ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ದೀರ್ಘಕಾಲದಿಂದ ಆಸ್ತಿ ತೆರಿಗೆ ಪಾವತಿಸದವರ ಆಸ್ತಿಗಳನ್ನು ನಗರ ಪಾಲಿಕೆಗಳು ನೇರವಾಗಿ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿವೆ. ಆಸ್ತಿಯ ಮಾರ್ಗದರ್ಶಕ ಮೌಲ್ಯದಿಂದ ತೆರಿಗೆ ಬಾಕಿ ಕಡಿತಗೊಳಿಸಿ, ಉಳಿದ ಹಣವನ್ನು ಮಾಲೀಕರಿಗೆ ಹಿಂತಿರುಗಿಸಲಾಗುತ್ತದೆ.

ಬೆಂಗಳೂರು (ಮಾ.24): ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಯಲ್ಲಿ ದೀರ್ಘಕಾಲದಿಂದ ಆಸ್ತಿ ತೆರಿಗೆ ಪಾವತಿಸದೆ ಬಾಕಿ ಉಳಿಸಿಕೊಂಡಿರುವ ಮಾಲೀಕರಿಗೆ ನಗರ ಪಾಲಿಕೆಗಳು ಈಗ ಬಿಸಿ ಮುಟ್ಟಿಸಿವೆ. ಕೇವಲ ನೋಟಿಸ್ ನೀಡುವುದಕ್ಕೆ ಸೀಮಿತವಾಗದ ಪಾಲಿಕೆಗಳು, ಇದೀಗ ಬಾಕಿದಾರರ ಆಸ್ತಿಯನ್ನೇ ನೇರವಾಗಿ ಸ್ವಾಧೀನಪಡಿಸಿಕೊಳ್ಳುವ 'ಕೊನೆಯ ಹಂತದ ಕ್ರಮ'ಕ್ಕೆ ಮುಂದಾಗಿವೆ. ಈ ಕುರಿತು ಮಾರ್ಚ್-24 ರಂದು ಅಧಿಕೃತ ಮಾಹಿತಿ ಹೊರಬಿದ್ದಿದ್ದು, ತೆರಿಗೆ ವಸೂಲಾತಿ ಪ್ರಕ್ರಿಯೆಯಲ್ಲಿ ಇದೊಂದು ಮಹತ್ವದ ಬದಲಾವಣೆಯಾಗಿದೆ.

Add Asianetnews Kannada as a Preferred SourcegooglePreferred

ಏನಿದು ಹೊಸ ನಿಯಮ?

ಸಾಮಾನ್ಯವಾಗಿ ತೆರಿಗೆ ಬಾಕಿ ಇದ್ದಾಗ ಪಾಲಿಕೆಗಳು ನೋಟಿಸ್ ನೀಡುತ್ತವೆ ಅಥವಾ ಆಸ್ತಿ ಅಟ್ಯಾಚ್ಮೆಂಟ್ ಮಾಡಿ ಹರಾಜು ಪ್ರಕ್ರಿಯೆ ನಡೆಸುತ್ತವೆ. ಆದರೆ, ಕೆಲವು ಪ್ರಕರಣಗಳಲ್ಲಿ ಹರಾಜಿನಲ್ಲಿ ಯಾರೂ ಭಾಗವಹಿಸದ ಕಾರಣ ತೆರಿಗೆ ವಸೂಲಾತಿ ನೆನೆಗುದಿಗೆ ಬಿದ್ದಿದೆ. ಇಂತಹ ಸಂದರ್ಭಗಳಲ್ಲಿ ಪಾಲಿಕೆಗಳೇ ನೇರವಾಗಿ ಆ ಆಸ್ತಿಯನ್ನು 'ಅಧಿಸೂಚಿತ ಬೆಲೆ'ಗೆ (ಮಾರ್ಗದರ್ಶಕ ಮೌಲ್ಯ) ತಾವೇ ಖರೀದಿಸಲಿವೆ.

ಈ ಪ್ರಕ್ರಿಯೆ ಹೇಗೆ ನಡೆಯುತ್ತದೆ?

ಅಂತಿಮ ಹಂತದ ಕ್ರಮ: ಇದು ಕೇವಲ ನೋಟಿಸ್, ಅಟ್ಯಾಚ್ಮೆಂಟ್ ಮತ್ತು ಹರಾಜು ಪ್ರಕ್ರಿಯೆಗಳು ವಿಫಲವಾದಾಗ ಮಾತ್ರ ಬಳಸುವ ಅಂತಿಮ ಅಸ್ತ್ರವಾಗಿದೆ.

ಬಾಕಿ ಹೊಂದಾಣಿಕೆ: ಆಸ್ತಿಯ ಮಾರ್ಗದರ್ಶಕ ಮೌಲ್ಯದ ಮೊತ್ತದಿಂದ ಬರಬೇಕಾದ ಆಸ್ತಿ ತೆರಿಗೆ, ದಂಡ, ಬಡ್ಡಿ ಮತ್ತು ಆಡಳಿತಾತ್ಮಕ ವೆಚ್ಚಗಳನ್ನು ಕಡಿತಗೊಳಿಸಲಾಗುತ್ತದೆ.

ಉಳಿದ ಹಣ ಮಾಲೀಕರಿಗೆ ವಾಪಸ್: ಆಸ್ತಿಯ ಮೌಲ್ಯದಿಂದ ತೆರಿಗೆ ಬಾಕಿಯನ್ನು ಕಡಿತಗೊಳಿಸಿದ ನಂತರ ಉಳಿಯುವ ಮೊತ್ತವನ್ನು ಮೂಲ ಮಾಲೀಕರ ಬ್ಯಾಂಕ್ ಖಾತೆಗೆ ಪಾರದರ್ಶಕವಾಗಿ ವರ್ಗಾಯಿಸಲಾಗುತ್ತದೆ.

ಮಾಲೀಕತ್ವ ವರ್ಗಾವಣೆ: ಎಲ್ಲಾ ಪ್ರಕ್ರಿಯೆ ಮುಗಿದ ನಂತರ ಆ ಆಸ್ತಿಯು ಯಾವುದೇ ಹೊರೆಗಳಿಲ್ಲದೆ ಅಧಿಕೃತವಾಗಿ ನಗರ ಪಾಲಿಕೆಯ ವಶಕ್ಕೆ ಸೇರಲಿದೆ.

ಬಾಕಿದಾರರಿಗೆ ಸಿಗಲಿದೆ 30 ದಿನಗಳ ಕಾಲಾವಕಾಶ:

ಈ ಸ್ವಾಧೀನ ಪ್ರಕ್ರಿಯೆ ಆರಂಭವಾಗುವ ಮುನ್ನ ಬಾಕಿದಾರರಿಗೆ ಮತ್ತೊಂದು ಅಂತಿಮ ಅವಕಾಶ ನೀಡಲಾಗುತ್ತದೆ. ಆಸ್ತಿ ಸ್ವಾಧೀನದ ಈ ಹಂತದಲ್ಲಿ ಮಾಲೀಕರು ಒಂದು ತಿಂಗಳ ಒಳಗಾಗಿ ಬಡ್ಡಿ ಸಮೇತ ಸಂಪೂರ್ಣ ತೆರಿಗೆಯನ್ನು ಪಾವತಿಸಿದರೆ, ಸ್ವಾಧೀನ ಕ್ರಮವನ್ನು ಹಿಂತೆಗೆದುಕೊಂಡು ಆಸ್ತಿಯನ್ನು ಮಾಲೀಕರಿಗೇ ಉಳಿಸಿಕೊಡಲಾಗುತ್ತದೆ. ನಗರದ ಅಭಿವೃದ್ಧಿ ಕಾರ್ಯಗಳಿಗೆ ಆಸ್ತಿ ತೆರಿಗೆಯೇ ಮುಖ್ಯ ಆಧಾರವಾಗಿದೆ. ಹೀಗಾಗಿ ನಾಗರಿಕರು ಬಲವಂತದ ವಸೂಲಾತಿ ಅಥವಾ ಆಸ್ತಿ ಕಳೆದುಕೊಳ್ಳುವ ಪರಿಸ್ಥಿತಿಯನ್ನು ತಂದುಕೊಳ್ಳುವ ಬದಲು, ಸಕಾಲದಲ್ಲಿ ತೆರಿಗೆ ಪಾವತಿಸಿ ಆರ್ಥಿಕ ಶಿಸ್ತು ಕಾಪಾಡಿಕೊಳ್ಳುವಂತೆ ಪಾಲಿಕೆಗಳು ಮನವಿ ಮಾಡಿವೆ. ಈ ಕ್ರಮವು ಪ್ರಾಮಾಣಿಕವಾಗಿ ತೆರಿಗೆ ಪಾವತಿಸುವವರ ಹಿತರಕ್ಷಣೆ ಮತ್ತು ತೆರಿಗೆಗಳ ನಡುವೆ ಸಮಾನತೆಯನ್ನು ತರಲು ಸಹಕಾರಿಯಾಗಲಿದೆ.