ನಾನು ವಿಪಕ್ಷ ನಾಯಕ, ಆಹ್ವಾನ ಪತ್ರಿಕೆಯಲ್ಲಿ ನನ್ನ ಹೆಸರಿಲ್ಲ: ಸಿದ್ದು
ಕೆಂಪೇಗೌಡರ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗಿದೆ. ಪ್ರತಿಪಕ್ಷ ನಾಯಕನಾಗಿರುವ ನನ್ನ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಹಾಕಬೇಕಿತ್ತು. ಆದರೆ, ಈ ವಿಚಾರದಲ್ಲಿ ಸರ್ಕಾರ ಶಿಷ್ಟಾಚಾರ ಉಲ್ಲಂಘಿಸಿದೆ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು (ನ.13): ಕೆಂಪೇಗೌಡರ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗಿದೆ. ಪ್ರತಿಪಕ್ಷ ನಾಯಕನಾಗಿರುವ ನನ್ನ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಹಾಕಬೇಕಿತ್ತು. ಆದರೆ, ಈ ವಿಚಾರದಲ್ಲಿ ಸರ್ಕಾರ ಶಿಷ್ಟಾಚಾರ ಉಲ್ಲಂಘಿಸಿದೆ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾನು ಪ್ರತಿಪಕ್ಷದ ನಾಯಕ. ಮುಖ್ಯಮಂತ್ರಿ, ವಿಧಾನಸಭೆ ಸಭಾಧ್ಯಕ್ಷರು, ರಾಜ್ಯಪಾಲರ ಬಳಿಕ ನನ್ನ ಹೆಸರು ಬರಬೇಕು. ಆದರೆ, ಇದನ್ನು ತಪ್ಪಿಸಿ ಆಹ್ವಾನ ಪತ್ರಿಕೆಯಲ್ಲಿ ಹೆಸರೇ ಇಲ್ಲದಂತೆ ಮಾಡಿದ್ದಾರೆ.
ಹಿಂದಿನ ದಿನ ಸಂಜೆ 7 ಗಂಟೆಗೆ ಮುಖ್ಯಮಂತ್ರಿಗಳ ಕಡೆಯವರು ಕರೆ ಮಾಡಿ ನಿಮ್ಮ ಹೆಸರು ಕ್ಲಿಯರ್ ಆಗಿದೆ ಎನ್ನುತ್ತಾರೆ. ಇದಕ್ಕೆ ನಾನು ಆಹ್ವಾನ ಪತ್ರಿಕೆಯಲ್ಲಿ ಹೆಸರೇ ಇಲ್ಲವಲ್ಲ’ ಎಂದು ಹೇಳಿ ಸುಮ್ಮನಾದೆ ಎಂದರು. ‘ನಮ್ಮ ಸರ್ಕಾರವಿದ್ದಾಗಲೇ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರು ಇಟ್ಟಿದ್ದೆವು. ಕೆಂಪೇಗೌಡರ ಜಯಂತಿ ಮಾಡಿದ್ದು ಸಹ ನಾನೇ. ಎಚ್.ಡಿ. ದೇವೇಗೌಡರು, ಎಚ್.ಡಿ. ಕುಮಾರಸ್ವಾಮಿ, ಯಡಿಯೂರಪ್ಪ ಸೇರಿ ಯಾರೂ ಕೆಂಪೇಗೌಡರ ಜಯಂತಿ ಮಾಡಿರಲಿಲ್ಲ. ನಮ್ಮ ಸರ್ಕಾರ ಬಂದಾಗ ಆಚರಣೆ ಮಾಡಿದೆವು. ಜತೆಗೆ ಕೇಂದ್ರಕ್ಕೆ ಪತ್ರ ಬರೆದು ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರು ಇಟ್ಟಿದ್ದೇವೆ. ಯಾರಾದರೂ ನಮ್ಮ ಹೆಸರು ಹೇಳಿದರಾ?’ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಧಾನಿ ಮೋದಿ ಕಾರ್ಯಕ್ರಮ ಬರೀ ಗಿಮಿಕ್: ಸಿದ್ದು ಟೀಕೆ
ಕಟೀಲ್ ಒಬ್ಬ ಜೋಕರ್: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ‘ಅವನೊಬ್ಬ ಜೋಕರ್. ಯಕ್ಷಗಾನ ನಾಟಕ ಆಡುವವರ ತರ ಇದ್ದಾನೆ. ಪಕ್ಷದ ರಾಜ್ಯಾಧ್ಯಕ್ಷನಾಗಿದ್ದರೂ ಅವರು ಹೋದ ಕಡೆ 1 ಸಾವಿರ ಜನರೂ ಸೇರಲ್ಲ. ಇದು ಜನರು ಸರ್ಕಾರದ ವಿರುದ್ಧ ಇದ್ದಾರೆ ಎಂಬುದಕ್ಕೆ ಸಾಕ್ಷಿ’ ಎಂದು ಹೇಳಿದರು.
ಟಿಪ್ಪು ಪ್ರತಿಮೆ ಮಾಡಿದರೆ ತಪ್ಪೇನು?: ನಾಡಪ್ರಭು ಕೆಂಪೇಗೌಡ ಪ್ರತಿಮೆ ಅನಾವರಣಗೊಂಡ ಬೆನ್ನಲ್ಲೇ ಮಾಜಿ ಸಚಿವ ತನ್ವೀರ್ ಸೇಠ್ ಅವರು ‘ಟಿಪ್ಪು ಸುಲ್ತಾನ್ ಪ್ರತಿಮೆ’ ನಿರ್ಮಿಸುವುದಾಗಿ ನೀಡಿರುವ ಹೇಳಿಕೆಯನ್ನು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ ಸಮರ್ಥಿಸಿಕೊಂಡಿದ್ದಾರೆ. ಈ ಬಗ್ಗೆ ಬೆಂಗಳೂರಿನಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ‘ಟಿಪ್ಪು ಸುಲ್ತಾನ್ ಪ್ರತಿಮೆ ನಿರ್ಮಿಸುವುದಾಗಿ ತನ್ವೀರ್ ಸೇಠ್ ಹೇಳಿದ್ದರೆ ಮಾಡಲಿ ಬಿಡಿ. ಅದರಲ್ಲಿ ತಪ್ಪೇನು?’ ಎಂದು ಪ್ರಶ್ನಿಸಿದ್ದಾರೆ. ಇದೇ ವಿಚಾರವಾಗಿ ಮಾತನಾಡಿದ ಎಂ.ಬಿ. ಪಾಟೀಲ್, ‘ಟಿಪ್ಪು ಸುಲ್ತಾನ್ ಬ್ರಿಟಿಷರ ವಿರುದ್ಧ ಹೋರಾಡಿದವರು.
ಕ್ಷೇತ್ರ ಘೋಷಿಸದ ಸಿದ್ದು ರಾಜಕೀಯ ಅಲೆಮಾರಿ: ಸಂಸದ ಶ್ರೀನಿವಾಸ ಪ್ರಸಾದ್
ಹೋರಾಟಗಾರರಿಗೆ ಎಲ್ಲರೂ ಗೌರವ ಕೊಡಬೇಕು. ಅವರ ಪ್ರತಿಮೆ ನಿರ್ಮಿಸಿದರೆ ಯಾರೂ ವಿರೋಧಿಸಬಾರದು’ ಎಂದು ಹೇಳಿದ್ದಾರೆ. ಮಾಜಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್, ‘ಟಿಪ್ಪು ಸುಲ್ತಾನ್ ಪ್ರತಿಮೆ ವಿಚಾರವಾಗಿ ಮಾತು ಕೇಳು ಬಂದ ಕೂಡಲೇ ಬಿಜೆಪಿಯವರು ಮುಗಿಬಿದ್ದಿದ್ದಾರೆ, ಅವರು ಮುಗಿ ಬೀಳಲೇಬೇಕು. ಬಿಜೆಪಿಯವರು ಮೊದಲಿನಿಂದ ಟಿಪ್ಪು ಅವರನ್ನು ವಿರೋಧ ಮಾಡಿದ್ದಾರೆ. ಇನ್ನು ತನ್ವೀರ್ ಸೇಠ್ ಯಾವ ಅರ್ಥದಲ್ಲಿ ಹೇಳಿದ್ದಾರೆ ಎಂದು ಚರ್ಚೆ ಮಾಡಬೇಕು. ಮುಂದೆ ಸರ್ಕಾರ ಬಂದಾಗ ಮಾಡುವುದು ಎಂದರೆ, ಅದು ಮುಂದಿನ ತೀರ್ಮಾನ ಆಗುತ್ತದೆ. ಅವರ ಸಲಹೆಯನ್ನು ಅವರು ಹೇಳಿದ್ದಾರೆ. ಅದರ ಬಗ್ಗೆ ನಾವು ಚರ್ಚೆ ಮಾಡುತ್ತೇವೆ’ ಎಂದು ತಿಳಿಸಿದ್ದಾರೆ.