* ಕೆಂಪೇಗೌಡ ಲೇಔಟ್‌ನಲ್ಲಿ 850 ನಿವೇಶನಗಳಲ್ಲಿ ಸಮಸ್ಯೆ* ನೀರಿಲ್ಲದೆ ಒಣಗಿದ್ದ ಕೆರೆಗಳನ್ನು ಗುರಿತಿಸದೆ ಸೈಟ್ ಮಾಡಿದ ಬಿಡಿಎ* ಮೂಲ ಸೌಕರ್ಯ ಅಭಿವೃದ್ಧಿ ತೊಡಗಿಸಿದ್ದ ಹಣ ನೀರು ಪಾಲು
ಸಂಪತ್ ತರೀಕೆರೆ
ಬೆಂಗಳೂರು(ಏ.11): ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(BDA) ನಾಡಪ್ರಭು ಕೆಂಪೇಗೌಡ ಬಡಾವಣೆಗೆಂದು ಕೆರೆ ಅಚ್ಚುಕಟ್ಟು ಪ್ರದೇಶದಲ್ಲಿ ಹಂಚಿಕೆ ಮಾಡಿದ್ದ ನಿವೇಶನಗಳಲ್ಲಿ ಅಂತರ್ಜಲ(Groundwater) ಉಕ್ಕುತ್ತಿದ್ದು, 850 ನಿವೇಶನದಾರರಿಗೆ ಬದಲಿ ನಿವೇಶನ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ನಿವೇಶನ ನಿರ್ಮಾಣ, ಚರಂಡಿ, ಯುಟಿಲಿಟಿ ಚಾನಲ್, ವಿದ್ಯುತ್ ಕಂಬಗಳು ಸೇರಿದಂತೆ ಇತರೆ ಮೂಲ ಸೌಕರ್ಯ ಒದಗಿಸಲೆಂದು ಬಿಡಿಎ ವೆಚ್ಚ ಮಾಡಿದ ನೂರಾರು ಕೋಟಿ ರುಪಾಯಿ ನೀರಿನಲ್ಲಿ ಕೊಚ್ಚಿ ಹೊಂದಂತಾಗಿದೆ!
ನಾಡಪ್ರಭು ಕೆಂಪೇಗೌಡ ಲೇಔಟ್ ನಿರ್ಮಾಣಕ್ಕಾಗಿ ಸರ್ಕಾರ 4040 ಎಕರೆಗೆ ನೋಟಿಫಿಕೇಷನ್ ಮಾಡಿದ್ದು, 2650 ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಂಡು ಬಡಾವಣೆ ನಿರ್ಮಾಣ ಮಾಡಲಾಗುತ್ತಿದೆ. 2013-16ನೇ ಸಾಲಿನಲ್ಲಿ ಕನ್ನಲ್ಲಿ ಕೆರೆ ಮತ್ತು ಸೂಳಿಕೆರೆ ನೀರಿಲ್ಲದೆ ಬತ್ತಿದ್ದರಿಂದ ಸುತ್ತಮುತ್ತಲ 40ಕ್ಕೂ ಹೆಚ್ಚು ಎಕರೆ ಭೂಮಿ(Land) ಒಣನೆಲವಾಗಿ ಮಾರ್ಪಟ್ಟಿತ್ತು. ಬಿಡಿಎ ಈ ಭೂಮಿಯನ್ನು ಸರಿಯಾಗಿ ಗುರುತಿಸದೇ ಏಕಾಏಕಿ ಸ್ವಾಧೀನಕ್ಕೆ ತೆಗೆದುಕೊಂಡು ಸುಮಾರು 850 ಮಂದಿಗೆ ನಿವೇಶನಗಳನ್ನು ರಚಿಸಿ ಹಂಚಿಕೆ ಮಾಡಿ ಮುಗಿಸಿತ್ತು.
Bengaluru: ಬಿಡಿಎ ಆಯುಕ್ತರ ನೇಮಕದಲ್ಲಿ ಮೇಲ್ನೋಟಕ್ಕೆ ತಪ್ಪು: ಹೈಕೋರ್ಟ್
2020 ಮತ್ತು 2021ರಲ್ಲಿ ಯಥೇಚ್ಛವಾಗಿ ಮಳೆ(Rain) ಸುರಿದಿದ್ದರಿಂದ ಕನ್ನಲ್ಲಿ ಕೆರೆ ಮತ್ತು ಸೂಳಿಕೆರೆ ತುಂಬಿದ್ದವು. ಈ ಪರಿಣಾಮ ಸುತ್ತಮುತ್ತಲ ಪ್ರದೇಶದಲ್ಲಿ ಅಂತರ್ಜಲ ಮಟ್ಟಏರಿಕೆಯಾಗಿದೆ. ಇದೇ ಸಂದರ್ಭದಲ್ಲಿ ಬಡಾವಣೆಗೆ ಮೂಲಭೂತ ಸೌಕರ್ಯ ಕಲ್ಪಿಸುವ ಕಾಮಗಾರಿಗಳನ್ನು ಆರಂಭಿಸಲಾಗಿದ್ದು, ಚರಂಡಿ ನಿರ್ಮಾಣಕ್ಕಾಗಿ ಭೂಮಿಯನ್ನು ನಾಲ್ಕೈದು ಮೀಟರ್ ಆಳಕ್ಕೆ ಅಗೆಯುತ್ತಿದ್ದಂತೆ ನೀರು ಉಕ್ಕತೊಡಗಿದೆ.
ಕೂಡಲೇ ಈ ಪ್ರದೇಶವನ್ನು ಬಿಡಿಎ ಸಿವಿಲ್-ಟೆಕ್ ಕನ್ಸಲ್ಟಂಟ್ ಆ್ಯಂಡ್ ಎಂಜಿನಿಯರ್ಸ್ ಸಂಸ್ಥೆಯ ತಜ್ಞರಿಂದ ಪರಿಶೀಲನೆಗೊಳಪಡಿಸಿದೆ. ತಜ್ಞರು ಕೆರೆಯ ಅಚ್ಚುಕಟ್ಟು ಪ್ರದೇಶದಲ್ಲಿ ಕಟ್ಟಡ ನಿರ್ಮಾಣ ಸಾಧ್ಯವಿಲ್ಲ. ಬದಲಿಗೆ ಅಂತರ್ಜಲ ಕಡಿಮೆ ಮಾಡಲು ಬಡಾವಣೆಯಲ್ಲಿ ವಿವಿಧೆಡೆ ಕೊಳವೇ ಬಾವಿಗಳನ್ನು ಕರೆಯುವಂತೆ ಸಲಹೆ ನೀಡಿದ್ದಾರೆ ಎನ್ನಲಾಗಿತ್ತು. ಆದರೆ, ಕೊಳವೆ ಬಾವಿ ತೆಗೆದು ಕೆರೆಯ ನೀರು ಜಿನುಗುವಿಕೆ ಮತ್ತು ಅಂತರ್ಜಲ ಮಟ್ಟಕುಸಿಯುವಂತೆ ಮಾಡುವುದು ಅತ್ಯಂತ ಅಪಾಯಕಾರಿ ಕೆಲಸ. ಇಂದಲ್ಲ ನಾಳೆ ಇದರಿಂದ ಸಮಸ್ಯೆಯುಂಟಾಗಬಹುದು ಎಂಬ ಲೆಕ್ಕಾಚಾರ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ್ದು.
ಅಪಾಯಕ್ಕೆ ಆಹ್ವಾನ ಕೊಡುವ ಬದಲು 850 ನಿವೇಶನದಾರರಿಗೆ ಇದೇ ಬಡಾವಣೆಯಲ್ಲಿ ಪಾರ್ಕ್, ಮೈದಾನಕ್ಕೆಂದು ಮೀಸಲಾಗಿಟ್ಟಿರುವ ಜಾಗಗಳಲ್ಲಿ ವಿವಿಧ ಅಳತೆಯ ನಿವೇಶನಗಳನ್ನು ರಚಿಸಿ ಹಂಚಿಕೆ ಮಾಡಲು ಬಿಡಿಎ ನಿರ್ಧರಿಸಿದೆ. ಅದಕ್ಕಾಗಿ ಬಿಡಿಎ ಎಂಜಿನಿಯರಿಂಗ್ ವಿಭಾಗದ ಅಧಿಕಾರಿಗಳಿಗೆ ಜಾಗಗಳನ್ನು ಗುರುತಿಸಲು ಸೂಚನೆ ನೀಡಿದೆ. ಜೊತೆಗೆ ಕೆರೆಯ ನೀರು ಜಿನುಗುತ್ತಿರುವ 40 ಎಕರೆ ಜಾಗವನ್ನು ಉದ್ಯಾನವನ ಪ್ರದೇಶವನ್ನಾಗಿ ಗುರುತು ಮಾಡಲು ನಿರ್ಣಯ ಕೈಗೊಂಡಿದೆ ಎಂದು ಪ್ರಾಧಿಕಾರದ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Bengaluru: ಪೆರಿಫೆರಲ್ ರಿಂಗ್ ರಸ್ತೆಗೆ ಟೆಂಡರ್ ಆಹ್ವಾನ
ಕನ್ನಲ್ಲಿ ಗ್ರಾಮದ ಸರ್ವೇ ನಂ.12/1, 12/2, 13/2, 14/1 ಮತ್ತು 14/2, 15 ಹಾಗೂ 16/1ರಿಂದ 16/3, 17, 18, 19/1, 20, 24, 25/1, 26/1, 29 ಮತ್ತು 28, ಬ್ಲಾಕ್-1 ಸೆಕ್ಟರ್ ಎಲ್ ನಲ್ಲಿನ ಕೆರೆಯ ಅಚ್ಚುಕಟ್ಟು ಪ್ರದೇಶದಲ್ಲಿ ಹಂಚಿಕೆಯಾಗಿರುವ ನಿವೇಶನದಾರರಿಗೆ ಬದಲಿ ನಿವೇಶನ ಕೊಡಲು ತೀರ್ಮಾನಿಸಲಾಗಿದೆ. ಪ್ರಾಧಿಕಾರದ ಈ ಹಿಂದಿನ ಆಡಳಿತ ಮಂಡಳಿ ಸಭೆಯಲ್ಲಿ ಬದಲಿ ನಿವೇಶನ ಗುರುತಿಸುವ ಮತ್ತು ಹಂಚಲು ಅನುಮೋದನೆ ನೀಡಲಾಗಿದೆ.
ನೂರು ಕೋಟಿ ರು.ವೆಚ್ಚ?
ಕೆರೆಯ ಅಚ್ಚುಕಟ್ಟು ಪ್ರದೇಶವನ್ನು ನಿವೇಶನ ಮಾಡಲು ಯೋಗ್ಯವೇ ಇಲ್ಲವೇ ಎಂಬುದನ್ನು ಗುರುತಿಸುವಲ್ಲಿ ವಿಫಲವಾಗಿದ್ದರಿಂದ ಸುಮಾರು ನೂರು ಕೋಟಿ ರು.ಗಳಿಗೂ ಅಧಿಕ ನಷ್ಟವನ್ನು ಬಿಡಿಎ ಅನುಭವಿಸುವಂತಾಗಿದೆ. ಈ ಭೂಮಿಯನ್ನು ಸಮತಟ್ಟು ಮಾಡಿ, ಬಡಾವಣೆಗೆ ಯೋಗ್ಯವಾಗಿ ಪರಿವರ್ತಿಸಲು ಹತ್ತಾರು ಕೋಟಿ ರು.ಗಳನ್ನು ಖರ್ಚು ಮಾಡಲಾಗಿದೆ. ಜೊತೆಗೆ ಚರಂಡಿಗಳ ನಿರ್ಮಾಣ, ಮ್ಯಾನ್‌ವೋಲ್ ಇತ್ಯಾದಿಗಳ ನಿರ್ಮಾಣಕ್ಕೆಂದು ಕೋಟ್ಯಂತರ ರು.ಗಳನ್ನು ಪ್ರಾಧಿಕಾರ ವೆಚ್ಚ ಮಾಡಿದೆ. ಇದು ಪ್ರಾಧಿಕಾರಕ್ಕೆ ತುಂಬಲಾರದ ನಷ್ಟ. ಈ ಬಗ್ಗೆ ಪ್ರಾಧಿಕಾರ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕೆಂದು ಸ್ಥಳೀಯ ನಿವೇಶನದಾರರು ಒತ್ತಾಯಿಸಿದ್ದಾರೆ.
ಕಳೆದೆರಡು ವರ್ಷಗಳಲ್ಲಿ ಸುರಿದ ಮಳೆಯು ನಿವೇಶನದಾರರನ್ನು ರಕ್ಷಿಸಿದೆ. ಒಂದು ವೇಳೆ ಮನೆಗಳನ್ನು ಕಟ್ಟಿದ ನಂತರ ಕೆರೆಗಳು ತುಂಬಿದ್ದರೆ, ಇಡೀ ಪ್ರದೇಶ ಶಿಥಿಲಾವಸ್ಥೆಯಲ್ಲಿರಬೇಕಿತ್ತು. ನೀರು ಜಿನುಗುವುದರಿಂದ ವಿದ್ಯುತ್ ಶಾಕ್ ಸಂಭವಿಸುವ ಮತ್ತು ಕಟ್ಟಡಗಳು ಕುಸಿಯುವ ದುಸ್ಥಿತಿ ಎದುರಿಸಬೇಕಾಗಿತ್ತು. ಬಿಡಿಎ ಎಚ್ಚೆತ್ತುಕೊಂಡು ನಿವೇಶನದಾರರಿಗೆ ಬದಲಿ ನಿವೇಶನ ಹಂಚಿಕೆಗೆ ಮುಂದಾಗಿರುವುದು ಸ್ವಾಗತಾರ್ಹ ಕ್ರಮ.
