Asianet Suvarna News Asianet Suvarna News

ಟರ್ಮಿನಲ್‌-2 ಎಂಬ ಹೈಟೆಕ್‌ ಅರಮನೆ: ಅತ್ಯಾಧುನಿಕ ತಂತ್ರಜ್ಞಾನದ ಮಾಯಾಲೋಕ

ನೂರಾರು ವರ್ಷದ ಹಳೆಯ ಮರಗಳು, 6 ಲಕ್ಷ ಸಸ್ಯಗಳಿರುವ ಉದ್ಯಾನ, ಅಲ್ಲಲ್ಲಿ ಕಾಣ ಸಿಗುವ ಕಿರು ಜಲಪಾತ, ಕಾರಂಜಿಗಳು. ಮಧ್ಯದಲ್ಲಿ 923 ಕಿ.ಮೀ. ಉದ್ದದಷ್ಟು ಬಿದಿರಿನ ಬೊಂಬಿನಿಂದ ಕಟ್ಟಿದ ಅತ್ಯಾಧುನಿಕ ತಂತ್ರಜ್ಞಾನದ ಅರಮನೆ. ಅದರ ಮುಂದೆ ನಿಲ್ಲುವ ಲೋಹದ ಹಕ್ಕಿಗಳು... 

Green Airport Glaze To Ganrden City Bengaluru Because Of Terminal 2 gvd
Author
First Published Nov 13, 2022, 11:49 AM IST

ಬೆಂಗಳೂರು (ನ.13): ನೂರಾರು ವರ್ಷದ ಹಳೆಯ ಮರಗಳು, 6 ಲಕ್ಷ ಸಸ್ಯಗಳಿರುವ ಉದ್ಯಾನ, ಅಲ್ಲಲ್ಲಿ ಕಾಣ ಸಿಗುವ ಕಿರು ಜಲಪಾತ, ಕಾರಂಜಿಗಳು. ಮಧ್ಯದಲ್ಲಿ 923 ಕಿ.ಮೀ. ಉದ್ದದಷ್ಟು ಬಿದಿರಿನ ಬೊಂಬಿನಿಂದ ಕಟ್ಟಿದ ಅತ್ಯಾಧುನಿಕ ತಂತ್ರಜ್ಞಾನದ ಅರಮನೆ. ಅದರ ಮುಂದೆ ನಿಲ್ಲುವ ಲೋಹದ ಹಕ್ಕಿಗಳು... ಇದು ಶುಕ್ರವಾರವಷ್ಟೇ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್‌-2 ಚಿತ್ರಣ. ಉದ್ಯಾನ ನಗರಿ ಬೆಂಗಳೂರು ಕಲ್ಪನೆಯಲ್ಲಿ ನಿರ್ಮಿಸಿರುವ ಈ ನೂತನ ಟರ್ಮಿನಲ್‌ ಅತ್ಯಾಕರ್ಷಕವಾಗಿದ್ದು, ಪ್ರಯಾಣಿಕರಿಗೆ ಉದ್ಯಾನದೊಳಗೊಂದು ಅತ್ಯಾಧುನಿಕ ಅರಮನೆ ಅನುಭವ ನೀಡಲಿದೆ. ಅಕ್ಷರಶಃ ಇಡೀ ವಿಮಾನ ನಿಲ್ದಾಣವೇ ಪ್ರವಾಸಿ ತಾಣದಂತೆ ಭಾಸವಾಗುತ್ತದೆ.

ಸದ್ಯ ಕಾರ್ಯಾಚರಣೆ ನಡೆಸುತ್ತಿರುವ ವಿಮಾನ ನಿಲ್ದಾಣದಿಂದ ಒಂದರ್ಧ ಕಿ.ಮೀ ಸಾಗಿದರೆ ಟರ್ಮಿನಲ್‌-2 ಸಿಗುತ್ತದೆ. ಪ್ರವೇಶಿಸುತ್ತಿದ್ದಂತೆ ಫೇಸ್‌ ಡಿಟೆಕ್ಟರ್‌ ತಂತ್ರಜ್ಞಾನದ ಅಚ್ಚರಿ ಎದುರಾಗಲಿದೆ. ಯಾವುದೇ ದಾಖಲಾತಿ ನೀಡುವ, ಪರಿಶೀಲಿಸುವ ಗೋಜು ಇಲ್ಲದೆ ಪ್ರಯಾಣಿಕರು ನಿಲ್ದಾಣದೊಳಕ್ಕೆ ತೆರಳಬಹುದು. ನಂತರ ಎಕ್ಸಿಲೇಟರ್‌, ಬ್ಯಾಗೇಜ್‌, ಪ್ರವೇಶದ್ವಾರಗಳು ಎಲ್ಲವೂ ಸೆನ್ಸಾರ್‌ ಮಯವಾಗಿದ್ದು, ಮಾಯಾಲೋಕಕ್ಕೆ ತೆರಳಿದ ಅನುಭವವಾಗಲಿದೆ. ಅಳಿವಿನಂಚಿನಲ್ಲಿರುವ 180 ಜಾತಿಯ ಗಿಡಗಳು, 800 ವರ್ಷಗಳಷ್ಟುಹಳೆಯದಾದ ಮರಗಳು, ಲಕ್ಷಾಂತರ ಸಸ್ಯಗಳು, ಬಿದುರಿನ ಆಕೃತಿಗಳ ಬಳಸಿ ನಿರ್ಮಿಸಿರುವ ಲಾಂಜ್‌ ಏರಿಯಾ ಪ್ರವೇಶಿಸುತ್ತಿದ್ದಂತೆ ಹಚ್ಚ ಹಸಿರಿನ ಉದ್ಯಾನ ಅದರಲ್ಲಿ ವೈಭವದ ಕಂಗೊಳಿಸುವ ಅರಮನೆಗೆ ಬಂದ ಅನುಭವ ಆಗಲಿದೆ.

Kempegowda International Airport: ಡಿಸೆಂಬರ್‌ನಿಂದ ಟರ್ಮಿನಲ್‌-2ರಲ್ಲಿ ವಿಮಾನ ಸೇವೆ

ಟರ್ಮಿನಲ್‌ ಮೇಲೆ, ಕೆಳಗೆ ಸುತ್ತಾಮುತ್ತ ಎತ್ತ ಕಣ್ಣಾಡಿಸಿದರೂ ಸಸಿಗಳ ಗುಚ್ಛ, ಹುಲ್ಲಿನ ಒದಿಕೆ, ಮರಗಳು, ಬಿದುರಿನ ಕಲಾಕೃತಿಗಳು ಮತ್ತು ಕಂಬಗಳು ಕಾಣ ಸಿಗುತ್ತವೆ. ಭದ್ರತಾ ಪರಿಶೀಲನೆ ನಡೆಸಿ ಒಳಕ್ಕೆ ತೆರಳುತ್ತಿದ್ದಂತೆ ಕಾರಂಜಿಗಳು, ಕಿರು ಜಲಪಾತಗಳು ಸ್ವಾಗತಿಸುತ್ತವೆ. ಅವುಗಳನ್ನು ಕಣ್ತುಂಬಿಕೊಂಡು ವಿಮಾನವೇರಿ ಬಾನಂಗಳಕೆ ಹಾರಬಹುದು. ಒಟ್ಟಾರೆ ನೂತನ ಟರ್ಮಿನಲ್‌ ಪ್ರಯಾಣಿಕರಿಗೆ ಎಂದೂ ಆಗಿರದ ಅನುಭವನ್ನು ನೀಡಲಿದೆ.

4 ಆಶಯದೊಂದಿಗೆ ನಿರ್ಮಾಣ: ಪರಿಸರ, ಸುಸ್ಥಿರ, ತಂತ್ರಜ್ಞಾನ, ಕಲೆ ಮತ್ತು ಸಂಸ್ಕೃತಿ ಎಂಬ ನಾಲ್ಕು ಆಶಯಗಳೊಂದಿಗೆ ಈ ಟರ್ಮಿನಲ್‌ ನಿರ್ಮಿಸಲಾಗಿದೆ. ಉದ್ಯಾನ ಮಾದರಿಯು ಪರಿಸರ ಆಶಯ ಎತ್ತಿ ಹಿಡಿದರೆ, ಬಿದಿರಿನ ಬಳಸಿದ ಒಳವಿನ್ಯಾಸದ ಮೂಲಕ ಸುಸ್ಥಿರತೆ ಕಾಣಸಿಗಲಿದೆ. ಪ್ರವೇಶದಿಂದ ಹಿಡಿದು ನಿರ್ಗಮನದವರೆಗೂ ಪ್ರತಿ ಚಟುವಟಿಕೆಯಲ್ಲಿಯೂ ತಂತ್ರಜ್ಞಾನ ಬಳಕೆಯಾಗಿದೆ. ವಿಶ್ರಾಂತಿ ಗೃಹ, ಪ್ರವೇಶ ದ್ವಾರದಲ್ಲಿ 43 ಕಲಾವಿದರ 60 ಕಲಾಕೃತಿ ಹಾಕಲಾಗಿದೆ. ಜತೆಗೆ ಲಾಂಜ್‌ ಮುಂಭಾಗವೇ ಪುಟ್ಟದೇವಸ್ಥಾನದ ರೀತಿ ತಾಮ್ರದ ವಿಗ್ರಹಗಳನ್ನು ಇಟ್ಟಿದ್ದು, ಗಣೇಶ, ಶಿವ, ಆಂಜನೇಯ ಸೇರಿದಂತೆ ಹತ್ತಾರು ದೇವರುಗಳ ಮೂರ್ತಿ ಸ್ಥಾಪನೆ ಮೂಲಕ ಕಲೆ ಮತ್ತು ಸಂಸ್ಕೃತಿಯನ್ನು ಎತ್ತಿಹಿಡಿಯಲಾಗಿದೆ.

ನಾನು ವಿಪಕ್ಷ ನಾಯಕ, ಆಹ್ವಾನ ಪತ್ರಿಕೆಯಲ್ಲಿ ನನ್ನ ಹೆಸರಿಲ್ಲ: ಸಿದ್ದು

ಸಸಿಗಳ ನಿರ್ವಹಣೆಗೆ ಸಾಫ್ಟ್‌ವೇರ್‌!: ಸಸಿಗಳಿಗೆ ಅಗತ್ಯವಿದ್ದಾಗ ನೀರುಣಿಸಲು, ಅವುಗಳಿಗೆ ಅಗತ್ಯ ತಾಪಮಾನ ಒದಗಿಸಲು, ನಿಗದಿಗಿಂತ ಹೆಚ್ಚು ಬೆಳೆದಾಗ ಅಥವಾ ಹರಡಿಕೊಂಡಾಗ ಕತ್ತರಿಸುವುದು ಸೇರಿದಂತೆ 6 ಲಕ್ಷಕ್ಕೂ ಅಧಿಕ ಸಸಿಗಳ ನಿರ್ವಹಣೆಗೆ ತಂತ್ರಾಂಶವನ್ನು ಸಿದ್ಧಪಡಿಸಲಾಗಿದೆ. ಇನ್ನು ಬಿದುರಿನ ಬೊಂಬುಗಳ ಕಲಾಕೃತಿ, ಗೋಡೆ ನಿರ್ಮಾಣವಾಗಿದ್ದು, ಬೆಂಕಿ ಅನಾಹುತಕ್ಕೀಡಾದಂತೆ, ಹೊಳಪು ಕಳೆದುಕೊಳ್ಳದಂತೆ ಅವುಗಳಿಗೆ ರಾಸಾಯನಿಕ ಲೇಪನ ಮಾಡಿ ಸಿದ್ಧಪಡಿಸಲಾಗಿದೆ.

Follow Us:
Download App:
  • android
  • ios