ಸೀಡಿ ನನ್ನ ಬಳಿ ಇದ್ದಿದ್ರೆ ನಾನೇ ಡಿಸಿಎಂ ಆಗ್ತಿದ್ದೆ: ಯತ್ನಾಳ

ಮತ್ತೆ ಯಡಿಯೂರಪ್ಪ ಸಿ.ಡಿ. ವಿವಾದ ಕೆದಕಿದ ಬಸನಗೌಡ ಯತ್ನಾಳ, ವಿಶ್ವನಾಥ್‌| ಕಾಂಗ್ರೆಸ್‌ ನಿಜವಾದ ವಿಪಕ್ಷವಾದ್ರೆ ಆ ಸೀಡಿ ಬಿಡುಗಡೆ ಮಾಡಲಿ: ಯತ್ನಾಳ್‌| ಆ ಸಿ.ಡಿ.ಯಿಂದಾಗಿ ಸಿದ್ದು, ಡಿಕೆಶಿ, ಜಮೀರ್‌, ಹೆಬ್ಬಾಳ್ಕರ್‌ ಕ್ಷೇತ್ರಕ್ಕೆ ಹೆಚ್ಚು ಅನುದಾನ| ಕಾಂಗ್ರೆಸ್ಸಿಗರು ಸಿ.ಡಿ.ಬಿಡುಗಡೆ ಮಾಡಲಿ, ಸಿ.ಡಿ. ಕುರಿತು ಸಿಬಿಐ ತನಿಖೆ ಆಗಲಿ| 

MLA Basanagouda Patil Yatnal Talks Over CD Case grg

ಬಾಗಲಕೋಟೆ/ರಾಯಚೂರು(ಜ.15):ಸಚಿವ ಸ್ಥಾನದಿಂದ ವಂಚಿತ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ವಿಧಾನ ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ಮತ್ತೆ ಸಿ.ಡಿ.ವಿವಾದ ಕೆದಕಿದ್ದಾರೆ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಸಂಬಂ​ಧಿಸಿದ ಸಿ.ಡಿ. ಕಾಂಗ್ರೆಸ್‌ನವರ ಬಳಿ ಇದೆ. ಕಾಂಗ್ರೆಸ್‌ ನಿಜವಾಗಿಯೂ ವಿರೋಧ ಪಕ್ಷ ಆಗಿದ್ದರೆ ಆ ಸಿ.ಡಿ.ಬಿಡುಗಡೆ ಮಾಡಲಿ ಎಂದು ಯತ್ನಾಳ ಆಗ್ರಹಿಸಿದರೆ, ಆ ಸಿ.ಡಿ. ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಅದನ್ನು ಯತ್ನಾಳ ಅಥವಾ ಇನ್ಯಾರೋ ಬಿಡುಗಡೆ ಮಾಡುತ್ತಾರೆ ಎಂದು ವಿಶ್ವನಾಥ್‌ ಹೇಳಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಆ ಸಿ.ಡಿ.ಯನ್ನು ಮೂವರು ನನ್ನ ಬಳಿ ತೆಗೆದುಕೊಂಡು ಬಂದಿದ್ದರು. ಅದರಲ್ಲಿ ಇಬ್ಬರು ಈಗ ಸಚಿವರಾಗಿದ್ದಾರೆ. ನನ್ನ ಬಳಿ ಆ ಸಿಡಿ ಇದ್ದಿದ್ದರೆ ನಾನೇ ಉಪಮುಖ್ಯಮಂತ್ರಿ ಆಗಿರುತ್ತಿದ್ದೆ. ಆ ಸಿ.ಡಿ.ಯನ್ನು ಇಟ್ಟುಕೊಂಡೇ ಕಾಂಗ್ರೆಸ್ಸಿಗರು ಅನುದಾನ ತೆಗೆದುಕೊಳ್ಳುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಬಳಿಯೂ ಆ ಸಿ.ಡಿ. ಇದೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಸಚಿವ ಕೆ.ಜೆ.ಜಾಜ್‌ರ್‍, ಶಾಸಕರಾದ ಜಮೀರ್‌ ಅಹಮ್ಮದ್‌, ಲಕ್ಷ್ಮೀ ಹೆಬ್ಬಾಳಕರ್‌ ಕ್ಷೇತ್ರಕ್ಕೆ ಹೆಚ್ಚು ಅನುದಾನ ಹೋಗೋದೇ ಆ ಸಿ.ಡಿ. ಬ್ಲ್ಯಾಕ್‌ಮೇಲ್‌ನಿಂದ. ಹೀಗಾಗಿ ಆ ಸಿ.ಡಿ. ಕುರಿತು ಸಿಬಿಐ ತನಿಖೆ ಆಗಲಿ ಎಂದು ಆಗ್ರಹಿಸಿದರು.

ಬಿಎಸ್‌ವೈ ವಿರುದ್ಧ CD ಬಾಂಬ್ ಸಿಡಿಸಿದ ಯತ್ನಾಳ್: ರಾಜಕಾರಣಲ್ಲಿ ಶುರುವಾಯ್ತು ಸಿಡಿ ಚರ್ಚೆ

ಶೀಘ್ರ ಬಿಡುಗಡೆ:

ಏತನ್ಮಧ್ಯೆ, ರಾಯಚೂರಲ್ಲಿ ಸುದ್ದಿಗಾರರ ಮುಂದೆ ಸಿ.ಡಿ.ವಿಚಾರ ಪ್ರಸ್ತಾಪಿಸಿದ ಎಚ್‌.ವಿಶ್ವನಾಥ್‌, ಯಡಿಯೂರಪ್ಪ ಅವರಿಗೆ ಸಂಬಂಧಿಸಿದ ಸಿ.ಡಿ. ಶೀಘ್ರವೇ ಬಿಡುಗಡೆಯಾಗಲಿದೆ. ಅದನ್ನು ಯತ್ನಾಳ ಅಥವಾ ಯಾರೋ ಒಬ್ಬರು ಬಿಡುಗಡೆ ಮಾಡುತ್ತಾರೆ. ಸಿ.ಡಿ. ಯಾರದ್ದು, ಅದರಲ್ಲಿರುವ ವಿಷಯವೇನು ಎಂಬುವುದು ಸಿ.ಡಿ.ಸ್ಫೋಟಗೊಂಡ ಬಳಿಕವೇ ಬಯಲಾಗಲಿದೆ ಎಂದರು.
 

Latest Videos
Follow Us:
Download App:
  • android
  • ios