- ದೀಪಕ್‌ ಅಳದಂಗಡಿ, ಕನ್ನಡಪ್ರಭ

ಬೆಳ್ತಂಗಡಿ(ಡಿ.17): ಈ ಬಾಲಕನ ಅಜ್ಜ ದಿ. ಪಲಸ್ಥಡ್ಕ ಸೂಫಿ ಬ್ಯಾರಿ. ಒಂದು ಕಾಲದಲ್ಲಿ ಅಳದಂಗಡಿಯಲ್ಲಿ ಮಾವು ಬೆಳೆಗೆ ಅತ್ಯಂತ ಪ್ರಸಿದ್ಧರಾಗಿದ್ದರು. ನೀರಿನಾಶ್ರಯವಿಲ್ಲದ ಒಣ ಭೂಮಿಯಲ್ಲಿ ಹಸಿರು ಚಿಗುರಿಸಿದವರು. ಬಡಗಕಾರಂದೂರು ಶಾಲೆಯ ಬಳಿಯ ಇವರ ಮಾವಿನ ತೋಪು ಸುಮಾರು ಐದು ದಶಕಗಳಕ್ಕಿಂತಲೂ ಹೆಚ್ಚು ಕಾಲ ಹೆಸರು ಮಾಡಿತ್ತು. ಅವರ ಸಾವಿನ ಬಳಿಕ ಅದರ ಮಹತ್ತು ಕಮ್ಮಿಯಾಗತೊಡಗಿತು. ಕಾರಣವೇನೆಂದರೆ ಅದನ್ನು ಮುಂದುವರಿಸುವ ಯೋಗ ಯಾರಿಗೂ ಬರಲಿಲ್ಲ. ಆದರೆ ಈಗ ಅವರ ಮೊಮ್ಮಗ ಸಂಶುದ್ದೀನ್‌ ತನ್ನ ಅಜ್ಜನ ತೋಟವನ್ನು ಸಂರಕ್ಷಿಸುವ ಮತ್ತು ಬೆಳೆಸುವ ಅದಮ್ಯ ಆಸೆ ಹಾಗೂ ಆಸ್ಥೆಯಿದೆ.

ಲಾಕ್‌ಡೌನ್‌ ಪರಿಣಾಮ: ಕೆದ್ದು ಪ್ರೌಢಶಾಲೆಯಲ್ಲಿ 9ನೇ ತರಗತಿಯಲ್ಲಿ ಓದುತ್ತಿರುವ ಸಂಶುದ್ದೀನ್‌ ಲಾಕ್‌ಡೌನ್‌ನ ಸಂಪೂರ್ಣ ಉಪಯೋಗ ಪಡೆದುಕೊಂಡು ಕೃಷಿಕಾರ್ಯದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವುದು ಆತನ ತೋಟಕ್ಕೆ ಹೋದರೆ ಗೊತ್ತಾಗುತ್ತದೆ. ಬಾಲಕನನ್ನು ಮಾತನಾಡಿಸತೊಡಗಿದರೆ ಆತನ ಅಜ್ಜನ ಕೃಷಿ ಜ್ಞಾನ ಈತನಿಗೂ ಬಂದಿದೆ ಅನಿಸದಿರಲಾರದು.

ವಿವಿಧ ಹಣ್ಣು- ತರಕಾರಿ ಬೆಳೆಗಳಲ್ಲಿ ಆಸಕ್ತಿ

ಸಮರ್ಪಕ ನೀರಿನ, ಗೊಬ್ಬರ, ಔಷಧಗಳ ವ್ಯವಸ್ಥೆಯಿಲ್ಲದಿದ್ದರೂ ನೇಂದ್ರ, ಹೂಬಾಳೆ, ಆವುಂಡಬಾರೆ, ಚೀನಿಕಾಯಿ, ಕುಂಬಳ, ಪಡುವಲಕಾಯಿ, ಮುಳ್ಳು ಸೌತೆ, ಹೀರೆಕಾಯಿ, ಅಲಸಂಡೆ, ಅಬರೆ ಇತ್ಯಾದಿ ತರಕಾರಿಗಳನ್ನು ಬೆಳೆಸಿ ಮಾರಾಟ ಮಾಡಿ ತಕ್ಕಷ್ಟುಸಂಪಾದಿಸಿ ಬಡ ಕುಟುಂಬಕ್ಕೆ ಆಸರೆಯಾಗಿದ್ದಾನೆ. ಜೀವಾಮೃತವನ್ನು ತಯಾರಿಸಿ ಅದರಿಂದ ತರಕಾರಿ ಮಾತ್ರವಲ್ಲದೆ ಜೀನಿಯಾ, ದಾಸವಾಳ, ಗುಲಾಬಿ, ಕೇಪುಳ, ಗುಲಾಬಿ ಹೂಗಳಲ್ಲದೆ ಜಂಬುನೇರಳೆ, ಗಜಲಿಂಬೆ, ಚಕೋತ, ರಾಂಬೂಟಾನ್‌. ಲಕ್ಷ್ಮಣಫಲ, ರಾಮಫಲ, ಪೇರಳೆ, ಚಿಕ್ಕುಗಳ ವೈವಿಧ್ಯಮಯ ತಳಿಗಳ, ಔಷಧೀಯ ಸಸ್ಯಗಳ ಸಂಗ್ರಹವಿದೆಯಲ್ಲದೆ ಕಸಿಕಟ್ಟುವುದರಲ್ಲಿ ಎತ್ತಿದ ಕೈ ಸಂಶುದ್ದೀನನದು. ಯಾವ ಗಿಡ, ಯಾವ ಹಣ್ಣು ಯಾವ ಕಾಯಿಲೆಗೆ ಯೋಗ್ಯ ಎಂಬುದನ್ನೂ ಈತ ಹೇಳಬಲ್ಲ. ಮರಗಿಡಗಳನ್ನು ಪ್ರೀತಿಸುವ ಕಲೆ ಈತನಿಗೆ ಎಳೆವಯಸ್ಸಿನಲ್ಲೇ ತಿಳಿದಿರುವುದು ಆತನೊಂದಿಗೆ ಒಂದಷ್ಟುಹೊತ್ತು ಕಳೆದರೆ ಗೊತ್ತಾಗುತ್ತದೆ.

ಪತ್ನಿಯರಿಗಾಗಿ ತೆಂಗಿನ ಮರವೇರಿ 8 ಗಂಟೆ ಪ್ರತಿಭಟನೆ ನಡೆಸಿದ ಭೂಪ..!

ಅಪೂರ್ವ ಮರಗಳು: ಸುಮಾರು ಒಂದು ಎಕರೆ ಜಾಗದಲ್ಲಿ ಸಂಶುದ್ದೀನ್‌ನ ಅಜ್ಜನ ತೋಟದಲ್ಲಿ ತಿರುಗಾಡಿದಾಗ ಜಾಂಗೀರು, ಬಾದಾಮಿ, ನೀಲಮ್‌, ತೋತಾಪುರಿ, ಮುಂಡಪ್ಪ, ಕಾಲಪ್ಪಾಡಿ, ಬದ್ಯಾರು ತಳಿಯ ಬೃಹತ್‌ ಮಾವಿನ ವೃಕ್ಷಗಳು ಕಾಣ ಸಿಗುತ್ತವೆ. ಅಪೂರ್ವದಲ್ಲಿ ಅಪೂರ್ವವಾದ ಕಿರಿಣಿ ಹಾಗೂ ಎಲಿವೆಟ್‌ ಮರಗಳಿರುವುದು ಆಶ್ಚರ್ಯಚಕಿತರನ್ನಾಗಿ ಮಾಡುತ್ತದೆ.

ಬಡ ಕುಟುಂಬ: ಇಷ್ಟೆಲ್ಲಾ ಇದ್ದರೂ ಸಂಶುದ್ದೀನ್‌ನ ಕುಟುಂಬ ಅತ್ಯಂತ ಬಡತನದಲ್ಲಿದೆ. ಯಾಕೆಂದರೆ ಬಾಲಕನ ಕುಟುಂಬಕ್ಕೆ ಸೂಕ್ತವಾದ ಮಾರ್ಗದರ್ಶನ, ಆರ್ಥಿಕ ಸಹಾಯದ ಕೊರತೆ. ಮನೆಯಲ್ಲಿ ಹುಡುಗನ ಅಜ್ಜಿ ನೆಬಿಸಾ, ತಾಯಿ ಝೋರಾಬಿ ಹಾಗೂ ಅಕ್ಕ ಇದ್ದು ಬೀಡಿಕಟ್ಟಿಜೀವನ ಸಾಗಿಸುತ್ತಿದ್ದಾರೆ. ಬಾಲಕನೂ ದಿನವಿಡೀ ಅಡಕೆ ಸುಲಿದು ಕುಟುಂಬಕ್ಕೆ ನೆರವಾಗುತ್ತಿದ್ದಾನೆ. ಕಷ್ಟದ ದಿನಗಳು ನಡೆಯುತ್ತಿದ್ದರೂ ಅಜ್ಜನ ತೋಟವನ್ನು ಉಳಿಸಿ, ಬೆಳೆಸಬೇಕು, ಅವರು ನೆಟ್ಟವಿವಿಧ ಫಲ ವೃಕ್ಷಗಳ ತಳಿಗಳನ್ನು ಸಂರಕ್ಷಿಸಬೇಕು ಎಂಬ ಬೃಹತ್‌ ಗುರಿ ಆತನಲ್ಲಿದೆ.

ಕಸಿ ಕಟ್ಟುವುದರಲ್ಲಿ ಎತ್ತಿದ ಕೈ: ಈ ಬಾರಿಯ ರಜೆಯಲ್ಲಿ ಯಾವುದೆಲ್ಲಾ ತರಕಾರಿ ಮಾಡಲು ಸಾಧ್ಯವೋ ಅದೆಲ್ಲವನ್ನೂ ಮಾಡಿದ್ದಾನೆ. ಯಾವುದಕ್ಕೆಲ್ಲಾ ಕಸಿ ಕಟ್ಟಬೇಕು ಅದನ್ನೂ ಮಾಡಿದ್ದಾನೆ. ಅಜ್ಜ ಸೂಫಿ ಬ್ಯಾರಿ ಸಸಿಗಳಿಗೆ ಕಸಿ ಕಟ್ಟುವ ಕಲೆಯಲ್ಲಿ ನಿಷ್ಣಾತರಾಗಿದ್ದರು. ಈತನಿಗೆ ಅದು ರಕ್ತಗತವಾಗಿ ಬಂದಿದೆ.

ನಾನು ಅಜ್ಜನನ್ನು ನೋಡಿಲ್ಲ. ಆದರೆ ಅವರ ಕೃಷಿಸಾಧನೆಗಳನ್ನು ಅಜ್ಜಿಯಿಂದ, ನೆರೆಕೆರೆಯವರಿಂದ ಕೇಳಿ ತಿಳಿದುಕೊಂಡಿದ್ದೇನೆ. ಸುಮಾರು ಒಂದು ಲಕ್ಷದಷ್ಟುಕಿರಿಣಿ ಗಿಡಗಳ ನರ್ಸರಿ ಮಾಡಬೇಕೆಂಬ ಆಸೆ ಇದೆ. ಏನೇ ಆಗಲಿ ನಾನು ವಿದ್ಯಾಭ್ಯಾಸದ ಜೊತೆಗೆ ಇರುವ ತೋಟವನ್ನು ಉಳಿಸಲು ಏನೂ ಮಾಡಲು ಸಿದ್ಧ - ಸಂಶುದ್ದೀನ್‌