ಯಡಿಯೂರಪ್ಪ ನಾಲಿಗೆ ಇಲ್ಲದ ನಾಯಕ: ಸಿಎಂ ವಿರುದ್ಧ ವಿಶ್ವನಾಥ್ ವಾಗ್ದಾಳಿ
ಬಿಜೆಪಿ ‘ಸನ್ ಸ್ಟ್ರೋಕ್’ನಿಂದ ಹಾಳಾಗುತ್ತಿದೆ: ವಿಶ್ವನಾಥ್| ದೈಹಿಕ, ಮಾನಸಿಕ ಸ್ಟ್ರೋಕ್ ಆಗಿರೋದು ವಿಶ್ವನಾಥ್‌ಗೆ: ಸಾರಾ ಮಹೇಶ್| ವಿಶ್ವನಾಥ್ ವಿರುದ್ಧ ವಾಗ್ದಾಳಿ|
ರಾಯಚೂರು(ಜ.15): ಸಚಿವ ಸಂಪುಟದಲ್ಲಿ ಸ್ಥಾನ ಸಿಗದೆ ಅಸಮಾಧಾನಗೊಂಡಿರುವ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಮತ್ತೆ ವಾಗ್ದಾಳಿ ಮುಂದುವರಿಸಿದ್ದಾರೆ. ಬಿಜೆಪಿ ‘ಸನ್(ಪುತ್ರ) ಸ್ಟ್ರೋಕ್’ನಿಂದ ಹಾಳಾಗುತ್ತಿದೆ ಎಂದು ಕಿಡಿಕಾರಿದ್ದಾರೆ.
"
ನಗರದ ಖಾಸಗಿ ಹೋಟೆಲ್‌ನಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಹಿಂದೆ ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ‘ಸನ್’(ಪುತ್ರ) ಮತ್ತು ಫ್ಯಾಮಿಲಿ ಸ್ಟ್ರೋಕ್‌ನಿಂದ ಹಾಳಾಗಿವೆ. ಅದೇ ಹಾದಿಯಲ್ಲಿ ಈಗ ಬಿಜೆಪಿ ಕೂಡ ಸಾಗಿದೆ. ಪ್ರಾದೇಶಿಕ ಪಕ್ಷಗಳಲ್ಲಿ ‘ಸನ್ ಸ್ಟ್ರೋಕ್’ ಆದರೆ ಏನೂ ನಷ್ಟವಿಲ್ಲ. ಆದರೆ ಬಿಜೆಪಿಯಂಥ ರಾಷ್ಟ್ರೀಯ ಪಕ್ಷದಲ್ಲಿ ಈ ಬೆಳವಣಿಗೆ ಸರಿಯಲ್ಲ. ವಿಜಯೇಂದ್ರ ಅವರಿಂದ ಬಿಜೆಪಿ ‘ಸನ್ ಸ್ಟ್ರೋಕ್’ಗೆ ಒಳಗಾಗಿದೆ. ಕುಟುಂಬ ರಾಜಕಾರಣಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಲಿಯಾಗುತ್ತಿದ್ದಾರೆ. ಇಷ್ಟು ದಿನ ನಾಲಗೆ ಇರುವ ನಾಯಕರಾಗಿದ್ದ ಯಡಿಯೂರಪ್ಪ ಇದೀಗ ನಾಲಿಗೆ ಇಲ್ಲದ ನಾಯಕರಾಗಿದ್ದಾರೆ. ಯಡಿಯೂರಪ್ಪ ಮೇಲೆ ಈಗಲೂ ಅಭಿಮಾನವಿದ್ದು, ಅವರೇ ನನ್ನನ್ನು ಕರೆದು ಮಾತನಾಡಿದರೆ ಮಾತನಾಡುವೆ ಎಂದರು.
ಸೀಡಿ ನನ್ನ ಬಳಿ ಇದ್ದಿದ್ರೆ ನಾನೇ ಡಿಸಿಎಂ ಆಗ್ತಿದ್ದೆ: ಯತ್ನಾಳ
ಭ್ರಷ್ಟರಿಗೆ ಸಚಿವ ಸ್ಥಾನ:
ಸಿ.ಪಿ.ಯೋಗೇಶ್ವರ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ವಿಶ್ವನಾಥ್, ಅವರು ಭ್ರಷ್ಟಾಚಾರ ಹೊತ್ತು ಮಲಗಿದ್ದಾರೆ. ಭ್ರಷ್ಟನನ್ನು, ದಲ್ಲಾಳಿಯನ್ನು ಮಂತ್ರಿ ಮಾಡಿರುವುದು ಹುಬ್ಬೇರಿಸುವಂಥೆ ಮಾಡಿದೆ. ಮೆಗಾಸಿಟಿ ವಂಚನೆ ಪ್ರಕರಣದಲ್ಲಿ ನ್ಯಾಯಾಲಯವೇ ತನಿಖೆಗೆ ಶಿಫಾರಸು ಮಾಡಿದೆ. ಆದರೂ ಅವರಿಗೆ ಸಚಿವ ಪಟ್ಟ ನೀಡಲಾಗಿದೆ ಎಂದು ಆರೋಪಿಸಿದ್ದಾರೆ.
ದೈಹಿಕ, ಮಾನಸಿಕ ಸ್ಟ್ರೋಕ್ ಆಗಿರೋದು ವಿಶ್ವನಾಥ್‌ಗೆ
ಇನ್ನು ಮೈಸೂರಿನಲ್ಲಿ ಮಾತನಾಡಿದ ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ದೈಹಿಕ, ಮಾನಸಿಕ ಸ್ಟ್ರೋಕ್ ಆಗಿರೋದು ಎಚ್.ವಿಶ್ವನಾಥ್‌ಗೆ ಹೊರತು ಮುಖ್ಯಮಂತ್ರಿ ಯಡಿಯೂರಪ್ಪಗೆ ಅಲ್ಲ ಎಂದು ವಿಶ್ವನಾಥ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಟ್ರೋಕ್ ಆಗಿ ಮಲಗಿದ್ದಾಗ ನಿಮಗೆ ಚೈತನ್ಯ ತುಂಬಿದ್ದು ಜೆಡಿಎಸ್. ಆದರೆ, ಪಕ್ಷಕ್ಕೆ ದ್ರೋಹ ಮಾಡಿದ್ದರ ಪರಿಣಾಮವನ್ನು ಈಗ ಎದುರಿಸಿದ್ದೀರಿ. ತಾಯಿ ಚಾಮುಂಡೇಶ್ವರಿ ಮೇಲೆ ಆಣೆ ಮಾಡಿ ಶಾಪಕ್ಕೆ ತುತ್ತಾಗಿದ್ದೀರಿ. ಈಗ ಮತ್ತೆ ಯಡಿಯೂರು ಸಿದ್ದಲಿಂಗೇಶ್ವರರನ್ನು ಎಳೀಬೇಡಿ. ಈಗಿರುವ ಎಂಎಲ್ಸಿ ಸ್ಥಾನವೂ ಹೋಗಿಬಿಡುತ್ತದೆ ಎಂದು ವಿಶ್ವನಾಥ್‌ಗೆ ಟಾಂಗ್ ನೀಡಿದರು.
ಮುಖ್ಯಮಂತ್ರಿ ಯಡಿಯೂರಪ್ಪ ಯಾವತ್ತೂ ಮಾತು ತಪ್ಪಿಲ್ಲ. 17 ಮಂದಿ ಪೈಕಿ 15 ಮಂದಿಯನ್ನು ಮಂತ್ರಿ ಮಾಡಿದ್ದಾರೆ. ಮತ್ತಿಬ್ಬರಿಗೆ ಅವಕಾಶ ಸಿಕ್ಕಿಲ್ಲ. ಆದರೆ, ನಿಮಗೆ ಕೃತಜ್ಞತೆ ಅನ್ನೋದೇ ಇಲ್ಲದ್ದಕ್ಕೆ ಮಂತ್ರಿ ಸ್ಥಾನ ಸಿಕ್ಕಿಲ್ಲ ಅಷ್ಟೆ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ಸರ್ಕಾರ ಅವಧಿಗೆ ಮುನ್ನ ಬೀಳಲ್ಲ. ಜೆಡಿಎಸ್‌ಗಿಂತ ಜಾಸ್ತಿ ದಿನ ನಾನು ಬಿಜೆಪಿಯನ್ನು ನೋಡಿದ್ದೇನೆ. ಯಡಿಯೂರಪ್ಪ ಅವರನ್ನು ಹತ್ತಿರದಿಂದ ಕಂಡಿದ್ದೇನೆ. ಅವರನ್ನು ಪ್ರೀತಿಯಿಂದ ಗೆಲ್ಲಬಹುದೇ ಹೊರತು, ಹೆದರಿಸಿ ಬೆದರಿಸಿ ಗೆಲ್ಲಲು ಆಗಲ್ಲ ಎಂದು ತಿಳಿಸಿದರು.