*  ಕೋರ್ಟ್‌ ಕಣ್ಮುಚ್ಚಿ ಕುಳಿತುಕೊಳ್ಳಲ್ಲ*  ತಕ್ಷಣ ನಿಲುವು ತಿಳಿಸಿ ಸರ್ಕಾರಕ್ಕೆ ಸೂಚನೆ*  ಪ್ರಾದೇಶಿಕ ಆಯುಕ್ತರಾಗಲು 15-16 ವರ್ಷ ಸೇವೆ ಸಲ್ಲಿಸಿರಬೇಕು  

ಬೆಂಗಳೂರು(ಏ.07):  ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಆಯುಕ್ತರನ್ನಾಗಿ ಕೆಎಎಸ್‌ ಶ್ರೇಣಿಯಿಂದ ಐಎಎಸ್‌ಗೆ ಪದೋನ್ನತಿ ಪಡೆದಿರುವ ಅಧಿಕಾರಿ ಎಂ.ಬಿ.ರಾಜೇಶ್‌ಗೌಡ ಅವರ ನೇಮಕಾತಿಯಲ್ಲಿ ಮೇಲ್ನೋಟಕ್ಕೆ ತಪ್ಪು ಕಾಣಿಸುತ್ತಿದ್ದು, ನ್ಯಾಯಪೀಠ ಕಣ್ಮುಚ್ಚಿ ಕುಳಿತು ಕೊಳ್ಳಲಾಗುವುದಿಲ್ಲ ಎಂದು ತಿಳಿಸಿರುವ ಹೈಕೋರ್ಟ್‌(High Court of Karnataka), ಈ ಸಂಬಂಧ ತ್ವರಿತವಾಗಿ ಆಕ್ಷೇಪಣೆ ಸಲ್ಲಿಸುವಂತೆ ಸರ್ಕಾರಕ್ಕೆ ಸೂಚಿಸಿದೆ.

ಬಿಡಿಎ ಆಯುಕ್ತರನ್ನಾಗಿ ರಾಜೇಶ್‌ ಗೌಡ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ(Governmemt of Karnataka) ಹೊರಡಿಸಿರುವ ಆದೇಶ ರದ್ದು ಪಡಿಸುವಂತೆ ಕೋರಿ ವಕೀಲ ಜಿ.ಮೋಹನ್‌ ಕುಮಾರ್‌ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಅವರಿದ್ದ ವಿಭಾಗೀಯ ಪೀಠ ಈ ಸೂಚನೆ ನೀಡಿದೆ.

Bengaluru: ಬಿಡಿಎಯಿಂದ ಇನ್ನೊಂದು ವಿಲ್ಲಾ ಪ್ರಾಜೆಕ್ಟ್..!

ಬಿಡಿಎ ಆಯುಕ್ತರ(BDA Commissioner) ನೇಮಕದಲ್ಲಿ ಮೇಲ್ನೋಟಕ್ಕೆ ಏನೋ ತಪ್ಪಾದಂತೆ ತೋಚುತ್ತದೆ. ಹಾಗಾಗಿ ಸರ್ಕಾರ ತನ್ನ ನಿಲುವೇನು ಎಂಬುದು ತಿಳಿಸಬೇಕು. ಕಾಲಾವಕಾಶ ನೀಡಲು ಅನುಮತಿ ನೀಡಲಾಗದು ಎಂದು ನ್ಯಾಯಪೀಠ ಹೇಳಿತು. ಇದೇ ವೇಳೆ ರಾಜ್ಯ ಸರ್ಕಾರ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ವಿಭಾಗದ ಅಧೀನ ಕಾರ್ಯದರ್ಶಿ ಮತ್ತು ರಾಜೇಶ್‌ ಗೌಡ ಪರ ವಕೀಲರಾದ ಸುಮನಾ ನಾಗಾನಂದ್‌ ಅವರಿಗೆ ಹೈಕೋರ್ಟ್‌ ನೋಟಿಸ್‌ ಜಾರಿಗೊಳಿಸಿದೆ.

ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಎಕ್ಸ್‌.ಎಂ.ಜೋಸೆಫ್‌, ಬಿಡಿಎ ಕಾಯಿದೆ ಸೆಕ್ಷನ್‌ 12ರ ಪ್ರಕಾರ ಪ್ರಾದೇಶಿಕ ಆಯುಕ್ತರ ಶ್ರೇಣಿಗಿಂತ ಕೆಳಗಿರುವವರನ್ನು ಬಿಡಿಎ ಆಯುಕ್ತರನ್ನಾಗಿ ನೇಮಕ ಮಾಡುವಂತಿಲ್ಲ ಎಂದು ಹೇಳಲಾಗಿದೆ. ಹಾಲಿ ಬಿಡಿಎ ಆಯುಕ್ತ ರಾಜೇಶ್‌ ಗೌಡ ಅವರು ಕೆಎಎಸ್‌ ಅಧಿಕಾರಿಯಾಗಿದ್ದು, 2018ರಲ್ಲಿ ಐಎಎಸ್‌ ಶ್ರೇಣಿಗೆ ಪದೋನ್ನತಿ ಪಡೆದಿದ್ದಾರೆ. ಪ್ರಾದೇಶಿಕ ಆಯುಕ್ತರಾಗಲು 15-16 ವರ್ಷ ಸೇವೆ ಸಲ್ಲಿಸಿರಬೇಕು ಎಂದು ವಿವರಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಬಿಡಿಎ ಆಯುಕ್ತರಾಗುವ ಸಂದರ್ಭದಲ್ಲಿ ರಾಜೇಶ್‌ ಗೌಡ ಅವರು ಪ್ರಾದೇಶಿಕ ಆಯುಕ್ತರ ಶ್ರೇಣಿಯನ್ನು ಹೊಂದಿದ್ದರೆ ಎಂದು ಪ್ರಶ್ನಿಸಿದರು. ಇದಕ್ಕೆ ಇಲ್ಲ ಎಂದು ವಕೀಲರು ಉತ್ತರಿಸಿದರು. ಕೆಎಎಸ್‌ನಿಂದ ಪದೋನ್ನತಿ ಪಡೆದಿದ್ದ ಎಂ.ಬಿ.ರಾಜೇಶ್‌ ಗೌಡ ಅವರನ್ನು ಬಿಡಿಎ ಆಯುಕ್ತ ಹುದ್ದೆಗೆ 2021ರ ಏ.30ರಂದು ಸರ್ಕಾರ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ವಕೀಲ ಮೋಹನ್‌ ಕುಮಾರ್‌ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

Bengaluru: ಐಷಾರಾಮಿ ಫ್ಲ್ಯಾಟ್‌ ನಿರ್ಮಿಸಿದ ಬಿಡಿಎ: ಬೆಲೆ ಎಷ್ಟು?

ಪೆರಿಫೆರಲ್‌ ರಿಂಗ್‌ ರಸ್ತೆಗೆ ಟೆಂಡರ್‌ ಆಹ್ವಾನ

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮಹತ್ವಾಕಾಂಕ್ಷೆಯ ಪೆರಿಫೆರಲ್‌ ರಿಂಗ್‌ ರಸ್ತೆ(PPR) ಯೋಜನೆಯನ್ನು ಖಾಸಗಿ ಸಾರ್ವಜನಿಕ ಸಹಭಾಗಿತ್ವದಲ್ಲಿ ಕೈಗೆತ್ತಿಕೊಳ್ಳಲು ಉದ್ದೇಶಿಸಿದ್ದು, ಟೆಂಡರ್‌ ಆಹ್ವಾನಿಸಲಾಗಿದೆ.
73.04 ಕಿ.ಮೀ ಉದ್ದದ ಪೆರಿಫೆರಲ್‌ ರಿಂಗ್‌ ರಸ್ತೆ(Peripheral Ring Road) ನಿರ್ಮಾಣ ಯೋಜನೆ ಇದಾಗಿದ್ದು, ಈಗಾಗಲೇ ಟೆಂಡರ್‌(Tender) ಪ್ರಕ್ರಿಯೆ ಆರಂಭಗೊಂಡಿದೆ. ಬಿಡ್‌ ಸಲ್ಲಿಕೆಗೆ ಮೇ 18 ಕಡೆಯ ದಿನ. ಮೇ 20ರಂದು ಟೆಕ್ನಿಕಲ್‌ ಬಿಡ್‌ ತೆರೆಯಲಿದೆ. ಬಿಡ್‌ದಾರರು ಭದ್ರತಾ ಠೇವಣಿಯಾಗಿ .150 ಕೋಟಿ ಪಾವತಿಸಬೇಕಾಗುತ್ತದೆ. ಯೋಜನೆಯ ಭೂಸ್ವಾಧೀನ ಮತ್ತು ರಸ್ತೆ ನಿರ್ಮಾಣಕ್ಕೆ ತಗಲುವ ವೆಚ್ಚವನ್ನು ಸಂಪೂರ್ಣ ಭರಿಸುವ ಬಿಡ್‌ದಾರ ಕಂಪನಿಗೆ 50 ವರ್ಷ ಭೋಗ್ಯದ ಆಧಾರದ ರಸ್ತೆ ಹಾಗೂ ಟೋಲ್‌ ಗುತ್ತಿಗೆ ಸಿಗಲಿದೆ.

ಪೆರಿಫೆರಲ್‌ ರಿಂಗ್‌ ರಸ್ತೆಯ ನಿರ್ಮಾಣದಿಂದ ನಗರದಲ್ಲಿ ವಾಹನ ದಟ್ಟಣೆ(Traffic) ನಿವಾರಣೆಯಾಗಲಿದೆ. 8 ಪಥದ ಈ ರಸ್ತೆಯು 100 ಮೀಟರ್‌ ಅಗಲ ಇರಲಿದೆ. ಈ ರಸ್ತೆಯು ತುಮಕೂರು ರಸ್ತೆಯಿಂದ ಸರ್ಜಾಪುರ ರಸ್ತೆ, ಹಳೆ ಮದ್ರಾಸ್‌ ರಸ್ತೆ, ಬಳ್ಳಾರಿ ರಸ್ತೆ ಮೂಲಕ ಹೊಸೂರು ರಸ್ತೆಗೆ ಸೇರಲಿದೆ. ಇದರೊಂದಿಗೆ ಬೆಂಗಳೂರು ತನ್ನ ಪರಿಧಿಯಲ್ಲಿ 116 ಕಿ.ಮೀ. ಉದ್ದದ ಬೈಪಾಸ್‌ ರಸ್ತೆಯನ್ನು ಹೊಂದಿದ ನಗರವಾಗಲಿದೆ. ಯೋಜನೆಯ ಸದ್ಯದ ಮಾಹಿತಿಯಂತೆ ಹೋಗುವ ಮತ್ತು ಬರುವ ಮಾರ್ಗ ಸೇರಿ 17 ಟೋಲ್‌ ಪ್ಲಾಜಾಗಳು(Toll Plaza) ಇರಲಿದೆ. ಬಳ್ಳಾರಿ ರಸ್ತೆ, ಹಳೇ ಮದ್ರಾಸ್‌ ರಸ್ತೆ, ಹೊಸೂರು ರಸ್ತೆ, ತುಮಕೂರು ರಸ್ತೆಯಲ್ಲಿ ನಾಲ್ಕು ಇಂಟರ್‌ಚೇಂಜ್‌ಗಳು ಇರಲಿವೆ. ಎರಡು ಮೇಲ್ಸೇತುವೆ ಮತ್ತು 4 ಅಂಡರ್‌ಪಾಸ್‌ಗಳನ್ನು ಯೋಜನೆ ಒಳಗೊಂಡಿದೆ.