ಎಚ್.ಡಿ.ಕೋಟೆ: ಗ್ರಾಮ ವಾಸ್ತವ್ಯ ನನಗೆ ಪಾಠಶಾಲೆ ಇದ್ದಂತೆ, ಸಚಿವ ಅಶೋಕ್
ಬೇಗೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಭಾಗಿ, ಗಿರಿಜನರ ಮನೆಯಲ್ಲಿ ಉಪಾಹಾರ ಸೇವಿಸಿದ ಅಶೋಕ್, ಕಾಡಂಚಿನ ಗ್ರಾಮಗಳಲ್ಲಿ ಮನೆ ನಿರ್ಮಾಣಕ್ಕೆ ಮಂಜೂರಾತಿ ಭರವಸೆ, ವನ್ಯಜೀವಿ ವಲಯದ ಸಿಬ್ಬಂದಿಗೆ ಜರ್ಕಿನ್, ಛತ್ರಿ, ಕಂಬಳಿ ವಿತರಣೆ.
ಎಚ್.ಡಿ.ಕೋಟೆ(ನ.21): ಎಚ್.ಡಿ.ಕೋಟೆ ತಾಲೂಕಿನ ಎನ್.ಬೇಗೂರು ಗ್ರಾ.ಪಂ.ವ್ಯಾಪ್ತಿಯಲ್ಲಿ ಕಂದಾಯ ಸಚಿವ ಆರ್.ಅಶೋಕ್ ನಡೆಸಿದ 12ನೇ ಗ್ರಾಮವಾಸ್ತವ್ಯ ನಿನ್ನೆ(ಭಾನುವಾರ) ಮುಕ್ತಾಯವಾಯಿತು. ಈ ವೇಳೆ ಮಾತನಾಡಿದ ಸಚಿವರು, ಹಾಡಿಯಲ್ಲಿ ನಡೆಸಿದ ಗ್ರಾಮ ವಾಸ್ತವ್ಯ ವಿಶೇಷ ಅನುಭವ ನೀಡಿತು. ಮುಂದಿನ ಗ್ರಾಮ ವಾಸ್ತವ್ಯವನ್ನು ಇಂತಹುದೇ ಸ್ಥಳದಲ್ಲಿ ಆಯೋಜಿಸುವಂತೆ ಜಿಲ್ಲಾಧಿಕಾರಿಗಳಿಗೆ ಹೇಳುತ್ತೇನೆ. ಈ ಗ್ರಾಮ ವಾಸ್ತವ್ಯದಿಂದ ಸಾಕಷ್ಟುಕಲಿತೆ. ಗ್ರಾಮ ವಾಸ್ತವ್ಯ ಕಾರ್ಯಕ್ರಮ ನನಗೆ ಪಾಠಶಾಲೆಯಾಗಿದ್ದು, ಇಲ್ಲಿ ಕಲಿತ ಅನೇಕ ವಿಚಾರಗಳನ್ನು ವಿಧಾನಸಭೆಯಲ್ಲಿ ಮಂಡಿಸಲಿದ್ದೇನೆ ಎಂದರು.
ಗೆಂಡತ್ತೂರು ಸೇರಿದಂತೆ ಈ ವ್ಯಾಪ್ತಿಯ ಗ್ರಾಮಗಳಲ್ಲಿ 52 ವರ್ಷಗಳಿಂದ ಜಮೀನಿಗಾಗಿ ನಡೆಯುತ್ತಿರುವ ಹೋರಾಟಕ್ಕೆ ಸಂಬಂಧಿಸಿ 15 ದಿನದಲ್ಲಿ ಬೆಂಗಳೂರಿನಲ್ಲಿ ಉನ್ನತಾಧಿಕಾರಿಗಳ ಸಭೆ ಕರೆದು ಚರ್ಚೆ ಮಾಡುತ್ತೇನೆ ಎಂದು ಭರವಸೆ ನೀಡಿದರು.
ರೈತರ ಮೇಲೆ ಭೂ ಒತ್ತುವರಿ ಕೇಸ್ ಹಾಕಲ್ಲ: ಸಚಿವ ಅಶೋಕ್
ಹಲವು ಕಾರ್ಯಕ್ರಮಗಳಲ್ಲಿ ಭಾಗಿ:
ತಾಲೂಕಿನ ಎನ್.ಬೇಗೂರು ಗ್ರಾ.ಪಂ. ವ್ಯಾಪ್ತಿಯ ಹೊಸಳ್ಳಿ ಗ್ರಾಮದ ವಿವೇಕ ಗಿರಿಜನ ಶೈಕ್ಷಣಿಕ ಕೇಂದ್ರದ ವಿದ್ಯಾರ್ಥಿಗಳ ವಸತಿ ಗೃಹದಲ್ಲಿ ಶನಿವಾರ ರಾತ್ರಿ ವಾಸ್ತವ್ಯ ಹೂಡಿದ್ದ ಸಚಿವರು, ಭಾನುವಾರ ಅನೇಕ ಕಾರ್ಯಕ್ರಮಗಳಲ್ಲಿ ಭಾಗಿಯಾದರು. ಮೊದಲಿಗೆ ಹೊಸಳ್ಳಿ ಗ್ರಾಮದಲ್ಲಿನ ವಿವೇಕ ಗಿರಿಜನ ಶೈಕ್ಷಣಿಕ ಕೇಂದ್ರದಿಂದ ಅನತಿ ದೂರದಲ್ಲಿರುವ ತಾಲೂಕಿನ ಗಡಿ ಗ್ರಾಮ ಗೆಂಡತ್ತೂರಿಗೆ ಭೇಟಿ ಕೊಟ್ಟು, ಬೆಳಗಿನ ಕಾಫಿ ಸೇವಿಸಿದರು. ಗ್ರಾಮದ ಜನರಿಗೆ ಪೌತಿ ಖಾತೆ ಮತ್ತು ಕಾಡಂಚಿನ ಗ್ರಾಮಗಳಲ್ಲಿ ಮನೆ ನಿರ್ಮಾಣಕ್ಕೆ ಮಂಜೂರಾತಿ ಕೊಡಿಸುವ ಭರವಸೆ ನೀಡಿದರು.
ಗೆಡ್ಡೆಗೆಣಸು ಸವಿದ ಅಶೋಕ್
ಬಳಿಕ, ವಿವೇಕ ಗಿರಿಜನ ಶೈಕ್ಷಣಿಕ ಕೇಂದ್ರದ ಪಕ್ಕದಲ್ಲಿರುವ ಬ್ರಹ್ಮಗಿರಿ ಹಾಡಿಯ ಜೇನುಕುರುಬ ಸಮುದಾಯದ ಬಸವರಾಜಪ್ಪನವರ ಮನೆಗೆ ತೆರಳಿ, ಉಪಾಹಾರ ಸೇವಿಸಿದರು. ಮೂರು ರೀತಿಯ ಗೆಡ್ಡೆ ಗೆಣಸು, ಮೂರು ರೀತಿಯ ಸೊಪ್ಪುಗಳನ್ನು ಬಳಸಿ ಮಾಡಿದ್ದ ಫಲ್ಯ, ಬೇಯಿಸಿದ ಗೆಣಸಿಗೆ ಜೇನುತುಪ್ಪ ಬೆರೆಸಿ, ಸವಿದರು. ನಂತರ ಸ್ವಲ್ಪ ಉಪ್ಪಿಟ್ಟನ್ನು ಮೊಸರಿನೊಂದಿಗೆ ಸೇವಿಸಿದರು.
ಈ ವೇಳೆ ಮಾತನಾಡಿ, ಆದಿವಾಸಿ ಗಿರಿಜನ ಸಮುದಾಯದವರು ಬೆಳಗಿನ ತಿಂಡಿಗೆ ಈ ರೀತಿಯ ತಿಂಡಿ ಬಳಸುತ್ತಾರೆ ಎನ್ನುವ ಮಾಹಿತಿ ಇಲ್ಲ. ನಮಗೆ ತಿಂಡಿ ಎಂದರೆ ಇಡ್ಲಿ, ವಡೆ, ಉಪ್ಪಿಟ್ಟು ಮುಂತಾದ ತಿಂಡಿಗಳು. ಆದರೆ, ಇವರು ಕೊಟ್ಟಆಹಾರ ದೇಹಕ್ಕೆ ಬಹಳ ಆರೋಗ್ಯಕರವಾದುದು. ನಾನು ರಾಷ್ಟ್ರಮಟ್ಟದ ಕಬ್ಬಡಿ ಆಟಗಾರನಾಗಿದ್ದು, 17ನೇ ವಯಸ್ಸಿನಲ್ಲೇ, ಬೇರೆ, ಬೇರೆ ರಾಜ್ಯಗಳಲ್ಲಿ ನಡೆದ ರಾಷ್ಟ್ರೀಯ ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದೆ. ಹೀಗಾಗಿ, ನನಗೆ ಬಿಪಿ, ಸಕ್ಕರೆ ಖಾಯಿಲೆ ಇಲ್ಲ, ಆರೋಗ್ಯವಾಗಿದ್ದೇನೆ ಎಂದರು.
Grama Vastavya: ಗಿರಿಜನ ಹಾಡಿ ನಿವಾಸಿಗಳ ಕಷ್ಟ ಸುಖ ಆಲಿಸಿದ ಸಚಿವ ಆರ್.ಅಶೋಕ್
ನಂತರ, ವಿವೇಕ ಗಿರಿಜನ ಶೈಕ್ಷಣಿಕ ಕೇಂದ್ರದ ಸಂಸ್ಥಾಪಕ ಡಾ.ಆರ್. ಬಾಲಸುಬ್ರಮಣ್ಯ ಜೊತೆ ಶಾಲೆಯನ್ನು ಸುತ್ತು ಹಾಕಿ, ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಮಾಹಿತಿ ಪಡೆದರು. ನಂತರ, ಕಳೆದ ಎರಡು ತಿಂಗಳ ಹಿಂದೆ ಅರಣ್ಯ ಇಲಾಖೆಯ ನೌಕರರ ದೌರ್ಜನ್ಯಕ್ಕೆ ಒಳಗಾಗಿ ಅನುಮಾನಾಸ್ಪದವಾಗಿ ಮೃತಪಟ್ಟಕರಿಯಪ್ಪನವರ ಕುಟುಂಬಕ್ಕೆ ಭೇಟಿ ಕೊಟ್ಟು, ಕರಿಯಪ್ಪನ ಸಾವಿನ ಪ್ರಕರಣದ ವಿವರ ಪಡೆದರು. ತನಿಖೆಯನ್ನು ಚುರುಕುಗೊಳಿಸಲು ಸೂಚನೆ ನೀಡಿದರು.
ಗ್ರಾಮ ವಾಸ್ತವ್ಯ ನನಗೆ ಪಾಠಶಾಲೆ:
ನಂತರ, ವಿವೇಕ ಗಿರಿಜನ ಶೈಕ್ಷಣಿಕ ಕೇಂದ್ರದ ಆವರಣದಲ್ಲಿ ತಾಲೂಕಿನ ಆದಿವಾಸಿ ಗಿರಿಜನ ಮುಖಂಡರೊಂದಿಗೆ ಸಂವಾದ ನಡೆಸಿದರು. ಆದಿವಾಸಿ ಗಿರಿಜನರಿಂದ ಮನವಿ ಸ್ವೀಕರಿಸಿದ ಸಚಿವರು, ಗ್ರಾಮ ವಾಸ್ತವ್ಯ ಫಲಪ್ರದವಾಗಿದೆ. ಈ ಗ್ರಾಮ ವಾಸ್ತವ್ಯದಿಂದ ಸಾಕಷ್ಟುಕಲಿತೆ. ಗ್ರಾಮ ವಾಸ್ತವ್ಯ ಕಾರ್ಯಕ್ರಮ ನನಗೆ ಪಾಠಶಾಲೆಯಾಗಿದ್ದು, ಇಲ್ಲಿ ಕಲಿತ ಅನೇಕ ವಿಚಾರಗಳನ್ನು ವಿಧಾನಸಭೆಯಲ್ಲಿ ಮಂಡಿಸಲಿದ್ದೇನೆ ಎಂದರು. ನಂತರ, ಎನ್.ಬೇಗೂರು ಮತ್ತು ಗುಂಡ್ರೆ ವನ್ಯಜೀವಿ ವಲಯದ ಸಿಬ್ಬಂದಿಗೆ ಸಚಿವರು ವೈಯಕ್ತಿಕವಾಗಿ ಜರ್ಕಿನ್, ಛತ್ರಿ ಮತ್ತು ಕಂಬಳಿ ವಿತರಿಸಿದರು.