ಸಾಮಾಜಿಕ ಜಾಲತಾಣಗಳಲ್ಲಿ ಗಣ್ಯ ವ್ಯಕ್ತಿಯ ಸೋಗಿನಲ್ಲಿ ಮಹಿಳೆಯರಿಗೆ ಗಾಳ ಹಾಕಿ, ಲೈಂಗಿಕವಾಗಿ ಬಳಸಿಕೊಂಡು ವಿಡಿಯೋ ಚಿತ್ರೀಕರಿಸಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಆರೋಪದ ಮೇಲೆ ಬೆಂಗಳೂರು ದಕ್ಷಿಣ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯ,ಕಿರುತೆರೆ ನಟ ಡಾ.ಹನಿಯೂರು ಚಂದ್ರೇಗೌಡನನ್ನು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು(ಮೇ.2): ಸಾಮಾಜಿಕ ಜಾಲತಾಣಗಳಲ್ಲಿ ತಾನೊಬ್ಬ ಗಣ್ಯ ವ್ಯಕ್ತಿ ಸೋಗಿನಲ್ಲಿ ಮಹಿಳೆಯರಿಗೆ ಗಾಳ ಹಾಕಿ ಬಳಿಕ ಅವರನ್ನು ಲೈಂಗಿಕವಾಗಿ ಬಳಸಿದ ವಿಡಿಯೋ ಚಿತ್ರೀಕರಿಸಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಬೆಂಗಳೂರು ದಕ್ಷಿಣ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಹಾಗೂ ಕಿರುತೆರೆ ನಟನೊಬ್ಬನನ್ನು ರಾಜರಾಜೇಶ್ವರಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

Add Asianetnews Kannada as a Preferred SourcegooglePreferred

ಚನ್ನಪಟ್ಟಣ ತಾಲೂಕಿನ ಡಾ.ಹನಿಯೂರು ಚಂದ್ರೇಗೌಡ ಬಂಧಿತನಾಗಿದ್ದು, ಆತನ ಮೊಬೈಲ್‌ನಲ್ಲಿ ಸುಮಾರು 12ಕ್ಕೂ ಹೆಚ್ಚಿನ ಮಹಿಳೆಯರ ಜತೆ ಕಳೆದ ಖಾಸಗಿ ವಿಡಿಯೋಗಳು ಪತ್ತೆಯಾಗಿವೆ.

ಇತ್ತೀಚಿಗೆ ವಿವಾಹವಾಗುವುದಾಗಿ ನಂಬಿಸಿ ವಂಚಿಸಿದ ಬಗ್ಗೆ ಮಹಿಳಾ ಮೇಕಪ್ ಆರ್ಟಿಸ್ಟ್ ವೊಬ್ಬರು ನೀಡಿದ ದೂರಿನ ಮೇರೆಗೆ ಪೊಲೀಸರು ತನಿಖೆಗಿಳಿದು ಆರೋಪಿಯನ್ನು ಬಂಧಿಸಿದ್ದಾರೆ.

ನಾನಾ ವೇಷದ ಚಂದ್ರೇಗೌಡ

ಫೇಸ್‌ಬುಕ್‌ ಹಾಗೂ ಇನ್‌ಸ್ಟಾಗ್ರಾಂ ತಾಣಗಳಲ್ಲಿ ಕಿರುತೆರೆ ನಟ, ಪೊಲೀಸ್ ಅಧಿಕಾರಿ, ರಾಜಕಾರಣಿ ಹಾಗೂ ಸಾಮಾಜಿಕ ಕಾರ್ಯಕರ್ತ ಹೀಗೆ ನಾನಾ ಛದ್ಮವೇಷ ಧರಿಸಿ ಮಹಿಳೆಯರಿಗೆ ಚಂದ್ರೇಗೌಡ ಗಾಳ ಹಾಕುತ್ತಿದ್ದ. ತನ್ನ ಬಲೆಗೆ ಬೀಳುವ ಮಹಿಳೆಯರಿಗೆ ನಾಜೂಕಿನ ಮಾತುಗಳ ಮೂಲಕ ಆತ ಮರಳು ಮಾಡುತ್ತಿದ್ದ. ಅದರಲ್ಲೂ ಏಕಾಂಗಿಯಾಗಿ ನೆಲೆಸಿರುವ ಸ್ತ್ರೀಯರೇ ಆತನ ಟಾರ್ಗೆಟ್ ಆಗಿದ್ದರು. ಈ ಮೋಡಿಗೆ ಬಿದ್ದವ ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಂಡು ಚಂದ್ರೇಗೌಡ ವಂಚಿಸುತ್ತಿದ್ದ. ಅದೇ ರೀತಿ ಇತ್ತೀಚಿಗೆ ಮೇಕಪ್ ಅರ್ಟಿಸ್‌ ಗೆ ವಿವಾಹವಾಗುವುದಾಗಿ ನಂಬಿಸಿ ಮೋಸ ಮಾಡಿದ್ದ.

5 ವರ್ಷಗಳ ಹಿಂದೆ ಸಂತ್ರಸ್ತೆಗೆ ಚಂದ್ರೇಗೌಡ ಪರಿಚಯವಾಗಿದ್ದ. ತಾನು ಸಿನಿಮಾ ರಂಗದಲ್ಲಿ ಮೇಕಪ್‌ ಕೆಲಸ ಕೊಡಿಸುವ ಭರವಸೆ ನೀಡಿ ಸಂತ್ರಸ್ತೆಯ ವಿಶ್ವಾಸಗಳಿಸಿದ್ದ. ದಿನ ಕಳೆದಂತೆ ಪರಸ್ಪರ ಆತ್ಮೀಯ ಒಡನಾಟ ಬೆಳದಿದೆ. ಈ ಗೆಳೆತನದಲ್ಲಿ ಆಗಾಗ್ಗೆ ಮೇಕಪ್ ಆರ್ಟಿಸ್ ಮನೆಗೆ ಭೇಟಿ ನೀಡಿ ಆತ ಏಕಾಂತ ಕಳೆಯುತ್ತಿದ್ದ. ಈ ವೇಳೆ ತನ್ನ ಮೊಬೈಲ್‌ನಲ್ಲಿ ಫೋಟೋ ಹಾಗೂ ವಿಡಿಯೋ ಚಿತ್ರೀಕಿಸಿಕೊಂಡಿದ್ದ. ಬಳಿಕ ಈ ವಿಡಿಯೋ ಮುಂದಿಟ್ಟು ಸಂತ್ರಸ್ತಗೆ ಬೆದರಿಸಿ 5 ಲಕ್ಷ ರು.ಸುಲಿಗೆ ಮಾಡಿದ್ದ. ಪದೇ ಪದೇ ಹಣಕ್ಕೆ ಆತ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ. ಈ ಕಾಟ ಸಹಿಸಲಾರದೆ ಕೊನೆಗೆ ಪೊಲೀಸರಿಗೆ ಸಂತ್ರಸ್ತೆ ದೂರು ಕೊಟ್ಟಿದ್ದಾಳೆ.

ಎಸ್‌ಪಿ ಎಂದು ಬಿಲ್ಡಪ್‌:

ತಾನು ಎಸ್‌ಪಿ ಎಂದು ನಕಲಿ ಗುರುತಿನ ಪತ್ರ ಬಳಸಿಕೊಂಡು ಮೈಸೂರು-ಬೆಂಗಳೂರು ಹೆದ್ದಾರಿಯ ಟೋಲ್‌ಗಳಲ್ಲಿ ಆತ ಶುಲ್ಕ ಪಾವತಿಸದೆ ಓಡಾಡುತ್ತಿದ್ದ. ಆತನ ಬಳಿಕ ನಕಲಿ ಪೊಲೀಸ್ ಅಧಿಕಾರಿ ಹಾಗೂ ಕಲ್ಯಾಣ ಸಮಿತಿ ನ್ಯಾಯಾಲಯಧೀಶರ ಹೆಸರಿನ ಗುರುತಿನ ಪತ್ರಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಸಂತ್ರಸ್ತೆಯರು ದೂರು ಕೊಡಲು ಪೊಲೀಸರ ಮನವಿ

ಇದುವರೆಗೆ ಚಂದ್ರೇಗೌಡನ ವಿರುದ್ಧ ವಂಚನೆ ಬಗ್ಗೆ ಓರ್ವ ಸಂತ್ರಸ್ತೆಯಿಂದ ದೂರು ದಾಖಲಾಗಿದೆ. ಆದರೆ ಆತನ ಮೊಬೈಲ್‌ನಲ್ಲಿ 12ಕ್ಕೂ ಹೆಚ್ಚಿನ ಮಹಿಳೆಯರ ಖಾಸಗಿ ವಿಡಿಯೋಗಳು ಪತ್ತೆಯಾಗಿವೆ. ಈತನಿಂದ ಮೋಸಗೊಳಗದವರು ದೂರು ನೀಡಿದರೆ ತನಿಖೆ ನಡೆಸುತ್ತೇವೆ. ಎಂದು ಪೊಲೀಸರು ಮನವಿ ಮಾಡಿದ್ದಾರೆ.

ಸುಲಿಗೆಕೋರರು ಚಂದ್ರೇಗೌಡ

ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಕಾರ್ಯಕರ್ತನ ಸೋಗಿನಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಸಹ ಬೆದರಿಸಿ ಚಂದ್ರೇಗೌಡ ಸುಲಿಗೆ ಮಾಡಿರುವ ಆರೋಪ ಕೇಳಿ ಬಂದಿದ್ದವು. ಕೆಲ ತಿಂಗಳ ಹಿಂದೆ ಆತನ ವಿರುದ್ಧ ರಾಜ್ಯ ಎನ್‌ಎಸ್‌ಎಸ್‌ ಸಂಸ್ಥೆಯ ಅಧಿಕಾರಿ ಡಾ.ಎನ್‌ ಪ್ರತಾಪ್‌ ಲಿಂಗಯ್ಯ ಅವರಿಗೆ ಬೆದರಿಸಿ 15 ಲಕ್ಷ ರು ಹಣ ಸುಲಿಗೆ ಯತ್ನಿಸಿದ ಆರೋಪದ ಮೇರೆಗೆ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ಈ ಪ್ರಕರಣದ ತನಿಖೆಗೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದು ಚಂದ್ರೇಗೌಡ ಬಂಧನದಿಂದ ಪರಾಗಿದ್ದ.

ಕಿರುತೆರೆಯಲ್ಲಿ ನಟನೆ

ಕಿರುತೆರೆಯ ಕೆಲ ಧಾರವಾಹಿಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಆತ ನಟಿಸಿದ್ದ. ಹೀಗಾಗಿ ಮಹಿಳೆಯರನ್ನು ತನ್ನ ಬಲೆಗೆ ಬೀಳಿಸಿಕೊಳ್ಳಲು ಕಿರುತೆರೆ ಕಲಾವಿದ ಪಾತ್ರವನ್ನು ಆತ ಬಳಸಿದ್ದ ಎಂದು ತಿಳಿದು ಬಂದಿದೆ.

ಚುನಾವಣೆಗೆ ಸ್ಪರ್ಧೆ ಮಾಡಿದ್ದ ಚಂದ್ರ

ಚನ್ನಪಟ್ಟಣ ತಾಲೂಕಿನ ಹನಿಯೂರು ಗ್ರಾಮದ ಚಂದ್ರೇಗೌಡ, ಸ್ಥಳೀಯವಾಗಿ ಸಾಮಾಜಿಕ ಕಾರ್ಯಕರ್ತ ಸೋಗಿನಲ್ಲಿ ಸಕ್ರಿಯವಾಗಿದ್ದ. ಇದೇ ಉಮ್ಮೇದಿನಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಮಾತ್ರವಲ್ಲದ ಚನ್ನಪಟ್ಟಣ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಗೆ ಆತ ಸ್ಪರ್ಧಿಸಿದ್ದ. ಆದರೆ ಠೇವಣಿ ಕೂಡ ಸಿಗದೆ ಚಂದ್ರೇಗೌಡ ಸೋತು ಸುಣ್ಣವಾಗಿದ್ದ. ತನ್ನ ‘ಸಂಪರ್ಕ’ ಜಾಲ ಬಳಸಿ ಬೆಂಗಳೂರು ದಕ್ಷಿಣ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಆತ ನಾಮನಿರ್ದೇಶನ ಸದಸ್ಯನಾಗಿದ್ದ ಎಂದು ಮೂಲಗಳು ಹೇಳಿವೆ