ಬಿ. ರಾಮಪ್ರಸಾದ್‌ ಗಾಂಧಿ

ಹರಪನಹಳ್ಳಿ(ಮಾ.04): ಕಳೆದ 23 ವರ್ಷಗಳ ಹಿಂದೆ ಹರಪನಹಳ್ಳಿ ಪಟ್ಟಣದಲ್ಲಿ ಆರಂಭಗೊಂಡಿದ್ದ ದೂರದರ್ಶನ ಮರುಪ್ರಸಾರ ಕೇಂದ್ರವು ಇದೀಗ ತನ್ನ ಕಾರ್ಯ ಚಟುವಟಿಕೆಯನ್ನು ಸ್ಥಗಿತಗೊಳಿಸಲು ಅಣಿಯಾಗಿದೆ.

30-3-1997 ರಂದು ದೂರದರ್ಶನ ಅಲ್ಪ ಶಕ್ತಿ ಮರುಪ್ರಸಾರ ಕೇಂದ್ರ ಉದ್ಘಾಟನೆಗೊಂಡಿತು. ಆಗ ಜನರು ಸಹ ತಮ್ಮ ಮನೆ ಮೇಲೆ ಆ್ಯಂಟೀನಾ ಏರಿಸಿಕೊಂಡು ಟಿವಿ ಗಳಲ್ಲಿ ನ್ಯಾಷನಲ್‌ ಹಾಗೂ ಸ್ಥಳೀಯ ಕನ್ನಡದ ಚಂದನ ಚಾನಲ್‌ನ್ನು ವೀಕ್ಷಿಸುತ್ತಿದ್ದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕಾಲ ಬದಲಾಗುತ್ತಾ, ವೈಜ್ಞಾನಿಕತೆ ಬೆಳೆದಂತೆ ಕೇಬಲ್‌ ನೆಟ್‌ ವರ್ಕ, ಡಿಷ್‌ ಪುಟ್ಟಿಗಳು ಮನೆಗಳ ಮೇಲೆ ರಾರಾಜಿಸಲಿಕ್ಕೆ ಪ್ರಾರಂಭವಾದವು. ನಂತರ ಕಳೆದ 15 ವರ್ಷಗಳಿಂದ ಮನೆಗಳ ಮೇಲಿನ ಆ್ಯಂಟೀನಾಗಳು ಮಾಯವಾದವು. ಕೆಲವೊಂದು ಹಳ್ಳಿಗಳಲ್ಲಿ ಮಾತ್ರ ಉಳಿದವು. ಈಚೆಗೆಂತೂ ಉದ್ದನೆಯ ಆ್ಯಂಟೀನಾ ಸಂಪೂರ್ಣ ಕಾಣೆಯಾದವು. ಇದರ ಪರಿಣಾಮವಾಗಿ ದೂರ ದರ್ಶನ ಮರು ಪ್ರಸಾರ ಕೇಂದ್ರ ಕಾರ್ಯನಿರ್ವಹಿಸಿದರೂ ಅದರ ಉಪಯೋಗ ಸಾರ್ವಜನಿಕರು ಪಡೆದುಕೊಳ್ಳುವುದನ್ನು ಬಿಟ್ಟು ಹೊಸ ಅವಿಷ್ಕಾರಕ್ಕೆ ಮೊರೆ ಹೋದರು.

ಏ. 10ರಿಂದ ಸ್ಥಗಿತ:

ಇದರಿಂದ ದೂರದರ್ಶನ ಮರು ಪ್ರಸಾರ ಕೇಂದ್ರ ಇದ್ದೂ ಇಲ್ಲದಂತಾಯಿತು. ಹರಪನಹಳ್ಳಿ ಪಟ್ಟಣದ ಬಿಎಸ್‌ಎನ್‌ಎಲ್‌ ಕಚೇರಿ ಹಿಂಭಾಗ ಇರುವ ದೂರದರ್ಶನ ಮರುಪ್ರಸಾರ ಕೇಂದ್ರವು ಏಪ್ರಿಲ್‌ 10-2020 ರಿಂದ ಸಂಪೂರ್ಣ ತನ್ನ ಕಾರ್ಯವನ್ನು ಸ್ಥಗಿತಗೊಳಿಸುತ್ತದೆ. ಒಬ್ಬ ಎಂಜಿನೀಯರ್‌ ಹಾಗೂ ಇಬ್ಬರು ತಾಂತ್ರಿಕ ಸಿಬ್ಬಂದಿಯನ್ನು ಬೇರೆ ಕಡೆ ವರ್ಗಾವಣೆ ಮಾಡಲಾಗುತ್ತದೆ.

ಕಾರ್ಯ ಸ್ಥಗಿತಗೊಳಿಸಲು ಕೇಂದ್ರ ಸರ್ಕಾರದಿಂದ ಆದೇಶ ಸಹ ಬಂದಿದೆ ಎಂಬುದನ್ನು ಇಲ್ಲಿಯ ಸಹಾಯಕ ಎಂಜಿನಿಯರ್‌ ಹಿರೇಮಠ ನೀಲಕಂಠ ಸ್ವಾಮಿ ಒಪ್ಪಿಕೊಳ್ಳುತ್ತಾರೆ. ಈ ಟಿವಿ ಸ್ಟೇಷನ್‌ನ ವ್ಯಾಪ್ತಿ ಪಟ್ಟಣದಿಂದ 30 ಕಿಲೋ ಮೀಟರ್‌ ಹೊಂದಿದೆ. ಕಾರ್ಯಸ್ಥಗಿತಗೊಂಡ ಮೇಲೆ ಇಲ್ಲಿರುವ ಯಂತ್ರಗಳನ್ನು ಸ್ಥಳಾಂತರ ಮಾಡಲಾಗುತ್ತದೆ.

ಎಫ್‌ಎಂ, ಆಕಾಶವಾಣಿಗೆ ಜನರ ಬೇಡಿಕೆ:

ಈ ದೂರದರ್ಶನ ಮರುಪ್ರಸಾರ ಕೇಂದ್ರ ಕಾರ್ಯಸ್ಥಗಿತಗೊಳಿಸಿದರೆ ಮೂಲಭೂತ ಸೌಕರ್ಯ ಇರುವುದರಿಂದ ಅಲ್ಲಿಯೇ ಎಫ್‌ಎಂ ಆಕಾಶವಾಣಿ ಕೇಂದ್ರವನ್ನು ಆರಂಭಿಸಬೇಕು ಎಂಬುದು ಈ ಭಾಗದ ಜನರ ಬೇಡಿಕೆಯಾಗಿದೆ.

ಎಫ್‌ಎಂ ರೇಡಿಯೊ ಕೇಂದ್ರಗಳು ಹೊಸಪೇಟೆ ಹಾಗೂ ದಾವಣಗೆರೆಯಲ್ಲಿವೆ, ಈ ಎರಡೂ ಕೇಂದ್ರಗಳು ಹರಪನಹಳ್ಳಿಗೆ ದೂರವಾಗಿದ್ದು, ಇಲ್ಲಿಗೆ ಸಿಗ್ನಲ್‌ ಗಳು ಬರುತ್ತಿಲ್ಲ. ಹರಪನಹಳ್ಳಿ ಪಟ್ಟಣ, ತಾಲೂಕು ಶೈಕ್ಷಣಿಕವಾಗಿ ಮುಂದಿದ್ದು, ತ್ವರಿತವಾಗಿ ಬೆಳವಣಿಗೆ ಆಗುತ್ತಲಿದೆ.

ಇಲ್ಲಿ ಇಂಟರನೆಟ್‌ ಸರಿಯಾಗಿ ಬರುತ್ತಿಲ್ಲ, ಬಿಎಸ್‌ ಎನ್‌ ಎಲ್‌ ಕೆಲಸ ಕಡಿಮೆಯಾಗುತ್ತಲಿದೆ, ಆದ್ದರಿಂದ ಈಗಿರುವ ದೂರದರ್ಶನ ಮರುಪ್ರಸಾರ ಕೇಂದ್ರವನ್ನು ಎಫ್‌ಎಂ ಆಕಾಶವಾಣಿ ಕೇಂದ್ರವನ್ನಾಗಿ ಏಕೆ ಮಾರ್ಪಾಡು ಮಾಡಬಾರದು ಎಂಬುದು ಇಲ್ಲಿಯ ನಾಗರಿಕರ ಪ್ರಶ್ನೆಯಾಗಿದೆ. ಆದ್ದರಿಂದ ಬಳ್ಳಾರಿ ಹಾಗೂ ದಾವಣಗೆರೆ ಸಂಸದರು ಕೇಂದ್ರ ಸರ್ಕಾರದ ಸಂಬಂಧಪಟ್ಟ ಸಚಿವರ ಬಳಿ ಒತ್ತಡ ತಂದು ಇಲ್ಲಿಯ ಎಫ್‌ ಎಂ. ಆಕಾಶವಾಣಿ ಕೇಂದ್ರ ಆರಂಭವಾಗುವಂತೆ ಮಾಡಬೇಕು ಎಂಬುದು ಜನರ ನಿರೀಕ್ಷೆಯಾಗಿದೆ.

ಸಂಸತ್ತು ಅಧಿವೇಶನ ನಡೆದಿದೆ, ದೆಹಲಿಯಲ್ಲಿಯೇ ಇದ್ದೇನೆ, ಸಂಬಂಧಪಟ್ಟ ಕೇಂದ್ರ ಸಚಿವರಿಗೆ ಈ ಕುರಿತು ಪತ್ರ ನೀಡಿ ದೂರದರ್ಶನ ಕೇಂದ್ರವನ್ನು ಎಫ್‌ಎಂ ಆಕಾಶವಾಣಿಯಾಗಿ ಮಾರ್ಪಾಡಿಸಲು ಮನವಿ ಮಾಡುತ್ತೇನೆ ಎಂದು ಬಳ್ಳಾರಿ. ಸಂಸದ ವೈ. ದೇವೇಂದ್ರಪ್ಪ ಹೇಳಿದ್ದಾರೆ.

ಹರಪನಹಳ್ಳಿ ಶೈಕ್ಷಣಿಕವಾಗಿ ಹೆಸರು ಮಾಡಿದೆ, ದೂರದರ್ಶನ ಮರುಪ್ರಸಾರ ಕೇಂದ್ರ ಸ್ಥಗಿತಗೊಂಡರೂ ಎಫ್‌ಎಂ ರೇಡಿಯೊ ಕೇಂದ್ರ ಆರಂಭಗೊಂಡರೆ ಯುವಜನರಿಗೆ ಅನುಕೂಲವಾಗುತ್ತದೆ, ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಪ್ರಯತ್ನ ಮಾಡಬೇಕು ಎಂದು ಹರಪನಹಳ್ಳಿ ತಾಲೂಕಿನ ಪ್ರಗತಿಪರ ಮುಖಂಡ ಎ.ಎಂ. ವಿಶ್ವನಾಥ ಹೇಳಿದ್ದಾರೆ.