ವರದಿ : ಸೋಮರೆಡ್ಡಿ ಅಳವಂಡಿ

ಕೊಪ್ಪಳ (ಏ.24):  ತಿರುಮಲ ಬೆಟ್ಟವೇ ರಾಮಭಕ್ತ ಹನುಮನ ಜನ್ಮಸ್ಥಳ ಎಂಬ ತಿರುಮಲ ತಿರುಪತಿ ದೇವಸ್ಥಾನಂ(ಟಿಟಿಡಿ) ಟ್ರಸ್ಟ್‌ ಕ್ಯಾತೆಗೆ ತಕ್ಕ ಉತ್ತರ ನೀಡಲು ಕೊಪ್ಪಳ ಜಿಲ್ಲೆಯ ಅಂಜನಾದ್ರಿಯಲ್ಲಿ ಸಂತಶ್ರೇಷ್ಠರ ಸಮಾವೇಶ ಮಾಡಿ ವಿಷಯ ಚರ್ಚಿಸಿ, ದಾಖಲೆ ಬಿಡುಗಡೆ ಮಾಡಲು ಸಿದ್ಧತೆ ನಡೆದಿದೆ. ಸುಮಾರು 2 ಸಾವಿರಕ್ಕೂ ಹೆಚ್ಚು ಸಂತ ಶ್ರೇಷ್ಠರು ಪಾಲ್ಗೊಳ್ಳಲಿದ್ದು ಟಿಟಿಡಿಯವರಿಗೂ ಅವರ ವಾದ ಮಂಡಿಸಲು ಅವಕಾಶ ನೀಡಲಾಗುವುದು ಎಂದು ಅಂಜನಾದ್ರಿ ಆಂಜನೇಯ ದೇವಸ್ಥಾನದ ಅರ್ಚಕ ವಿದ್ಯಾದಾಸ ಬಾಬಾ ತಿಳಿಸಿದ್ದಾರೆ.

ಸಮಾವೇಶದ ರೂಪರೇಷೆಗಳ ಬಗ್ಗೆ ಅವರು, ಕೋವಿಡ್‌ ಹತೋಟಿಗೆ ಬಂದೊಡನೆ ಅಕ್ಟೋಬರ್‌- ನವೆಂಬರ್‌ ವೇಳೆ ಸಮಾವೇಶ ನಡೆಸಿ ಸಮರ್ಥ ವಾದಗಳ ಮೂಲಕ ಅಂಜನಾದ್ರಿಯೇ ಹನುಮನುದಯಿಸಿದ ಸ್ಥಳ ಎಂಬುದನ್ನು ಮತ್ತೊಮ್ಮೆ ಘಂಟಾಘೋಷವಾಗಿ ಪ್ರಕಟಿಸುವುದಾಗಿ ಹೇಳಿದರು.

ಟಿಟಿಡಿ ಸುಳ್ಳನ್ನೇ ವೈಭವೀಕರಿಸುತ್ತಿದೆ. ಹಿಂದೂಗಳ ಭಾವನೆಗೆ ಧಕ್ಕೆ ತರುವ ಉದ್ದೇಶದಿಂದಲೇ ಇಂತಹ ಕ್ಯಾತೆ ತೆಗೆಯಲಾಗಿದ್ದು ಇದನ್ನು ಇಲ್ಲಿಗೇ ಬಿಡುವ ಪ್ರಶ್ನೆಯೇ ಇಲ್ಲ. ವಿವಾದವನ್ನು ತಾರ್ಕಿಕ ಅಂತ್ಯಕ್ಕೆ ಒಯ್ದು ಭಕ್ತರ ಮನಸ್ಸಿನಲ್ಲಿ ಲವಲೇಶದಷ್ಟೂಸಂದೇಹ ಇಲ್ಲದಂತೆ ಮಾಡಲಾಗುವುದು ಎಂದರು.

ಅಂಜನಾದ್ರಿಯೇ ಹನುಮ ಜನ್ಮಸ್ಥಳ : ಟಿಟಿಡಿಗೆ ತಿರುಗೇಟು ..

ಬಹಿರಂಗ ಚರ್ಚೆ:  ಸಮಾವೇಶದಲ್ಲಿ ಆಂಜನೇಯನ ಜನ್ಮ ಸ್ಥಳದ ಕುರಿತು ಬಹಿರಂಗವಾಗಿಯೇ ಚರ್ಚೆ ಮಾಡಲಾಗುತ್ತದೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ದಾಖಲೆಗಳು, ಪುರಾಣ, ಪುಣ್ಯಕತೆಗಳು, ಮಹಾಕಾವ್ಯ, ಸ್ಥಳ ಪುರಾಣ, ಇತಿಹಾಸ ಸಂಶೋಧನೆಗಳನ್ನು ಒರೆಗೆ ಹಚ್ಚಿ, ವಿಷಯ ಮಂಡನೆ ಮಾಡಲಿದ್ದಾರೆ. ಟಿಟಿಡಿಯವರು ಅಂದು ತಮ್ಮ ಬಳಿ ಇರುವ ದಾಖಲೆಯೊಂದಿಗೆ ವಾದ ಮಾಡಲಿ. ಇದಕ್ಕೆ ಪ್ರತಿವಾದವನ್ನು ಸಂತರು ನಡೆಸುತ್ತಾರೆ. ಆಗ ಸತ್ಯ ಗೊತ್ತಾಗುತ್ತದೆ ಎಂದರು.

ತಿರುಮಲವೇ ಆಂಜನೇಯನ ಜನ್ಮಸ್ಥಳ: ಟಿಟಿಡಿ ಘೋಷಣೆ! ...

ಸಾಕಷ್ಟು ಪುರಾವೆಗಳಿವೆ:  ಕಿಷ್ಕಿಂಧೆಯ ಅಂಜನಾದ್ರಿಯಲ್ಲಿಯೇ ಹನುಮಾನ್‌ ಜನಿಸಿರುವುದಕ್ಕೆ ಸಾಕಷ್ಟುಪುರಾವೆಗಳು ಇವೆ. ರಾಮಾಯಣದಲ್ಲಿ ಉಲ್ಲೇಖವಾಗಿರುವ ವಾಲಿ ಕಿಲ್ಲಾ, ಪಂಪಾ ಸರೋವರ, ಮಹಾಲಕ್ಷ್ಮಿ ದೇವಸ್ಥಾನ ಇಲ್ಲೇ ಇವೆ. ಶಬರಿ ಕಾದಿರುವ ಸ್ಥಳವಿದೆ. ಲಕ್ಷಾಂತರ ವರ್ಷಗಳಿಂದಲೂ ಇಲ್ಲಿ ಆಂಜನೇಯನ ಪೂಜೆ ನಡೆಯುತ್ತಿದೆ. ವಾಸ್ತವ ಇಷ್ಟುಸ್ಪಷ್ಟವಾಗಿದ್ದರೂ ವಿನಾಕಾರಣ ಗೊಂದಲ ಉಂಟು ಮಾಡುವ ಟಿಟಿಡಿಯ ಹೇಳಿಕೆಯೇ ಸರಿಯಾಗಿಲ್ಲ ಎಂದು ಅಭಿಪ್ರಾಯಪಟ್ಟರು.

ವಾಲ್ಮೀಕಿ ರಾಮಾಯಣದಲ್ಲಿ ರಾಮನ ಭಕ್ತ ಹನುಮ ಹುಟ್ಟಿದ್ದು ಸುಮೇರು ಪರ್ವತದಲ್ಲಿ ಎಂದಿದೆ. ಸುಮೇರು ಪರ್ವತ ಎಂದರೆ ಸೂರ್ಯಾಸ್ತದ ವೇಳೆಯಲ್ಲಿ ಬಂಗಾರದಂತೆ ಕಂಗೊಳಿಸುವುದು. ಅಂಜನಾದ್ರಿ ಪರ್ವತ ಹಾಗೆ ಕಂಗೊಳಿಸುತ್ತದೆ. ಅದನ್ನೇ ಸುಮೇರು ಪರ್ವತ ಎಂದು ಕರೆದಿರುವುದು. ಬೇಕಾದರೆ ಟಿಟಿಡಿ ಅವರು ಇದನ್ನು ನೋಡಿಕೊಂಡು ಹೋಗಲಿ. ವಿನಾಕಾರಣ ಗೊಂದಲ ಸೃಷ್ಟಿಮಾಡುವುದು ಸರಿಯಲ್ಲ ಎಂದರು.