ಬೊಮ್ಮನಹಳ್ಳಿಯಲ್ಲಿ ಸಿಎಂ ಮತ್ತು ಡಿಕೆಶಿ ಆಗಮನ ರದ್ದಾದ ಹಿನ್ನೆಲೆಯಲ್ಲಿ ಸಸಿ ನೆಡುವ ಕಾರ್ಯಕ್ರಮ ರದ್ದುಗೊಂಡಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ಸಸಿಗಳು ವ್ಯರ್ಥವಾಗಿವೆ. ಶಾಸಕ ಸತೀಶ್ ರೆಡ್ಡಿ ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು (ಜು.18): ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹೆಚ್.ಎಸ್.ಆರ್ ಬಡಾವಣೆಯಲ್ಲಿ ಅರಣ್ಯ ಇಲಾಖೆಯಿಂದ ಹತ್ತು ಸಾವಿರ ಸಸಿ ನೆಡುವ ಕಾರ್ಯಕ್ರಮ ಆಯೋಜಿಸಲಾಗಿತ್ತು.ಬೊಮ್ಮನಹಳ್ಳಿ ನಿಕಟ ಪೂರ್ವ ಕಾಂಗ್ರೆಸ್ ಅಭ್ಯರ್ಥಿ ಉಮಾಪತಿ ಗೌಡ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿದ್ದು, ಸಸಿ ನೆಡುವ ಸಲುವಾಗಿ ವಿವಿಧ ಬಗೆಯ ಸಾವಿರಾರು ಸಸಿಗಳನ್ನ ತರಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯ ಮಂತ್ರಿ ಡಿಕೆ ಶಿವಕುಮಾರ್‌ ಅವರನ್ನ ಆಹ್ವಾನಿಸಲಾಗಿತ್ತು. ಆದರೆ ಡಿಕೆ ಶಿವಕುಮಾರ್‌ ಅವರಿಗೆ ಆರೋಗ್ಯ ಸಮಸ್ಯೆ ಹಾಗೂ ಸಿದ್ದರಾಮಯ್ಯ ಅವರಿಗೆ ಬೇರೆ ಕೆಲಸ ನಿಮಿತ್ತ ಕಾರ್ಯಕ್ರಮವನ್ನ ರದ್ದು ಗೊಳಿಸಿದ್ದಾರೆ.

ಕಾರ್ಯಕ್ರಮವನ್ನ ರದ್ದುಗೊಳಿಸಿದ್ದಕ್ಕೆ ಕಾಂಗ್ರೆಸ್‌ ಮುಖಂಡರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿಗಳು ಸಸಿಗಳನ್ನ ಅಲ್ಲೆ ಎಸೆದು ಹೋಗಿದ್ದಾರೆ. ಇದರ ವಿರುದ್ದ ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಅಕ್ರೋಶವನ್ನ ವ್ಯಕ್ತಪಡಿಸಿದ್ದು, ಬೊಮ್ಮನಹಳ್ಳಿ ಯಲ್ಲಿ ಸುದ್ದಿಗೋಷ್ಟಿ ನಡೆಸಿ ಸಸಿಗಳು, ಬ್ಯಾರಿಕೇಟ್ ಹಾಗೂ ಕಾರ್ಯಕ್ರಮ ಆಯೋಜನೆಗೆ ಲಕ್ಷಾಂತರ ರೂ ಪೋಲು ಮಾಡಿರುವುದಕ್ಕೆ ಅಕ್ರೋಶ ಹೊರಹಾಕಿದ್ದು, ಕಾಂಗ್ರೆಸ್‌ ವಿರುದ್ದ ಹರಿಹಾಯ್ದಿದ್ದಾರೆ. ಕಾಂಗ್ರೆಸಿಗರು ಆಡಳಿತ ಪಕ್ಷ ತಮ್ಮದೆಂದು ಅಕ್ರಮಗಳಲ್ಲಿ ತೊಡಗಿದ್ದಾರೆಂದು ಗಂಭೀರ ಆರೋಪ ಮಾಡಿದ್ದು ಉಮಾಪತಿಗೌಡ ವಿರುದ್ದ ಸಹ ಆಕ್ರೋಶವನ್ನ ವ್ಯಕ್ತಪಡಿಸಿದ್ದಾರೆ. ಸಾವಿರಾರು ಔಷಧ ಗುಣಗಳುಳ್ಳ ಸಸಿಗಳನ್ನ ವ್ಯರ್ಥಮಾಡಿರುವುದಕ್ಕೆ ಪರಿಸರವಾಧಿ ಅ.ನ.ಯಲ್ಲಪ್ಪರೆಡ್ಡಿ ಸಹ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾವಿರಾರು ಸಸಿಗಳು ಒಣಗಿ ಹಾಳಾಗುತ್ತಿವೆ.