ತಿರುಮಲ(ಏ.22): ಕೊಪ್ಪಳದ ಅಂಜನಾದ್ರಿ ಬೆಟ್ಟದಲ್ಲಿರುವ ಕಿಷ್ಕಿಂಧೆಯಲ್ಲಿ ತ್ರೇತಾಯುಗದ ಆಂಜನೇಯ ಜನಿಸಿದ್ದ ಎಂಬ ಪೌರಾಣಿಕ ಐತಿಹ್ಯವನ್ನು ಕಡೆಗಣಿಸಿ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಟ್ರಸ್ಟ್‌ ‘ಆಂಜನೇಯ ಜನಿಸಿದ್ದು ತಿರುಮಲದ ಅಂಜನಾದ್ರಿ ಬೆಟ್ಟದಲ್ಲಿ’ ಎಂದು ಬುಧವಾರ ಘೋಷಿಸಿದೆ.

ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ವಿ.ಮುರಳೀಧರ ಶರ್ಮಾ ಅವರು ತಮಿಳುನಾಡಿನ ರಾಜ್ಯಪಾಲ ಭಂವರಿಲಾಲ್‌ ಪುರೋಹಿತ್‌ ಸಮ್ಮುಖದಲ್ಲಿ ತಿರುಮಲದಲ್ಲಿ ರಾಮನವಮಿಯ ದಿನ ಈ ಕುರಿತ 20 ಪುಟಗಳ ತೆಲುಗು ಪುಸ್ತಿಕೆ ‘ಶ್ರೀ ಆಂಜನೇಯಸ್ವಾಮಿ ವಾರಿ ಜನ್ಮಸ್ಥಳಂ ತಿರುಮಲಲೋನಿ ಅಂಜನಾದ್ರಿ’ ಬಿಡುಗಡೆ ಮಾಡಿದರು. ಟಿಡಿಡಿ ವೆಬ್‌ಸೈಟ್‌ನಲ್ಲೂ ಪುಸ್ತಕ ಅಪ್‌ಲೋಡ್‌ ಮಾಡಲಾಗಿದೆ.

‘ಶಿಲಾಶಾಸನ, ಪೌರಾಣಿಕ ಗ್ರಂಥಗಳು ಹಾಗೂ ಭೌಗೋಳಿಕ ಆಧಾರಗಳ ಮೇಲೆ ತ್ರೇತಾಯುಗದ ಆಂಜನೇಯನು ತಿರುಮಲದ ಏಳು ಬೆಟ್ಟಗಳಲ್ಲಿ ಒಂದಾದ ವೆಂಕಟಾಚಲದ ಅಂಜನಾದ್ರಿಯ ಜಾಪಳಿ ತೀರ್ಥ ಎಂಬಲ್ಲಿ ಜನಿಸಿದ್ದಾನೆ ಎಂದು ದೃಢಪಟ್ಟಿದೆ. ಇದು ತಿರುಮಲ ಬೆಟ್ಟದ ಆಕಾಶಗಂಗಾ ಜಲಪಾತದ ಬಳಿಯಿದೆ. ತಿರುಮಲದ ತಿಮ್ಮಪ್ಪನ ದೇಗುಲದಿಂದ ಈ ಸ್ಥಳ 5 ಕಿ.ಮೀ. ದೂರದಲ್ಲಿದೆ’ ಎಂದು ಮುರಳೀಧರ ಶರ್ಮಾ ಹೇಳಿದರು.

ಪೌರಾಣಿಕ ಕತೆಯ ಉಲ್ಲೇಖ:

ವೆಂಕಟಾಚಲ ಮಾಹಾತ್ಮ್ಯಂ ಹಾಗೂ ಸ್ಕಂದ ಪುರಾಣದಲ್ಲಿ ಆಂಜನೇಯನ ತಾಯಿ ಅಂಜನಾದೇವಿಯು ಮಾತಂಗ ಮುನಿಯ ಬಳಿ ಹೋಗಿ ಪುತ್ರ ಸಂತಾನಕ್ಕಾಗಿ ಪ್ರಾರ್ಥಿಸಿದಳು. ಆಗ ವೆಂಕಟಾಚಲದಲ್ಲಿ ತಪಸ್ಸು ಮಾಡುವಂತೆ ಮುನಿ ಹೇಳಿದರು. ಬಹಳ ವರ್ಷಗಳ ತಪಸ್ಸಿನ ನಂತರ ಅಲ್ಲೇ ಆಕೆಗೆ ಆಂಜನೇಯ ಹುಟ್ಟಿದ. ಆ ಸ್ಥಳವೇ ಅಂಜನಾದ್ರಿ ಎಂದು ಉಲ್ಲೇಖವಾಗಿದೆ. ವೆಂಕಟಾಚಲ ಮಾಹಾತ್ಮ್ಯಂ, ವರಾಹ ಪುರಾಣ ಹಾಗೂ ಬ್ರಹ್ಮಾಂಡ ಪುರಾಣದಲ್ಲಿ ಆಂಜನೇಯನು ಕೆಂಪು ಸೂರ್ಯನನ್ನು ಹಣ್ಣು ಎಂದು ಭಾವಿಸಿ ಆಕಾಶಕ್ಕೆ ಜಿಗಿದ ಉಲ್ಲೇಖವಿದೆ. ಅವನು ಜಿಗಿದಿದ್ದು ಇದೇ ವೆಂಕಟಗಿರಿಯಿಂದ. ಆಗ ಬ್ರಹ್ಮ ಮತ್ತು ಇಂದ್ರರು ಶಸ್ತ್ರಾಸ್ತ್ರಗಳಿಂದ ದಾಳಿ ನಡೆಸಿ, ಆಂಜನೇಯ ಕೆಳಗೆ ಬಿದ್ದಾಗ ಅಂಜನಾದೇವಿ ಅಳತೊಡಗಿದಳು. ಅವಳನ್ನು ಸಮಾಧಾನಪಡಿಸಲು ದೇವತೆಗಳು ವೆಂಕಟಾಚಲದ ಮೇಲೆ ಇಳಿದು ಬಂದಿದ್ದರು ಎಂದು ಉಲ್ಲೇಖವಿದೆ ಎಂದು ಶರ್ಮಾ ಸಮರ್ಥಿಸಿಕೊಂಡರು.

ಹಂಪಿಯ ಕಿಷ್ಕಿಂಧೆ ಜನ್ಮಸ್ಥಳವಲ್ಲ:

‘ತಿರುಮಲದ ಅಂಜನಾದ್ರಿಯೇ ಆಂಜನೇಯನ ಜನ್ಮಸ್ಥಳವೆಂದು ಘೋಷಿಸುವ ಮುನ್ನ ನಾವು 12 ಪುರಾಣಗಳಿಂದ ಹಾಗೂ ಕಂಬ ರಾಮಾಯಣ ಮತ್ತು ಅನ್ನಮಾಚಾರ್ಯರ ಸಂಕೀರ್ತನದ ಶ್ಲೋಕಗಳಿಂದ ಸಾಕ್ಷ್ಯ ಸಂಗ್ರಹಿಸಿದ್ದೇವೆ. ತಿರುಮಲದ ದೇಗುಲದಲ್ಲಿರುವ ಶಿಲಾಶಾಸನದಲ್ಲೂ ಇದಕ್ಕೆ ಸಾಕ್ಷ್ಯವಿದೆ. ಸ್ಕಂದ ಪುರಾಣದಲ್ಲಿ ಭೌಗೋಳಿಕ ಸಾಕ್ಷ್ಯ ಕೂಡ ಇದೆ. ಆಂಜನೇಯನ ಜನ್ಮಸ್ಥಳ ಹಂಪಿಯ ಕಿಷ್ಕಿಂಧೆ ಎಂಬುದು ನಿಜವಲ್ಲ. ಹಂಪಿಯೇ ರಾಮಾಯಣದ ಕಿಷ್ಕಿಂಧೆ ಎಂಬುದು ನಿಜ, ಆದರೆ ಆಂಜನೇಯ ಹುಟ್ಟಿದ್ದು ಅಂಜನಾದ್ರಿಯಲ್ಲಿ. ತಿರುಮಲದ ವೆಂಕಟಾಚಲವೇ ಅಂಜನಾದ್ರಿ. ಸುಗ್ರೀವ ಕೂಡ ಆಂಜನೇಯನ ಬಳಿ ಅಂಜನಾದ್ರಿಯಿಂದ ವಾನರರನ್ನು ಕರೆತರುವಂತೆ ಹೇಳಿದ್ದ. ಕಿಷ್ಕಿಂಧೆಯೇ ಅಂಜನಾದ್ರಿಯಾದರೆ ಹೀಗೇಕೆ ‘ಅಂಜನಾದ್ರಿಯಿಂದ ವಾನರರ ಕರೆತಾ?’ ಎಂದು ಹನುಮನಿಗೆ ಸುಗ್ರೀವ ಹೇಳುತ್ತಿದ್ದ? ಕಿಷ್ಕಿಂಧೆಯೇ ಬೇರೆ, ಅಂಜನಾದ್ರಿಯೇ ಬೇರೆ’ ಎಂದು ಶರ್ಮಾ ವಾದಿಸಿದರು.

‘ಹಾಗೆಯೇ ಜಾರ್ಖಂಡ, ಗುಜರಾತ್‌, ಹರಾರ‍ಯಣದಲ್ಲಿ ಆಂಜನೇಯನ ಜನ್ಮಸ್ಥಳವಿದೆ ಎಂಬುದು ಕೂಡ ನಿಜವಲ್ಲ’ ಎಂದು ಮುರಳೀಧರ ಶರ್ಮಾ ಹೇಳಿದರು.

ತಮಿಳುನಾಡಿನ ರಾಜ್ಯಪಾಲ ಭಂವರಿಲಾಲ್‌ ಪುರೋಹಿತ್‌ ರಾಮ ನವಮಿಯ ದಿನ ತಿಮ್ಮಪ್ಪನ ದರ್ಶನಕ್ಕೆಂದು ಆಗಮಿಸಿದವರು ಈ ಸಮಾರಂಭಕ್ಕೂ ಆಗಮಿಸಿ ಉಪಸ್ಥಿತರಿದ್ದರು. ಜೊತೆಗೆ ಆಂಜನೇಯನ ಜನ್ಮಸ್ಥಳದ ಶೋಧನೆಗೆ ತಜ್ಞರ ಸಮಿತಿಯನ್ನು ರಚಿಸಿದ ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಡಾ| ಕೆ.ಎಸ್‌.ಜವಾಹರ ರೆಡ್ಡಿ ಹಾಜರಿದ್ದರು.

ಟಿಟಿಡಿ ಪ್ರಕಾರ ಯಾವುದು ಜನ್ಮಸ್ಥಾನ?

ತಿರುಮಲದ ತಿಮ್ಮಪ್ಪನ ದೇವಸ್ಥಾನದಿಂದ 5 ಕಿ.ಮೀ. ದೂರದಲ್ಲಿರುವ ವೆಂಕಟಾಚಲದಲ್ಲಿ ಆಕಾಶಗಂಗಾ ಎಂಬ ಜಲಪಾತವಿದೆ. ಅದರ ಸಮೀಪ ಜಾಪಳಿ ತೀರ್ಥವಿದೆ. ಅಲ್ಲೇ ಆಂಜನೇಯ ಜನಿಸಿದ್ದಾನೆಂದು ಟಿಟಿಡಿ ‘ದಾಖಲೆ’ ಬಿಡುಗಡೆ ಮಾಡಿದೆ.

ಹನುಮ ಜನ್ಮಸ್ಥಳದ ಆಧಾರ ಎಲ್ಲಿವೆ?

- ವೆಂಕಟಾಚಲ ಮಾಹಾತ್ಮ್ಯಂ, ಸ್ಕಂದ ಪುರಾಣ, ವರಾಹ ಪುರಾಣ, ಬ್ರಹ್ಮಾಂಡ ಪುರಾಣ, ಕಂಬ ರಾಮಾಯಣ, ಸಂಕೀರ್ತನದ ಶ್ಲೋಕ, ಶಿಲಾಶಾಸನ, ಭೌಗೋಳಿಕ ಸಾಕ್ಷ್ಯ

ತಿರುಮಲವೇ ಜನ್ಮಸ್ಥಳ ಎಂಬುದಕ್ಕೆ ವಾದವೇನು?

- ಅಂಜನಾದೇವಿಗೆ ಜನಿಸಿದವ ಆಂಜನೇಯ, ಆ ಸ್ಥಳವೇ ಅಂಜನಾದ್ರಿ

- ತಿರುಮಲದ ವೆಂಕಟಾಚಲವೇ ಅಂಜನಾದ್ರಿ

- ಸೂರ್ಯನನ್ನು ಕೆಂಪು ಹಣ್ಣೆಂದು ತಿನ್ನಲು ಆತ ಜಿಗಿದಿದ್ದು ವೆಂಕಟಗಿರಿಯಿಂದ

- ಆಂಜನೇಯನ ಮೇಲೆ ದೇವರು ದಾಳಿ ಮಾಡಿದಾಗ ಅಂಜನಾ ದೇವಿಗೆ ಅಳು

- ಅಂಜನಾದೇವಿಯ ರಮಿಸಲು ದೇವರು ಧರೆಗಿಳಿದದ್ದು ವೆಂಕಟಾಚಲದ ಮೇಲೆ

- ಕಿಷ್ಕಿಂಧೆಯಲ್ಲಿದ್ದ ಸುಗ್ರೀವ ಅಂಜನಾದ್ರಿಯಿಂದ ವಾನರರ ಕರೆತರಲು ಹನುಮನಿಗೆ ಹೇಳಿದ

- ಕಿಷ್ಕಿಂಧೆಯೇ ಅಂಜನಾದ್ರಿಯಾದರೆ ಹೀಗೇಕೆ ‘ಅಂಜನಾದ್ರಿಯಿಂದ ವಾನರರ ಕರೆತರು’ ಎನ್ನುತ್ತಿದ್ದ?

- ಹಾಗಾಗಿ ಕಿಷ್ಕಿಂಧೆಯೇ ಬೇರೆ, ಅಂಜನಾದ್ರಿಯೇ ಬೇರೆ