ಕನ್ನಡ ವಿವಿ ಪಿಎಚ್‌ಡಿ ಪರೀಕ್ಷೆಗೆ ಅಭ್ಯರ್ಥಿಗಳ ನಿರಾಸಕ್ತಿ: ಶೇ. 54ರಷ್ಟು ಮಾತ್ರ ಹಾಜರಾತಿ!

ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಯ ಬೆಳವಣಿಗೆಗಾಗಿ ಜನ್ಮತಳೆದಿರುವ ಕನ್ನಡ ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ಸಂಶೋಧನೆಗೆ ಪ್ರವೇಶ ಬಯಸಿದ್ದ ಅಭ್ಯರ್ಥಿಗಳೇ ಪ್ರವೇಶ ಪರೀಕ್ಷೆಯಿಂದ ದೂರ ಉಳಿದಿದ್ದಾರೆ. 

Apathy of candidates for Kannada University PhD exam gvd

ಕೃಷ್ಣ ಎನ್‌. ಲಮಾಣಿ

ಹೊಸಪೇಟೆ (ಜೂ.02): ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಯ ಬೆಳವಣಿಗೆಗಾಗಿ ಜನ್ಮತಳೆದಿರುವ ಕನ್ನಡ ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ಸಂಶೋಧನೆಗೆ ಪ್ರವೇಶ ಬಯಸಿದ್ದ ಅಭ್ಯರ್ಥಿಗಳೇ ಪ್ರವೇಶ ಪರೀಕ್ಷೆಯಿಂದ ದೂರ ಉಳಿದಿದ್ದಾರೆ. ಬರೀ ಶೇ. 54ರಷ್ಟುಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದು, ಇದು ಹೊಸ ಚರ್ಚೆಯನ್ನು ಹುಟ್ಟು ಹಾಕಿದೆ. ಈ ಬಾರಿ ಪಿಎಚ್‌ಡಿ ಪ್ರವೇಶ ಪರೀಕ್ಷೆ ಆಯೋಜಿಸುವಲ್ಲಿ ವಿಳಂಬ ಮಾಡಿದ್ದರಿಂದ ಅಭ್ಯರ್ಥಿಗಳಿಂದ ನಿರಾಸಕ್ತಿ ವ್ಯಕ್ತವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಕನ್ನಡ ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ಸೀಟು ಪಡೆಯಲು ಈ ಹಿಂದೆ ಕ್ಯೂ ನಿಲ್ಲುತ್ತಿದ್ದರು. ಈಗ ಪ್ರವೇಶ ಪರೀಕ್ಷೆ ಬರೆಯಲು ಕೂಡ ಅಭ್ಯರ್ಥಿಗಳು ಹಿಂದೇಟು ಹಾಕುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.

805 ಅಭ್ಯರ್ಥಿಗಳು ಗೈರು: ಕನ್ನಡ ವಿಶ್ವವಿದ್ಯಾಲಯದಲ್ಲಿ ಒಟ್ಟು ನಾಲ್ಕು ನಿಕಾಯಗಳು ಕಾರ್ಯನಿರ್ವಹಿಸುತ್ತಿವೆ. ವಿಜ್ಞಾನ ನಿಕಾಯ ಹೊರತಾಗಿ ಭಾಷಾ ನಿಕಾಯ, ಸಮಾಜ ವಿಜ್ಞಾನ, ಲಲಿತಕಲೆ ನಿಕಾಯಗಳ ವಿವಿಧ ವಿಭಾಗಳಡಿ ಸಂಶೋಧನೆಗೆ ಅವಕಾಶ ಕಲ್ಪಿಸಲಾಗುತ್ತದೆ. ಮೂರು ನಿಕಾಯಗಳಿಗೆ ಒಟ್ಟು 1786 ಅಭ್ಯರ್ಥಿಗಳಿಂದ ಅರ್ಜಿ ಸಲ್ಲಿಕೆಯಾಗಿದ್ದು, 981 ಅಭ್ಯರ್ಥಿಗಳು ಸಾಮಾನ್ಯ ಪ್ರವೇಶ ಪರೀಕ್ಷೆ ಎದುರಿಸಿದ್ದು, 805 ಅಭ್ಯರ್ಥಿಗಳು ಗೈರು ಹಾಜರಾಗಿದ್ದರು. ಮೂರು ನಿಕಾಯಗಳು ಸೇರಿದಂತೆ ಶೇ. 54ರಷ್ಟುಹಾಜರಾತಿ ದಾಖಲಾಗಿದೆ.

ವಿಪಕ್ಷಗಳಿಗೆ ಗ್ಯಾರಂಟಿ ಬಗ್ಗೆ ಅನವಸರ ಗೊಂದಲ: ಸಂಸದ ಡಿ.ಕೆ.ಸುರೇಶ್‌

ಹಾಜರಾತಿ ಕುಸಿತ: ಕನ್ನಡ ವಿಶ್ವವಿದ್ಯಾಲಯದ ಕ್ಯಾಂಪಸ್‌ ಹಾಗೂ ವಿವಿಧೆಡೆ ಕಾರ್ಯನಿರ್ವಹಿಸುವ ವಿಸ್ತರಣಾ ಕೇಂದ್ರಗಳ ಮೂಲಕ ಸಂಶೋಧನೆ ಕೈಗೊಳ್ಳಲಿಚ್ಛಿಸುವವರಿಂದ ಕಳೆದ ವರ್ಷದ ಜೂನ್‌ನಲ್ಲಿ ಅರ್ಜಿ ಕರೆಯಲಾಗಿತ್ತು. ಸಂಶೋಧನೆಯನ್ನು ಮತ್ತಷ್ಟುಸ್ಪರ್ಧಾತ್ಮಕಗೊಳಿಸಲು ಅರ್ಜಿ ಸಲ್ಲಿಕೆ ಅವಧಿಯನ್ನು ಜುಲೈ ಅಂತ್ಯದವರೆಗೆ ಮುಂದುವರಿಸಲಾಗಿತ್ತು. ಹೀಗಾಗಿ ಹಿಂದೆಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳು ಸಲ್ಲಿಕೆಯಾಗಿದ್ದವು. ಅರ್ಜಿ ಸಲ್ಲಿಕೆಯಾದ ನಂತರ ನಿಗದಿತ ಅವಧಿಯಲ್ಲಿ ಪ್ರವೇಶ ಪರೀಕ್ಷೆ ನಡೆಸಲಿಲ್ಲ. ಅರ್ಜಿ ಸ್ವೀಕಾರಕ್ಕೆ ತೋರಿದ ಆಸಕ್ತಿ ನಂತರದ ಪ್ರಕ್ರಿಯೆಗಳತ್ತ ವಹಿಸಲಿಲ್ಲ.

ಈ ನಡುವೆ ಕನ್ನಡ ವಿಶ್ವವಿದ್ಯಾಲಯಕ್ಕೆ ಎದುರಾದ ಆರ್ಥಿಕ ಮುಗ್ಗಟ್ಟು, ಶಿಷ್ಯವೇತನಕ್ಕಾಗಿ ವಿದ್ಯಾರ್ಥಿಗಳ ಪ್ರತಿಭಟನೆ, ವಿವಾದ ನಡುವೆಯೇ ಘಟಿಕೋತ್ಸವ ಆಯೋಜನೆ, ಕುಲಪತಿಗಳು ಮತ್ತು ಪ್ರಾಧ್ಯಾಪಕರ ಸಂಘದ ನಡುವಿನ ತಿಕ್ಕಾಟ ಮತ್ತಿತರ ಕಾರಣಗಳಿಂದಾಗಿ ಸಂಶೋಧನಾರ್ಥಿಗಳ ಪ್ರವೇಶದತ್ತ ಕಾಳಜಿ ತೋರಲಿಲ್ಲ. ಸಂಶೋಧನಾರ್ಥಿಗಳ ಪ್ರವೇಶ ಪರೀಕ್ಷೆ ವಿಳಂಬದಿಂದ ಅಭ್ಯರ್ಥಿಗಳಿಗೂ ಪರೀಕ್ಷಾ ತಯಾರಿ ನಡೆಸಲು ಸಮಸ್ಯೆಯಾಗಿದೆ. ಇನ್ನೊಂದೆಡೆ ರಾಜ್ಯದ ಬೇರೆ ಬೇರೆ ವಿವಿಗಳಲ್ಲಿ ಪರೀಕ್ಷೆ ಬರೆದು, ಕೆಲವರು ಪ್ರವೇಶಾತಿ ಪಡೆದಿದ್ದಾರೆ. ಕನ್ನಡ ವಿಶ್ವವಿದ್ಯಾಲಯ ಪಿಎಚ್‌ಡಿ ಪ್ರವೇಶಾತಿಗೆ ತೋರಿದ ವಿಳಂಬವೂ ಸಂಶೋಧನಾರ್ಥಿಗಳು ಹಿಂದೇಟು ಹಾಕಲು ಬಲವಾದ ಕಾರಣವಾಗಿದೆ.

ವಿದ್ಯೆ ಸೃಷ್ಟಿಗೆ ಜನ್ಮತಳೆದಿರುವ ಕನ್ನಡ ವಿಶ್ವವಿದ್ಯಾಲಯದಲ್ಲೇ ಈಗ ಸಂಶೋಧನೆಗೆ ವಿಳಂಬ ನೀತಿ ಅನುಸರಿಸಿರುವುದು ಭಾರಿ ಚರ್ಚೆಯನ್ನು ಹುಟ್ಟು ಹಾಕಿದೆ. ಸಂಶೋಧನೆಯೇ ಈ ವಿವಿಯ ಜೀವಾಳವಾಗಿದೆ. ಆದರೂ ಪಿಎಚ್‌ಡಿಗೆ ಅರ್ಜಿ ಕರೆದು, ಒಂದು ವರ್ಷ ತಡವಾಗಿ ಪ್ರವೇಶ ಪರೀಕ್ಷೆ ಬರೆಸಿದ ವಿವಿಯ ಆಡಳಿತ ವೈಖರಿಯ ಬಗ್ಗೆಯೇ ಈಗ ಪ್ರಶ್ನೆ ಹುಟ್ಟುಹಾಕಿದೆ.

ಕಾರ್ಮಿಕರ ಶ್ರಮವನ್ನು ನಾವು ಹಣದಿಂದ ಅಳೆಯಬಾರದು: ಶಾಸಕ ಕೆ.ಹರೀಶ್‌ಗೌಡ

ಕನ್ನಡ ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ಪ್ರವೇಶ ಪರೀಕ್ಷೆ ನಡೆಸಲಾಗಿದೆ. ಹಾಜರಾತಿ ವಿಳಂಬವಾಗಿದೆ ನಿಜ. ಇದಕ್ಕೆ ನಿಖರ ಕಾರಣ ಗೊತ್ತಿಲ್ಲ. ಈ ವರ್ಷ ಜುಲೈ ಇಲ್ಲವೇ ಆಗಸ್ಟ್‌ನಲ್ಲಿ ಮತ್ತೆ ಪಿಎಚ್‌ಡಿ ಪ್ರವೇಶಾತಿಗೆ ಅರ್ಜಿ ಆಹ್ವಾನಿಸಲಾಗುವುದು.
-ಸುಬ್ಬಣ್ಣ ರೈ, ಕುಲಸಚಿವರು, ಕನ್ನಡ ವಿಶ್ವವಿದ್ಯಾಲಯ

Latest Videos
Follow Us:
Download App:
  • android
  • ios