ಗ್ರಾಮ ವಾಸ್ತವ್ಯಗಳು ಗ್ರಾಮಗಳ ಅಭಿವೃದ್ಧಿಗೆ ಪೂರಕ: ಡಿಸಿ ರಾಜೇಂದ್ರ
ಗ್ರಾಮ ವಾಸ್ತವ್ಯದಿಂದಾಗಿ ಗ್ರಾಮೀಣ ಪ್ರದೇಶದ ಜನರ ಜೀವನ ಶೈಲಿಯನ್ನು ತಿಳಿಯುವ ಜೊತೆಗೆ ಸ್ಥಳೀಯರು ಎದುರಿಸುತ್ತಿರುವ ಸಮಸ್ಯೆಗಳನ್ನು ತಿಳಿದು, ಸಾಧ್ಯವಾದಷ್ಟುಸ್ಥಳದಲ್ಲೇ ಬಗೆಹರಿಸಲು ಸಾಧ್ಯವಾಗುತ್ತಿದೆ ಎಂದು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಹೇಳಿದರು.
ಮೂಲ್ಕಿ (ಆ.21) :ತಾಲೂಕಿನ ಅತಿಕಾರಿಬೆಟ್ಟುವಿನಲ್ಲಿ ಇಂದು ನಡೆಯುತ್ತಿರುವ ‘ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ’ ಕಾರ್ಯಕ್ರಮವು ದ.ಕ.ಜಿಲ್ಲೆಯಲ್ಲಿ 9ನೇ ಕಾರ್ಯಕ್ರಮವಾಗಿದ್ದು, ಗ್ರಾಮ ವಾಸ್ತವ್ಯದಿಂದಾಗಿ ಗ್ರಾಮೀಣ ಪ್ರದೇಶದ ಜನರ ಜೀವನ ಶೈಲಿಯನ್ನು ತಿಳಿಯುವ ಜೊತೆಗೆ ಸ್ಥಳೀಯರು ಎದುರಿಸುತ್ತಿರುವ ಸಮಸ್ಯೆಗಳನ್ನು ತಿಳಿದು, ಸಾಧ್ಯವಾದಷ್ಟುಸ್ಥಳದಲ್ಲೇ ಬಗೆಹರಿಸಲು ಸಾಧ್ಯವಾಗುತ್ತಿದೆ ಎಂದು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಹೇಳಿದರು.
ಕಲಬುರಗಿ: ಸಚಿವ ಅಶೋಕ್ ಆಡಕಿ ಗ್ರಾಮವಾಸ್ತವ್ಯ ದಾಖಲೆ..!
ಅತಿಕಾರಿಬೆಟ್ಟು ಗ್ರಾಮ ಪಂಚಾಯಿತಿ(Atikari bettu Grama Panchayata)ಯಲ್ಲಿ ಶನಿವಾರ ನಡೆದ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಅತಿಕಾರಿಬೆಟ್ಟು ಗ್ರಾ.ಪಂ. ಸಭಾಂಗಣದಲ್ಲಿ ಚಾಲನೆ ನೀಡಿ ಮಾತನಾಡಿದರು. ಕಳೆದ ಹಲವು ಗ್ರಾಮ ವಾಸ್ತವ್ಯಗಳಿಂದ ಗ್ರಾಮೀಣ ಭಾಗದ ಕರಕುಶಲಗಳ ಬಗ್ಗೆ ತಿಳಿದುಕೊಂಡಿದ್ದೇನೆ. ಆಲಂಕಾರು ಗ್ರಾಮದಲ್ಲಿ ಕುಂಬಾರರ ಜೀವನ ಶೈಲಿ ಬಗ್ಗೆ,ಪಾಲಡ್ಕದಲ್ಲಿ ಬುಟ್ಟಿತಯಾರಿ ಬಗ್ಗೆ ತಿಳಿದು ಕೊಂಡಿದ್ದು ಗ್ರಾಮ ವಾಸ್ತವ್ಯಗಳು ಗ್ರಾಮಗಳ ಅಭಿವೃದ್ಧಿಗೆ ಪೂರಕವಾಗಿವೆ. ಅತಿಕಾರಿಬೆಟ್ಟು ಗ್ರಾಮದಲ್ಲಿ 4 ಪರಿಶಿಷ್ಟಪಂಗಡ, 25 ಪರಿಶಿಷ್ಟಜಾತಿಯ ಕುಟುಂಬಗಳು ವಾಸವಾಗಿದ್ದು ಇಲ್ಲಿನ ಸಮಸ್ಯೆಗಳನ್ನು ವಿವಿಧ ಇಲಾಖೆಗಳ ಅಧಿಕಾರಿಗಳ ಮೂಲಕ ಸ್ಥಳದಲ್ಲೇ ಪರಿಹರಿಸಲು ನಿರ್ಧರಿಸಲಾಗಿದೆ ಎಂದು ಡಿಸಿ ತಿಳಿಸಿದರು.
ಮರಳು ಸಾಗಾಟದಿಂದ ಮಟ್ಟು ರಸ್ತೆ ಹದಗೆಟ್ಟಿರುವ ಬಗ್ಗೆ ದೂರು ಬಂದಿದ್ದು ಈಗಾಗಲೇ ಅಲ್ಲಿನ ರಸ್ತೆ ಅಭಿವೃದ್ಧಿಗೆ 3 ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ ಅತಿಕಾರಿಬೆಟ್ಟು ಗ್ರಾಮವು ನದಿ ತೀರದ ಗ್ರಾಮೀಣ ಪ್ರದೇಶವಾಗಿದ್ದು ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಇಲ್ಲಿನ ಶಾಸ್ವತ ಸಮಸ್ಯೆಗಳ ಬಗ್ಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಮೂಲ್ಕಿ ತಾಲೂಕಿನಲ್ಲಿ ಅತಿಕಾರಿಬೆಟ್ಟು ಗ್ರಾಪಂನಲ್ಲಿ ಗ್ರಾಮ ವಾಸ್ತವ್ಯ ಆಯೋಜಿಸಲಾಗಿದೆ. ಗ್ರಾಮಸ್ಥರು ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದು ತಿಳಿಸಿದರು.
ಪತ್ರಕರ್ತರು ಗ್ರಾಮವಾಸ್ತವ್ಯ ಮಾಡಿದ ಊರಿಗೆ ರಸ್ತೆ ಭಾಗ್ಯ!
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಗ್ರಾಪಂ ಅಧ್ಯಕ್ಷ ಮನೋಹರ್ ಕೋಟ್ಯಾನ್ ಮಾತನಾಡಿ ಅತಿಕಾರಿಬೆಟ್ಟುನಲ್ಲಿ ಆರೋಗ್ಯ ಉಪ ಕೇಂದ್ರ ನಿರ್ಮಾಣಕ್ಕೆ ಅನುದಾನ ಮಂಜೂರು, ಸ್ಮಶಾನಕ್ಕೆ ಜಾಗದ ಅವಶ್ಯಕತೆ ಹಾಗೂ ಅನುದಾನ, ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸೇರಿದಂತೆ ಸಮಸ್ಯೆ ಮುಕ್ತ ಅತಿಕಾರಿಬೆಟ್ಟು ಗ್ರಾ.ಪಂ. ನಿರ್ಮಾಣಕ್ಕೆ ಸಹಕರಿಸುವಂತೆ ತಿಳಿಸಿದರು.
ಅಹವಾಲು ಸ್ವೀಕಾರ: ಬಳಿಕ ನಡೆದ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಕಳೆದ ಹಲವಾರು ವರ್ಷಗಳಿಂದ ಅತಿಕಾರಿಬೆಟ್ಟುನಲ್ಲಿದ್ದ ವಿಜಯ ಬ್ಯಾಂಕ್ ಶಾಖೆಯನ್ನು ಬ್ಯಾಂಕ್ ಆಫ್ ಬರೋಡವಾದ ಬಳಿಕ ಮೂಲ್ಕಿ ಶಾಖೆಗೆ ಸ್ಥಳಾಂತರವಾಗಿದೆ. ಇದರಿಂದ ಸ್ಥಳೀಯರಿಗೆ ಬ್ಯಾಂಕ್ ವ್ಯವಹಾರಕ್ಕೆ ಸಮಸ್ಯೆಯಾಗಿದ್ದು ಸುಮಾರು 5 ಕಿ.ಮೀ. ದೂರದ ಮೂಲ್ಕಿಗೆ ಹೋಗಬೇಕಾಗಿದ್ದು ಅತಿಕಾರಿಬೆಟ್ಟು ಬ್ಯಾಂಕ್‌ನ ಶಾಖೆಯನ್ನು ಇಲ್ಲೇ ವಾಪಸ್ ಸ್ಥಾಪಿಸಬೇಕು ಎಂಬ ಅಹವಾಲು ಕೇಳಿಬಂತು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ರಾಜೇಂದ್ರ, ಶಾಖೆಯನ್ನು ತೆರೆಯುವಂತೆ ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಿದರು.
ಅತಿಕಾರಿಬೆಟ್ಟುನಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಪರಿಶೀಲಿಸುವುದಾಗಿ ತಿಳಿಸಿದರು. ಉಳಿದಂತೆ ಖಾಸಗಿ ಜಾಗದ ಸಮಸ್ಯೆ ಸೇರಿದಂತೆ ಗ್ರಾಮಸ್ಥರಿಂದ ಹಲವಾರು ಅಹವಾಲುಗಳನ್ನು ಜಿಲ್ಲಾಧಿಕಾರಿ ಸ್ವೀಕರಿಸಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಕುಮಾರ್, ಸಹಾಯಕ ಆಯುಕ್ತ ಮದನ್ ಮೋಹನ್, ಡಿಡಿಎಲ್‌ಆರ್ ನಿರಂಜನ್, ಮೂಲ್ಕಿ ತಾಲೂಕು ತಹಸೀಲ್ದಾರ್ ಗುರುಪ್ರಸಾದ್, ವಿವಿಧ ಇಲಾಖೆಯ ಅಧಿಕಾರಿಗಳು, ಉಪ ತಹಸೀಲ್ದಾರ್ ದಿಲೀಪ್ ರೋಡ್ಕರ್, ಕಂದಾಯ ನಿರೀಕ್ಷಕ ದಿನೇಶ್ ಕೆ., ಪ್ರವಾಸೋದ್ಯಮ ಇಲಾಖೆಯ ಆಡಳಿತ ನಿರ್ದೇಶಕ ಮಾಣಿಕ್ಯ ಎಂ., ಅತಿಕಾರಿಬೆಟ್ಟು ಪಂಚಾಯಿತಿ ಉಪಾಧ್ಯಕ್ಷೆ ಶಶಿಕಲಾ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು. ಪಿಡಿಒ ಪ್ರಕಾಶ್ ಸ್ವಾಗತಿಸಿದರು. ಅಶ್ವಿನಿ ನಿರೂಪಿಸಿದರು.
ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಬಯ್ಯು ಎಂಬವರಿಗೆ ಗೃಹ ನಿಮಾರ್ಣಕ್ಕೆ ಧನ ಸಹಾಯ ಮಂಜೂರು, 2 ಅಂಗನವಾಡಿ ಕೇಂದ್ರಗಳಿಗೆ ನಿವೇಶನ ಮಂಜೂರು, ಅತಿಕಾರಿಬೆಟ್ಟುನಲ್ಲಿ ಆರೋಗ್ಯ ಕೇಂದ್ರ ನಿರ್ಮಾಣಕ್ಕೆ ನಿವೇಶನ ಮಂಜೂರು, ಫಲಾನುಭವಿಗಳಿಗೆ ಪಿಂಚಣೆ ಆದೇಶ ಸೇರಿದಂತೆ ಹಲವಾರು ಸವಲತ್ತುಗಳನ್ನು ವಿತರಿಸಲಾಯಿತು.