Asianet Suvarna News Asianet Suvarna News

ಮತ ಸೆಳೆಯೋಕೆ ಸರ್ಕಾರಿ ಲಾಂ‍ಛನ ಬಳಕೆ..!

ಚಿಕ್ಕಬಳ್ಳಾಪುರದಲ್ಲಿ ರಾಜ್ಯ ಸರ್ಕಾರದ ಲಾಂಛನವನ್ನೇ ತಮ್ಮ ವಿಸಿಟಿಂಗ್‌ ಕಾರ್ಡಿನಲ್ಲಿ ಬಳಸಿ ಮತ ಕೇಳುತ್ತಿರುವ ವಿಚಾರವೊಂದು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

govt symbol used in visiting card to attract voters in chikkaballapur
Author
Bangalore, First Published Jan 9, 2020, 10:49 AM IST

ಚಿಕ್ಕಬಳ್ಳಾಪುರ(ಜ.09): ಇಲ್ಲಿನ ನಗರಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಮತದಾರರ ಮನ ಗೆಲ್ಲಲು ನಾನಾ ಪಕ್ಷಗಳ ಆಕಾಂಕ್ಷಿಗಳು ಕಸರತ್ತು ಆರಂಭಿಸಿದ್ದು, ರಾಜ್ಯ ಸರ್ಕಾರದ ಲಾಂಛನವನ್ನೇ ತಮ್ಮ ವಿಸಿಟಿಂಗ್‌ ಕಾರ್ಡಿನಲ್ಲಿ ಬಳಸಿ ಮತ ಕೇಳುತ್ತಿರುವ ವಿಚಾರವೊಂದು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ಚಿಕ್ಕಬಳ್ಳಾಪುರ ನಗರಸಭೆಯ ಆಡಳಿತಾವಧಿ ಮುಗಿದು ಒಂದು ವರ್ಷವೇ ಕಳೆದಿದ್ದು, ಮೀಸಲಾತಿ ವಿಚಾರದಲ್ಲಿ ನ್ಯಾಯಾಲಯದ ಮೆಟ್ಟಿಲೇರಿದ್ದ ಪರಿಣಾಮ ಕಳೆದ ಸುಮಾರು ಒಂದು ವರ್ಷದಿಂದ ಚುನಾಯಿತ ಪ್ರತಿನಿಧಿಗಳಿಲ್ಲದೆ ಅಧಿಕಾರಿಗಳೇ ನಗರಸಭೆ ಆಡಳಿತ ನಡೆಸುವ ಸ್ಥಿತಿ ನಿರ್ಮಾಣವಾಗಿದೆ.

ಪೌರತ್ವ ಕಾಯ್ದೆ: ಗಲಭೆಗೆ ಜಲ್ಲಿಕಲ್ಲು ಶೇಖರಿಸಿಟ್ಟವರ ಬಂಧನ..!

ಪ್ರಸ್ತುತ ನ್ಯಾಯಾಲಯದಲ್ಲಿದ್ದ ಪ್ರಕರಣ ಇತ್ಯರ್ಥವಾಗಿದ್ದು, ರಾಜ್ಯ ಚುನಾವಣಾ ಆಯೋಗ ನಗರಸಭೆಗೆ ಚುನಾವಣೆ ನಡೆಸಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದೆ. ಹಾಗಾಗಿ ಜ. 11ರೊಳಗೆ ಚುನಾವಣೆಗೆ ಅಗತ್ಯವಿರುವ ಎಲ್ಲ ಸಿದ್ಧತೆಗಳನ್ನು ಪೂರ್ಣಗೊಳಿಸಲು ಚುನಾವಣಾ ಆಯೋಗ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿರುವ ಕಾರಣ ಫೆಬ್ರವರಿ ಮೊದಲ ವಾರದಲ್ಲಿ ಚುನಾವಣೆ ನಡೆಯುವುದು ಬಹುತೇಕ ಖಚಿತವಾಗಿದೆ.

ಆಕಾಂಕ್ಷಿಗಳ ಕಸರತ್ತು:

ಯಾವುದೇ ಕ್ಷಣದಲ್ಲಿ ನಗರಸಭಾ ಚುನಾವಣೆ ಘೋಷಣೆಯಾಗುವ ಸೂಚನೆಗಳಿರುವ ಕಾರಣದಿಂದ ಕಳೆದ ಹಲವು ತಿಂಗಳುಗಳಿಂದಲೇ ನಗರಸಭಾ ಚುನಾವಣೆಗೆ ಸಿದ್ಧತೆಗಳಲ್ಲಿ ತೊಡಗಿರುವ ಆಕಾಂಕ್ಷಿಗಳು ಶಾಸಕ ಡಾ.ಕೆ. ಸುಧಾಕರ್‌ ಅವರ ಮನವೊಲಿಸಿ ಪಕ್ಷದಿಂದಲೇ ಬಿ ಫಾರಂ ಪಡೆದು ಸ್ಪರ್ಧೆ ಮಾಡಲು ಒಂದು ಕಡೆಯಾದರೆ, ಇನ್ನು ಹಲವರು ಇತರೆ ಪಕ್ಷಗಳಿಂದ ಸ್ಪರ್ಧೆ ಮಾಡಲು ಸಿದ್ಧತೆಯಲ್ಲಿ ತೊಡಗಿದ್ದಾರೆ.

ಧಿಕ್ಕಾರ ಕೂಗಿದ ಬಿಜೆಪಿ ಕಾರ್ಯಕರ್ತನಿಗೆ ಸಂಸದನ ಕಪಾಳಮೋಕ್ಷ

ಅಲ್ಲದೆ ಕಳೆದ ಐದು ವರ್ಷಗಳಿಂದ ವಾರ್ಡಿನ ಸಮಸ್ಯೆಗಳ ಬಗ್ಗೆ ಗಮನ ನೀಡದವರೂ ಪ್ರಸ್ತುತ ವಾರ್ಡಿನಲ್ಲಿಯೇ ಇದ್ದು, ನಾಗರಿಕರ ಸಮಸ್ಯೆಗಳನ್ನು ಖುದ್ದಾಗಿ ಆಲಿಸಿ, ಪರಿಹರಿಸಲು ಮುಂದಾಗುತ್ತಿದ್ದಾರೆ. ಹಾಗಾಗಿ ತಮ್ಮ ಗುರುತು ಮತ್ತು ಪರಿಚಯ ಮತದಾರರಲ್ಲಿ ಉಳಿಯಬೇಕು ಎಂಬ ಉದ್ದೇಶದಿಂದ ಯಾವುದೇ ಪಕ್ಷದ ಚಿಹ್ನೆ ಪ್ರಸ್ತುತ ಇಲ್ಲದ ಕಾರಣ ತಮ್ಮ ವಿಸಿಟಿಂಗ್‌ ಕಾರ್ಡ್‌ಗಳನ್ನು ನೀಡಿ, ತಮಗೇ ಮತ ನೀಡುವಂತೆ ಮನವಿ ಮಾಡುವುದಕ್ಕೆ ಮುಂದಾಗಿದ್ದಾರೆ.

ಸರ್ಕಾರಿ ಲಾಂಛನದ ವಿಸಿಟಿಂಗ್‌ ಕಾರ್ಡ್‌:

ಹೀಗೆ ಮತದಾರರಿಗೆ ವಿತರಿಸುತ್ತಿರುವ ವಿಸಿಟಿಂಗ್‌ ಕಾರ್ಡ್‌ಗಳಲ್ಲಿ ಹಲವಾರು ವಿಧದಲ್ಲಿ ಮುದ್ರಿಸಲಾಗಿದ್ದು, ಕೆಲವು ಜಾತಿಗೆ ಸಂಬಂಧಿಸಿದ ದೇವರ ಚಿತ್ರವನ್ನು ಮುದ್ರಿಸಿ ಅದಕ್ಕೆ ಸಂಬಂಧಿಸಿದ ಜಾತಿಯವರಿಗೆ ವಿತರಿಸುವ ಮೂಲಕ ಜಾತಿಯ ಮತಗಳನ್ನು ಸೆಳೆಯಲು ಮುಂದಾಗಿದ್ದರೆ, ಇನ್ನು ಹಲವು ವಿಸಿಟಿಂಗ್‌ ಕಾರ್ಡ್‌ಗಳಲ್ಲಿ ಮಾಡಿರುವ ಇತರೆ ವಿಚಾರಗಳ ಬಗ್ಗೆ ಮುದ್ರಿಸಿದ್ದಾರೆ. ಮತದಾರರಿಗೆ ನೀಡಿರುವ ಸರ್ಕಾರಿ ಲಾಂಛನವಿರುವ ವಿಸಿಟಿಂಗ್‌ ಕಾರ್ಡ್‌ ಕನ್ನಡಪ್ರಭಕ್ಕೆ ಲಭ್ಯವಾಗಿದ್ದು, ನಗರದ 18ನೇ ವಾರ್ಡಿನಲ್ಲಿ ಸರ್ಕಾರಿ ಲಾಂಛನವಿರುವ ಕಾರ್ಡ್‌ ನೀಡಿ ಮತಯಾಚನೆ ಮಾಡುತ್ತಿದ್ದು, ಸರ್ಕಾರಿ ಲಾಂಛನ ದುರುಪಯೋಗ ಪಡಿಸಿಕೊಂಡಿರುವ ವ್ಯಕ್ತಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪ್ರಜ್ಞಾವಂತರು ಆಗ್ರಹಿಸಿದ್ದಾರೆ.

ಕಾನೂನು ಏನು ಹೇಳುತ್ತೆ:

ಸರ್ಕಾರದ ಲಾಂಛನವನ್ನು ಬಳಸಲು ಸರ್ಕಾರಿ ಅಧಿಕಾರಿಗಳಿಗೆ ಅವಕಾಶವಿರುತ್ತದೆ. ಅಲ್ಲದೆ ಶಾಸಕರು ಮತ್ತು ಸಂಸದರಿಗೆ ತಮ್ಮ ಲೆಟರ್‌ಹೆಡ್‌ನಲ್ಲಿ ಮಾತ್ರ ಲಾಂಛನ ಉಪಯೋಗಿಸಲು ಅವಕಾಶವಿರುತ್ತದೆ. ಇನ್ನು ಸಂಪುಟ ದರ್ಜೆ ಸೇರಿದಂತೆ ಇತರೆ ಸಚಿವರಿಗೆ ಲಾಂಛನ ಬಳಸಲು ಅವಕಾಶ ಕಲ್ಪಿಸಲಾಗಿದೆ.

ಅಧಿಕೃತವಾಗಿ ಸರ್ಕಾರಿ ಲಾಂಛನ ಬಳಸುವವರು ಹೊರತುಪಡಿಸಿ ಇತರರು ಲಾಂಛನ ಬಳಸುವುದು ಆಕ್ಟ್ ನಂ. 50, 2005ರಂತೆ ಶಿಕ್ಷಾರ್ಹ ಅಪರಾಧವಾಗಿದೆ ಎಂದು ಹೇಳಲಾಗಿದೆ. ಪ್ರಸ್ತುತ ಈ ವಿಸಿಟಿಂಗ್‌ ಕಾರ್ಡ್‌ ಹಂಚುತ್ತಿರುವ ವ್ಯಕ್ತಿ ನಗರಸಭೆಯ ಮಾಜಿ ಸದಸ್ಯನಾಗಿದ್ದು, ಯಾವ ಉದ್ದೇಶದಿಂದ ಲಾಂಛನ ಬಳಸಿದರು ಎಂಬ ಪ್ರಶ್ನೆಗೆ ಉತ್ತರಿಸುವವರೇ ಇಲ್ಲವಾಗಿದ್ದಾರೆ. ಒಟ್ಟಿನಲ್ಲಿ ಮತ ಪಡೆಯಲು ಈವರೆಗೆ ನಾಯಕರ ಹೆಸರನ್ನು ಮಾತ್ರ ಬಳಸಿಕೊಳ್ಳುತ್ತಿದ್ದ ಅಭ್ಯರ್ಥಿಗಳು ಪ್ರಸ್ತುತ ರಾಜ್ಯ ಸರ್ಕಾರದ ಲಾಂಛನವನ್ನೇ ಬಳಸಿಕೊಂಡಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ಸರ್ಕಾರಿ ಲಾಂಛನವನ್ನು ದುರುಪಯೋಗಪಡಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧ. ಇಂತಹ ಘಟನೆ ಕಂಡುಬಂದಲ್ಲಿ ಕೂಡಲೇ ದೂರು ದಾಖಲಿಸಲಾಗುವುದು ಎಂದು ಡಿವೈಎಸ್‌ಪಿ ರವಿಶಂಕರ್‌ ಹೇಳಿದ್ದಾರೆ.

-ಅಶ್ವತ್ಥನಾರಾಯಣ ಎಲ್‌.

Follow Us:
Download App:
  • android
  • ios