ಕೂಡ್ಲಿಗಿ(ಡಿ.17): ಇಬ್ಬರನ್ನು ಮದುವೆಯಾದರೂ ಒಬ್ಬ ಪತ್ನಿಯೂ ತನ್ನೊಂದಿಗೆ ಜೀವನ ಮಾಡುತ್ತಿಲ್ಲವೆಂದು ಬೇಸತ್ತು ವ್ಯಕ್ತಿಯೊಬ್ಬ ತೆಂಗಿನ ಮರವೇರಿ ಸುಮಾರು 8 ಗಂಟೆಗಳ ಕಾಲ ಪ್ರತಿಭಟನೆ ಮಾಡಿದ ವಿಚಿತ್ರ ಘಟನೆ ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಸಮೀಪದ ದಾಸೋಬನಹಳ್ಳಿ ಗೊಲ್ಲರಹಟ್ಟಿಯಲ್ಲಿ ಮಂಗಳವಾರ ನಡೆದಿದೆ.

ಗ್ರಾಮದ ದೊಡ್ಡಪ್ಪ (40) ಮರವೇರಿ ಪತ್ನಿಯರು ಬೇಕೆಂದು ಪ್ರತಿಭಟನೆ ನಡೆಸಿದ ಭೂಪ. ಈತನಿಗೆ ಇಬ್ಬರು ಪತ್ನಿಯರಿದ್ದರೂ ಸಹ ಅವರು ಈತನ ಜೊತೆ ವಾಸಿಸುತ್ತಿಲ್ಲ. 20 ವರ್ಷಗಳ ಹಿಂದೆ ಗ್ರಾಮದಲ್ಲಿಯೇ ಸೋದರ ಸೊಸೆಯೊಂದಿಗೆ ಮೊದಲು ಮದುವೆಯಾಗಿದ್ದು, ಮಕ್ಕಳಾಗದ ಕಾರಣ ಪತ್ನಿ ತವರು ಸೇರಿದ್ದಳು. ನಂತರ ಕೂಡ್ಲಿಗಿ ಸಮೀಪದ ಶಿವಪುರ ಗೊಲ್ಲರಹಟ್ಟಿಯ ಮಹಿಳೆಯೊಂದಿಗೆ 2ನೇ ಮದುವೆಯಾಗಿದ್ದಾನೆ. ಈಕೆಗೆ ಮೂವರು ಗಂಡು ಮಕ್ಕಳಿದ್ದಾರೆ. ಆದರೂ, ಇಬ್ಬರ ನಡುವಿನ ಮನಸ್ತಾಪದಿಂದ ಆಕೆ 5 ವರ್ಷಗಳ ಹಿಂದೆ ತವರು ಸೇರಿದ್ದಾಳೆ. ಇದರಿಂದ ಖಿನ್ನತೆಗೆ ಒಳಗಾಗಿ ಮರವೇರಿ ಪ್ರತಿಭಟನೆ ನಡೆಸಿದ್ದಾನೆ ಎನ್ನಲಾಗಿದೆ.

ಮುಂದುವರಿದ ಪೊಲೀಸ್ ಅಧಿಕಾರಿಗಳ ಆತ್ಮಹತ್ಯೆ; ನೇಣಿಗೆ ಶರಣಾದ ಬೆಂಗಳೂರು ಮಹಿಳಾ ಡಿವೈಎಸ್‌ಪಿ

ಹೆಂಡತಿ ಮುಖ ನೋಡಿ ಕೆಳಗಿಳಿದ:

ಮರದಿಂದ ಕೆಳಗಿಳಿಯುವಂತೆ ಗ್ರಾಮಸ್ಥರು, ಮಕ್ಕಳು ಹೇಳಿದರೂ ಕೇಳಲಿಲ್ಲ. ಕಾನಹೊಸಹಳ್ಳಿ ಠಾಣೆ ಪೊಲೀಸರ ಮನವರಿಕೆಗೂ ಜಗ್ಗದೆ ಸುಮಾರು 8 ತಾಸು ಮರದಲ್ಲಿದ್ದ. ನಂತರ ಮೊದಲ ಹೆಂಡತಿಯನ್ನು ಕರೆಯಿಸಿದ ಮೇಲೆ ಮರದಿಂದ ಇಳಿಯಲು ಒಪ್ಪಿದಾನೆ. ಅಗ್ನಿಶಾಮಕ ದಳದವರು ಕೆಳಗೆ ಇಳಿಸಿದ್ದಾರೆ.