ಎನ್‌.ಎಲ್‌.ಶಿವಮಾದು

ಬೆಂಗಳೂರು(ನ.06): ಬೆಂಗಳೂರು ಪೂರ್ವ ಮತ್ತು ಆನೇಕಲ್‌ ಭಾಗದಲ್ಲಿ ದಿನದಿಂದ ದಿನಕ್ಕೆ ಆಂತರ್ಜಲ ಪ್ರಮಾಣ ಕುಸಿಯುತ್ತಿರುವ ಪರಿಣಾಮ, ಅಂತರ್ಜಲದಲ್ಲಿ ಕಾರ್ಬೋನೆಟ್‌, ಬೈ ಕಾರ್ಬೋನೆಟ್‌, ನೈಟ್ರೇಟ್‌ ಅಂಶಗಳು ಸೇರುತ್ತಿದೆ. ನೀರು ಗಡಸುತನಕ್ಕೆ ತಿರುಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಎಲೆಕ್ಟ್ರಾನಿಕ್‌ ಸಿಟಿ, ಹೆಬ್ಬಗೋಡಿ, ಆನೇಕಲ್‌, ಮಹದೇವಪುರ, ಕೆ.ಆರ್‌.ಪುರ, ವರ್ತೂರು, ಬೆಳ್ಳಂದೂರು ಸುತ್ತಮುತ್ತಲ ಪ್ರದೇಶದಲ್ಲಿ ಅಂತರ್ಜಲ ಪಾತಾಳಕ್ಕೆ ಕುಸಿಯುತ್ತಿದೆ. ಕಳೆದ ಐದು ವರ್ಷದಲ್ಲಿ ಅಂದಾಜು 500 ಅಡಿಗಳಷ್ಟು ನೀರು ಕುಸಿದಿದೆ. ಇದರಿಂದ ನೀರಿನ ಗುಣಮಟ್ಟ ಕೂಡ ಕಳಪೆಯಾಗುತ್ತಿದೆ.

ಸಾಮಾನ್ಯವಾಗಿ ಬೆಂಗಳೂರು ಪೂರ್ವ ಮತ್ತು ಹೊಸೂರು ರಸ್ತೆಯಲ್ಲಿ ಕೈಗಾರಿಕಾ ಪ್ರದೇಶಗಳು, ಐಟಿ-ಬಿಟಿ ಸಂಸ್ಥೆಗಳು ತಲೆಯೆತ್ತುತ್ತಿವೆ. ಇದರಿಂದ ಆ ಸುತ್ತಮುತ್ತಲ ಭಾಗದಲ್ಲಿ ವಾಸಿಸುವ ಜನಸಂಖ್ಯೆ ಪ್ರಮಾಣ ಕೂಡ ಏರುಗತಿಯಲ್ಲಿ ಸಾಗುತ್ತಿದೆ. ಬೇಸಾಯ ಭೂಮಿಗಳು ಕಟ್ಟಡಗಳಾಗಿ ಪರಿವರ್ತನೆಯಾಗುತ್ತಿದ್ದು, ನಿರೀಕ್ಷೆಗೂ ಮೀರಿ ಕಟ್ಟಡಗಳು, ಅಪಾರ್ಟ್‌ಮೆಂಟ್‌ಗಳ ಸಂಖ್ಯೆ ಹೆಚ್ಚುತ್ತಿದೆ. ಮರ-ಮುಟ್ಟುಗಳು, ಕೆರೆಗಳು, ಕೆರೆ ಜಲಾಯನ ಪ್ರದೇಶಗಳು ಕೂಡ ಒತ್ತುವರಿ ಮಾಡಿ ಕಟ್ಟಡಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಪರಿಣಾಮ, ಅಂತರ್ಜಲ ಅಧೋಗತಿಗೆ ಸಾಗುತ್ತಿದೆ ಎನ್ನುತ್ತಿವೆ ಅಂತರ್ಜಲ ನಿರ್ದೇಶನಾಲಯದ ಅಂಕಿ-ಸಂಖ್ಯೆಗಳು.

ನಿರ್ದೇಶನಾಲಯದ ಮಾಹಿತಿ ಪ್ರಕಾರ ಕಳೆದ ಐದು ವರ್ಷದಲ್ಲಿ ಬೆಂಗಳೂರು ಪೂರ್ವದಲ್ಲಿ 13.10 ಮೀಟರ್‌ ಹಾಗೂ ಆನೇಕಲ್‌ ಭಾಗದಲ್ಲಿ 8.16 ಮೀ. ಅಂತರ್ಜಲ ಕುಸಿದಿದೆ. ಇದರಿಂದ ನೀರಿನಲ್ಲಿ ಟೋಟಲ್‌ ಡಿಸಾಲ್ಡ್‌ ಸಾಲಿಡ್‌(ಟಿಡಿಎಸ್‌), ಕಾರ್ಬೋನೆಟ್‌, ಬೈ ಕಾರ್ಬೋನೆಟ್‌, ನೈಟ್ರೇಟ್‌ ಅಂಶಗಳು ಹೆಚ್ಚಳವಾಗುತ್ತಿದೆ. ಇದರಿಂದ ನೀರಿನ ಗಡಸುತನ ಸಹ ಹೆಚ್ಚಳವಾಗುತ್ತಿದೆ. ಬಳಕೆಗೆ ಯೋಗ್ಯ ನೀರಿನ ಗುಣಮಟ್ಟಸಹ ಕಡಿಮೆಯಾಗುತ್ತಿದೆ.

ಅಂತರ್ಜಲ ವೃದ್ಧಿ: ಈ ಬಾರಿ ಕಾರ್ಕಳದಲ್ಲಿಲ್ಲ ನೀರಿನ ಸಮಸ್ಯೆ

ಕೈಗಾರಿಕೆಗಳು ಕಾರಣ:

ಬೆಂಗಳೂರಿನ ಪೂರ್ವದ ಅರ್ಧದಷ್ಟುಬಡಾವಣೆಗಳ ನೀರು ಬೆಳ್ಳಂದೂರು ಮತ್ತು ವರ್ತೂರು ಕೆರೆ ಸೇರುತ್ತಿದೆ. ಕೆರೆಗಳ ಜಲಾಯನ ಪ್ರದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಕೈಗಾರಿಕೆಗಳು ನಡೆಯುತ್ತಿದ್ದು, ಕೈಗಾರಿಕೆಗಳಿಂದ ಬಿಡುವ ರಾಸಾಯನಿಕ ಮಿಶ್ರಿತ ತ್ಯಾಜ್ಯ ನೀರು ಅಂತರ್ಜಲಕ್ಕೂ ಕಂಟಕವಾಗಿದೆ ಎಂದು ತಿಳಿದು ಬಂದಿದೆ.

ಅಂತರ್ಜಲ ಕುಸಿತ ಕುರಿತು ಮಾತನಾಡಿದ ಅಂತರ್ಜಲ ನಿರ್ದೇಶನಾಲಯದ ಭೂ ವಿಜ್ಞಾನಿ ಡಾ. ಪ್ರಸನ್ನಕುಮಾರ್‌, ಹೆಚ್ಚಳವಾಗುತ್ತಿರುವ ಜನಸಂಖ್ಯೆ, ಕಟ್ಟಡಗಳು ಹಾಗೂ ಇದೇ ವೇಳೆ ಕೆರೆ ಜಲಾಯಶ ಪ್ರದೇಶಗಳು ಮತ್ತು ಕೆರೆಗಳ ನಾಶದಿಂದ ನಗರದಲ್ಲಿ ಅಂತರ್ಜಲ ಕುಸಿಯುತ್ತಿದೆ. 2015ರಲ್ಲಿ ಬೆಂಗಳೂರು ಪೂರ್ವ ಮತ್ತು ಆನೇಕಲ್‌ನಲ್ಲಿ ಪೂರ್ವ ಪ್ರದೇಶಗಳಲ್ಲಿ ಬೋರ್‌ವೆಲ್‌ನಲ್ಲಿ 1200ರಿಂದ 1300 ಅಡಿಗೆ ಸಿಗುತ್ತಿದ್ದ ನೀರು, ಈಗ 1500ರಿಂದ 1600 ಅಡಿ ಕುಸಿದಿದೆ. ಯಲಹಂಕ ಮತ್ತು ಹೆಬ್ಬಾಳದಲ್ಲಿ 800ರಿಂದ 900 ಅಡಿಗೆ ಕುಸಿದಿದೆ ಎಂದು ತಿಳಿಸಿದರು.

ಮಳೆ ನೀರು ಕೊಯ್ಲು, ಕೆರೆ ಉಳಿಸುವುದೇ ಪರಿಹಾರ

ಪರಿಸರದ ಮೇಲೆ ನಾಗರಿಕರು ಮತ್ತು ಸರ್ಕಾರ ನಿರ್ಲಕ್ಷ್ಯ ಮಾಡುತ್ತಿರುವುದೇ ಅಂತರ್ಜಲ ಮಟ್ಟದಿನದಿಂದ ದಿನಕ್ಕೆ ಕುಸಿಯಲು ಪ್ರಮುಖ ಕಾರಣವಾಗಿದೆ, ಪ್ರತಿಯೊಬ್ಬರೂ ಕಡ್ಡಾಯವಾಗಿ ಮಳೆ ನೀರು ಕೊಯ್ಲುವನ್ನು ಅಳವಡಿಸಿಕೊಳ್ಳಬೇಕು. ಮಳೆ ನೀರು ಕೊಯ್ಲು ಸಂಗ್ರಹಕ್ಕಾಗಿಯೇ ಸೊಂಪು ಮಾಡಬೇಕು. ಅಂತರ್ಜಲ ಮರುಪೂರಣ ತೊಟ್ಟಿಗಳನ್ನು ನಿರ್ಮಿಸಿದರೆ, ಗಡಸುತನ ನೀರು ನಿಧಾನವಾಗಿ ಮೃದುವಾಗಲಿದೆ. ಇದರಿಂದ ಮಳೆ ನೀರು ಕೊಯ್ಲು ಅಳವಡಿಸಿಕೊಂಡಿರುವ ಸುತ್ತಲಿನ 500 ಮೀ. ವ್ಯಾಪ್ತಿಯ ಬೋರ್‌ವೆಲ್‌ಗಳು ರೀಚಾಜ್‌ರ್‍ ಆಗಲಿವೆ. ನೀರನ್ನು ಸಮೃದ್ಧವಾಗಿ ಸಂರಕ್ಷಿಸಬಹುದಾಗಿದೆ ಎನ್ನುತ್ತಾರೆ ಮಳೆ ನೀರು ಕೊಯ್ಲು ತಜ್ಞ ವಿಶ್ವನಾಥ್‌. ಪ್ರಸ್ತುತ ಜನರು ಸಾಮಾನ್ಯವಾಗಿ 6ರಿಂದ 8 ಅಡಿ ಆಳದಲ್ಲಿ ಮಳೆ ನೀರು ಕೊಯ್ಲು ತೊಟ್ಟಿಗಳನ್ನು ಮಾಡುತ್ತಿದ್ದಾರೆ. ಇದನ್ನು ಕನಿಷ್ಠ 15ರಿಂದ 20 ಅಡಿ ಆಳದಲ್ಲಿ ಮಳೆ ನೀರು ಕೊಯ್ಲು ಮಾಡಿದರೆ ಉತ್ತಮ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಬೆಂ. ದಕ್ಷಿಣ, ಉತ್ತರದಲ್ಲಿ ಅಂತರ್ಜಲ ಚೇತರಿಕೆ

ಬೆಂ.ಪೂರ್ವ ಮತ್ತು ಆನೇಕಲ್‌ ಭಾಗದಲ್ಲಿ ಅಂತರ್ಜಲ ಕುಸಿಯುತ್ತಿದ್ದರೆ, ದಕ್ಷಿಣ ಮತ್ತು ಉತ್ತರ ಭಾಗದಲ್ಲಿ ಕಳೆದ ಐದು ವರ್ಷದಲ್ಲಿ ಅಂದಾಜು 10 ಮೀ.ನಷ್ಟುಅಂತರ್ಜಲ ಚೇತರಿಕೆಯಾಗಿರುವುದು ಖುಷಿಯ ವಿಚಾರವಾಗಿದೆ. ಪೂರ್ವಕ್ಕೆ ಹೋಲಿಸಿದಾಗ ದಕ್ಷಿಣ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೆರೆಗಳಿರುವುದೇ ಅಂತರ್ಜಲ ಪ್ರಮಾಣ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ. ಅಲ್ಲದೆ, ಪರಿಣಾಮಕಾರಿಯಾಗಿ ಮಳೆ ನೀರು ಕೊಯ್ಲು ಅಳವಡಿಸಿಕೊಳ್ಳುತ್ತಿರುವುದರಿಂದಲೂ ಅಂತರ್ಜಲ ಸುರಕ್ಷಿತವಾಗಿದೆ. ದಕ್ಷಿಣ ಭಾಗದಲ್ಲಿ ಸುಮಾರು ಸುಮಾರು 450ರಿಂದ 650 ಅಡಿಗೆ ನೀರು ಸಿಗುತ್ತಿದೆ ಎನ್ನುತ್ತಾರೆ ಡಾ. ಪ್ರಸನ್ನಕುಮಾರ್‌.

ಬೆಂಗಳೂರಿನ ವಿವಿಧೆಡೆ ಅಂತರ್ಜಲ ಅಂಕಿ ಅಂಶಗಳು (ಮೀ.ಗಳಲ್ಲಿ)

ಪ್ರದೇಶಗಳು 2015 2016 2017 2018 2019 ಕುಸಿತ/ಚೇತರಿಕೆ
ಬೆಂ.ಪೂರ್ವ 22.65 18.91 22.87 28.65 35.74 -13.10
ಆನೇಕಲ್‌ 26.06 26.37 34.71 32.53 34.21 -8.16
ಬೆಂ. ಉತ್ತರ 37.34 28.88 29.04 20.62 28.28 +9.47
ಬೆಂ. ದಕ್ಷಿಣ 32.66 22.08 21.06 20.15 21.80 +10.87