ಮುಧೋಳದಲ್ಲಿ ರೈತರ ಹೋರಾಟಕ್ಕೆ ಫಲ ಸಿಕ್ಕಿದ್ದು, ಪ್ರತಿ ಟನ್ ಕಬ್ಬಿಗೆ ಮೊದಲ ಕಂತಾಗಿ ₹3,800 ನೀಡಲು 4 ಸಕ್ಕರೆ ಕಾರ್ಖಾನೆಗಳು ಒಪ್ಪಿಕೊಂಡಿವೆ. ಇದರಿಂದಾಗಿ ರೈತರು ಹೋರಾಟ ಹಿಂಪಡೆದು ಕಬ್ಬು ಪೂರೈಸಲು ನಿರ್ಧರಿಸಿದ್ದು, ಉಳಿದ ಕಾರ್ಖಾನೆಗಳೂ ಇದೇ ದರ ನೀಡುವಂತೆ ಆಗ್ರಹಿಸಿದ್ದಾರೆ.

ಮುಧೋಳ (ನ.13) : ಪ್ರತಿ ಟನ್‌ ಕಬ್ಬಿಗೆ ₹4200 ಘೋಷಣೆ ಮಾಡುವಂತೆ ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ರೈತರು ನಡೆಸುತ್ತಿದ್ದ ಹೋರಾಟಕ್ಕೆ ಅರ್ಧ ಜಯ ಸಿಕ್ಕಿದೆ. ಗುರುವಾರ ನಗರದಲ್ಲಿ ನಾಲ್ಕು ಕಾರ್ಖಾನೆಗಳ ಮಾಲೀಕರೊಂದಿಗೆ ನಡೆದ ಸಭೆ ಯಶಸ್ವಿಯಾಗಿದ್ದು, ಪ್ರತಿ ಟನ್‌ ಕಬ್ಬಿಗೆ ₹3800 ದರ ನೀಡಲು ಕಾರ್ಖಾನೆಗಳು ಒಪ್ಪಿಕೊಂಡಿವೆ. ಈ ದರ ಮೊದಲ ಕಂತಾಗಿದ್ದು, ಮುಂದಿನ ದಿನಗಳಲ್ಲಿ ಸಕ್ಕರೆ ದರ ಹೆಚ್ಚಾದರೆ ಎರಡನೇ ಕಂತಿನಲ್ಲಿಯೂ ಕಬ್ಬು ಬೆಳೆಗಾರರಿಗೆ ಮತ್ತಷ್ಟು ದರ ನೀಡಲು ಕಾರ್ಖಾನೆಗಳು ಒಪ್ಪಿಕೊಂಡಿವೆ.

₹200 ದರ ಹೆಚ್ಚೇ ಸಿಕ್ಕಂತಾಗಿದೆ

ಈ ಮೂಲಕ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಗುರ್ಲಾಪುರದಲ್ಲಿ ರೈತರು ತೀರ್ಮಾನಿಸಿದ್ದ ₹3600 ದರಕ್ಕಿಂತ ₹200 ದರ ಹೆಚ್ಚೇ ಸಿಕ್ಕಂತಾಗಿದೆ. ಸಮೀರವಾಡಿ ಕಾರ್ಖಾನೆ, ನಿರಾಣಿ, ಐಸಿಪಿಎಲ್, ಪ್ರಭುಲಿಂಗೇಶ್ವರ ಕಾರ್ಖಾನೆಗಳು ರೈತರೊಂದಿಗೆ ನಡೆಸಿದ ಮಾತುಕತೆ ಯಶಸ್ವಿಯಾಗಿದೆ. ಈ ಹಿನ್ನೆಲೆಯಲ್ಲಿ ರೈತರು ಕೂಡ ಕಾರ್ಖಾನೆಗಳು ಕೊಡಲು ಮುಂದಾಗಿರುವ ₹3800 ದರವನ್ನು ಒಪ್ಪಿಕೊಂಡಿದ್ದು, ಶುಕ್ರವಾರದಿಂದ ಆ ಕಾರ್ಖಾನೆಗಳಿಗೆ ಕಬ್ಬು ಪೂರೈಸಲು ತೀರ್ಮಾನಿಸಿದ್ದಾರೆ. ಆದರೆ, ಬಾಗಲಕೋಟೆ ಜಿಲ್ಲೆಯ ಇನ್ನುಳಿದ ಸಕ್ಕರೆ ಕಾರ್ಖಾನೆಗಳು ಕೂಡ ಇದೆ ದರವನ್ನು ಒಪ್ಪಿಕೊಳ್ಳುವಂತೆ ರೈತರು ಪಟ್ಟು ಹಿಡಿದಿದ್ದು, ಅವರು ಒಪ್ಪುವವರೆಗೆ ಹೋರಾಟ ಮುಂದುವರಿಸಲು ತೀರ್ಮಾನಿಸಿದ್ದಾರೆ.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ರೈತಪರ ಹೋರಾಟಗಾರರಾದ ಬಸವಂತಪ್ಪ ಕಾಂಬಳೆ, ಈರಪ್ಪ ಹಂಚಿನಾಳ, ದುಂಡಪ್ಪ ಯರಗಟ್ಟಿ, ವೆಂಕಣ್ಣ ಮಳಲಿ ಅವರು, ಮುಧೋಳ ತಾಲೂಕು ಕಬ್ಬು ಬೆಳೆಗಾರರ ಹೋರಾಟಕ್ಕೆ ಜಯ ಸಿಕ್ಕಿದೆ ಎಂದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸಮ್ಮುಖದಲ್ಲಿ ಸಮೀರವಾಡಿ ಕಾರ್ಖಾನೆಯ ಪರವಾಗಿ ಈರಣ್ಣ ಕಣಬೂರ, ನಿರಾಣಿ ಕಾರ್ಖಾನೆಯ ಪರವಾಗಿ ಗೋಪಾಲ ಗಂಗರಡ್ಡಿ, ಐಸಿಪಿಎಲ್ ಕಾರ್ಖಾನೆಯ ಪರವಾಗಿ ಪ್ರಭು ಪಾಟೀಲ, ಪ್ರಭುಲಿಂಗೇಶ್ವರ ಕಾರ್ಖಾನೆಯ ಪರವಾಗಿ ಪಚ್ಚಣ್ಣವರ ಅವರು ಕಬ್ಬು ಹೋರಾಟಗಾರರ ವೇದಿಕೆಗೆ ಬಂದು ಮೊದಲನೇ ಕಂತಿನ ಪ್ರತಿ ಟನ್ ಕಬ್ಬಿಗೆ ₹3800 ಬೆಲೆ ನೀಡುವುದಾಗಿ ಘೋಷಿಸಿದ್ದಾರೆ.

ಇಂದಿನಿಂದ ರೈತರ ಹೋರಾಟಕ್ಕೆ ತೆರೆ

ನಂತರ ಎರಡು ಮತ್ತು ಮೂರನೇ ಕಂತಿನಲ್ಲಿ ಬೆಳಗಾವಿ ಜಿಲ್ಲೆಯ ಉಗಾರ ಕಾರ್ಖಾನೆಯವರು ಎಷ್ಟು ಕೊಡುತ್ತಾರೆ, ಆ ಬೆಲೆಯನ್ನು ನಾವೂ ಕೊಡಲು ಸಿದ್ದರಿದ್ದೇವೆಂದು ತಿಳಿಸಿದ್ದಾರೆ. ಹೀಗಾಗಿ, ಶುಕ್ರವಾರದಿಂದ ರೈತರ ಹೋರಾಟಕ್ಕೆ ತೆರೆ ಬೀಳಲಿದೆ. ರೈತರು ಎಂದಿನಂತೆ ಕಾರ್ಖಾನೆಗಳಿಗೆ ಕಬ್ಬು ಪೂರೈಸಬಹುದು ಎಂದು ತಿಳಿಸಿದರು.ಉಳಿದ ಕಾರ್ಖಾನೆಗಳು ಕೂಡ ಇದೆ ದರ ಅನುಸರಿಸಲಿ: ರೈತ ಹೋರಾಟಗಾರ ಈರಪ್ಪ ಹಂಚಿನಾಳ ಕನ್ನಡಪ್ರಭದೊಂದಿಗೆ ಮಾತನಾಡಿ, ನಮ್ಮ ಹೋರಾಟ ಯಾವತ್ತೂ ರೈತಪರವಾಗಿದೆ. ರೈತರಿಗೆ ನಾವು ನ್ಯಾಯ ಕೊಡಿಸಲು ಮುಂದಾಗಿದ್ದೇವೆ. ಈಗ ನಾಲ್ಕು ಸಕ್ಕರೆ ಕಾರ್ಖಾನೆಗಳು ಮೊದಲ ಕಂತಿನಲ್ಲಿ ₹3800 ನೀಡಲು ಮುಂದಾಗಿವೆ. ಇನ್ನುಳಿದ ಕಂತನ್ನು ಮುಂದಿನ ದಿನಗಳಲ್ಲಿ ತೀರ್ಮಾನ ಕೈಗೊಳ್ಳಲಿವೆ. ಆ ತೀರ್ಮಾನ ಆಧರಿಸಿ ರೈತರ ಹೋರಾಟ ಕೂಡ ನಿರ್ಧಾರವಾಗಲಿದೆ. ಅದರಂತೆ ಬಾಗಲಕೋಟೆ, ವಿಜಯಪುರ ಜಿಲ್ಲೆಯಲ್ಲಿನ ಸಕ್ಕರೆ ಕಾರ್ಖಾನೆ ಮಾಲೀಕರು ಕೂಡ ಮೊದಲ ಕಂತಿನಲ್ಲಿ ಪ್ರತಿ ಟನ್‌ ಕಬ್ಬಿಗೆ ₹3800 ದರ ನೀಡಬೇಕು ಎಂದು ಆಗ್ರಹಿಸಿದರು.

ತಹಸೀಲ್ದಾರ್‌ರ ಕಚೇರಿ ಮುಂಭಾಗದಲ್ಲಿ ಕಬ್ಬು ಬೆಳೆಗಾರರ ಹೋರಾಟ ಸಮಿತಿ ಕಬ್ಬಿಗೆ ಸೂಕ್ತ ಬೆಲೆ ನೀಡುವಂತೆ ಆಗ್ರಹಿಸಿ ಕಳೆದ ಹಲವಾರು ದಿನಗಳಿಂದ ಹೋರಾಟ ನಡೆಸಿದ್ದರು. ಈ ವೇಳೆ ವೆಂಕಣ್ಣ ಗಿಡಪ್ಪನವರ, ಎಸ್.ಎಸ್.ಅಕ್ಕಿಮರಡಿ, ಸದಾಶಿವ ಕದಂ, ಅನಂತ ಘೋರ್ಪಡೆ, ಸಂತೋಷ ಘೋರ್ಪಡೆ ಸೇರಿದಂತೆ ಇತರರು ಪಾಲ್ಗೊಂಡಿದ್ದರು.