'35 ರು. ಸಿಗಬೇಕಾದ ಪೆಟ್ರೋಲ್ 100 ರು.ಗೆ ಮಾರಾಟ'
- 35 ರು.ಗೆ ಸಿಗಬೇಕಾದ ಪೆಟ್ರೋಲ್‌ನ್ನು 100 ರು.ಗೆ ಮಾರಾಟ
- ಕಾಂಗ್ರೆಸ್ ಕಾರ್ಯಕರ್ತರಿಂದ ತೀವ್ರ ಆಕ್ರೋಶ
- ಹನೂರಿನಲ್ಲಿ ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ
ಹನೂರು(ಜೂ.13): 35 ರು. ಸಿಗಬೇಕಾದ ಪೆಟ್ರೋಲ್ 100 ರು.ಗೆ ಮಾರಾಟಮಾಡಲಾಗುತ್ತಿದೆ ಎಂದು ಶಾಸಕ ಆರ್.ನರೇಂದ್ರ ಆರೋಪಿಸಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಆದೇಶ ಮತ್ತು ಸೂಚನೆ ಮೇರೆಗೆ ಪೆಟ್ರೋಲ್ ಡಿಸೇಲ್ ಬೆಲೆ ಎರಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ ಕೈಗೊಂಡಿರುವ ಹಿನ್ನೆಲೆ ಶನಿವಾರ ಹನೂರು ಪಟ್ಟಣದ ಪೆಟ್ರೋಲ್ ಬಂಕ್ ಬಳಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.
ಕಳೆದ 6 ತಿಂಗಳಿನಿಂದ ನಿರಂತರ ಪೆಟ್ರೋಲ್, ಡಿಸೇಲ್ ದರ ಹೆಚ್ಚಿಸುತ್ತಲೆ ಬಂದಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 65 ರು. ಟ್ಯಾಕ್ಸ್ ವಿಧಿಸಿವೆ. ಅಗತ್ಯ ಹಾಗೂ ದಿನಬಳಕೆಯ ವಸ್ತುಗಳ ಬೆಲೆ ಹೆಚ್ಚಾಗಿದೆ. ಅಡುಗೆ ಎಣ್ಣೆ, ರಸಗೊಬ್ಬರ ಸೇರಿದಂತೆ ಅನೇಕ ವಸ್ತುಗಳ ಬೆಲೆ ಗಗನಕ್ಕೆರಿದೆ. ಕೇಂದ್ರ ಸರ್ಕಾರ ಕೊರೋನಾದಂತಹ ಸಂಕಷ್ಟದಲ್ಲಿಯೂ ಪೆಟ್ರೋಲ್ ಬೆಲೆ ಏರಿಸುವ ಮೂಲಕ ದೇಶದ ಜನತೆಗೆ ಗಾಯದ ಮೇಲೆ ಬರೆ ಎಳೆಯುವ ಕೆಲಸ ಮಾಡುತ್ತಿದೆ. ರಾಜ್ಯ ಸರ್ಕಾರ ವಿದ್ಯುತ್ ಬೆಲೆ ಹೆಚ್ಚಿಸಿದೆ.
ಕೋವಿಡ್ ನಿಯಮ ಉಲ್ಲಂಘಿಸಿ ಡಿಕೆಶಿ ನೇತೃತ್ವದಲ್ಲಿ ಧರಣಿ: ಕಾಂಗ್ರೆಸ್ ವಿರುದ್ಧ ಕೇಸ್ ದಾಖಲು ..
ಶ್ರೀ ರಾಮನ ಜಪಿಸಿ ಅಧಿಕಾರ ನಡೆಸುವ ದೇಶದಲ್ಲಿ ಪೆಟ್ರೋಲ್ ಬೆಲೆ ಲೀ.ಗೆ 100 ರು. ರಾವಣನ ನೆಲೆಯಾದ ಶ್ರೀಲಂಕಾದಲ್ಲಿ 58 ರು. ರಾಮನ ಹೆಸರು ಹೇಳಿ ಜನರಿಗೆ ಮೋಸ ಮಾಡುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರ ಪೆಟ್ರೋಲ್ ಡಿಸೇಲ್ ಮೇಲಿನ 65 ರು. ತೆರಿಗೆ ಇಳಿಸಬೇಕು. ಕೊರೋನಾ ಹಿನ್ನೆಲೆ ಸಾಂಕೇತಿಕ ಮತ್ತು ಶಾಂತ ಪ್ರತಿಭಟನೆ ನಡೆಸಲಾಗುತ್ತಿದೆ. ಬೆಲೆ ಇಳಿಕೆ ಮಾಡದೇ ಹೋದರೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆ ವೇಳೆ ಪ್ರಧಾನಿ ನರೇಂದ್ರ ಮೋದಿ, ಗೃಹ ಮಂತ್ರಿ ಅಮಿತ್ ಶಾ ಅವರಿಗೆ ಧಿಕ್ಕಾರದ ಘೋಷಣೆ ಕೂಗಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ರಾಮಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ್, ತಾ.ಪಂ.ಸದಸ್ಯ ಜವಾದ್ ಅಹಮದ್, ಪಪಂ ಸದಸ್ಯರಾದ ಸಂಪತ್ ಕುಮಾರ್, ಗಿರೀಶ್ ಕುಮಾರ್, ಸೋಮಶೇಖರ, ಮುಖಂಡರಾದ ಮಂಗಲ ಪುಟ್ಟರಾಜು, ಎಲ್ಲೇಮಾಳ ನಾಗೇಶ್, ಯೂತ್ ಕಾಂಗ್ರೆಸ್‌ನ ಪದಾಧಿಕಾರಿಗಳಾದ ಬಿ.ಗುಂಡಾಪುರ ಮಾದೇಶ್, ಸತೀಶ್, ಕಾರ್ತಿಕ್ ಇದ್ದರು.