ಜಾಗತಿಕ ಹಸಿವನ್ನು ನೀಗಿಸುವಲ್ಲಿ ಹಸಿರುಕ್ರಾಂತಿ ಮಹತ್ವದ ಕೊಡುಗೆ
ದೇಶ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಹೊಂದಲು ಹಸಿರು ಕ್ರಾಂತಿಯ ಹರಿಕಾರ ಡಾ.ಎಂ.ಎಸ್. ಸ್ವಾಮಿನಾಥನ್ ಅವರ ಕೊಡುಗೆ ಅಪಾರ. ಹಸಿರುಕ್ರಾಂತಿ ಕೇವಲ ಭಾರತದ ಹಸಿವನ್ನು ಮಾತ್ರವಲ್ಲ ಜಾಗತಿಕ ಹಸಿವನ್ನು ನೀಗಿಸುವಲ್ಲಿ ಮಹತ್ವದ ಕೊಡುಗೆ ನೀಡಿತು ಎಂದು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತು ಉಪಾಧ್ಯಕ್ಷ ಪ್ರೊ.ಎಸ್.ಆರ್.ನಿರಂಜನ ತಿಳಿಸಿದರು.
ಮೈಸೂರು : ದೇಶ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಹೊಂದಲು ಹಸಿರು ಕ್ರಾಂತಿಯ ಹರಿಕಾರ ಡಾ.ಎಂ.ಎಸ್. ಸ್ವಾಮಿನಾಥನ್ ಅವರ ಕೊಡುಗೆ ಅಪಾರ. ಹಸಿರುಕ್ರಾಂತಿ ಕೇವಲ ಭಾರತದ ಹಸಿವನ್ನು ಮಾತ್ರವಲ್ಲ ಜಾಗತಿಕ ಹಸಿವನ್ನು ನೀಗಿಸುವಲ್ಲಿ ಮಹತ್ವದ ಕೊಡುಗೆ ನೀಡಿತು ಎಂದು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತು ಉಪಾಧ್ಯಕ್ಷ ಪ್ರೊ.ಎಸ್.ಆರ್.ನಿರಂಜನ ತಿಳಿಸಿದರು.
ಮೈಸೂರು ವಿವಿ ಮಾನಸ ಗಂಗೋತ್ರಿಯ ಬಟಾನಿಕಲ್ ಸೊಸೈಟಿ, ಸಸ್ಯಶಾಸ್ತ್ರ ಅಧ್ಯಯನ ವಿಭಾಗದ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಹಸಿರುಕ್ರಾಂತಿಯ ಹರಿಕಾರ ಡಾ.ಎಂ.ಎಸ್. ಸ್ವಾಮಿನಾಥನ್ ಕುರಿತು ವಿಚಾರ ಸಂಕಿರಣವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಪ್ರೊ.ಎಂ.ಎಸ್. ಸ್ವಾಮಿನಾಥನ್ ಅವರಿಗೆ ಉತ್ತಮ ಗುಣಮಟ್ಟದ ಉನ್ನತ ಶಿಕ್ಷಣ ದೊರೆಯದೆ ಇದ್ದಿದ್ದರೆ ಹಸಿರು ಕ್ರಾಂತಿ ಸಾಧ್ಯವಾಗುತಿತ್ತೇ? ಹೀಗಾಗಿ ಶಿಕ್ಷಣದ ಮಹತ್ವವನ್ನು ನಾವು ಇನ್ನಾದರೂ ಅರಿತುಕೊಳ್ಳಬೇಕು. ಶಿಕ್ಷಣದ ಮೂಲಕ ಮಾತ್ರ ನಮ್ಮ ದೇಶ ಹೊಂದಿರುವ ವಿವಿಧ ಗುರಿಗಳನ್ನು ಸಾಧಿಸಲು ಸಾಧ್ಯ. ಈ ನಿಟ್ಟಿನಲ್ಲಿ ಸರ್ಕಾರ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ. ಶಿಕ್ಷಣ ಮತ್ತು ದಾಸೋಹ ಒಟ್ಟಿಗೆ ಸಾಗುವ ಅವಶ್ಯಕತೆ ಇದೆ ಎಂದರು.
ಪ್ರಸ್ತುತ ಸರ್ಕಾರಗಳು ಬಡಜನರ ಹಸಿವು ನೀಗಿಸುವ ಕಾರ್ಯಕ್ರಮಗಳಿಗೆ ಹೆಚ್ಚಿನ ಒತ್ತು ನೀಡುತ್ತಿದೆ. ಇದರ ಜೊತೆಗೆ ಪ್ರತಿಯೊಬ್ಬರಿಗೂ ಗುಣಮಟ್ಟದ ಉನ್ನತ ಶಿಕ್ಷಣ ದೊರೆಯುವಂತೆ ಮಾಡುವ ಕಾರ್ಯ ಆಗಬೇಕಾಗಿದೆ. ವಿಶ್ವದ 200 ವಿಶ್ವವಿದ್ಯಾನಿಲಯಗಳ ಪಟ್ಟಿಯಲ್ಲಿ ನಮ್ಮ ವಿಶ್ವವಿದ್ಯಾಲಯಗಳು ಇಲ್ಲದೆ ಇರುವುದು ಬೇಸರದ ಸಂಗತಿ. ಹೀಗಾಗಿ ನಮ್ಮ ಉನ್ನತ ಶಿಕ್ಷಣದ ವ್ಯವಸ್ಥೆ ಸುಧಾರಣೆಗೊಳ್ಳುವ ಅವಶ್ಯಕತೆ ಇದೆ ಎಂದರು.
ಹಸಿರು ಕ್ರಾಂತಿಯ ಪರಿಣಾಮವಾಗಿ ದೇಶದಲ್ಲಿ ಆಹಾರ ಉತ್ಪಾದನೆ ಹೆಚ್ಚಾಯಿತು. ಇದಕೋಸ್ಕರ ಹೆಚ್ಚು ಇಳುವರಿ ನೀಡುವ ಹಲವು ಹೊಸ ತಳಿಗಳನ್ನು ಪರಿಚಯಿಸಲಾಯಿತು. ಹಸಿರುಕ್ರಾಂತಿ ಕೇವಲ ಆಹಾರ ಉತ್ಪಾದನೆಯನ್ನು ಮಾತ್ರ ಹೆಚ್ಚು ಮಾಡಲಿಲ್ಲ. ಬದಲಿಗೆ ಗ್ರಾಮೀಣ ಭಾಗದಲ್ಲಿ ದೊಡ್ಡ ಪ್ರಮಾಣದ ಉದ್ಯೋಗವನ್ನು ಸೃಷ್ಟಿ ಮಾಡಿತು. ಹಸಿರು ಕ್ರಾಂತಿಯ ನಂತರ ಕೃಷಿ ಕ್ಷೇತ್ರದಲ್ಲಿ ಯಂತ್ರೋಪಕರಣಗಳನ್ನು ಪರಿಚಯಿಸಲಾಯಿತು ಎಂದರು.
ಪ್ರಸ್ತುತ ಯುವ ಸಮುದಾಯ ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಕೃಷಿ ಲಾಭದಾಯಕವಲ್ಲ ಎಂಬುದೇ ಇದಕ್ಕೆ ಪ್ರಮುಖ ಕಾರಣ. ಹಣದಿಂದ ಆಹಾರ ಸೃಷ್ಟಿಸಲು ಸಾಧ್ಯವಿಲ್ಲ. ರೈತ ಹೊಲದಲ್ಲಿ ಭಿತ್ತಿದರೆ ಮಾತ್ರ ಅಹಾರ ದೊರೆಯಲು ಸಾಧ್ಯ. ಹೀಗಾಗಿ ಆಹಾರವೇ ಮುಂದಿನ ಭವಿಷ್ಯ ಎಂದರು.
ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಮಾತನಾಡಿ, ಡಾ.ಎಂ.ಎಸ್. ಸ್ವಾಮಿನಾಥನ್ ದೇಶದ ಹಸಿರುಕ್ರಾಂತಿಯ ಪಿತಾಮಹ. ದೇಶ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಹೊಂದಿ ವಿದೇಶಗಳಿಗೆ ಆಹಾರ ರಫ್ತು ಮಾಡಲು ಹಸಿರುಕ್ರಾಂತಿ ಪ್ರಮುಖ ಕಾರಣ ಎಂದರು.
ಬೆಂಗಳೂರು ಕೃಷಿ ವಿವಿ ಕುಲಪತಿ ಪ್ರೊ.ಎನ್.ವಿ. ಸುರೇಶ, ವಿಶ್ರಾಂತ ಕುಲಪತಿ ಪ್ರೊ.ಎಂ.ಕೆ. ನಾಯ್ಕ್, ಮೈಸೂರು ವಿವಿ ಜೈವಿಕ ತಂತ್ರಜ್ಞಾನ ಅಧ್ಯಯನ ವಿಭಾಗದ ಅಧ್ಯಕ್ಷ ಪ್ರೊ.ಎಸ್. ಉಮೇಶ, ಸಸ್ಯಶಾಸ್ತ್ರ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ.ಕೆ.ಎನ್. ಅಮೃತೇಶ್, ಬಟಾನಿಕಲ್ ಸೊಸೈಟಿ ಕಾರ್ಯದರ್ಶಿ ಪ್ರೊ. ರಾಜ್ ಕುಮಾರ್ ಎಚ್. ಗಾರಂಪಳ್ಳಿ ಮೊದಲಾದವರು ಇದ್ದರು.
ಆಹಾರ ಉತ್ಪಾದನಾ ಕ್ಷೇತ್ರದಲ್ಲಿ ದೇಶ ತೋರಿದ ಸಾಧನೆಯ ರೀತಿಯಲ್ಲಿಯೇ ವಿವಿಧ ಕ್ಷೇತ್ರದಲ್ಲಿ ದೇಶ ಉನ್ನತ ಸಾಧನೆ ತೋರಲು ಪ್ರತಿಯೊಬ್ಬರಿಗೂ ಗುಣಮಟ್ಟದ ಉನ್ನತ ಶಿಕ್ಷಣ ದೊರೆಯುವ ಅವಶ್ಯಕತೆ ಇದೆ. ದೇಶ ಅಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಹೊಂದಲು ಶಿಕ್ಷಣದ ಪಾತ್ರ ಮಹತ್ವದ್ದು.
- ಪ್ರೊ.ಎಸ್.ಆರ್. ನಿರಂಜನ, ಉಪಾಧ್ಯಕ್ಷ, ರಾಜ್ಯ ಉನ್ನತ ಶಿಕ್ಷಣ ಪರಿಷತ್ತು