ಅಗಲಿದ ಪತಿ ಕನಸಿಗೆ ಜೀವ ತುಂಬಿದ ಸತಿ: ‘ಹಳಗನ್ನಡ ಅರ್ಥಕೋಶ’ ಪ್ರಕಟ
ಐ.ಎಂ. ಕೊಟ್ರಯ್ಯ ಹೆಸರು ಶೈಕ್ಷಣಿಕ ಕಾಳಜಿಯ ಕೃತಿಗಳ ಮೂಲಕ, ಬಹುಭಾಷಾ ನಿಘಂಟುಗಳ ಮೂಲಕ ಹಲವರಿಗೆ ಪರಿಚಿತ. ಬದುಕಿನುದ್ದಕ್ಕೂ ಪುಸ್ತಕಗಳನ್ನೇ ಪ್ರೀತಿಸಿದ, ಬರಹವನ್ನೇ ಉಸಿರಾಡಿದ ಕೊಟ್ರಯ್ಯ ಕನ್ನಡದ ಸಾಹಿತ್ಯ, ಶೈಕ್ಷಣಿಕ ವಲಯಕ್ಕೆ ಅಗತ್ಯವಿದ್ದ ದೊಡ್ಡ ಮಟ್ಟದ ‘ಹಳಗನ್ನಡ ಅರ್ಥಕೋಶ’ವೊಂದನ್ನು ಸಂಪಾದಿಸುವ ಕನಸು ಕಂಡವರು. ಇಹಲೋಕ ತ್ಯಜಿಸಿದ ಅವರ ಕನಸನ್ನು ಅವರ ಪತ್ನಿ ನನಸಾಗಿಸಿದ್ದಾರೆ.
ಗಣೇಶ್ ಕಾಮತ್
ಮೂಡುಬಿದಿರೆ (ಜೂ.17): ಐ.ಎಂ. ಕೊಟ್ರಯ್ಯ ಹೆಸರು ಶೈಕ್ಷಣಿಕ ಕಾಳಜಿಯ ಕೃತಿಗಳ ಮೂಲಕ, ಬಹುಭಾಷಾ ನಿಘಂಟುಗಳ ಮೂಲಕ ಹಲವರಿಗೆ ಪರಿಚಿತ. ಬದುಕಿನುದ್ದಕ್ಕೂ ಪುಸ್ತಕಗಳನ್ನೇ ಪ್ರೀತಿಸಿದ, ಬರಹವನ್ನೇ ಉಸಿರಾಡಿದ ಕೊಟ್ರಯ್ಯ ಕನ್ನಡದ ಸಾಹಿತ್ಯ,(Kannada literature) ಶೈಕ್ಷಣಿಕ ವಲಯಕ್ಕೆ ಅಗತ್ಯವಿದ್ದ ದೊಡ್ಡ ಮಟ್ಟದ ‘ಹಳಗನ್ನಡ ಅರ್ಥಕೋಶ’ವೊಂದನ್ನು ಸಂಪಾದಿಸುವ ಕನಸು ಕಂಡವರು. ಇಹಲೋಕ ತ್ಯಜಿಸಿದ ಅವರ ಕನಸನ್ನು ಅವರ ಪತ್ನಿ ನನಸಾಗಿಸಿದ್ದಾರೆ.
ತನ್ನ ಬಹುನಿರೀಕ್ಷೆಯ ಈ ಅರ್ಥಕೋಶ ಬಿಡುಗಡೆಗೆ ಅದ್ಯಾಕೋ ಕಾಲ ಕೂಡಿ ಬರುವ ಮೊದಲೇ ಕೊಟ್ರಯ್ಯ ವಿಧಿವಶರಾದರು. ಆದರೆ ತನ್ನ ಪತಿಯ ಪರಿಶ್ರಮ, ಕನಸು, ನಿರೀಕ್ಷೆಯ ಅರಿವಿದ್ದ ಅವರ ಪತ್ನಿ ಚಂದ್ರಕಲಾ(Chandrakala) 850 ಪುಟಗಳ ಈ ಬಹೃತ್ ಕೃತಿ ಪ್ರಕಟಣೆಯ ಬೆನ್ನಟ್ಟಿಯಶಸ್ವಿಯಾಗಿದ್ದಾರೆ. ಹಂಪಿಯ ಕನ್ನಡ ವಿ.ವಿ.ಯ ಪ್ರಸಾರಾಂಗ ಇದೀಗ ‘ಹಳಗನ್ನಡ ಅರ್ಥಕೋಶ’ವನ್ನು ಪ್ರಕಟಿಸಿದೆ.
ಕನ್ನಡ ವಿವಿ ಪಿಎಚ್‌ಡಿ ಪರೀಕ್ಷೆಗೆ ಅಭ್ಯರ್ಥಿಗಳ ನಿರಾಸಕ್ತಿ: ಶೇ. 54ರಷ್ಟು ಮಾತ್ರ ಹಾಜರಾತಿ!
ಪುಸ್ತಕ ಪ್ರಿಯ:
ಸಂಪಾದನೆಯ ಬಹುಪಾಲನ್ನು ಪುಸ್ತಕ ಖರೀದಿಗೇ ಸುರಿದ ಮೂಲತಃ ದಾವಣಗೆರೆಯ ಇಸಾಮುದ್ರಮಠ ಕೊಟ್ರಯ್ಯ ಹಳೆಗನ್ನಡ, ತುಳು, ಇಂಗ್ಲಿಷ್, ಸಂಸ್ಕೃತ ಹೀಗೆ 11ಕ್ಕೂ ಅಧಿಕ ಬಹುಭಾಷಾ ನಿಘಂಟುಕಾರರಾಗಿಯೇ ಪರಿಚಿತರು. ಶೈಕ್ಷಣಿಕ ಕಾಳಜಿಯ 25 ಕ್ಕೂ ಅಧಿಕ ಕೃತಿಗಳ ಕರ್ತೃ. ಮೂರು ದಶಕಗಳ ಸೇವೆಯಲ್ಲಿ ತಾನಿದ್ದ ಮೂಡುಬಿದಿರೆಯ ಶ್ರೀ ಧವಲಾ ಕಾಲೇಜಿನ ಗ್ರಂಥಾಲಯ ಸಹಾಯಕ ಹುದ್ದೆಯಿಂದಲೂ ಸ್ವಯಂ ನಿವೃತ್ತಿ ಪಡೆದು ಮತ್ತಷ್ಟುಬರೆಯತೊಡಗಿದ್ದರು. ತುಳುನಾಡಿಗೆ ಬಂದು ಕಲಿತ ತುಳು ಭಾಷೆಯನ್ನೂ ಅರಗಿಸಿಕೊಂಡು ತುಳು ನಿಘಂಟನ್ನೇ ಸಂಪಾದಿಸಿ ತುಳು ಗಾದೆಗಳ ಸಂಗ್ರಹ ಕೃತಿಯನ್ನೂ ಬರೆದ ಸಾಧಕ.
ಅರ್ಥಕೋಶದ ಕನಸು!
10ನೇ ಶತಮಾನದ ಕನ್ನಡದ ಆದಿಕವಿ ಪಂಪನಿಂದ 17ನೇ ಶತಮಾನದ ಷಡಕ್ಷರ ಕವಿವರೆಗಿನ ಗದ್ಯ, ಕಾವ್ಯಗಳನ್ನು ಪರಿಶೀಲಿಸಿ ಅಲ್ಲಿ ಉಲ್ಲೇಖಿತ ಪದಗಳಿಗೆ ಅರ್ಥಕೋಶ ರೂಪಿಸುವುದು ಸುಲಭವಲ್ಲ. ಈ ಯೋಜನೆ ಹೊಳೆದ ಬಳಿಕ ಬರೋಬ್ಬರಿ 50 ಸಾವಿರ ಪದಗಳಿಗೆ ಅರ್ಥ ಶೋಧಿಸಿ ಅಕಾರಾದಿಯಾಗಿ ಸಂಕಲಿಸಿದರು. ಹಂಪಿ ವಿ.ವಿ. ಪ್ರಸಾರಾಂಗ ಇದರ ಪ್ರಕಟಣೆಗೂ ಮುಂದಾಯಿತು. ಐದು ವರ್ಷಗಳ ಹಿಂದೆ ಕೆಲಸ ಮುಗಿಸಿ ಕೊಟ್ಟರೂ ಅರ್ಥಕೋಶ ಪ್ರಕಟಣೆ ವಿವಿಧ ಕಾರಣಗಳಿಂದಾಗಿ ವಿಳಂಬವಾಗುತ್ತಲೇ ಹೋಯಿತು. ಈ ನಡುವೆ, ಎರಡು ವರ್ಷಗಳ ಹಿಂದೆ ಕೊಟ್ರಯ್ಯ ವಿಧಿವಶರಾದರು.
ಆದರೆ ಕೊಟ್ರಯ್ಯ ಅವರ ಕನಸು, ಅದಕ್ಕಾಗಿ ಅವರು ಪಟ್ಟಪರಿಶ್ರಮ, ಇಟ್ಟುಕೊಂಡ ನಿರೀಕ್ಷೆ ಇವೆಲ್ಲದರ ಅರಿವಿದ್ದ ಅವರ ಪತ್ನಿ ಚಂದ್ರಕಲಾ ಪತಿಯ ಅಗಲಿಕೆಯ ನೋವಿನ ನಡುವೆಯೂ ಅರ್ಥಕೋಶವನ್ನು ಮರೆಯಲಿಲ್ಲ. ವಿ.ವಿ.ಯ ಪ್ರಸಾರಾಂಗದ ಬೆನ್ನು ಬಿದ್ದು ಇದ್ದ ಅಡೆತಡೆ ನಿವಾರಿಸಿಕೊಳ್ಳಲು ಮುಂದಾದರು. ‘ಅಸಾಧ್ಯವೆಂದಾರೆ ಹಸ್ತಪ್ರತಿ ಕೊಡಿ ನಾವೇ ಹಣ ಹೊಂದಿಸಿ ಪ್ರಕಟಿಸುತ್ತೇವೆ’ ಎನ್ನುವುದಕ್ಕೂ ಹಿಂಜರಿಯಲಿಲ್ಲ. ಅದಾಗಲೇ ನಿರ್ಧರಿಸಿದಂತೆ ವಿ.ವಿ.ಯ ಪ್ರಸಾರಾಂಗ ಕೊನೆಗೂ ಈ ಮಹತ್ವದ ಅರ್ಥಕೋಶವನ್ನೀಗ ಪ್ರಕಟಿಸಿದೆ. ಡಾ. ಮಲ್ಲಿಕಾ ಘಂಟಿ ಕುಲಪತಿಗಳಾಗಿದ್ದಾಗ ಆರಂಭವಾಗಿದ್ದ ಈ ಪ್ರಕಟಣೆಯ ಪ್ರಕ್ರಿಯೆ ಕುಲಪತಿ ಡಾ.ಸ.ಚಿ.ರಮೇಶ ಅವಧಿಯಲ್ಲೀಗ ಪೂರ್ಣಗೊಂಡು ಕೃತಿ ಲೋಕಾರ್ಪಣೆಯಾಗಿದೆ.
ಕೊನೆಗೂ ನನ್ನ ಪತಿಯವರ ಕನಸು ನನಸಾಗಿಸಿದ ತೃಪ್ತಿ ಇದೆ. ಈಗ ಅವರಿದ್ದಿದ್ದರೆ ಅದರ ಸಂಭ್ರಮವೇ ಬೇರೆಯಾಗಿರುತ್ತಿತ್ತು. ಆದರೆ ಈ ಮೂಲಕ ಅವರ ಆತ್ಮ ಸದ್ಗತಿಗಾಗಿ ಕೃತಿ ನಮನ ಸಲ್ಲಿಸಿದ ಧನ್ಯತೆಯಿದೆ. ಪ್ರಸಾರಾಂಗದ ವಿಶ್ರಾಂತ ಸಹಾಯಕ ನಿರ್ದೇಶಕ ಸಿ.ಸಿ.ಪೂವಯ್ಯ ಸಹಕಾರ ಸ್ಮರಣಾರ್ಹ.
-ಚಂದ್ರಕಲಾ ಎಸ್.ಎಸ್., ಕೊಟ್ರಯ್ಯ ಪತ್ನಿ, ವಿಶ್ರಾಂತ ಶಿಕ್ಷಕಿ.
ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಪಿಹೆಚ್‌ಡಿ ಪ್ರವೇಶ ಪರೀಕ್ಷೆ ಬರೆದ ನಟಿ ಪವಿತ್ರಾ ಲೋಕೇಶ್!
ಕನ್ನಡ ಸಾಹಿತ್ಯಲೋಕದಲ್ಲಿ ಹಳಗನ್ನಡ ಅರ್ಥಕೋಶದಂತಹ ಕೆಲಸಗಳು ವಿರಳ. ಅದರಲ್ಲೂ ಹಂಪಿ ವಿ.ವಿ ಇಂತಹದ್ದೊಂದು ಸಾಹಸಕ್ಕೆ ಕೈಹಾಕಿರುವುದು ಇದೇ ಮೊದಲು. ಈ ಅರ್ಥಕೋಶ ರೂಪಿಸುವಲ್ಲಿ ಕೊಟ್ರಯ್ಯ ಅವರ ಆಸಕ್ತಿ, ಪರಿಶ್ರಮ, ಕೊಡುಗೆ ಏಕವ್ಯಕ್ತಿ ಸಾಹಸ ಅನನ್ಯ. ಪತ್ರ ವ್ಯವಹಾರ ದೂರವಾಣಿಯಲ್ಲೇ ಸಂಪರ್ಕದಲ್ಲಿದ್ದ ನಾವು ಈ ಅವಧಿಯಲ್ಲಿ ಪರಸ್ಪರ ಭೇಟಿಯಾಗಿದ್ದೇ ಇಲ್ಲ. ಈಗ ಅವರಿಲ್ಲ ಎನ್ನುವ ನೋವಿನ ನಡುವೆಯೂ ಅರ್ಥಕೋಶದಲ್ಲೇ ಅವರನ್ನು ಕಾಣುತ್ತಿದ್ದೇವೆ.
- ಸಿ.ಸಿ.ಪೂವಯ್ಯ , ಹಂಪಿ ವಿ.ವಿ. ಪ್ರಸಾರಾಂಗದ ವಿಶ್ರಾಂತ ಸಹಾಯಕ ನಿರ್ದೇಶಕ.