ಅಂತರ್ಜಲ ವೃದ್ಧಿ: ಈ ಬಾರಿ ಕಾರ್ಕಳದಲ್ಲಿಲ್ಲ ನೀರಿನ ಸಮಸ್ಯೆ
ಕಳೆದ ಹಲವಾರು ವರ್ಷಗಳಿಂದ ಕಾಡುತ್ತಿದ್ದ ನೀರಿನ ಸಮಸ್ಯೆ ಈ ಬಾರಿ ತಾಲೂಕಿನ ಜನತೆಗೆ ಅಷ್ಟಾಗಿ ಕಾಡಲಿಲ್ಲ. ಒಂದು ಕಡೆ ಬಿಸಿಲಿನ ಪ್ರಖರತೆ ತೀವ್ರವಾಗಿದ್ದರೂ ಹವಾಮಾನ ವೈಪರೀತ್ಯಗಳಿಂದಾಗಿ ವಾರಕ್ಕೆ ಎರಡು ಮೂರು ಬಾರಿ ಸುರಿದ ಮಳೆಯಿಂದಾಗಿ ಕೆರೆಗಳಲ್ಲಿ ನೀರು ಗಣನೀಯ ಪ್ರಮಾಣದಲ್ಲಿ ಉಳಿದುಕೊಂಡಿದೆ. ಇದರಿಂದಾಗಿ ತಾಲೂಕಿನ ಬಹುತೇಕ ಪ್ರದೇಶಗಳಲ್ಲಿ ಈ ವರ್ಷ ನೀರಿನ ಅಭಾವ ಕಾಡಿಲ್ಲ. ಇಲ್ಲಿವೆ ಮುಂಡ್ಲಿ ಜಲಾಶಯದ ಫೋಟೋಸ್
ಕಾರ್ಕಳ ನಗರಕ್ಕೆ ನೀರು ಪೂರೈಕೆ ಮಾಡುವಲ್ಲಿ ಮುಂಡ್ಲಿ ಹಾಗೂ ರಾಮಸಮುದ್ರ ಪ್ರಮುಖ ಎರಡು ಸರಬರಾಜು ಕೇಂದ್ರವಾಗಿದೆ. ಮುಂಡ್ಲಿ ಜಲಾಶಯದಲ್ಲಿ 125 ಎಚ್ ಪಿ (ಜೆಟ್) ಸಾಮರ್ಥ್ಯದ 2 ಪಂಪ್ ಅಳವಡಿಕೆ ಮಾಡಲಾಗಿದ್ದು, ರಾಮ ಸಮುದ್ರ ಪಂಪ್ ಹೌಸ್ ಕೆಳ ಭಾಗದಲ್ಲಿ 40ಜೆಟ್ ಸಾಮರ್ಥ್ಯ 2 ಪಂಪ್ ಹಾಗೂ ಮೇಲ್ಬಾಗದಲ್ಲಿ 3 ಪಂಪ್ ಅಳವಡಿಕೆ ಮಾಡಿ ನೀರನ್ನು ಸರಬರಾಜು ಮಾಡಲಾಗುತ್ತಿದೆ.
ಪುರಸಭೆ ವ್ಯಾಪ್ತಿಯಲ್ಲಿ 25 ಸರ್ಕಾರಿ ಬಾವಿ, 24 ಬೋರ್ವೆಲ್ ಹಾಗೂ 2 ಖಾಸಗಿ ಮೂಲಗಳಿಂದ 23 ವಾರ್ಡ್‌ಗಳಿಗೆ ಸರಾಗವಾಗಿ ನೀರನ್ನು ಸರಬರಾಜು ಮಾಡಲಾಗುತ್ತಿದೆ.
ರಾಘವೇಂದ್ರ ಮಠ, ಕಾವೇರಡ್ಕ, ಅನೆಕರೆ, ಕುಂಟಲ್ಪಾಡಿ, ಜ್ಯೋತಿ ರಸ್ತೆ, ನಾಗೋಳಿ, ಜರಿಗುಡ್ಡೆ, ಕಲ್ಲೊಟ್ಟೆ, ನಿಸರ್ಗ ಹಿರಿಯಂಗಡಿ, ಚೇತನಾ ಹಾಗೂ ನೂತನವಾಗಿ ಪತ್ತೊಂಜಿ ಕಟ್ಟೆ, ಗುಂಡ್ಯ, ಪೊಲಾರ, ಕುಂಬ್ರಿ ಪದವುಗಳಲ್ಲಿ ನಿರ್ಮಾಣ ಮಾಡಲಾಗಿದೆ.
994ರಲ್ಲಿ ಎರಡು ಕೋಟಿ ರು. ವೆಚ್ಚದಲ್ಲಿ ದುರ್ಗ ಗ್ರಾ.ಪಂ. ವ್ಯಾಪ್ತಿಯ ಮುಂಡ್ಲಿಯಲ್ಲಿ ಸ್ವರ್ಣ ನದಿಗೆ ಅಡ್ಡವಾಗಿ ಕಿಂಡಿ ಅಣೆಕಟ್ಟು ನಿರ್ಮಿಸಲಾಗಿತ್ತು. ಕೆಲ ವರ್ಷಗಳ ಹಿಂದೆ ಇದೇ ಪರಿಸರದಲ್ಲಿ ನಿರ್ಮಾಣಗೊಂಡ ಜಲವಿದ್ಯುತ್ ಘಟಕದಿಂದಾಗಿ ಕಿರು ಅಣೆಕಟ್ಟಾಗಿ ಮಾರ್ಪಡಾಗಿದೆ. ಇಲ್ಲಿ ಸಂಗ್ರಹವಾಗುವ ನೀರನ್ನು ರಾಮಸಮುದ್ರ ಪಂಪ್ ಹೌಸ್‌ಗೆ ಹಾಯಿಸಿ ಅಲ್ಲಿ ಶುದ್ಧೀಕರಿಸಿ ಕಾರ್ಕಳದ ವಿವಿಧೆಡೆಗಳಿಗೆ ಕುಡಿಯಲು ಈ ನೀರು ಪೂರೈಸಲಾಗುತ್ತಿದೆ.
ಪಶ್ಚಿಮ ಘಟ್ಟದ ತಪ್ಪಲು ತೀರಾ ಪ್ರದೇಶದಲ್ಲಿ ಹುಟ್ಟಿಮಾಳ ಗ್ರಾಮದ ಮಲ್ಲಾರು, ಮುಳ್ಳೂರು, ಪಟ್ಟಣಹಿತ್ಲು, ಹೇರಂಜೆ, ಕಲ್ಯಾಣಿ, ಎಡಪ್ಪಾಡಿ, ಹೊಯ್ಗೆಹಿತ್ಲು, ಹೆಗ್ಗಡೆಮನೆ ಮತ್ತು ಕಡಂದಲಾಜೆ ಮೊದಲಾದೆಡೆಯ ತೊರೆಗಳು ಪಶ್ಚಿಮಾಭಿಮುಖವಾಗಿ ಹರಿಯುವ ಈ ತೊರೆಗಳೆಲ್ಲವೂ ಕಡಾರಿ(ಮಾಚೊಟ್ಟೆ) ಹೊಳೆ ಸೇರಿ ಎಣ್ಣೆಹೊಳೆಯನ್ನು ಕೂಡಿಕೊಂಡು ಗ್ರಾಮದ ಹೊರಗಡೆ ಸ್ವರ್ಣ ಎಂಬ ಹೆಸರಿನೊಂದಿಗೆ ಪರಿಚಯಿಸಿಕೊಂಡು ಉಡುಪಿಯ ಕಲ್ಯಾಣಪುರದಲ್ಲಿ ಸಮುದ್ರದೊಂದಿಗೆ ಲೀನವಾಗುತ್ತಿದೆ.