ಪಡಿತರ ಅಕ್ಕಿ ಅಕ್ರಮ ದಾಸ್ತಾನು ಪತ್ತೆ| ಕೊಪ್ಪಳ ಗೊಂಡಬಾಳ ಗ್ರಾಮದಲ್ಲಿ ಸಿಕ್ಕಿದ್ದು 11.66 ಲಕ್ಷ ಮೌಲ್ಯದ ಸುಮಾರು  448 ಕ್ವಿಂಟಲ್‌ ಅಕ್ಕಿ| ಪ್ರಧಾನಮಂತ್ರಿ ನೀಡಿದ್ದ ಪಡಿತರ ಕಳ್ಳಸಾಗಾಣೆಯಲ್ಲಿ ಪತ್ತೆ| ಹುಬ್ಬಳ್ಳಿ, ಮುಂಬೈವರೆಗೂ ಹಬ್ಬಿದ ದಂಧೆಯ ಜಾಲ|

ಕೊಪ್ಪಳ(ಮೇ.14):  ಕೊರೋನಾ ಸಂಕಷ್ಟದಲ್ಲಿ ಜನರಿಗೆ ಆಧಾರವಾಗಲಿ ಎಂದು ಸರ್ಕಾರ ನೀಡಿದ್ದ ಉಚಿತ ಪಡಿತರವನ್ನು ಅಕ್ರಮವಾಗಿ ದಾಸ್ತಾನು ಮಾಡಿ, ಕೊಳ್ಳೆ ಹೊಡೆಯುವವರ ಜಾಲವನ್ನು ತಾಲೂಕಿನ ಹೊಸಗೊಂಡಬಾಳ ಗ್ರಾಮದಲ್ಲಿ ಪತ್ತೆ ಮಾಡಲಾಗಿದೆ.

ಆಹಾರ ಮತ್ತು ನಾಗರಿಕ ಸರಬರಾಜ ಇಲಾಖೆಯ ಉಪನಿರ್ದೇಶಕ ನಾರಾಯಣರಡ್ಡಿ, ತಹಸೀಲ್ದಾರ ಜೆ.ಬಿ. ಮಜ್ಜಿಗಿ ನೇತೃತ್ವದಲ್ಲಿ ಮಂಗಳವಾರ ತಡರಾತ್ರಿ ಕೊಪ್ಪಳ ತಾಲೂಕಿನ ಹೊಸಗೊಂಡಬಾಳ ಗ್ರಾಮದಲ್ಲಿ ದಾಳಿ ಮಾಡಿ, ಹತ್ತು ಮನೆಯಲ್ಲಿ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದು, 11.66 ಲಕ್ಷ ಮೌಲ್ಯದ ಸುಮಾರು 448 ಕ್ವಿಂಟಲ್‌ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ.

ಕೊರೋನಾ ಮಧ್ಯೆಯೂ ರಾಜಕೀಯ: BJPಗೆ ಶಾಕ್‌ಗೆ ಕೊಟ್ಟ ಆಪರೇಷನ್‌ ಹಸ್ತ..!

ಕ್ರಿಮಿನಲ್‌ ಮೊಕದ್ದಮೆ:

ಘಟನೆಗೆ ಸಂಬಂಧಿಸಿದಂತೆ 10 ಮನೆಯ ಮಾಲೀಕರ ವಿರುದ್ಧ ಕೊಪ್ಪಳ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಆಹಾರ ನಿರೀಕ್ಷಕ ಚನ್ನಬಸಪ್ಪ ನೀಡಿದ ದೂರಿನ ಪ್ರಕಾರ ಪ್ರಕರಣ ದಾಖಲಿಸಲಾಗಿದ್ದು, ​ಒ​ಬ್ಬನನ್ನು ಬಂಧಿಸಿಲಾಗಿದೆ. ಉಳಿದವರು ಪರಾರಿಯಾಗಿದ್ದಾರೆ.

ಹೊಸಗೊಂಡಬಾಳದ ಪ್ರಭಾಕರ ಲಕ್ಷ್ಮಣ ಭಜಂತ್ರಿ ಎಂಬುವರನ್ನು ಬಂಧಿಸಿಲಾಗಿದೆ. ಕರಿಯಪ್ಪ ಭಜಂತ್ರಿ, ನಾಗಪ್ಪ ರಂಗಪ್ಪ ಭಜಂತ್ರಿ, ಸೋಮಪ್ಪ ರಾಮಣ್ಣ ಭಜಂತ್ರಿ, ಹುಲಿಗೆಮ್ಮಾ ಯಲ್ಲಪ್ಪ, ಫಕೀರಪ್ಪ ರಂಗಪ್ಪ, ಮಂಜುನಾಥ ರಾಮಪ್ಪ, ಗ್ಯಾನಪ್ಪ ಮುದಕಪ್ಪ, ಫಕೀರಪ್ಪ ಹನುಮಪ್ಪ, ಚನ್ನವ್ವ ಗ್ಯಾನಪ್ಪ ಎನ್ನುವವರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.

ಮನೆಯಲ್ಲಿತ್ತು ತೂಕದ ಯಂತ್ರ:

ಆಹಾರ ಇಲಾಖೆ ಅಧಿಕಾರಿಗಳ ದಾಳಿಯ ಸಂದರ್ಭದಲ್ಲಿ ಮೂರ್ನಾಲ್ಕು ಮನೆಗಳಲ್ಲಿ ಅಕ್ಕಿಯನ್ನು ತೂಕ ಮಾಡುವ ಯಂತ್ರ ಸಹ ಪತ್ತೆಯಾಗಿದೆ. ಯಂತ್ರವನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಪಡಿತರ ಅಕ್ರಮ ದಾಸ್ತಾನು ಮತ್ತು ಸಾಗಣೆ ಹಲವಾರು ದಿನಗಳಿಂದ ನಿರಾತಂಕವಾಗಿ ನಡೆಯುತ್ತಿತ್ತು ಎಂದು ಹೇಳಲಾಗಿದೆ. ಅದಕ್ಕೆ ಬೇಕಾದ ಎಲ್ಲ ರೀತಿಯ ವ್ಯವಸ್ಥೆಗಳನ್ನು ಅಲ್ಲಿ ಮಾಡಿಕೊಳ್ಳಲಾಗಿತ್ತು.

ಗದಗನಲ್ಲಿ ಪತ್ತೆ:

ಕೊಪ್ಪಳದಿಂದ ಅಕ್ರಮವಾಗಿ ಸಾಗಿಸುತ್ತಿದ್ದ ಪಡಿತರ ಅಕ್ಕಿಯ ಲಾರಿಯನ್ನು ಮಂಗಳವಾರ ಸಂಜೆ ಗದಗ ಜಿಲ್ಲೆಯಲ್ಲಿ ಪತ್ತೆ ಮಾಡಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಬಳಿಕ ಅದರ ಮೂಲ ಹುಡುಕುತ್ತ ಹೋದಾಗ ಅಕ್ರಮವಾಗಿ ಅಕ್ಕಿ ದಾಸ್ತಾನು ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಪ್ರಕರಣದ ಬೆನ್ನಲ್ಲಿಯೇ ಕೊಪ್ಪಳ ಕಿರಣ್‌ ಟ್ರೇಡರ್ಸ್‌ನಲ್ಲಿಯೂ ಅಕ್ರಮ ಅಕ್ಕಿ ಪತ್ತೆಯಾಗಿದ್ದು, ಮಾಲೀಕ ರಾಜಾಹುಲಿ ಪೀರಸಾಬ ಎಂಬುವರನ್ನು ಬಂಧಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ಬೋಲೋರು ವಾಹನ ವಶಕ್ಕೆ ತೆಗೆದುಕೊಳ್ಳಲಾಗಿದೆ.

ಭಾರೀ ಜಾಲ

ಅಕ್ರಮವಾಗಿ ಪಡಿತರ ಸಂಗ್ರಹಿಸಿ ಸಾಗಿಸುವ ದೊಡ್ಡ ಜಾಲವೇ ಕೊಪ್ಪಳದಲ್ಲಿದೆ. ಈಗ ಪತ್ತೆಯಾಗಿರುವುದು ತೀರಾ ಸಣ್ಣ ಪ್ರಕರಣ ಎಂದೇ ಹೇಳಲಾಗುತ್ತಿದೆ. ರಾಜ್ಯದ ಬಹುತೇಕ ಪಡಿತರ ಇಲ್ಲಿಯ ಜಾಲದ ಮೂಲಕವೇ ನಾನಾ ಕಡೆಗೆ ಸಾಗಿಸಲಾಗುತ್ತದೆ.

ಗಂಗಾವತಿಯಲ್ಲಂತೂ ಇದರ ದೊಡ್ಡ ಜಾಲವೇ ಇದ್ದು, ಪಡಿತರ ಅಕ್ಕಿಯನ್ನೇ ಪಾಲಿಶ್‌ ಮಾಡಿ, ಸೋನಾಮಸೂರಿ ಅಕ್ಕಿಯೊಂದಿಗೆ ಸೇರಿಸಿ ಮಾರಾಟ ಮಾಡಲಾಗುತ್ತದೆ. ಕೆಲ ಮಿಲ್‌ಗ​ಳÜಲ್ಲಿ ಒಂದೇ ಒಂದು ಚೀಲ ಭತ್ತವನ್ನು ಕ್ರಷಿಂಗ್‌ ಮಾಡದಿದ್ದರೂ ಇಂಥ ಅಕ್ರಮ ಅಕ್ಕಿಯನ್ನೇ ಪಾಲಿಶ್‌ ಮಾಡಿ, ರವಾನೆ ಮಾಡುವ ಜಾಲ ಇದೆ.

ಹುಬ್ಬಳ್ಳಿ, ಬಾಂಬೆಗೆ ನಂಟು:

ಕೊಪ್ಪಳದಿಂದ ಅಕ್ಕಿಯನ್ನು ಹುಬ್ಬಳ್ಳಿ ಮತ್ತು ಮುಂಬೈಗೆ ಕಳುಹಿಸಿಕೊಡಲಾಗುತ್ತದೆ ಎನ್ನಲಾಗಿದೆ. ಹುಬ್ಬಳ್ಳಿ ಮತ್ತು ಗಂಗಾವತಿಯಲ್ಲಿ ಇಂಥ ಪಡಿತರ ಅಕ್ಕಿಯನ್ನು ಖರೀದಿಸಿ ಪಾಲಿಶ್‌ ಮಾಡಿ ಬದಲಾಯಿಸುವ ದೊಡ್ಡ ಜಾಲವೇ ಇದೆ ಎನ್ನಲಾಗಿದೆ. ಹಲವಾರು ಪ್ರಭಾವಿಗಳು, ರಾಜಕೀಯ ನಾಯಕರು ಇದರ ಹಿಂದಿದ್ದಾರೆ ಎಂದು ಹೇಳಲಾಗಿದೆ. ಇವುಗಳ ಸಮಗ್ರ ತನಿಖೆಯಾದರೆ ಈ ಜಾಲದ ಹಿಂದಿರುವ ವ್ಯಕ್ತಿಗಳು ಬಯಲಿಗೆ ಬರಲಿದ್ದಾರೆ.

ಅಕ್ರಮವಾಗಿ ಪಡಿತರ ಅಕ್ಕಿ ಸಂಗ್ರಹ ಮಾಡಿರುವ ಖಚಿತ ಮಾಹಿತಿ ದೊರೆಯುತ್ತಿದ್ದಂತೆ ನಮ್ಮ ಅಧಿಕಾರಿಗಳ ತಂಡ ರಚನೆ ಮಾಡಿ, ದಾಳಿ ಮಾಡಲಾಗಿದೆ. ಸುಮಾರು 448 ಕ್ವಿಂಟಲ್‌ ಅಕ್ಕಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲ್‌ಕುಮಾರ ಅವರು ತಿಳಿಸಿದ್ದಾರೆ.