ಬಾನಂಗಳದಲ್ಲಿ ಪಟಾಕಿಯ ಬೆಳಕಿನ ಚಿತ್ತಾರ, ಕಿವಿ ಗಡಚಿಕ್ಕುವ ಸಂಗೀತ, ಕೇಕ್ ಕತ್ತರಿಸಿ ನೂತನ ವರ್ಷಕ್ಕೆ ಜನರಿಂದ ಭರ್ಜರಿ ಸ್ವಾಗತ, 2 ವರ್ಷಗಳ ಬಳಿಕ ನಗರದಲ್ಲಿ ಸಂಭ್ರಮೋ ಸಂಭ್ರಮ. ಹೋಟೆಲ್, ಪಬ್, ರೆಸಾರ್ಟ್‌ಗಳಲ್ಲಿ ಮೈಮರೆತು ಕುಣಿದು ಕುಪ್ಪಳಿಸಿದ ಜನ.
ಬೆಂಗಳೂರು(ಜ.01): ಫೈವ್..ಫೋರ್..ತ್ರಿ..ಟು..ಒನ್..ವೆಲ್‌ಕಮ್ 2023..! ಮಧ್ಯರಾತ್ರಿ ಗಡಿಯಾರದಲ್ಲಿ ಹೊಸ ವರ್ಷಕ್ಕೆ ಕ್ಷಣಗಣನೆ ಶುರುವಾಗಿ ಚಿಕ್ಕ ಮುಳ್ಳು 11.59ಅನ್ನು ದಾಟಿ 12ಕ್ಕೆ ಪ್ರವೇಶಿಸುತ್ತಿದ್ದಂತೆ ಸಿಲಿಕಾನ್ ಸಿಟಿಯಲ್ಲಿ ಹಾಡು, ಕುಣಿತ, ಸಂಭ್ರಮದೊಂದಿಗೆ ‘ಹ್ಯಾಪಿ ನ್ಯೂ ಇಯರ್’ ಮಾರ್ದನಿಸಿತು.
ಕೊರೋನಾ ಕಾರಣದಿಂದ ಎರಡು ವರ್ಷಗಳಿಂದ ಹೊಸ ವರ್ಷಾಚರಣೆಗೆ ಅವಕಾಶ ಇರಲಿಲ್ಲ. ಹೀಗಾಗಿ ನಗರದ ಬಹುತೇಕ ಕಡೆ ಭರ್ಜರಿಯಾಗಿ ಹೊಸ ವರ್ಷ ಆಚರಿಸಲಾಯಿತು. 12 ಗಂಟೆಯಾಗುತ್ತಿದ್ದಂತೆ ಬಾನಂಗಳದಲ್ಲಿ ಪಟಾಕಿಯ ಬೆಳಕಿನ ಚಿತ್ತಾರ, ಕಿವಿ ಗಡಚಿಕ್ಕುವ ಸಂಗೀತದ ನಡುವೆ ಕೇಕ್ ಕತ್ತರಿಸುವ ಮೂಲಕ ಹೊಸ ವರ್ಷವನ್ನು ಸ್ವಾಗತಿಸಲಾಯಿತು. ಸಂಜೆಯಿಂದಲೇ ಯುವಜನರು ವಿವಿಧ ಕಡೆ ಭರ್ಜರಿ ಪಾರ್ಟಿ ನಡೆಸಿದರು. ಸೊಗಸಾದ ಡಿಜೆ ಬೀಟ್ಸ್‌ಗೆ ತಕ್ಕುದಾದ ಹೆಜ್ಜೆ. ಕಿಕ್ಕೇರಿದ ಮೋಜು ಮಸ್ತಿ ಸಂಭ್ರಮ ಇಮ್ಮಡಿಗೊಳಿಸಿತ್ತು. ಹೋಟೆಲ್, ಪಬ್, ರೆಸಾರ್ಚ್‌ಗಳಲ್ಲಿ ಮೈಮರೆತು ಹಬ್ಬದಂತೆ ಆಚರಿಸಿದರು. ಕಚೇರಿಗಳಲ್ಲಿ ಸ್ನೇಹಿತರು, ಕುಟುಂಬಸ್ಥರು ಒಟ್ಟಾಗಿ 2022ಕ್ಕೆ ಗುಡ್‌ಬೈ ಹೇಳುತ್ತ 2023ನ್ನು ಸಂತಸದಿಂದ ಬರಮಾಡಿಕೊಂಡರು.
ಹೊಸ ವರ್ಷಾಚರಣೆಗೆ ಆಕ್ರೋಶ, ಬ್ರಹ್ಮಾಂಡ ಗುರೂಜಿ, ನಟಿ ರೂಪಾ ಆಯ್ಯರ್ ಪಾದಯಾತ್ರೆ!
ವಿದ್ಯುತ್ ಅಲಂಕಾರದಿಂದ ಜಗಮಗಿಸುತ್ತಿದ್ದ ಬ್ರಿಗೇಡ್ ರಸ್ತೆ, ಎಂ.ಜಿ.ರಸ್ತೆ, ಚಚ್‌ರ್ ಸ್ಟ್ರೀಟ್, ಕೋರಮಂಗಲ ರಸ್ತೆ, ಇಂದಿರಾನಗರ, ವೈಟ್‌ಫೀಲ್ಡ್ ಪ್ರದೇಶ ಸೇರಿದಂತೆ ಅನೇಕ ಕಡೆಗಳು ಬೃಹತ್ ಸಂಖ್ಯೆಯ ಯುವ ಸಮೂಹದಿಂದ ತುಂಬಿ ಹೋಗಿದ್ದವು. ವಿಶಿಷ್ಟಉಡುಗೆ ತೊಡುಗೆ ತೊಟ್ಟು ಸೆಲ್ಫಿ ಕ್ಲಿಕ್ಕಿಸಿಕೊಂಡರು. ಡ್ರಮ್ಸ್, ಗಿಟಾರ್ ಸಂಗೀತ ವಾದ್ಯಗಳ ಅಬ್ಬರ ಎಲ್ಲೆಡೆ ಆವರಿಸಿತ್ತು. ನಗರದ ಹೊರವಲಯದಲ್ಲೂ ವರ್ಷಾಚರಣೆ ಭರ್ಜರಿಯಾಗಿ ನಡೆಯಿತು.
ಸಂಜೆ 4ಗಂಟೆಯಿಂದಲೆ ಬ್ರಿಗೇಡ್ ರಸ್ತೆಯತ್ತ ಯುವಕರ ಆಗಮನ ಹೆಚ್ಚಿತ್ತು. ಹೊಸ ವರ್ಷಾಚರಣೆಗೆಂದೆ ಅನಿವಾಸಿ ಭಾರತೀಯರು, ವಿದೇಶಿಗರು, ರಾಜ್ಯದ ವಿವಿಧೆಡೆಯ ಜನ ಆಗಮಿಸಿದ್ದರು. ಕತ್ತಲು ಆವರಿಸುತ್ತಿದ್ದಂತೆ ಸಂಭ್ರಮವೂ ಹೆಚ್ಚಿತ್ತು. ವ್ಯಾಪಾರಿ ಮಳಿಗೆಗಳು, ಪಂಚತಾರಾ ಹೋಟೆಲ್, ಪಬ್ ರೆಸ್ಟೋರೆಂಟ್‌ಗಳಲ್ಲಿ ಮಾತ್ರವಲ್ಲದೆ ರಸ್ತೆಯುದ್ದಕ್ಕೂ ಸಂಭ್ರಮ ರಂಗೇರಿತ್ತು.
ಸಹಜ ಸಂಭ್ರಮ:
ನಗರದ ಬಡಾವಣೆ, ಅಪಾರ್ಟ್‌ಮೆಂಟ್‌ಗಳಲ್ಲಿ ಸಂಗೀತ, ಮನರಂಜನಾ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ಹೊಸ ಹರುಷದಲ್ಲಿ ಹೊಸ ವರ್ಷಕ್ಕೆ ಪಾದಾರ್ಪಣೆ ಮಾಡಿದರು. ಪ್ರಮುಖ ವೃತ್ತಗಳಲ್ಲಿ ಆಟೋ ಚಾಲಕರ ಸಂಘಗಳು, ವಿವಿಧ ಸಂಘಟನೆಗಳು ಕೇಕ್ ಕತ್ತರಿಸಿ ಹೊಸ ವರ್ಷವನ್ನು ಸ್ವಾಗತಿಸಿದರು.
ಮಾಸ್ಕ್ ಜಾಗೃತಿ
ಈ ನಡುವೆ ಬ್ರಿಗೇಡ್ ರಸ್ತೆಯಲ್ಲಿ ಬಿಬಿಎಂಪಿ ಮಾರ್ಷಲ್‌ಗಳು ಮಾಸ್ಕ್ ಧರಿಸುವಂತೆ ಹೇಳುತ್ತಿದ್ದರು. ಆದರೆ, ಹೊಸ ವರ್ಷದ ಸಂಭ್ರಮದಲ್ಲಿ ಕೊರೋನಾ ಕಡೆಗಣನೆಯಾಗಿತ್ತು. ಎಲ್ಲೂ ಮಾಸ್ಕ್ ಧರಿಸಿ ಹೊಸ ವರ್ಷ ಆಚರಿಸಿದ್ದು ಕಂಡುಬರಲಿಲ್ಲ. ತಡರಾತ್ರಿ 1ಕ್ಕೆ ಸಂಭ್ರಮಾಚರಣೆ ಮುಗಿಸುವಂತಿದ್ದರೂ ಯಾರೂ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. 12 ಗಂಟೆ ಆಗುತ್ತಿದ್ದಂತೆ ಭದ್ರತೆಗೆ ನಿಯೋಜನೆ ಆಗಿದ್ದ ಪೊಲೀಸರು ಪಾರ್ಟಿಗಳನ್ನು ಮುಗಿಸಿ ತೆರಳುವಂತೆ ಸೂಚನೆ ನೀಡುತ್ತಿರುವುದು ಕಂಡುಬಂತು.
ಬಿಗಿ ಭದ್ರತೆ
ರಾಜಧಾನಿಯಲ್ಲಿ ಹೊಸ ವರ್ಷ ಆಚರಣೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಭದ್ರತೆ ಕಲ್ಪಿಸಲಾಗಿತ್ತು. 10 ಸಾವಿರಕ್ಕೂ ಅಧಿಕ ಪೊಲೀಸರು ಹಾಗೂ 1.70 ಲಕ್ಷ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿತ್ತು. ಹೆಚ್ಚು ಜನ ಸಂದಣಿ ಸೇರುವ ಸ್ಥಳಗಳಲ್ಲಿ ಸೂಕ್ತ ಕಣ್ಗಾವಲಿಗೆ ವಾಚ್ ಟವರ್‌ಗಳನ್ನು ನಿರ್ಮಿಸಿ ಬೈನಾಕ್ಯೂಲರ್ ಮೂಲಕ ನಿಗಾ ಇಡಲಾಗಿತ್ತು. ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ ಹಾಗೂ ಇಂದಿರಾ ನಗರ ಸೇರಿದಂತೆ ಕೆಲವು ಕಡೆ ಶನಿವಾರ ರಾತ್ರಿ 20 ಡ್ರೋನ್ ಕ್ಯಾಮೆರಾಗಳಿಂದ ಹದ್ದಿನ ಕಣ್ಣಿಡಲಾಗಿತ್ತು. ಪ್ರಮುಖ ಸ್ಥಳಗಳಲ್ಲಿ ಶ್ವಾನದಳ ಹಾಗೂ ಬಾಂಬ್ ನಿಷ್ಕಿ್ರಯ ದಳ ತಪಾಸಣೆ ಕೈಗೊಂಡಿತ್ತು.
ಹೊಸ ವರ್ಷಕ್ಕೆ ಮತ್ತಷ್ಟು ಕಿಕ್, ದೆಹಲಿಯಲ್ಲಿ 24 ಗಂಟೆ ಬಾರ್, ಪಬ್, ರೆಸ್ಟೋರೆಂಟ್ ಒಪನ್!
ಎಂ.ಜಿ.ರಸ್ತೆ ಹಾಗೂ ಬ್ರಿಗೇಡ್ ರಸ್ತೆಗಳಲ್ಲಿ ಶನಿವಾರ ಮಧ್ಯಾಹ್ನ 3ರಿಂದ ರಾತ್ರಿ 1ರವರೆಗೆ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಅಲ್ಲದೆ ಬ್ರಿಗೇಡ್ ರಸ್ತೆಯಲ್ಲಿ ಜನರಿಗೆ ಏಕಮುಖ ಪ್ರವೇಶಕ್ಕೆ ಮಾತ್ರ ಅವಕಾಶವಿತ್ತು. ಈ ಎರಡು ರಸ್ತೆಗಳ ಜಂಕ್ಷನ್‌ನಲ್ಲಿ ಪ್ರವೇಶ ದ್ವಾರ ನಿರ್ಮಿಸಿ ಮೆಟಲ್ ಡಿಟೇಕ್ಟರ್ ಉಪಕರಣವನ್ನು ಅಳವಡಿಸಿ ಜನರನ್ನು ಬಿಡಲಾಯಿತು.
ನಗರದಲ್ಲಿ ವ್ಹೀಲಿಂಗ್, ವೇಗದ ಚಾಲನೆ ತಡೆಗಾಗಿ 30 ಫ್ಲೈ ಓವರ್‌ಗಳನ್ನು ಬಂದ್ ಮಾಡಲಾಗಿತ್ತು. ಪಂಚತಾರಾ ಹೋಟೆಲ್, ಪಬ್ ರೆಸ್ಟೋರೆಂಟ್‌ಗಲ್ಲಿ ರಕ್ಷಣೆಗಾಗಿ ಬೌನ್ಸರ್‌ಗಳನ್ನು ನೇಮಿಸಲಾಗಿತ್ತು. 37 ಕಡೆ ಮಹಿಳಾ ರಕ್ಷಣೆ ಟೆಂಟ್‌ಗಳನ್ನು ಅಳವಡಿಸಲಾಗಿತ್ತು.
