ರಾಮನಾಥಪುರದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸುತ್ತಿರುವ 23 ಕೋಟಿ ವೆಚ್ಚದ ಹೊಸ ಸೇತುವೆ ಕಾಮಗಾರಿಯು ಕಳಪೆಯಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಸೇತುವೆಯ ಕಂಬಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು, ರಸ್ತೆ ಅಗಲೀಕರಣ ಮತ್ತು ತಡೆಗೋಡೆ ನಿರ್ಮಾಣವನ್ನು ಅವೈಜ್ಞಾನಿಕವಾಗಿ ಮಾಡಲಾಗುತ್ತಿದೆ.

ರಾಮನಾಥಪುರದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗುತ್ತಿರುವ ₹ 23ಕೋಟಿ ವೆಚ್ಚದ ಹೊಸ ಸೇತುವೆ ಕಾಮಗಾರಿ ಬಹುತೇಕ ಪೂರ್ಣಗೊಳ್ಳುವ ಹಂತ ತಲುಪಿದ್ದು, ಸೇತುವೆಯ ಪ್ರವೇಶದ್ವಾರದಲ್ಲಿನ ರಸ್ತೆ ಅಗಲೀಕರಣ ಕಾಮಗಾರಿಯನ್ನು ನಿಯಮಾನುಸಾರ ಕೈಗೊಳ್ಳದೇ ಅವೈಜ್ಞಾನಿಕವಾಗಿ ನಿರ್ಮಿಸಿರುವುದು ಸಾರ್ವಜನಿಕ ಆರೋಪಕ್ಕೆ ಕಾರಣವಾಗಿದೆ.

ಈಗಾಗಲೇ ಸೇತುವೆಯ ರಕ್ಷಣಾ ತಡೆಗೋಡೆಯ ಕೆಲವು ಕಡೆ ಸಿಮೆಂಟ್ ಕಾಂಕ್ರೀಟ್ ಕಂಬಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಸೇತುವೆಯನ್ನು ನದಿಗೆ ನೇರವಾಗಿ ನಿರ್ಮಿಸಲಾಗಿದ್ದರೂ ಕೂಡ ನಂತರದ ಸಂಪರ್ಕ ರಸ್ತೆಯನ್ನು ಅವೈಜ್ಞಾನಿಕವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಇದು ಕೆಆರ್‌ಡಿಸಿಎಲ್ ಅಧಿಕಾರಿಗಳ ವಿವೇಚನೆ ಮೇರೆಗೆ ಹಾಗೂ ಪರಿಹಾರ ತೆಗೆದುಕೊಂಡಿರುವವರ ಹೊಂದಾಣಿಕೆಯಿಂದ ಈ ರೀತಿಯಾಗಿ ಪ್ರವೇಶದ್ವಾರದ ರಸ್ತೆ ಅಗಲೀಕರಣವನ್ನು ವಕ್ರ ವಕ್ರವಾಗಿ, ಡೊಂಕಾಗಿ ಅಭಿವೃದ್ಧಿಪಡಿಸಲಾಗುತ್ತಿದೆ.

ಅವೈಜ್ಞಾನಿಕ ಕಲ್ಲಿನ ತಡೆಗೋಡೆ

ನೂತನ ಸೇತುವೆಯ ಪ್ರವೇಶದ್ವಾರದ ಕೆಳಭಾಗದಲ್ಲಿ ದೇವಸ್ಥಾನಕ್ಕೆ ಹೋಗುವ ಮಾರ್ಗವಿದ್ದು, ರಸ್ತೆಯ ಕೆಳಭಾಗವನ್ನು ಕಾಂಕ್ರೀಟ್ ವಾಲ್‌ನಿಂದ ನಿರ್ಮಿಸದೇ ಸೈಜ್ ಕಲ್ಲುಗಳಿಂದ ತಡೆಗೋಡೆಯನ್ನು ಕಟ್ಟಲಾಗಿದೆ. ಇದು ಅತಿಯಾದ ಮಳೆ ಬಿದ್ದರೆ ಅದು ಸಂಪೂರ್ಣವಾಗಿ ಕುಸಿಯುವ ಸಾಧ್ಯತೆ ಹೆಚ್ಚಿದೆ.

ಸೇತುವೆ ಕಾಮಗಾರಿ ವಿಳಂಬ

ಹೊಸ ಸೇತುವೆ ನಿರ್ಮಾಣದ ಕಾಮಗಾರಿ ಸುಮಾರು 10 ವರ್ಷಗಳಿಂದಲೂ ನಡೆಯುತ್ತಿದೆ. ಈ ವಿಳಂಬದಿಂದಾಗಿ ಪ್ರತಿದಿನ ಹಳೆಯ ಸೇತುವೆಯನ್ನೇ ಅವಲಂಬಿಸಬೇಕಾದ ಪರಿಸ್ಥಿತಿ ಮುಂದುವರಿದಿದ್ದು, ವಾಹನ ಸವಾರರು ಹಾಗೂ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ. ಇದೀಗ ಕಾಮಗಾರಿ ಅಂತಿಮ ಹಂತ ತಲುಪಿರುವ ಸಂದರ್ಭದಲ್ಲಿಯೂ ಕಾಮಗಾರಿಯನ್ನು ಗುತ್ತಿಗೆದಾರ, ಎಂಜಿನಿಯರ್‌ಗಳ ಹೊಂದಾಣಿಕೆಯಿಂದ ಕೈಗೊಳ್ಳುತ್ತಿರುವುದು ಕಾಮಗಾರಿಯು ಅವೈಜ್ಞಾನಿಕವಾಗಿ ಕೂಡಿರಲು ಕಾರಣವಾಗಿದೆ.