ಮಂಡ್ಯ(ಡಿ.24): ಮುಂದಿನ ವರ್ಷವಾದರೂ ಮಂಡ್ಯದ ರೈತರ ಕಬ್ಬಿನ ಸಮಸ್ಯೆಗೆ ಪರಿಹಾರ ದೊರಕಿಸಲು ಮುಂದಾಗಿರುವ ಸರ್ಕಾರ, ಮೈಷುಗರ್‌ ಹಾಗೂ ಪಿಎಸ್‌ಎಸ್‌ಕೆ ಕಾರ್ಖಾನೆಯನ್ನು ಗುತ್ತಿಗೆ ವಹಿಸುವ ಪ್ರಮುಖ ನಿರ್ಣಯ ಕೈಗೊಂಡಿದೆ.

ಜಿಲ್ಲೆಯ ಜೆಡಿಎಸ್‌ ಶಾಸಕರ ಸಹ ಮತದೊಂದಿಗೆ ಮಂಡ್ಯದ ಮೈಷುಗರ್‌ ಕಾರ್ಖಾನೆ ಮತ್ತು ಪಾಂಡವಪುರ ಪಿಎಸ್‌ಎಸ್‌ಕೆ ಸಕ್ಕರೆ ಕಾರ್ಖಾನೆಯನ್ನು ಖಾಸಗಿಯವರಿಗೆ ಗುತ್ತಿಗೆ ಆಧಾರದಲ್ಲಿ ನೀಡಲು ಸರ್ಕಾರ ಒಪ್ಪಿಗೆ ಸೂಚಿಸಿದೆ, ಈ ನಿಟ್ಟಿನಲ್ಲಿ ತುರ್ತು ಕ್ರಮ ಜರುಗಿಸಿ ರೈತರ ನೆರವಿಗೆ ಧಾವಿಸುವ ನಿರ್ಧಾರವನ್ನು ಜಿಲ್ಲಾ ಉಸ್ತುವಾರಿ ಸಚಿವ ಆರ್‌.ಅಶೋಕ್‌ ಸೋಮವಾರ ಪ್ರಕಟಿಸಿದ್ದಾರೆ.

'ಪೌರತ್ವ ಕಾಯ್ದೆ ವಿರುದ್ಧ ಧರಣಿ ಕಾಂಗ್ರೆಸ್‌ ಕುತಂತ್ರ'..!

ನಗರದ ಜಿಲ್ಲಾ ಪಂಚಾಯ್ತಿ ಕಾವೇರಿ ಸಭಾಂಗಣದಲ್ಲಿ ಕೆಡಿಪಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಚಿವ ಅಶೋಕ್‌, ಮೈಷುಗರ್‌ ಮತ್ತು ಪಿಎಸ್‌ ಎಸ್‌ ಕೆ ಕಾರ್ಖಾನೆಯಲ್ಲಿ ಈ ವರ್ಷ ಕಬ್ಬು ಅರೆಯುವಿಕೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಇದರಿಂದ ಜಿಲ್ಲೆಯಲ್ಲಿ ರೈತರಿಗೆ ಸಾಕಷ್ಟುಕಷ್ಟ- ನಷ್ಟಉಂಟಾಯಿತು. ಈ ಕಾರಣಕ್ಕಾಗಿ ಸರ್ಕಾರ ಜಿಲ್ಲೆಯಲ್ಲಿ ಬೆಳೆದ ಕಬ್ಬನ್ನು ನೆರೆಯ ರಾಜ್ಯ ಮತ್ತು ಜಿಲ್ಲೆಗಳಿಗೆ ರವಾನಿಸಿ ರೈತರಿಗೆ ಅನುಕೂಲ ಮಾಡಿ ಕೊಡುವುದು ಹಾಗೂ ಸರ್ಕಾರವೇ ಸಾಗಾಣಿಕೆ ವೆಚ್ಚವನ್ನು ನೀಡಲು ಕೂಡ ನಿರ್ಧರಿಸಿತು ಎಂದು ಸಚಿವರು ಹೇಳಿದರು.

ಮುಂದಿನ ವಾರ ಟೆಂಡರ್‌:

ಮುಂದಿನ ಒಂದು ವಾರದೊಳಗೆ ಪಿಎಸ್‌ಎಸ್‌ಕೆ ಕಾರ್ಖಾನೆಯನ್ನು ಗುತ್ತಿಗೆ ಆಧಾರದಲ್ಲಿ ನೀಡಲು ಟೆಂಡರ್‌ ಕರೆಯುವಂತೆ ಸೂಚಿಸಲಾಗಿದೆ.ಶತಾಯ, ಗತಾಯ ಮುಂದಿನ ವರ್ಷದಿಂದ ಕಬ್ಬು ಅರೆಯುವ ಕಾರ್ಯವನ್ನು ಈ ಕಾರ್ಖಾನೆಯಲ್ಲಿ ಕಬ್ಬು ಅರೆಯುವುದು ಸರ್ಕಾರದ ಸಂಕಲ್ಪವಾಗಿದೆ. ಕಾರ್ಖಾನೆ ವ್ಯಾಪ್ತಿಯ ಕಬ್ಬನ್ನು ನಿಗದಿತ ಸಮಯಕ್ಕೆ ಕಟಾವು ಮಾಡಿಕೊಂಡು ಅರೆಯುವುದು ಹಾಗೂ ರೈತರಿಗೆ ಸಕಾಲಕ್ಕೆ ಹಣ ಪಾವತಿ ಮಾಡುವ ಪ್ರಮುಖ ಷರತ್ತುಗಳೊಂದಿಗೆ ಗುತ್ತಿಗೆ ನೀಡಲು ನಿರ್ಧರಿಸಲಾಗಿದೆ ಎಂದು ವಿವರಿಸಿದ್ದಾರೆ.

ಕೊಟ್ಟಹಣ ಎಲ್ಲಿ ಹೋಯಿತು?

ಮೈಷುಗರ್‌ ಕಾರ್ಖಾನೆ ಇನ್ನೂ ಸಹ ಜಿಲ್ಲೆಯ ಎಲ್ಲಾ ಶಾಸಕರ ಸಲಹೆ, ಮಾರ್ಗದರ್ಶನ ಪಡೆದುಕೊಂಡು ಸರ್ಕಾರ ದಿಟ್ಟಹೆಜ್ಜೆ ಇಡಲು ನಿರ್ಧರಿಸಿತ್ತು. ಏಕೆಂದರೆ ಈ ಹಿಂದಿನ ಮೈಷುಗರ್‌ ಕಾರ್ಖಾನೆ ಪುನಶ್ಚೇತನಕ್ಕೆ 600 ರಿಂದ 700 ಕೋಟಿ ರು.ಹಣ ನೀಡಿದರೂ ಕಾರ್ಖಾನೆ ಉದ್ಧಾರವಾಗಿಲ್ಲ. ಕೊಟ್ಟಹಣ ಎಲ್ಲಿಗೆ ಹೋಯಿತು ಎಂಬುದು ಪತ್ತೆ ಮಾಡಲು ಸಾಧ್ಯವಾಗಲಿಲ್ಲ. ಇಂತಹ ಸ್ಥಿತಿಯಲ್ಲಿ ಪದೇ ಪದೇ ಹಣ ಕೊಡುವುದು ಆಸಾಧ್ಯವಾಗಿದೆ. ಈ ಹಿನ್ನೆಲೆಯಲ್ಲಿ ಸದ್ಯಕ್ಕೆ ಮೈಷುಗರ್‌ ಕಾರ್ಖಾನೆಯನ್ನು ಗುತ್ತಿಗೆಗೆ ವಹಿಸುವ ಬಗ್ಗೆ ನಿರ್ಧಾರ ಕೈಗೊಳ್ಳುವ ಅನಿವಾರ್ಯತೆ ಇದೆ ಎಂದು ಹೇಳಿದ್ದಾರೆ.

ಡಿಟಿ ಲಸಿಕೆಯಿಂದ ಮಗು ಸಾವು: ಆರೋಪ

ಕೆಡಿಪಿ ಸಭೆಯಲ್ಲಿ ಪಾಲ್ಗೊಂಡ ಜೆಡಿಎಸ್‌ನ ಎಲ್ಲಾ ಶಾಸಕರು, ಮಂಡ್ಯ ರೈತರ ಹಿತದೃಷ್ಟಿಯಿಂದ ತ್ವರಿತವಾದ ಕ್ರಮ ಕೈಗೊಳ್ಳಿ. ಜಿಲ್ಲೆಯ 2 ಪ್ರಮುಖ ಕಾರ್ಖಾನೆಗಳನ್ನು ಗುತ್ತಿಗೆಗೆ ವಹಿಸುವ ಬಗ್ಗೆ ಯಾವ ಅಭ್ಯಂತರ ಇಲ್ಲ. ಇದರ ಜೊತೆಯಲ್ಲಿ ನಮ್ಮ ಸಮ್ಮಿಶ್ರ ಸರ್ಕಾರದ ವೇಳೆ ಮೈಷುಗರ್‌ ಬದಲಿಗೆ ಹೊಸ ಕಾರ್ಖಾನೆ ಆರಂಭಿಸಲು 400 ಕೋಟಿ ರು. ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದಕ್ಕೆ ಪೂರಕವಾಗಿ 100 ಕೋಟಿ ರು. ಬಿಡುಗಡೆಯಾಗಿತ್ತು. ಈ ಬಗ್ಗೆಯೂ ಆಲೋಚನೆ ಮಾಡುವಂತೆ ಜಿಲ್ಲಾ ಮಂತ್ರಿ ಆರ್‌ .ಅಶೋಕ್‌ ಅವರಿಗೆ ಶಾಸಕರಾದ ಸಿ.ಎಸ್‌ .ಪುಟ್ಟರಾಜು, ಡಿ.ಸಿ.ತಮ್ಮಣ್ಣ, ಕೆ.ಟಿ.ಶ್ರೀಕಂಠೇಗೌಡ, ಅಪ್ಪಾಜಿಗೌಡ ಸೇರಿದಂತೆ ಇತರರು ಒತ್ತಾಯ ಮಾಡಿದ್ದಾರೆ.

ಮೈಷುಗರ್‌ ಬದಲಿಗೆ ಹೊಸ ಕಾರ್ಖಾನೆ ಬಗ್ಗೆ ಯಾವುದೇ ಸ್ಪಷ್ಟನಿರ್ಧಾರ ಹೇಳಲು ಬಯಸದ ಜಿಲ್ಲಾ ಮಂತ್ರಿ ಆರ್‌.ಅಶೋಕ್‌, ಮಂಡ್ಯ ರೈತರ ಹಿತಕ್ಕಾಗಿ ನಾನು ಈಗಾಗಲೇ ಮುಖ್ಯಮಂತ್ರಿಗಳ ಜೊತೆ ಮಾತನಾಡಿದ್ದೇನೆ. ಜೆಡಿಎಸ್‌ ಶಾಸಕರ ಸಲಹೆ, ಸೂಚನೆಗಳನ್ನು ಪಡೆದುಕೊಂಡು ಬಂದು ರೈತರ ಹಿತಕ್ಕೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳಲು ನನಗೆ ಸೂಚಿಸಿದ್ದಾರೆ. ಸಕ್ಕರೆ ಸಚಿವ ಸಿ.ಟಿ.ರವಿ ಅವರೊಂದಿಗೆ ಮಾತುಕತೆ ನಡೆಸಿ ಈ ಸಮಸ್ಯೆ ಪರಿಹರಿಸುವುದಾಗಿ ಸಚಿವರು ಸಭೆಯಲ್ಲಿ ಪ್ರಕಟಿಸಿದರು.

ಧನುರ್ಮಾಸಕ್ಕೂ ಫ್ಲಡ್‌ಗೂ ಏನ್‌ ಸಂಬಂಧ?

*ಕೆಡಿಪಿ ಸಭೆಯಲ್ಲಿ ಕೆಲವು ಅಧಿಕಾರಿಗಳ ಬೇಜಾವಬ್ದಾರಿತನ ಮೆರೆದು ಸಭೆಯಲ್ಲೇ ನಿದ್ದೆ ಜಾರಿದ್ದು ಕಂಡು ಬಂದಿತು. ಮತ್ತೆ ಕೆಲವರು ಮೊಬೈಲ… ಬಳಕೆ ಮಾಡುವುದರಲ್ಲಿ ನಿರತರಾಗಿದ್ದು ಕಂಡು ಬಂದಿತು.

*ಕೆಡಿಪಿ ಸಭೆಯಲ್ಲಿ ಸಚಿವರು ತಹಸೀಲ್ದಾರ್‌ರನ್ನು ತರಾಟೆಗೆ ತೆæಗೆದುಕೊಂಡರು. ನೆರೆಯಿಂದ ಹಾನಿಗೊಳಗಾಗಿದ್ದ ಮನೆಗಳ ಮರು ನಿರ್ಮಾಣ ತಡವಾಗಿದ್ದಕ್ಕೆ ಧನುರ್ಮಾಸದ ಕಾರಣ ಕೊಟ್ಟತಹಸೀಲ್ದಾರ್‌ ಶಿವಮೂರ್ತಿಗೆ ಧನುರ್ಮಾಸಕ್ಕೂ ನೆರೆಪರಿಹಾರಕ್ಕೂ ಏನು ಸಂಬಂಧ ಎಂದು ಪ್ರಶ್ನೆ ಮಾಡಿದರು.

*ಧನುರ್ಮಾಸ ಶುರುವಾಗಿದ್ದು ಮೂರು ದಿನಗಳ ಹಿಂದೆ. ಇಷ್ಟುದಿನ ಏನ್‌ ಮಾಡ್ತಿದ್ದೆ. ಕಾನೂನು ಓದಿದ್ದೀಯಾ ಎಂದು ತಹಸೀಲ್ದಾರ್‌ರನ್ನು ಆರ್‌.ಅಶೋಕ್‌ ಪ್ರಶ್ನಿಸಿದರು. ಸಿಎಂ ಸೂಚನೆಯಂತೆ ಹಾನಿಗೊಳಗಾದ 27 ಮನೆಗಳ ವಾರಸುದಾರರಿಗೆ 5ಲಕ್ಷ ಪರಿಹಾರ ಹಣದಲ್ಲಿ ಸದ್ಯಕ್ಕೆ ಸಂತ್ರಸ್ತರ ಖಾತೆಗೆ ತಲಾ ಒಂದು ಲಕ್ಷ ನೀಡಲಾಗಿದೆ. 27 ಮನೆಗಳಲ್ಲಿ 10 ಮನೆ ನಿರ್ಮಾಣ ಕಾರ‍್ಯ ಶುರುವಾಗಿದೆ. ಇನ್ನು 4-5ದಿನಗಳಲ್ಲಿ ಉಳಿದ ಮನೆಗಳ ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂದು ತಹಸೀಲ್ದಾರ್‌ ವರದಿ ನೀಡಿದರು.

ಪುಟ್ಟರಾಜ ಬ್ಯುಸಿನೆಸ್‌ ಮ್ಯಾನ್‌, ನಾನು ನಿಜವಾದ ರೈತ

ಕೆಡಿಪಿ ಸಭೆಯಲ್ಲಿ ಶಾಸಕ ಪುಟ್ಟರಾಜು ಕುರಿತು ಹಾಸ್ಯ ಚಟಾಕಿ ಹಾರಿಸಿದ ಸಚಿವ ಆರ್‌.ಅಶೋಕ್‌, ಪುಟ್ಟರಾಜಗಿಂತ ಮುಂಚೆ ನಾನು ರೈತ. ನನಗೆ ಅವರಿಗಿಂತ ಜಾಸ್ತಿ ವಯಸ್ಸಾಗಿದೆ. ಆದರೆ ನಾನು ಹಾಗೇ ಕಾಣಲ್ಲ ಅಷ್ಟೇ, ಬೆಳಿಗ್ಗೆ 6 ಗಂಟೆಗೆ ಹೊಲಕ್ಕೆ ಹೋಗಿ 10 ಗಂಟೆಗೆ ಮನೆಗೆ ಬಂದು ಬಳಿಕ ಸರ್ಕಾರಿ ಶಾಲೆಗೆ ಹೋಗ್ತಿದ್ವಿ ಎಂದು ತಮ್ಮ ಬಾಲ್ಯದ ನೆನಪುಗಳನ್ನು ಬಿಚ್ಚಿಟ್ಟರು. ಪುಟ್ಟರಾಜ ಬ್ಯುಸಿನೆಸ್‌ ಮ್ಯಾನ್‌. ನಾನು ನಿಜವಾದ ರೈತ. ಪುಟ್ಟರಾಜು ರೈತರಲ್ಲ ಎಂದು ಕಾಲೆಳೆದರು. ಅಶೋಕ್‌ ಅವರೇ ನಾನು ರೈತನೋ ಅಲ್ವೋ ಅನ್ನೋದನ್ನು ಮಾಧ್ಯಮದವರ ಬಳಿ ಕೇಳಿ ತಿಳಿದುಕೊಳ್ಳಿ ಎಂದು ಪುಟ್ಟರಾಜು ಹಾಸ್ಯವಾಗಿ ಚುಚ್ಚಿದ್ದಾರೆ.