ಕೋಲಾರ (ಅ.05): ವಿಧಾನ ಪರಿಷತ್‌ ಸದಸ್ಯನಾಗಿ ನನ್ನ ಸಾಧನೆ ಶೂನ್ಯವೆಂದು ಟೀಕಿಸಿರುವ ವಿಪಕ್ಷ ಮುಖಂಡರು ಮೊದಲು ತಮ್ಮ ಸಾಧನೆ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳಲಿ ಎಂದು ಆಗ್ನೇಯ ಪದವೀಧರರ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಆರ್‌.ಚೌಡರೆಡ್ಡಿ ವಿಧಾನ ಪರಿಷತ್‌ ಸದಸ್ಯ ಬಿಜೆಪಿಯ ವೈ.ಎ.ನಾರಾಯಣಸ್ವಾಮಿ ಅವರಿಗೆ ಸವಾಲು ಹಾಕಿದರು.

ರಾಜ್ಯ ವಿಧಾನ ಪರಿಷತ್ತಿನ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ ಸಂಬಂಧ ಇಲ್ಲಿ ಭಾನುವಾರ ನಡೆದ ಬೆಂಬಲಿಗರು ಹಾಗೂ ಜೆಡಿಎಸ್‌ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಜಿಲ್ಲೆಯ ಶ್ರೀನಿವಾಸಪುರದಲ್ಲಿ ನಡೆದ ಬಿಜೆಪಿಯ ಚುನಾವಣಾ ಪ್ರಚಾರ ಸಭೆಯಲ್ಲಿ ಆ ಪಕ್ಷದ ಮುಖಂಡರೊಬ್ಬರು ಬಾಯಿ ಚಪಲಕ್ಕೆ ನನ್ನ ವಿರುದ್ಧ ಟೀಕೆ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದರು.

ರಾಜಕೀಯ ದುರುದ್ದೇಶ:  ಚುನಾವಣೆ ಸಂದರ್ಭವಾಗಿರುವ ಕಾರಣ ಬಿಜೆಪಿ ಮುಖಂಡರು ರಾಜಕೀಯ ದುರುದ್ದೇಶಕ್ಕೆ ನನ್ನ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ. ಬಯಲುಸೀಮೆ ಜಿಲ್ಲೆಗಳಿಗೆ ನೀರು ಕೊಡುವ ಉದ್ದೇಶಕ್ಕೆ ರೂಪಿಸಿರುವ ಎತ್ತಿನಹೊಳೆ ಯೋಜನೆ ಅನುಷ್ಠಾನಕ್ಕೆ ಪೂರಕವಾಗಿ ಕೆಲಸ ಮಾಡಿದ್ದೇನೆ. ಜನಪ್ರತಿನಿಧಿಗಳ ನಿಯೋಗದೊಂದಿಗೆ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಯೋಜನೆ ಜಾರಿಗೆ ಒತ್ತಡ ಹಾಕಿದ್ದೇನೆ ಎಂದರು.

CBI ಎದುರಿಸುವುದು ಡಿಕೆಶಿಗೆ ಗೊತ್ತು, ಅವರ ಜೊತೆ ಇದ್ದವನು: ಬಿಜೆಪಿ ನಾಯಕ ಅಚ್ಚರಿ ಹೇಳಿಕೆ ...

ಬೇರೆ ಪಕ್ಷಗಳ ಮುಖಂಡರಂತೆ ಮತದಾರರ ಓಲೈಕೆಗಾಗಿ ನಾನು ಪೊಳ್ಳು ಭರವಸೆ ಕೊಡುವುದಿಲ್ಲ. ನಾನು ವಿಧಾನ ಪರಿಷತ್‌ ಸದಸ್ಯನಾಗಿ ಮಾಡಿದ ಕೆಲಸಗಳೇ ನನಗೆ ಶ್ರೀರಕ್ಷೆ. ಚುನಾವಣೆಯಲ್ಲಿ ನಾನು ಖಂಡಿತ ಗೆಲುವು ಸಾಧಿಸುವ ನಂಬಿಕೆಯಿದೆ. ಕ್ಷೇತ್ರದ ಮತದಾರರು ಖಂಡಿತ ನನ್ನ ಕೈ ಹಿಡಿಯುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅನಿಲ್‌ಕುಮಾರ್‌, ನಿವೃತ್ತ ಪ್ರಾಂಶುಪಾಲ ಎ.ವಿ.ರೆಡ್ಡಿ, ಜೆಡಿಎಸ್‌ ಮುಖಂಡ ಬಣಕನಹಳ್ಳಿ ನಟರಾಜ್‌, ವಿವಿಧ ಕಾಲೇಜು ಉಪನ್ಯಾಸಕರು, ಶಾಲಾ ಶಿಕ್ಷಕರು ಪಾಲ್ಗೊಂಡರು.