- Home
- Karnataka Districts
- Bengaluru Love tragedy: ಪ್ರೇಯಸಿ ಭವಾನಿ ಕೊಲೆಗೈದ ಪ್ರೇಮಿ ಚಂದು; ಸುಳಿವು ಬಿಚ್ಚಿಟ್ಟ ಇನ್‌ಸ್ಟಾಗ್ರಾಂ ಸ್ಟೋರಿ!
Bengaluru Love tragedy: ಪ್ರೇಯಸಿ ಭವಾನಿ ಕೊಲೆಗೈದ ಪ್ರೇಮಿ ಚಂದು; ಸುಳಿವು ಬಿಚ್ಚಿಟ್ಟ ಇನ್‌ಸ್ಟಾಗ್ರಾಂ ಸ್ಟೋರಿ!
ಬೆಂಗಳೂರಿನ ತಿಗಳರಪಾಳ್ಯದಲ್ಲಿ, ಚಂದ್ರಶೇಖರ್ ಎಂಬ ಯುವಕ ತನ್ನ ಪ್ರೇಯಸಿ ಭವಾನಿಯನ್ನು ಬೇರೆ ಮದುವೆ ನಿಶ್ಚಯವಾದ ಕಾರಣಕ್ಕೆ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ನಂತರ, ತಾನೂ ವಿಷ ಸೇವಿಸಿ ಸಾಯಲು ಯತ್ನಿಸಿದ್ದು, ಈ ಘಟನೆ ಇನ್ಸ್ಟಾಗ್ರಾಂ ಸ್ಟೋರಿಯಿಂದ ಬೆಳಕಿಗೆ ಬಂದಿದೆ.

ಬೆಂಗಳೂರು: ಪ್ರೀತಿಯ ಹೆಸರಿನಲ್ಲಿ ನಡೆಯುತ್ತಿರುವ ಕ್ರೌರ್ಯಕ್ಕೆ ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಬಲಿ ಪಡೆದಿದೆ. ಪ್ರೀತಿಸಿದ ಯುವತಿಯನ್ನು ಕುತ್ತಿಗೆ ಹಿಸುಕಿ ಕೊಲೆ ಮಾಡಿ, ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಂಗಳೂರಿನ ತಿಗಳರಪಾಳ್ಯದ ತುಳಸಿನಗರದಲ್ಲಿ ನಡೆದಿದೆ. 22 ವರ್ಷದ ಭವಾನಿ ಎಂಬ ಯುವತಿ ತನ್ನ ಪ್ರಿಯಕರನಿಂದಲೇ ಕೊಲೆಯಾದ ದುರ್ದೈವಿ.
ಘಟನೆಯ ಹಿನ್ನೆಲೆ:
ಮೂಲತಃ ಬೇರೆ ಊರಿನವರಾದ ಭವಾನಿ ಬೆಂಗಳೂರಿನ ತಿಗಳರಪಾಳ್ಯದ ತುಳಸಿನಗರದಲ್ಲಿ ವಾಸವಿದ್ದರು. ಮೊಬೈಲ್ ಶೋ ರೂಂ ಒಂದರಲ್ಲಿ ಕೆಲಸ ಮಾಡುತ್ತಿದ್ದ ಇವರಿಗೆ ಚಂದ್ರಶೇಖರ್ ಅಲಿಯಾಸ್ ಚಂದನ್ ಎಂಬಾತನ ಪರಿಚಯವಾಗಿತ್ತು. ಕಳೆದ ಕೆಲವು ತಿಂಗಳುಗಳಿಂದ ಇಬ್ಬರ ನಡುವೆ ಪ್ರೀತಿ ಬೆಳೆದಿತ್ತು. ಆದರೆ, ಇತ್ತೀಚೆಗೆ ಭವಾನಿ ಕುಟುಂಬಸ್ಥರು ಆಕೆಗೆ ಬೇರೆ ಕಡೆ ಮದುವೆ ಮಾಡಲು ಸಿದ್ಧತೆ ನಡೆಸುತ್ತಿದ್ದರು ಎನ್ನಲಾಗಿದೆ. ಈ ವಿಷಯ ತಿಳಿದ ಚಂದ್ರಶೇಖರ್ ತೀವ್ರ ಆಕ್ರೋಶಗೊಂಡಿದ್ದನು.
ಇನ್ಸ್ಟಾಗ್ರಾಂ ಸ್ಟೋರಿಯಿಂದ ಬಯಲಾದ ರಹಸ್ಯ:
ನಿನ್ನೆ ಮುಂಜಾನೆ 7.30ರ ಸುಮಾರಿಗೆ ಚಂದ್ರಶೇಖರ್, ಭವಾನಿ ವಾಸವಿದ್ದ ಕೊಠಡಿಗೆ ತೆರಳಿದ್ದಾನೆ. ಈ ವೇಳೆ ಇಬ್ಬರ ನಡುವೆ ಗಲಾಟೆಯಾಗಿದೆ. ಇದೇ ವೇಳೆ ಭವಾನಿ ಇನ್ಸ್ಟಾಗ್ರಾಂ ಅಕೌಂಟ್‌ನಿಂದ ಚಂದ್ರಶೇಖರ್ ಜೊತೆಗಿರುವ ಫೋಟೋವೊಂದು ಸ್ಟೋರಿಯಲ್ಲಿ ಅಪ್‌ಲೋಡ್ ಆಗಿದೆ.
ಇದನ್ನು ಗಮನಿಸಿದ ಭವಾನಿ ಸಂಬಂಧಿ ಶಾರದಾ ಅವರು ತಕ್ಷಣ ಸ್ಕ್ರೀನ್ ಶಾಟ್ ತೆಗೆದು ಭವಾನಿ ತಂದೆ ಶ್ರೀನಿವಾಸ್ ಅವರಿಗೆ ಕಳುಹಿಸಿದ್ದಾರೆ. ಗಾಬರಿಗೊಂಡ ತಂದೆ ಮಗಳಿಗೆ ಸತತವಾಗಿ ಫೋನ್ ಮಾಡಿದ್ದಾರೆ. ಆದರೆ ಭವಾನಿ ಕರೆ ಸ್ವೀಕರಿಸಿಲ್ಲ.
ಕೊಲೆ ಮಾಡಿ ಸಾವಿನ ನಾಟಕ:
ಕರೆ ಸ್ವೀಕರಿಸದಿದ್ದಾಗ ಅನುಮಾನಗೊಂಡ ತಂದೆ ತಕ್ಷಣ ಮನೆ ಮಾಲೀಕರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಮನೆ ಮಾಲೀಕರು ಭವಾನಿ ವಾಸವಿದ್ದ ರೂಂ ಬಳಿ ಹೋಗಿ ನೋಡಿದಾಗ ಬಾಗಿಲು ಒಳಗಿನಿಂದ ಲಾಕ್ ಆಗಿತ್ತು. ಎಷ್ಟೇ ಕೂಗಿದರೂ ಒಳಗಿನಿಂದ ಪ್ರತಿಕ್ರಿಯೆ ಬಾರದಿದ್ದಾಗ ಬಾಗಿಲು ಮುರಿದು ಒಳಹೋಗಿದ್ದಾರೆ. ಆಗ ಅಲ್ಲಿ ಕಂಡ ದೃಶ್ಯ ಎದೆ ನಡುಗಿಸುವಂತಿತ್ತು. ಭವಾನಿ ಶವವಾಗಿ ಬಿದ್ದಿದ್ದರೆ, ಹಂತಕ ಚಂದ್ರಶೇಖರ್ ವಿಷ ಸೇವಿಸಿ ನರಳಾಡುತ್ತಿದ್ದನು.
ಪೊಲೀಸ್ ತನಿಖೆಯ ಪ್ರಕಾರ, ಚಂದ್ರಶೇಖರ್ ಮೊದಲು ಭವಾನಿಯ ಕುತ್ತಿಗೆ ಹಿಸುಕಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಬಳಿಕ ಈ ಕೊಲೆಯನ್ನು 'ಸ್ವಯಂ ಸಾವು' ಎಂದು ಬಿಂಬಿಸಲು ಯತ್ನಿಸಿದ್ದಾನೆ. ಆದರೆ ಪೊಲೀಸರಿಗೆ ಸಿಕ್ಕಿಬೀಳುವ ಭಯದಿಂದ ತಾನೂ ಕೂಡ ವಿಷ ಸೇವಿಸಿ ಸಾಯುವುದಕ್ಕೆ ಯತ್ನಿಸಿದ್ದಾನೆ.
ಪೊಲೀಸ್ ಕ್ರಮ:
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಬ್ಯಾಡರಹಳ್ಳಿ ಠಾಣೆ ಪೊಲೀಸರು ಚಂದ್ರಶೇಖರ್‌ನನ್ನು ವಶಕ್ಕೆ ಪಡೆದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಆರೋಪಿ ಚಂದ್ರಶೇಖರ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಇನ್ಸ್‌ಪೆಕ್ಟರ್ ಗೋವಿಂದರಾಜು ನೇತೃತ್ವದಲ್ಲಿ ವಿಚಾರಣೆ ನಡೆಯುತ್ತಿದೆ. ಭವಾನಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಪ್ರೀತಿಯ ಹೆಸರಿನಲ್ಲಿ ನಡೆದ ಈ ಭೀಕರ ಕೃತ್ಯ ಇಡೀ ತುಳಸಿನಗರವನ್ನು ಬೆಚ್ಚಿಬೀಳಿಸಿದೆ.

