ಧಾರವಾಡ [ಮಾ.08]:  ರಾಜ್ಯದ ಆರ್ಥಿಕ ಸ್ಥಿತಿ ಕುಸಿದಿದ್ದರೂ ರಾಜಕೀಯ, ರಾಜಕಾರಣಿಗಳ ಆರ್ಥಿಕ ಬಲ ಜಾಸ್ತಿ ಆಗುತ್ತಿದೆ. ಸಚಿವ ಶ್ರೀರಾಮುಲು, ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹಾಗೂ ಕೆಲ ಐಎಎಸ್‌ ಅಧಿಕಾರಿಗಳ ದುಂದು ವೆಚ್ಚಕ್ಕೆ ಕಡಿವಾಣ ಹಾಕಬೇಕು ಎಂದು ಮಾಜಿ ಶಾಸಕ ಶಾಸಕ ಎಚ್‌. ವಿಶ್ವನಾಥ್‌ ಆಗ್ರಹಿಸಿದರು. 

ನಗರದ ಸಾಧನಕೇರಿಯ ಬೇಂದ್ರೆ ಭವನಕ್ಕೆ ಶನಿವಾರ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿ ತಮ್ಮ ಆಕ್ರೋಶ ಹೊರಹಾಕಿದರು. ಇದಕ್ಕೆ ತಿರುಗೇಟು ನೀಡಿರುವ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ, ನನ್ನ ಕುಟುಂಬದ ಮದುವೆಗೆ ಇವರಿಗೇಕೆ ಚಿಂತೆ? ಇವರು ಚುನಾವಣೆಗೆಯಲ್ಲಿ ಕೋಟ್ಯಂತರ ರು. ಖರ್ಚು ಮಾಡಿದ್ದರಲ್ಲ. ಇಂತಹ ಪರಿಸ್ಥಿತಿಯಲ್ಲಿ ಅದು ಬೇಕಿತ್ತಾ? ಎಂದು ಪ್ರಶ್ನಿಸಿದ್ದಾರೆ.

‘ಮಗನ ಮದುವೆಗೆ ಯಾವ ಗಿಫ್ಟೂ ಇಲ್ಲ : ಸಿಂಪಲ್ ಆಗಿ ಮಾಡ್ತೀವಿ ಅಷ್ಟೇ.

ರಾಜ್ಯ ಬಜೆಟ್‌ ಮಂಡನೆ ದಿನವೇ ಸಚಿವ ಶ್ರೀರಾಮುಲು ಅವರ ಪುತ್ರಿ ಮದುವೆ ಆಯ್ತು. ಏಳು ದಿನದ ಮದುವೆ ಅದಾಗಿತ್ತು. ಬಳ್ಳಾರಿಯಿಂದ ಹಿಡಿದು ಬೆಂಗಳೂರಿನವರೆಗೆ ಮದುವೆ ನಡೆಯಿತು. ಇನ್ನೊಂದೆಡೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರ ಪುತ್ರನ ಮದುವೆಯ ಸಿದ್ಧತೆ ನಡೆಯುತ್ತಿದ್ದು, ಅದಕ್ಕಾಗಿ 50 ಎಕರೆ ಜಾಗದಲ್ಲಿ ಪೆಂಡಾಲ್‌ ಹಾಕುತ್ತಿದ್ದಾರೆ. 

ನಿಖಿಲ್‌ ಅವರ ನಿಶ್ಚಿತಾರ್ಥಕ್ಕೆ ವಿದೇಶದಿಂದ ಹಾರ ತರಿಸಲಾಯಿತು. ನಮ್ಮ ರಾಜ್ಯದಲ್ಲೇ ಎಂಥೆಂಥಾ ಹೂವುಗಳಿವೆ, ಆದರೆ ನಿಖಿಲ್‌ ನಿಶ್ಚಿತಾರ್ಥಕ್ಕೆ ವಿದೇಶದ ಹಾರವೇ ಬೇಕಿತ್ತಾ? ಜನರ ಋುಣ ತೀರಿಸಲು ಪುತ್ರನ ಮದುವೆಗಾಗಿ ಜನರಿಗೆ ಸೀರೆ ಇತ್ಯಾದಿ ಕೊಡುತ್ತಿದ್ದೇನೆ ಎಂದು ಕುಮಾರಸ್ವಾಮಿ ಹೇಳುತ್ತಾರೆ. ಅವರು ಮುಖ್ಯಮಂತ್ರಿಯಾಗಿದ್ದಾಗಲೇ ಸರ್ಕಾರದ ಮೂಲಕ ಜನರ ಋುಣ ತೀರಿಸುವ ಕೆಲಸ ಮಾಡಬಹುದಿತ್ತು ಎಂದು ಅಭಿಪ್ರಾಯಪಟ್ಟರು.