ತುಂಗಾ ತೀರದಲ್ಲಿ ನೆಲೆಸಿರುವ ಕಲಿಯುಗದ ಕಾಮಧೇನು ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನಕ್ಕೆ ನಿತ್ಯ ರಾಜ್ಯದ ಸಾವಿರಾರು ಭಕ್ತರು ಮಂತ್ರಾಲಯಕ್ಕೆ ಆಗಮಿಸುತ್ತಾರೆ. ಕರ್ನಾಟಕದಿಂದ ಬರುವ ಭಕ್ತರಿಗೆ ಆಂಧ್ರಪ್ರದೇಶದ ಮಂತ್ರಾಲಯದಲ್ಲಿ ಕನ್ನಡಿಗರಿಗೆ ತೊಂದರೆ ಆಗಬಾರದು. 

ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್

ರಾಯಚೂರು (ಫೆ.15): ತುಂಗಾ ತೀರದಲ್ಲಿ ನೆಲೆಸಿರುವ ಕಲಿಯುಗದ ಕಾಮಧೇನು ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನಕ್ಕೆ ನಿತ್ಯ ರಾಜ್ಯದ ಸಾವಿರಾರು ಭಕ್ತರು ಮಂತ್ರಾಲಯಕ್ಕೆ ಆಗಮಿಸುತ್ತಾರೆ. ಕರ್ನಾಟಕದಿಂದ ಬರುವ ಭಕ್ತರಿಗೆ ಆಂಧ್ರಪ್ರದೇಶದ ಮಂತ್ರಾಲಯದಲ್ಲಿ ಕನ್ನಡಿಗರಿಗೆ ತೊಂದರೆ ಆಗಬಾರದು. ಶ್ರೀಮಠದ ರೂಂಗಳು ಸಿಗದೇ ಇದ್ದಾಗ ಕರ್ನಾಟಕ ಛತ್ರದಲ್ಲಿ ಭಕ್ತರಿಗೆ ಉಳಿದುಕೊಳ್ಳಲು ಅನುಕೂಲವಾಗಲಿ ಅಂತ ಕರ್ನಾಟಕ ಸರ್ಕಾರ ಶ್ರೀಮಠದ ಜಾಗ ಪಡೆದು ' ಕರ್ನಾಟಕ ಛತ್ರ ನಿರ್ಮಿಸಿದೆ. ಸುಮಾರು 50 ವರ್ಷಗಳ ಹಿಂದೆ ನಿರ್ಮಿಸಿದ ಕಟ್ಟಡವೊಂದು ಸಂಪೂರ್ಣವಾಗಿ ಹಾಳಾಗಿ ಹೋಗಿತ್ತು. ಹೀಗಾಗಿ 5 ಕೋಟಿ ರೂ. ವೆಚ್ಚದಲ್ಲಿ ಹೊಸದಾಗಿ ಹಳೆಕಟ್ಟಡದ ಹಿಂಭಾಗದಲ್ಲಿ 50 ಕೊಠಡಿಗಳನ್ನ ನಿರ್ಮಾಣ ಮಾಡಿತ್ತು. 2022ರಲ್ಲಿ ಹೊಸ ಕಟ್ಟಡದ ಉದ್ಘಾಟನೆ ಕೂಡ ಆಗಿ ಭಕ್ತರು ಹೊಸ ಕಟ್ಟಡ ಬಳಕೆ ಮಾಡಲು ಶುರು ಮಾಡಿದ್ದಾರೆ. 

ಹೊಸ ಕಟ್ಟಡದ ಬಹುತೇಕ ರೂಂಗಳ ಗೋಡೆಗಳು ಅಲ್ಪಸಲ್ಪ ಬಿರುಕು: 2022ರಲ್ಲಿ ಧಾರ್ಮಿಕ ದತ್ತಿ ಇಲಾಖೆಯ ಸಚಿವೆಯಾದ ಶಶಿಕಲಾ ಜೊಲ್ಲೆ ಮಂತ್ರಾಲಯಕ್ಕೆ ಆಗಮಿಸಿ ಕಟ್ಟಡದ ಉದ್ಘಾಟನೆ ಮಾಡಿದ್ರು. PWD ಇಲಾಖೆ ಟೆಂಡರ್ ಕರೆದು ಕಟ್ಟಡ ಕಾಮಗಾರಿ ಮುಗಿಸಿತ್ತು.‌ ಸಚಿವೆ ಶಶಿಕಲಾ ಜೊಲ್ಲೆ ಕಟ್ಟಡ ಉದ್ಘಾಟನೆ ಮಾಡಿ ಹೋಗಿ ಒಂದು ತಿಂಗಳು ಸಹ ಕಳೆದಿಲ್ಲ. ಕಟ್ಟಡದ ಕೆಲವು ರೂಂಗಳಲ್ಲಿ ಸಣ್ಣದಾಗಿ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಮತ್ತೊಂದು ‌ಕಡೆ ಬಿಸಿನೀರಿಗಾಗಿ ಹಾಕಿದ ಗೀಜರ್ ಗಳು ಸಹ ಕೆಟ್ಟ ಹಾಳಾಗಿ ಹೋಗಿವೆ. ಕೊಠಡಿಗಳ ಡೋರ್ , ಕಿಟಕಿ, ಪೀಠೋಪಕರಣಗಳು ಕಳಪೆ ಬಳಕೆ ಮಾಡಿದ್ದರಿಂದ ಒಡೆದು ಹೋಗುತ್ತಿವೆ. ಇನ್ನೂ ಕೆಲ ರೂಂಗಳ ಕಿಟಕಿಯ ಗ್ಲಾಸ್ ಗಳು ಒಡೆದು ಹೋಗಿದ್ದು, ಕರ್ನಾಟಕ ಛತ್ರದಲ್ಲಿ ರೂಂ ಪಡೆದುಕೊಂಡ ಭಕ್ತರಿಗೆ ಸೊಳ್ಳೆ ಕಾಟ ವಿಪರೀತವಾಗಿವೆ. ಹೀಗಾಗಿ ಮಂತ್ರಾಲಯಕ್ಕೆ ಬರುವ ಭಕ್ತರು ಕರ್ನಾಟಕ ಛತ್ರದ ರೂಂಗಳಲ್ಲಿ ಉಳಿದುಕೊಳ್ಳಲು ಮಿನಾಮೇಷ ಎಣಿಸುತ್ತಿದ್ದಾರೆ. ಎಲ್ಲಿಯೂ ರೂಂಗಳು ಸಿಗದೇ ಇದ್ದಾಗ ಕರ್ನಾಟಕ ಛತ್ರದಲ್ಲಿ ಉಳಿದುಕೊಂಡ ಭಕ್ತರು ಸರ್ಕಾರದ ವಿರುದ್ಧ ಹಿಡಿಶಾಪ ಹಾಕುತ್ತಾ ಇದ್ದಾರೆ.

ಬಿಸಿಲುನಾಡಿನಲ್ಲಿ ಗೋ ಶಾಲೆಗೆ ನುಗ್ಗಿ ಹಸುವನ್ನ ಕೊಂದ ಚಿರತೆ: ಅರಣ್ಯ ಇಲಾಖೆ ಸಿಬ್ಬಂದಿ ‌ಗೋಳಾಟ

ಕರೆಂಟ್ ಹೋದ್ರೆ ಕರ್ನಾಟಕ ಛತ್ರದಲ್ಲಿನ ಭಕ್ತರಿಗೆ ಕತ್ತಲ್ಲೇ ಗತಿ: ಕಷ್ಟ ಅಂತ ಬರುವ ಭಕ್ತರಿಗೆ ರಾಯರು ಕರುಣಿಸಿ,ಕಷ್ಟ ದೂರು ಮಾಡುತ್ತಾರೆ ಎಂಬ ನಂಬಿಕೆಯಿಂದ ಸಾವಿರಾರು ಭಕ್ತರು ಮಂತ್ರಾಲಯಕ್ಕೆ ಬರುತ್ತಾರೆ. ‌ಆದ್ರೆ ರಾಯರ ದರ್ಶನಕ್ಕೆ ‌ಬರುವ ಭಕ್ತರಿಗೆ ಉಳಿದುಕೊಳ್ಳಲು ಶ್ರೀಮಠದಿಂದ ರೂಂಗಳ ವ್ಯವಸ್ಥೆ ‌ಸಹ ಇದೆ. ಆದ್ರೆ ಏಕಕಾಲಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗಿ ಭಕ್ತರು ಖಾಸಗಿ ಲಾಡ್ಜ್ ಗಳಿಗೆ ಹೋಗಲು ಆಗದೇ ಕರ್ನಾಟಕ ಛತ್ರದ ಕಡೆ ಬರುತ್ತಾರೆ. ಕರ್ನಾಟಕ ಛತ್ರದಲ್ಲಿ ರೂಂ ಸಿಕ್ಕರೆ, ಭಕ್ತರು ರಾಯರು ನಮಗೆ ಕೈಬಿಟ್ಟಿಲ್ಲ, ನಮ್ಮ ಜೊತೆಗೆ ರಾಯರು ಇದ್ದಾರೆ ಎಂದು ಭಕ್ತರು ಅಂದುಕೊಳ್ಳುತ್ತಾರೆ. ಆದ್ರೆ ಕರ್ನಾಟಕ ಛತ್ರದಲ್ಲಿ ಕರೆಂಟ್ ಹೋದ್ರೆ ಯಾವುದೇ ಜನರೇಟರ್ ವ್ಯವಸ್ಥೆ ಇಲ್ಲದೆ ಇರುವುದರಿಂದ ಭಕ್ತರು ಕತ್ತಲಿನ‌ ರೂಂನಲ್ಲಿ ಸೊಳ್ಳೆಗಳ ಕಾಟದಲ್ಲಿಯೇ ರಾತ್ರಿ ಕಳೆಯುವ ಪರಿಸ್ಥಿತಿ ಇದೆ.

ಗುತ್ತಿಗೆದಾರ ಮತ್ತು ಅಧಿಕಾರಿಗಳು ಮಾಡಿದ ಕಳಪೆ ಕಾಮಗಾರಿಯಿಂದ ಭಕ್ತರಿಗೆ ಸಂಕಷ್ಟ: ಮಂತ್ರಾಲಯ ಸದಾಕಾಲ ಭಕ್ತರಿಂದ ತುಂಬಿ ತುಳುಕುವ ಪುಣ್ಯ ಕ್ಷೇತ್ರ. ಈ ಕ್ಷೇತ್ರಕ್ಕೆ ವರ್ಷದಿಂದ ವರ್ಷಕ್ಕೆ ರಾಯರ ಮಠಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಕರ್ನಾಟಕದ ಭಕ್ತರೇ ಅತೀ ಹೆಚ್ಚು ಜನರು ಮಂತ್ರಾಲಯಕ್ಕೆ ‌ಬರುತ್ತಾರೆ. ಮುಖ್ಯವಾಗಿ ಬೆಂಗಳೂರು, ಮಂಡ್ಯ, ಹಾಸನ, ಚಿಕ್ಕಮಗಳೂರು, ಮೈಸೂರು, ಚಾಮರಾಜನಗರದಿಂದ ಭಕ್ತರು ರಾಯರ ದರ್ಶನಕ್ಕೆ ಬರುತ್ತಾರೆ. ಕರ್ನಾಟಕದ ಭಕ್ತರಿಗೆ ಅನುಕೂಲವಾಗಿವೆಂದು ನಿರ್ಮಿಸಿದ ಛತ್ರ ಕಳಪೆ ಕಾಮಗಾರಿಯಿಂದ ಹಾಳಾಗಿ ಹೋಗುತ್ತಿದೆ. ಅಲ್ಲದೇ ‌ಛತ್ರದ ನಿರ್ವಹಣೆ ‌ಸಹ ಅಧಿಕಾರಿಗಳು ಸರಿಯಾಗಿ ಮಾಡುತ್ತಿಲ್ಲವೆಂಬ ದೂರುಗಳು ಸಹ ಇವೆ. ಭಕ್ತರ ಸಲುವಾಗಿ ‌ನಿರ್ಮಿಸಿದ ಕರ್ನಾಟಕ ಛತ್ರದ ಕಾಮಗಾರಿವೂ ಗುತ್ತಿಗೆದಾರ ಮನಬಂದಂತೆ ಮಾಡಿ PWD ಇಲಾಖೆಗೆ ಹಸ್ತಾಂತರ ಮಾಡಿ ಕೈತೊಳೆದುಕೊಂಡಿದ್ದಾನೆ. ಕಾಮಗಾರಿ ವೇಳೆ ಸರಿಯಾಗಿ ‌ಪರಿಶೀಲನೆ ಮಾಡಬೇಕಾದ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದಕ್ಕೆ ಈಗ ಹೊಸ ಕಟ್ಟಡ ಇದ್ರೂ ಹಳೆಕಟ್ಟಡದಂತೆ ಕಂಗೊಳಿಸುತ್ತಿದೆ. ಈ ಕಳಪೆ ಕಾಮಗಾರಿ ಒಂದು ಕಡೆಯಾಗಿದ್ರೆ ಮತ್ತೊಂದು ‌ಕಡೆ ಕಾಮಗಾರಿ ವೇಳೆ ಮಾಡಿದ ತಪ್ಪಿನಿಂದಾಗಿ ರೂಂಗಳಲ್ಲಿ ಹಲವು ಸಮಸ್ಯೆ ಹುಟ್ಟಿಕೊಳ್ಳುತ್ತಿವೆ. 

ಕಾನೂನು ಕೈಗೆತ್ತಿಕೊಳ್ಳಲು ಯಾರಿಗೂ ಬಿಡಲ್ಲ: ಗೃಹ ಸಚಿವ ಪರಮೇಶ್ವರ್

ರೂಂಗಳಲ್ಲಿ ಟೈಲ್ಸ್ ಗಳು ಹಾನಿಯಾಗಿ ಭಕ್ತರಿಗೆ ಪ್ರವೇಶ ನಿಷೇಧ: ಮಂತ್ರಾಲಯದ ಕರ್ನಾಟಕ ಛತ್ರ ಅಂದ್ರೆ ಸಮಸ್ಯೆ ಗಳ ಆಗರವಾಗಿದೆ. ಮಂತ್ರಾಲಯಕ್ಕೆ ಬರುವ ಭಕ್ತರು ಕರ್ನಾಟಕ ಛತ್ರವಿದೆ ರೂಂಗಳು ಸಿಗುತ್ತೆ ಅಂತ ಬಂದ್ರೆ ಸಮಸ್ಯೆ ಮಧ್ಯೆಯೇ ಉಳಿದುಕೊಳ್ಳುವ ಪರಿಸ್ಥಿತಿ ಇದೆ. ಮುಖ್ಯವಾಗಿ ಹೇಳಬೇಕು ಅಂದ್ರೆ 50 ಸುವ್ಯವಸ್ಥಿತ ಕೋಣೆಗಳು ಇವೆ. ಆದ್ರೆ ಗುತ್ತಿಗೆದಾರ ಮನಬಂದಂತೆ ಕಟ್ಟಡ ಕಾಮಗಾರಿ ಮಾಡಿದ್ದರಿಂದ ಕೆಲ ರೂಂಗಳಲ್ಲಿ ಬಾತ್ ರೂಂ ಸಮಸ್ಯೆ ಉಂಟಾಗಿದ್ರೆ, ಇನ್ನೂ ‌ಕೆಲ ರೂಂಗಳಲ್ಲಿ ಎಸಿ ವರ್ಕ್ ಆಗುತ್ತಿಲ್ಲ. ಇನ್ನೂ ಕೆಲ ರೂಂಗಳಲ್ಲಿ ಟೈಲ್ಸ್ ಗಳು ಹಾಳಾಗಿ ಗೋಡೆಯ ಒಂದು ಕಡೆ ಕುಸಿತವಾಗಿದೆ. ಹೀಗಾಗಿ ಅಂತ ಎರಡು- ಮೂರು ರೂಂಗಳಿಗೆ ಭಕ್ತರಿಗೆ ಪ್ರವೇಶ ನಿಷೇಧ ಹೇರಿ ರೂಂಗಳನ್ನ ಲಾಕ್ ಮಾಡಲಾಗಿದೆ. ಹೀಗಾಗಿ ಸಂಬಂಧಪಟ್ಟ ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿಗಳು ಹಾಗೂ ರಾಯಚೂರು ‌ಜಿಲ್ಲಾಡಳಿತ ಈ ಮಂತ್ರಾಲಯದ ಕರ್ನಾಟಕ ಛತ್ರದ ಕಟ್ಟಡದ ಕಡೆ ವಿಶೇಷ ಗಮನಹರಿಸಿ, ಭಕ್ತರಿಗೆ ಆಗುತ್ತಿರುವ ತೊಂದರೆ ಸ್ಪಂದಿಸುವುದರ ಜೊತೆಗೆ ಹಳೆಯ ಕಟ್ಟಡ ಧ್ವಂಸ ಮಾಡಿ ಹೊಸ ಕಟ್ಟಡ ನಿರ್ಮಿಸುವುದರ ಜೊತೆಗೆ ಹೊಸ ಕಟ್ಟಡದ ರಿಪೇರಿ ಮಾಡಿ, ಕಳಪೆ ಕಾಮಗಾರಿ ಮಾಡಿದ ಗುತ್ತಿಗೆದಾರನ ವಿರುದ್ಧ ಕ್ರಮ ಆಗಬೇಕು ಎಂಬುವುದು ಭಕ್ತರ ಆಶಯವಾಗಿದೆ.