ದಿವ್ಯಶಕ್ತಿ ಮತ್ತು ಪವಾಡದ ಹೆಸರಿನಲ್ಲಿ ನಕಲಿ ಬಾಬಾಗಳು ಮಹಿಳೆಯರನ್ನು ಲೈಂಗಿಕವಾಗಿ ಶೋಷಿಸುತ್ತಿರುವ ಕರಾಳ ಸತ್ಯವನ್ನು ಈ ಲೇಖನ ಅನಾವರಣಗೊಳಿಸುತ್ತದೆ. ಇಬ್ಬರು ಸಂತ್ರಸ್ತೆಯರ ಭಯಾನಕ ಅನುಭವವನ್ನು ಸುದ್ದಿವಾಹಿನಿಯೊಂದಿಗೆ ಹಂಚಿಕೊಂಡಿದ್ದಾರೆ.

ನವದೆಹಲಿ (ಮಾ.31): ದಿವ್ಯಶಕ್ತಿ ಮತ್ತು ಪವಾಡದ ಹೆಸರಿನಲ್ಲಿ ಮಹಿಳೆಯರನ್ನು ಲೈಂಗಿಕವಾಗಿ ಶೋಷಿಸುವ ನಕಲಿ ಬಾಬಾಗಳ ಕರಾಳ ಮುಖ ಮತ್ತೊಮ್ಮೆ ಅನಾವರಣಗೊಂಡಿದೆ. ಪೋಷಕರ ಮೂಢನಂಬಿಕೆ ಮತ್ತು ಶೋಷಣೆಯ ನಂತರದ 'ಮೌನ' ಹೇಗೆ ಇಂತಹ ನರಹಂತಕ ಕಾಮುಕರನ್ನು ರಕ್ಷಿಸುತ್ತದೆ ಎಂಬುದಕ್ಕೆ ಇಂಡಿಯಾ ಟುಡೇ ಡಿಜಿಟಲ್‌ಗೆ ಇಬ್ಬರು ಮಹಿಳೆಯರು ನೀಡಿದ ಹೇಳಿಕೆಗಳೇ ಸಾಕ್ಷಿ. ನಾಸಿಕ್‌ನ ಅಶೋಕ್ ಖರಾತ್‌ನಂತಹ ಕ್ರೂರಿಗಳು ಸಮಾಜದಲ್ಲಿ ಬೆಳೆಯಲು ಈ ಮೂಢನಂಬಿಕೆಯೇ ಅಡಿಪಾಯವಾಗಿದೆ.

"ಕುರ್ತಾ ಮೇಲೆ ಎತ್ತಲು ಹೇಳಿ ಎದೆ ಹಿಚುಕಿದ ಬಾಬಾ!"

ನಂಬಿಕೆ ಮತ್ತು ಮೂರ್ಖತನದ ನಡುವೆ ಒಂದು ತೆಳುವಾದ ಗೆರೆಯಿದೆ. ಭಾರತದಲ್ಲಿ ಇಂತಹ ನಕಲಿ ಬಾಬಾಗಳಿಗೆ ಕೊರತೆಯಿಲ್ಲ. ಇತ್ತೀಚೆಗೆ ನಾಸಿಕ್‌ನ ಅಶೋಕ್ ಖರಾತ್ ಎಂಬಾತನ ಪ್ರಕರಣವು ಇಡೀ ದೇಶವನ್ನು ಬೆಚ್ಚಿಬೀಳಿಸಿದೆ. ಈತ ಮಹಿಳೆಯರ ಮೇಲೆ ಅ*ತ್ಯಾಚಾ*ರ ಎಸಗಿದ್ದಲ್ಲದೆ, ಗರ್ಭಿಣಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಗರ್ಭಪಾತಕ್ಕೆ ಬಲವಂತಪಡಿಸಿದ್ದಾನೆ. ಕೇವಲ ಐದೇ ದಿನಗಳಲ್ಲಿ ಈತನ ವಿರುದ್ಧ ಲೈಂಗಿಕ ಕಿರುಕುಳ, ಸುಲಿಗೆ ಮತ್ತು ಆಕ್ಷೇಪಾರ್ಹ ವಿಡಿಯೋ ಹಂಚಿಕೊಂಡ ಬಗ್ಗೆ 50ಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ.

ನೀರು (ಹೆಸರು ಬದಲಾಯಿಸಲಾಗಿದೆ) ಎಂಬಾಕೆಯ ಕರಾಳ ಅನುಭವ

ದೆಹಲಿಯ ಫ್ಲಾಟ್ ಒಂದರಲ್ಲಿ ಕೀರ್ತನೆ ನಡೆಸುತ್ತಿದ್ದ ಬಾಬಾ ಬಳಿ ನೀರು ಎಂಬಾಕೆಯನ್ನು ಆಕೆಯ ಪೋಷಕರೇ ಕಳುಹಿಸಿದ್ದರು. ವೈದ್ಯರಿಂದ ಗುಣಪಡಿಸಲಾಗದ ಕಾಯಿಲೆಗೆ ಈ ಬಾಬಾ ಪರಿಹಾರ ನೀಡುತ್ತಾನೆ ಎಂಬುದು ಪೋಷಕರ ನಂಬಿಕೆಯಾಗಿತ್ತು. "ಒಮ್ಮೆ ಆತ ನನ್ನನ್ನು ರಾಜಸ್ಥಾನದ ದೇವಸ್ಥಾನಕ್ಕೆ ಕರೆದುಕೊಂಡು ಹೋದ. ಅಲ್ಲಿ ರೂಮಿನೊಳಗೆ ಕುಳ್ಳಿರಿಸಿ, ಪಕ್ಕದಲ್ಲಿದ್ದ ಮಹಿಳೆಗೆ ಕುರ್ತಾ ಮೇಲೆ ಎತ್ತಲು ಹೇಳಿ ಆಕೆಯ ಸ್ತನ ಸ್ಪರ್ಶಿಸಿ ಜೋರಾಗಿ ಒತ್ತಿದ್ದ. ನಂತರ ಮಂತ್ರ ಪಠಿಸಲು ಶುರು ಮಾಡಿದ. ಇದನ್ನು ನೋಡಿ ನಾನು ಬೆಚ್ಚಿಬಿದ್ದೆ. ಮುಂದಿನ ಸರದಿ ನಂದೇ ಎಂದು ತಿಳಿದು ನಾನು ಅಲ್ಲಿಂದ ಹೇಗೋ ತಪ್ಪಿಸಿಕೊಂಡು ಬಂದೆ" ಎಂದು ನೀರು ನೆನಪಿಸಿಕೊಂಡಿದ್ದಾರೆ.

ಬಸ್‌ನಲ್ಲಿ ಪ್ರಯಾಣಿಸುವಾಗ ಆ ಬಾಬಾ ಹೇಳಿದ ಮಾತುಗಳು ಇನ್ನೂ ಭೀಕರವಾಗಿದ್ದವು: "ನಿನ್ನ ಮೇಲೆ ಕೆಟ್ಟ ಆತ್ಮವಿದೆ. ನಾನು ನಿನಗೆ ಚಿಕಿತ್ಸೆ ನೀಡಬೇಕು. ಮೊದಲು ಮೇಲ್ಭಾಗದ ದೇಹಕ್ಕೆ ಚಿಕಿತ್ಸೆ ನೀಡುತ್ತೇನೆ, ಅದು ಕೆಲಸ ಮಾಡದಿದ್ದರೆ ಕೆಳಭಾಗದ ದೇಹಕ್ಕೆ (ಗುಪ್ತಾಂಗಕ್ಕೆ) ಚಿಕಿತ್ಸೆ ನೀಡಬೇಕಾಗುತ್ತದೆ" ಎಂದು ಆತ ಮೊದಲೇ ಮಾನಸಿಕವಾಗಿ ಸಿದ್ಧಪಡಿಸಿದ್ದ ಎನ್ನುತ್ತಾರೆ ನೀರು. ಆ ಮಹಿಳೆ 8 ವರ್ಷಗಳಿಂದ ಮಗುವಿಲ್ಲದ ಕಾರಣ ಆ ಬಾಬಾನನ್ನು ಸಂಪೂರ್ಣ ನಂಬಿ ಬಟ್ಟೆ ಬಿಚ್ಚಲು ಹಿಂಜರಿಯುತ್ತಿರಲಿಲ್ಲ ಎಂಬುದು ನೀರು ಅವರಿಗೆ ಶಾಕ್ ನೀಡಿತ್ತು.

ಮನೆಗೆ ಬಂದು ತಾಯಿಗೆ ವಿಷಯ ತಿಳಿಸಿದರೂ ಪೋಷಕರು ಮೌನಕ್ಕೆ ಶರಣಾದರು. "ನನ್ನನ್ನು ರಕ್ಷಿಸಬೇಕಾದವರೇ ಸುಮ್ಮನಾದದ್ದು ನನಗೆ ಆಘಾತ ನೀಡಿತು. ಇಂದಿಗೂ ನನಗೆ ಪುರುಷರ ನಡುವೆ ಇರಲು ಭಯವಾಗುತ್ತದೆ" ಎನ್ನುತ್ತಾರೆ ನೀರು.

"ನನ್ನ ಗುಪ್ತಾಂಗ ಮುಟ್ಟಿ ಮಂತ್ರ ಹೇಳಿದ"

ದೀಪಿಕಾ (ಹೆಸರು ಬದಲಾಯಿಸಲಾಗಿದೆ) ಅವರ ಕಥೆ: 

ದಕ್ಷಿಣ ದೆಹಲಿಯ ಐಷಾರಾಮಿ ಫ್ಲಾಟ್‌ನಲ್ಲಿ ಒಬ್ಬ ಬಾಬಾ ಬಳಿ ದೀಪಿಕಾ ಅವರ ತಂದೆಯೇ ಆಕೆಯನ್ನು ಕರೆದುಕೊಂಡು ಹೋಗಿದ್ದರು. ಆರೋಗ್ಯದ ಸಮಸ್ಯೆಗಾಗಿ ಹೋದಾಗ, ಬಾಬಾ ಆಕೆಯನ್ನು ರೂಮಿನೊಳಗೆ ಕರೆದು ಮಲಗಲು ಹೇಳಿದ. ತಂದೆ ಹೊರಗೇ ಕುಳಿತಿದ್ದರು.

"ಆತ ನನ್ನ ಪ್ಯಾಂಟ್ ಕೆಳಕ್ಕೆ ಎಳೆದು ನನ್ನ ಗುಪ್ತಾಂಗವನ್ನು ಮುಟ್ಟುತ್ತಾ ಮಂತ್ರ ಹೇಳಲಾರಂಭಿಸಿದ. ನಾನು ಭಯದಿಂದ ಸ್ತಬ್ಧಳಾದೆ. ಆತ ಅನುಮತಿಯನ್ನೂ ಕೇಳಲಿಲ್ಲ, ವಿವರಣೆಯನ್ನೂ ನೀಡಲಿಲ್ಲ. ಎಲ್ಲೆಂದರಲ್ಲಿ ಮುಟ್ಟಿ ನಂತರ ಹೋಗಲು ಹೇಳಿದ. ಮತ್ತೆ ಅಲ್ಲಿಗೆ ಹೋಗಬಾರದೆಂದು ನಾನು ಗುಣಮುಖಳಾಗಿದ್ದೇನೆ ಎಂದು ಪೋಷಕರಿಗೆ ಸುಳ್ಳು ಹೇಳಿದೆ" ಎನ್ನುತ್ತಾರೆ ದೀಪಿಕಾ.

ತಂದೆ ಹೊರಗಡೆ ಕುಳಿತಿದ್ದರೂ ಒಳಗಡೆ ಮಗಳ ಮೇಲೆ ದೌರ್ಜನ್ಯ ಎಸಗುವ ಧೈರ್ಯ ಈ ಬಾಬಾಗಳಿಗೆ ಎಲ್ಲಿಂದ ಬರುತ್ತದೆ? ಪೋಷಕರ ಕುರುಡು ಭಕ್ತಿ ಮತ್ತು ಅವರು ತಮ್ಮನ್ನು ಪ್ರಶ್ನಿಸುವುದಿಲ್ಲ ಎಂಬ ಅಹಂಕಾರವೇ ಇವರ ಶಕ್ತಿ ಎನ್ನುವುದು ಇದರಿಂದ ಗೊತ್ತಾಗಿತ್ತದೆ.

ನಾಸಿಕ್ ಪ್ರಕರಣದ ಭೀಕರತೆ

ಪೊಲೀಸರ ಪ್ರಕಾರ, ಒಬ್ಬ ಸಂತ್ರಸ್ತೆ ಕಳೆದ ಮೂರು ವರ್ಷಗಳಿಂದ ಅಶೋಕ್ ಖರಾತ್‌ನಿಂದ ಲೈಂಗಿಕ ದೌರ್ಜನ್ಯ ಅನುಭವಿಸಿದ್ದಾಳೆ. ಆಕೆಗೆ ಮಾದಕ ದ್ರವ್ಯ ನೀಡಿ ನವೆಂಬರ್ 2022 ರಿಂದ ಡಿಸೆಂಬರ್ 2025 ರವರೆಗೆ ಸತತವಾಗಿ ಅ*ತ್ಯಾಚಾ*ರ ಎಸಗಲಾಗಿದೆ. ಧಾರ್ಮಿಕ ವಿಧಿವಿಧಾನ ಮತ್ತು ದೈವಿಕ ಶಕ್ತಿಯ ಹೆಸರಿನಲ್ಲಿ ಆಕೆಯನ್ನು ಮಾನಸಿಕವಾಗಿ ನಿಯಂತ್ರಿಸಲಾಗಿತ್ತು.

ಅಶೋಕ್ ಖರಾತ್ ಈಗ ಜೈಲಿನಲ್ಲಿದ್ದಾನೆ, ಆದರೆ ಇಂತಹ ನೂರಾರು ಬಾಬಾಗಳು ಇನ್ನೂ ಸಮಾಜದಲ್ಲಿ ಮುಕ್ತವಾಗಿ ಓಡಾಡುತ್ತಿದ್ದಾರೆ. ಭಕ್ತರು ಪ್ರಶ್ನಿಸುವುದನ್ನು ನಿಲ್ಲಿಸುವವರೆಗೂ ಇಂತಹ ಘಟನೆಗಳು ನಿಲ್ಲುವುದಿಲ್ಲ. ಇವರ ಅಸಲಿ ಶಕ್ತಿ ಇವರಲ್ಲಿಲ್ಲ, ಬದಲಾಗಿ ಇವರನ್ನು ಕುರುಡಾಗಿ ನಂಬುವ ಜನರಲ್ಲಿದೆ.