ಅತಿಥಿ ಉಪನ್ಯಾಸಕರಿಗೆ ವರ್ಷ ಪೂರ್ತಿ ವೇತನಕ್ಕೆ ಆಗ್ರಹ; ಸಂಸದ ರಾಘವೇಂದ್ರಗೆ ಮನವಿ

ರಾಜ್ಯಾದ್ಯಂತ 412 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 14564 ಅತಿಥಿ ಉಪನ್ಯಾಸಕರು ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಪ್ರತಿ ಶೈಕ್ಷಣಿಕ ವರ್ಷದಲ್ಲಿ 9 ರಿಂದ 10 ತಿಂಗಳು ಮಾತ್ರ ಸೇವೆ ಪರಿಗಣಿಸಿ ವೇತನ ನೀಡಲಾಗುತ್ತಿದೆ. ಇವರಿಗೆಲ್ಲ ವರ್ಷ ಪೂರ್ತಿ ಸಂಬಳ ನೀಡುವಂತೆ ಸಂಸದ ಬಿ. ವೈ. ರಾಘವೇಂದ್ರ ಬಳಿ ಮನವಿ ಸಲ್ಲಿಸಲಾಯಿತು. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

Guest Lecturer's urges full year Salary Request Submit to MP BY Raghavendra

ಶಿಕಾರಿಪುರ(ಮೇ.14): ಅತಿಥಿ ಉಪನ್ಯಾಸಕರ ಸೇವೆಯನ್ನು ಅಗತ್ಯ ಸೇವೆ ಎಂದು ಪರಿಗಣಿಸಿ ವರ್ಷ ಪೂರ್ತಿ ವೇತನ ಹಾಗೂ ಉದ್ಯೋಗ ಭದ್ರತೆಯನ್ನು ಘೋಷಿಸುವಂತೆ ಆಗ್ರಹಿಸಿ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿಯಿಂದ ರಾಜ್ಯಾಧ್ಯಕ್ಷ ಡಾ.ಎಚ್‌ ಸೋಮಶೇಖರ್‌ ಶಿವಮೊಗ್ಗಿ ನೇತೃತ್ವದಲ್ಲಿ ಸಂಸದ ರಾಘವೇಂದ್ರರಿಗೆ ಮನವಿ ಸಲ್ಲಿಸಲಾಯಿತು.

ಡಾ.ಎಚ್‌ ಸೋಮಶೇಖರ್‌ ಶಿವಮೊಗ್ಗಿ ಮಾತನಾಡಿ,ರಾಜ್ಯಾದ್ಯಂತ 412 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 14564 ಅತಿಥಿ ಉಪನ್ಯಾಸಕರು ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಪ್ರತಿ ಶೈಕ್ಷಣಿಕ ವರ್ಷದಲ್ಲಿ 9 ರಿಂದ 10 ತಿಂಗಳು ಮಾತ್ರ ಸೇವೆ ಪರಿಗಣಿಸಿ ವೇತನ ನೀಡಲಾಗುತ್ತಿದೆ. ವರ್ಷ ಪೂರ್ತಿ ಪರೀಕ್ಷೆ ಮೇಲ್ವಿಚಾರಣೆ, ಮೌಲ್ಯಮಾಪನ, ವಾರ್ಷಿಕ ತಪಾಸಣೆ ಸಹಿತ ಹಲವು ರೀತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಮೇ- ಜೂನ್‌ ತಿಂಗಳಿನಲ್ಲಿ ಗೌರವ ವೇತನ ರಹಿತವಾಗಿ ನೀಡುವ ಪದ್ದತಿ ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ ಎಂದು ತಿಳಿಸಿದರು.

ಅತಿಥಿ ಉಪನ್ಯಾಸಕರ ಸೇವೆಯನ್ನು 12 ತಿಂಗಳು ಎಂದು ಪರಿಗಣಿಸಿ ವೇತನ, ಉದ್ಯೋಗ ಭದ್ರತೆ ನೀಡುವಂತೆ ಹಲವು ಬಾರಿ ಸರ್ಕಾರಕ್ಕೆ ಮಾಡಿದ ಮನವಿ ಬಗ್ಗೆ ಇದುವರೆಗಿನ ಸರ್ಕಾರ ಪರಿಗಣಿಸಿಲ್ಲ. ಯುಜಿಸಿ ಶಿಫಾರಸಿನ ಅನ್ವಯ ವೇತನ ಹೆಚ್ಚಳವಾಗಿಲ್ಲ. ದೇಶದಲ್ಲಿ ಅತಿ ಕಡಿಮೆ ವೇತನ ರಾಜ್ಯದಲ್ಲಿ ನೀಡಲಾಗುತ್ತಿದೆ ಎಂದರು. ಇದೀಗ ಕೊರೋನಾ ಸಂಕಷ್ಟದಿಂದಾಗಿ ವಾರದಲ್ಲಿ 3 ರಿಂದ 4 ದಿನ ಸರ್ಕಾರಿ ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ ಪರ್ಯಾಯ ಉದ್ಯೋಗದಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕನಿಷ್ಠ ಗೌರವ ಧನದಲ್ಲಿ ಕುಟುಂಬ ನಿರ್ವಹಣೆ ತೀವ್ರ ಕಷ್ಟಕರವಾಗಿದೆ.

ಬಡವರ ಹೊಟ್ಟೆ ಸೇರಬೇಕಿದ್ದ ಅಕ್ಕಿಯಲ್ಲೂ ಭಾರೀ ಅಕ್ರಮ..!

ಈ ದಿಸೆಯಲ್ಲಿ ಹಲವು ವರ್ಷಗಳಿಂದ ನಿರ್ಲಕ್ಷಕ್ಕೆ ಒಳಗಾಗಿರುವ ಅತಿಥಿ ಉಪನ್ಯಾಸಕರ ಸಮಸ್ಯೆಗೆ ಶಾಶ್ವತ ಪರಿಹಾರ ಕೈಗೊಂಡು ನಂಬಿರುವ ಕುಟುಂಬದ ಹಿತರಕ್ಷಣೆಗೆ ಮುಖ್ಯಮಂತ್ರಿ ಯಡಿಯೂರಪ್ಪನವರು ಮಾನವೀಯ ದೃಷ್ಟಿಯಿಂದ ಸ್ಪಷ್ಟವಾದ ನಿರ್ಧಾರವನ್ನು ಕೈಗೊಳ್ಳುವಂತೆ ಮನವಿ ಮಾಡಿದರು. ವೇತನ ರಹಿತವಾಗಿ ಮೇ ಹಾಗೂ ಜೂನ್‌ ತಿಂಗಳಲ್ಲಿ ಪರೀಕ್ಷಾ ಕೊಠಡಿ ಮೇಲ್ವಿಚಾರಣೆ,ಮೌಲ್ಯಮಾಪನ ಮತ್ತಿತರ ಕಾರ್ಯಗಳಲ್ಲಿ ಪಾಲ್ಗೊಳ್ಳುವುದು ಕಷ್ಟವಾಗಲಿದೆ ಎಂದು ವಿವರಿಸಿದರು.

ಸಮಿತಿಯ ಉಲ್ಲೇಖ ಪತ್ರ 1 ಮತ್ತು 2 ರ ಅನ್ವಯ ಅತಿಥಿ ಉಪನ್ಯಾಸಕರ ಬಾಕಿ ವೇತನವನ್ನು ಹಣಕಾಸು ಇಲಾಖೆ ಒಪ್ಪಿಗೆ ಪಡೆದು ಬಿಡುಗಡೆಗೊಳಿಸಿದ ಮುಖ್ಯಮಂತ್ರಿಗಳಿಗೆ ಸಮಿತಿ ಪರವಾಗಿ ಕೃತಜ್ಞತೆ ಸಲ್ಲಿಸಿದರು. ಸಂಸದ ರಾಘವೇಂದ್ರ ಮಾತನಾಡಿ, ಅತಿಥಿ ಉಪನ್ಯಾಸಕರ ಸಮಸ್ಯೆಯನ್ನು ರಾಜ್ಯ ಸರ್ಕಾರದ ಗಮನ ಸೆಳೆದು ಪರಿಹಾರಕ್ಕೆ ಯತ್ನಿಸಲಾಗುವುದು ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಸಮಿತಿಯ ಅಶೋಕ್‌ ಮುಖಂಡ ವಸಂತಗೌಡ, ಹಾಲಪ್ಪ ಮೊದಲಾದವರು ಇದ್ದರು.
 

Latest Videos
Follow Us:
Download App:
  • android
  • ios