್ಲಿಗೇರಿಸುವ ಸೌಲಭ್ಯವಿರುವ ಏಕೈಕ ಕಾರಾಗೃಹವಾಗಿದೆ. ಸದ್ಯ ಪ್ರಜ್ವಲ್ ರೇವಣ್ಣ ಸ್ಥಳಾಂತರಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಜೈಲು ಸಿಬ್ಬಂದಿ ಸರ್ವಸನ್ನದ್ಧರಾಗಿದ್ದಾರೆ.